ಜಯಶ್ರೀ ಗುತ್ತಲ
ಜಯಶ್ರೀ ಗುತ್ತಲ
ಜಯಶ್ರೀ ಗುತ್ತಲ ಅವರು ಜನಪದ ಕ್ಷೇತ್ರದ ಮಹತ್ವದ ಸಾಧಕಿ ಹಾಗೂ ಸುಗಮ ಸಂಗೀತ, ಜನಪದ ಗೀತೆಗಳ ವಿಶಿಷ್ಟ ಗಾಯಕಿಯಾಗಿದ್ದವರು.
ಜಯಶ್ರೀ ಗುತ್ತಲ ಅವರು ವಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ 1945ರ ಜೂನ್ 26ರಂದು ಜನಿಸಿದರು. ತಂದೆ ತಿರುಮಲ ರಾವ್ ದೇಶಪಾಂಡೆ ಹವ್ಯಾಸಿ ನಾಟಕ ಕಲಾವಿದರು ಮತ್ತು ವಾಸುದೇವ ವಿನೋದಿನಿ ನಾಟ್ಯ ಮಂಡಲಿಯ ಸಂಸ್ಥಾಪಕ ಸದಸ್ಯರು. ತಾಯಿ ಲಕ್ಷ್ಮೀಬಾಯಿ ಸಂಗೀತ ಕಲಾವಿದರು.
ಜಯಶ್ರೀ ಗುತ್ತಲ ಅವರ ಶಿಕ್ಷಣ ಬಾಗಲಕೋಟೆ ಮತ್ತು ಸಕ್ರಿ ಹೈಸ್ಕೂಲಿನಲ್ಲಿ ನಡೆಯಿತು. ಕಲಾವಿದರ ಕುಟುಂಬದಲ್ಲಿ ಹುಟ್ಟಿದ್ದರ ಪ್ರಭಾವದಿಂದ ಎಳೆತನದಲ್ಲೇ ಅವರಲ್ಲಿ ಸಂಗೀತದ ಆಸಕ್ತಿ ಮೊಳೆದಿತ್ತು. ಪಂ. ಭೀಮಸೇನ ಜೋಶಿಯವರ ಕಕ್ಕಂದಿರಾದ ಶ್ಯಾಮಾಚಾರ್ಯ ಜೋಶಿಯವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಮುಂದೆ ಧಾರವಾಡದ ಆಕಾಶವಾಣಿ ಕಲಾವಿದರಾಗಿದ್ದ ಜಿ. ಆರ್. ನಿಂಬರಗಿಯವರಲ್ಲಿ ಅವರ ಸಂಗೀತ ಶಿಕ್ಷಣ ನಡೆಯಿತು.
ಜಯಶ್ರೀ ಗುತ್ತಲ ಅವರು ಜಾನಪದ ಶೈಲಿ, ದಾಸರ ಪದಗಳು, ಭಕ್ತಿಗೀತೆಗಳ ಹಾಡುಗಾರರಾಗಿ ಹೆಚ್ಚು ಪ್ರಸಿದ್ಧಿ ಪಡೆದರು.
ಬೆಳಗಾವಿಯ ಕನ್ನಡ ಸಾಹಿತ್ಯ ಸಮ್ಮೇಳನ, ವಿಜಾಪುರದ ನವರಸಪುರದ ಕಾರ್ಯಕ್ರಮ, ಮುದ್ದೇ ಬಿಹಾಳ, ಹೊಸಪೇಟೆ, ಮುನಿರಾಬಾದ್, ಮುತ್ತಗಿ, ಬೆಂಗಳೂರು, ಮೈಸೂರು, ತಿರುಪತಿ, ಶಿವಮೊಗ್ಗ, ರಾಣಿಬೆನ್ನೂರು, ಗೋವಾ ಹೀಗೆ ಎಲ್ಲಡೆ ಅವರ ಕಾರ್ಯಕ್ರಮಗಳು ಪ್ರಸಿದ್ಧಿ
ಪಡೆದವು.
ಆಕಾಶವಾಣಿ, ದೂರದರ್ಶನಗಳಲ್ಲಿಯೂ ಜಯಶ್ರೀ ಗುತ್ತಲ ಅವರು ನಡೆಸಿಕೊಟ್ಟ ಹಲವಾರು ಜಾನಪದ ಗಾಯನ, ಆಶುಭಾಷಣ, ಸಂದರ್ಶನಗಳ ಪ್ರಸಾರಗಳು ಆದವು.
ಜಾನಪದ ಸಂಗೀತದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಜಯಶ್ರೀ ಅವರು ಪತ್ರಿಕೆಗಳಲ್ಲಿ ಆ ಕುರಿತು ಹಲವಾರು ಲೇಖನಗಳನ್ನು ಬರೆದರು. ಇವರು ಸಂಗ್ರಹಿಸಿದ ಉತ್ತರ ಕರ್ನಾಟಕದ ಹಾಡುಗಳು, ಸೋಬಾನೆ ಪದಗಳು, ಕೋಲಾಟದ ಪದಗಳು 'ಜನಪದ ಮಂಗಲ ಗೀತೆಗಳು' ಎಂಬ ಹೆಸರಿನಿಂದ ಯಕ್ಷಗಾನ ಅಕಾಡಮಿಯಿಂದ ಪ್ರಕಟಗೊಂಡಿತು. ಹರಿದಾಸ ಸಾಹಿತ್ಯ ಸುಧೆ, ಹರಿದಾಸರ ಅಪೂರ್ವ ಕೀರ್ತನೆಗಳ ಸಂಗ್ರಹ, ಜನಪದ ಗೀತ ಗುಚ್ಛ ಮುಂತಾದ ಕೃತಿಗಳೂ ಪ್ರಕಟಗೊಂಡವು.
ಜಯಶ್ರೀ ಗುತ್ತಲ ಅವರಿಗೆ ಹಲವಾರು ಸಂಘ ಸಂಸ್ಥೆಗಳೊಡನೆ ಸಕ್ರಿಯ ಒಡನಾಟವಿತ್ತು. ಕರ್ನಾಟಕ ಜಾನಪದ ಮಹಿಳಾ ವೇದಿಕೆ, ಧಾರವಾಡದ ಸುರ ಸಂಗೀತ ಸಭಾ, ಕರ್ನಾಟಕ ರಾಜ್ಯ ಜಾನಪದ ಅಕಾಡಮಿಗಳಲ್ಲಿ ಹಲವು ರೀತಿಯ ಜವಾಬ್ಧಾರಿಗಳನ್ನು ನಿರ್ವಹಿಸಿದ್ದರು.
ಜಯಶ್ರೀ ಗುತ್ತಲ ಅವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ರನ್ನ ಸಾಹಿತ್ಯ ಪ್ರಶಸ್ತಿ, ಬೈಲಹೊಂಗಲ ಯುವಕ ಸಂಘದಿಂದ ಪ್ರವೀಣ ಪ್ರಶಸ್ತಿ, ಮಹಾರಾಷ್ಟ್ರದ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದಿಂದ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ತಿರುಪತಿ ದೇವಸ್ಥಾನದಿಂದ ಹರಿದಾಸ ಜಾನಪದ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ದಿವಂಗತರಾದ ಜಯಶ್ರೀ ಗುತ್ತಲ ಅವರ ಹೆಸರಿನಲ್ಲಿ ಪ್ರತಿವರ್ಷ ಜಾನಪದ ಪುರಸ್ಕಾರವನ್ನು ನೀಡಲಾಗುತ್ತಿದೆ.
On the birth anniversary of Jayashree Guttala
ಕಾಮೆಂಟ್‌ಗಳು