ಆರ್. ಪೂರ್ಣಿಮಾ
ಆರ್. ಪೂರ್ಣಿಮಾ
ಡಾ. ಆರ್. ಪೂರ್ಣಿಮಾ ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ನಾಲ್ಕು ದಶಕಗಳಿಂದ ಕ್ರಿಯಾಶೀಲರಾಗಿರುವ ಪ್ರತಿಭಾವಂತ ಪತ್ರಕರ್ತೆ, ಸಂಪಾದಕಿ, ಅಂಕಣಗಾರ್ತಿ, ಲೇಖಕಿ, ಪ್ರಕಾಶಕಿ ಮತ್ತು ಸಾಂಸ್ಕೃತಿಕ ಸಂಘಟನಾಗಾರ್ತಿ.
ಪೂರ್ಣಿಮಾ ಅವರು ಜನಿಸಿದ್ದು 1954ರ ಜೂನ್ 16 ರಂದು. ಪೂರ್ಣಿಮಾ ಅವರ ತಂದೆ ವೀಣೆ ರಾಜಾರಾಯರು ಸಂಗೀತ ಮತ್ತು ರಂಗಲೋಕದಲ್ಲಿ ಪ್ರಖ್ಯಾತ ಹೆಸರು.
ಬೆಂಗಳೂರು ಎಪಿಎಸ್ ಕಾಲೇಜು, ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಪೂರ್ಣಿಮಾ ಅವರು ಕನ್ನಡ ಎಂ.ಎ. ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪಡೆದುದೇ ಅಲ್ಲದೆ, ಮುಂದೆ ಪತ್ರಿಕಾರಂಗದಲ್ಲಿ ಕೆಲಸಮಾಡುತ್ತಲೇ ಹೊಸಗನ್ನಡ ಕಾವ್ಯದ ಮೇಲೆ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನೂ ಗಳಿಸಿದರು.
ಪೂರ್ಣಿಮಾ ಅವರು ತುರ್ತುಪರಿಸ್ಥಿತಿ ವಿರೋಧಿ ಚಳುವಳಿ, ಸಮುದಾಯ ರಂಗಭೂಮಿ ಚಳುವಳಿ, ಬಂಡಾಯ ಸಾಹಿತ್ಯ ಚಳುವಳಿ ಹೀಗೆ ಎಲ್ಲಾ ಜನಪರ ಚಳುವಳಿಗಳ ಆಶಯಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಬೆಳೆದವರು. ಇದೇ ಸದಾಶಯವನ್ನು ಅವರು ತಮ್ಮ ಪತ್ರಿಕಾವೃತ್ತಿಯಲ್ಲೂ ವ್ಯಾಪಿಸಿದ್ದಾರೆ. ಪ್ರಜಾವಾಣಿಯನ್ನು ಸೇರಿದ ಪೂರ್ಣಿಮಾ ಅವರು ಮುಂದೆ ‘ಸುಧಾ’ ವಾರಪತ್ರಿಕೆಯಲ್ಲಿ ಅನೇಕ ಲೇಖನಗಳ ಕಾರ್ಯಮಾಡುತ್ತಾ ಬಂದರು. ಸಾಹಿತ್ಯ, ಸಂಗೀತ, ಮಹಿಳೆ, ಮಕ್ಕಳು, ಗ್ರಾಮೀಣ ಸಮಸ್ಯೆ, ಶಿಕ್ಷಣ, ಆರೋಗ್ಯ, ಹೀಗೆ ಹಲವಾರು ಅಭಿವೃದ್ಧಿಗೆ ಸಂಬಂಧಪಟ್ಟ ಕ್ಷೇತ್ರಗಳ ಬಗ್ಗೆ ಬರೆಯುತ್ತಾ ಬಂದರು. 1984ರಲ್ಲಿ ಪೂರ್ಣಿಮಾ ಅವರು 'ಸುಧಾ'ದಲ್ಲಿ ಮಾಡಿದ ‘ಕೃಷಿಯಲ್ಲಿ ಹೆಣ್ಣು, ಗಂಡಿಗೇನೂ ಕಡಿಮೆ ಇಲ್ಲ’ ಎಂಬ ಮುಖಪುಟ ಲೇಖನಕ್ಕೆ ಟೈಮ್ಸ್ ಗ್ರೂಪ್ ನೀಡುತ್ತಿದ ಪ್ರತಿಷ್ಟಿತ ‘ಈವ್ಸ್ ವೀಕ್ಲಿ’ ರಾಷ್ಟ್ರೀಯ ಪ್ರಶಸ್ತಿ ಬಂತು. ಹೀಗೆ ಅವರು ಮಾಡಿದ ಜನಪರ ಲೇಖನಗಳು ಅನೇಕ. ಗೂಗಲ್ ಇಲ್ಲದ ಆ ಕಾಲದಲ್ಲಿ ಯಾವುದೇ ವಿಷಯವನ್ನಾದರೂ ಸಂಶೋಧನಾ ಶ್ರದ್ಧೆಯಿಂದ ಮಾಡಬೇಕಿದ್ದ ದಿನಗಳವು ಎಂಬುದನ್ನು ನೆನೆದಾಗ ಪೂರ್ಣಿಮಾ ಅವರ ಸಾಧನೆಯ ಮಹತ್ವ ನಮಗೆ ಅರಿವಾದೀತು.
‘ಸುಧಾ’ದಿಂದ ಸುದ್ಧಿಯ ಕ್ಷೇತ್ರವಾದ ಪ್ರಜಾವಾಣಿಗೆ ಹಿಂದಿರುಗಿ ಬಂದ ಪೂರ್ಣಿಮಾ ಅವರು ಮಂಗಳೂರಿನಲ್ಲಿ ಆ ಪತ್ರಿಕೆಯ ಬ್ಯೂರೋ ಜವಾಬ್ದಾರಿ ನಿರ್ವಹಿಸಿದ ಮೊದಲ ಮಹಿಳೆ ಎನಿಸಿಕೊಂಡರು. ಮಂಗಳೂರಿನಲ್ಲಿ ಕೆಲವು ಕಾಲ ಕೆಲಸ ಮಾಡಿದ ಮೇಲೆ ಬೆಂಗಳೂರನ್ನು ಬಿಡಲು ಕಷ್ಟವೆನಿಸಿ ಪ್ರಜಾವಾಣಿಯನ್ನು ಬಿಟ್ಟ ಪೂರ್ಣಿಮಾ ಅವರಿಗೆ ‘ಉದಯವಾಣಿ’ ಸಮೂಹದ ‘ತರಂಗ’ ಕೈಬೀಸಿ ಕರೆಯಿತು. ಕೆಲವೇ ದಿನಗಳಲ್ಲಿ ಅವರು ‘ಉದಯವಾಣಿ’ಯ ಬೆಂಗಳೂರು ಆವೃತ್ತಿಯ ಸಂಪಾದಕಿಯಾದರು. ಹೀಗೆ ಕನ್ನಡ ಪತ್ರಿಕೋದ್ಯಮದಲ್ಲಿ ದಿನಪತ್ರಿಕೆಯೊಂದರ ಸಂಪಾದಕಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಯಿತು. ಉದಯವಾಣಿ ಮಂಗಳೂರಿಗರ ಪತ್ರಿಕೆ ಮಾತ್ರವಲ್ಲ ಎಂಬ ಭಾವವನ್ನು ಬೆಂಗಳೂರಿಗರಿಗೆ ತಂದುಕೊಟ್ಟ ಸಾಧನೆ ಪೂರ್ಣಿಮಾ ಅವರದು. ಈ ನಿಟ್ಟಿನಲ್ಲಿ ಅವರು ಕೈಗೊಂಡ ಅನೇಕ ಕಾರ್ಯಗಳಲ್ಲಿ ‘ನಮ್ಮ ಬೆಂಗಳೂರು’ ಪುರವಣಿ ಒಂದು ವಿಶಿಷ್ಟ ಉದಾಹರಣೆಯಾದೀತು. ಅವರು ಉದಯವಾಣಿಯಲ್ಲಿ ಆರಂಭಿಸಿದ ‘ಮಹಿಳಾ ಸಂಪದ’, ಹೇಮಲತಾ ಮಹಿಷಿ ಅವರಿಂದ ಮೂಡಿಸಿದ ‘ಕಾನೂನು ಸಂಪದ’, ಡಾ. ಪದ್ಮಿನಿ ಪ್ರಸಾದ್ ಅವರಿಂದ ದಾಂಪತ್ಯ ಮತ್ತು ಲೈಂಗಿಕತೆ ಕುರಿತಾದ ತಿಳುವಳಿಕೆ ಅಂಕಣಗಳು, ವಿವಿಧ ತಜ್ಞರಿಂದ ಮೂಡಿಸಿದ ಮಕ್ಕಳ ಹಕ್ಕುಗಳು, ಗ್ರಾಮ ಪಂಚಾಯಿತಿ ಇವೆಲ್ಲ ಬಹಳಷ್ಟು ವ್ಯಾಪ್ತಿಯನ್ನು ಪಡೆದಂತಹವು. ಸ್ವಯಂ ತಾವೇ ಐದು ಅಂಕಣಗಳನ್ನು ಬರೆದರು. ಅನೇಕ ಯುವ ಪೀಳಿಗೆಯ ಪತ್ರಕರ್ತರನ್ನು ಬೆಳೆಸಿದರು.
ಮುಂದೆ ಪೂರ್ಣಿಮಾ ಅವರು ಉದಯವಾಣಿಯಿಂದ ಹೊರಬಂದಾಗ ಪುನಃ ಪ್ರಜಾವಾಣಿ ಸಮೂಹದ 'ಮಯೂರ' ಮಾಸಪತ್ರಿಕೆಯ ಸಂಪಾದಕರಾದರು. ಪ್ರಜಾವಾಣಿ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳ ಪ್ರಕಟಣೆಯ ಸಿದ್ಧತೆಯನ್ನೂ ಮಾಡಿದರು. ‘ಜೀವನ್ಮುಖಿ’ ಎಂಬ ಹೆಸರೇ ಹೇಳುವಂತೆ ಜೀವನಮುಖಿಯಾದ ಲವಲವಿಕೆಯ ಅಂಕಣಗಳನ್ನು ಮೂಡಿಸಿದರು.
ಪೂರ್ಣಿಮಾ ಅವರು ವೃತ್ತಿಜೀವನದಲ್ಲಿ ಅನೇಕ ಗೌರವಗಳಿಗೆ ಪಾತ್ರರಾದವರು. 1994 ರಲ್ಲಿ ಅಮೆರಿಕದಲ್ಲಿ ನಡೆದ ‘ಮಾಧ್ಯಮದಲ್ಲಿ ಮಹಿಳೆ’ ಕಾರ್ಯಾಗಾರಕ್ಕೆ ಭಾರತದಿಂದ ಆಯ್ಕೆಯಾದ ಆರು ಮಂದಿ ಪತ್ರಕರ್ತೆಯರಲ್ಲಿ ಇವರೂ ಒಬ್ಬರು. ಶ್ರೀಲಂಕಾ, ಸಿಂಗಪೂರ್, ಮಲೇಷಿಯ, ಬ್ಯಾಂಕಾಕ್ ಮುಂತಾದೆಡೆ ನಡೆದ ಮಾಧ್ಯಮ ಕಾರ್ಯಕ್ರಮಗಳಲ್ಲಿಯೂ ಅವರು ಆಹ್ವಾನಿತರಾಗಿದ್ದರು.
ಪೂರ್ಣಿಮಾ ಅವರು ತಮ್ಮ ಕ್ಷೇತ್ರದಲ್ಲಿ ಸದಾ ಹೊಸ ಬದಲಾವಣೆಗಳಿಗೆ ತಮ್ಮನ್ನು ತೆರೆದುಕೊಂಡವರು. ಇಂದಿನ ವೆಬ್ ಯುಗದಲ್ಲಿ ಅವರ ಸಂಪಾದಕತ್ವದಲ್ಲಿ ನಡೆಯುತ್ತಿರುವ ಹಿತೈಷಿಣಿ ಅಂತರಜಾಲ ವಾಹಿನಿ ಪತ್ರಿಕೆ (https://hitaishinimag.com/) ಇದಕ್ಕೊಂದು ನಿದರ್ಶನವಾಗಿದೆ.
ಪೂರ್ಣಿಮಾ ಅವರು ಲೇಖಕಿಯಾಗಿಯೂ ಜನಪ್ರಿಯರು. ಸ್ನೇಹಸೇತು, ಚಿತ್ತಗಾಂಗ್ ವೀರರು, ವಚನಕಾರ್ತಿಯರ ದನಿಗಳು, ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಅಗತ್ಯ, ಒಂದು ಜೀವನ ಸಾಲದು (ಕುಲದೀಪ್ ನಯ್ಯರ್ ಆತ್ಮಕಥೆಯ ಅನುವಾದ), ಮಣ್ಣಿನ ಕಣ್ಣು (ಅಂಕಣ ಬರಹಗಳ ಸಂಕಲನ), ಬಾಲರಾಜ್ ಸಾಹ್ನಿ ಮುಂತಾದ ಹಲವಾರು ಕೃತಿಗಳನ್ನು ಅವರು ರಚಿಸಿದ್ದಾರೆ. ‘ಕನ್ನಡ ಪತ್ರಿಕೋದ್ಯಮದ ಕಟ್ಟಾಳು ಎಂ. ಬಿ. ಸಿಂಗ್’ ಗೌರವ ಗ್ರಂಥವನ್ನೂ ಸಂಪಾದಿಸಿದ್ದಾರೆ. ತಮ್ಮದೇ ಆದ ‘ವಿಕಾಸ ಪ್ರಕಾಶನ’ ಸಂಸ್ಥೆಯನ್ನೂ ನಡೆಸುತ್ತಿದ್ದು ಉತ್ತಮ ಅಭಿರುಚಿಯ ಪ್ರಕಟಣೆಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಈ ಸಂಸ್ಥೆ ಪ್ರಕಟಿಸಿದ ಅನೇಕ ಕೃತಿಗಳು ಪ್ರತಿಷ್ಟಿತ ಪ್ರಶಸ್ತಿಗಳನ್ನು ಗಳಿಸಿವೆ.
ಪತ್ರಿಕೋದ್ಯಮ ಮತ್ತು ಸಾಹಿತ್ಯದಲ್ಲಿ ಮಾತ್ರವಲ್ಲದೆ ಇನ್ನಿತರ ಸಾಂಸ್ಕೃತಿಕ ಆಸಕ್ತಿಗಳಿಗೂ ತಮ್ಮನ್ನು ತೆರೆದುಕೊಂಡಿರುವ ಪೂರ್ಣಿಮಾ ಅವರು ತಮ್ಮ ತಂದೆಯವರಾದ ವೀಣೆ ರಾಜಾರಾವ್ ಅವರ ಹೆಸರಿನ ‘ಗಾನಕಲಾಭೂಷಣ ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನ’ದ ಮೂಲಕ ಪ್ರತಿವರ್ಷ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಕ್ಷೇತ್ರದಲ್ಲಿನ ಸಾಧಕರನ್ನು ಪ್ರಶಸ್ತಿ ಇತ್ತು ಗೌರವಿಸಿ ಕಾರ್ಯಕ್ರಮವನ್ನು ನಡೆಸುವ ಪರಿಪಾಠವನ್ನು ಸಹಾ ನಿರಂತರ ಪಾಲಿಸಿಕೊಂಡು ಬಂದಿದ್ದಾರೆ.
ಡಾ. ಆರ್. ಪೂರ್ಣಿಮಾ ಅವರಿಗೆ ಈವ್ಸ್ ವೀಕ್ಲಿ ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ, ಕೆನರಾ ಬ್ಯಾಂಕ್ ಉತ್ತಮ ಗ್ರಾಮೀಣ ವರದಿ ಪ್ರಶಸ್ತಿ 2 ಬಾರಿ, ರಾಜ್ಯ ಪತ್ರಕರ್ತರ ಸಂಘದ ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಜೀ ಕನ್ನಡ ಸಂಸ್ಥೆಯ ಶ್ರೇಷ್ಠ ಪತ್ರಕರ್ತೆ ಪ್ರಶಸ್ತಿ, ಸಿಡಿಎಲ್ ಸಂಸ್ಥೆಯ ಮೀಡಿಯಾ ಮೆಂಟರ್ ಪ್ರಶಸ್ತಿ ಬಿ.ಎಂ.ಶ್ರೀ ಪ್ರತಿಷ್ಠಾನದ 'ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ', ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ ನೀಡುವ 'ನಾಗಮಣಿ ಎಸ್. ರಾವ್ ಪತ್ರಿಕೋದ್ಯಮ ಪ್ರ ಶಸ್ತಿ' ಮುಂತಾದ ಅನೇಕ ಗೌರವಗಳು ಸಂದಿವೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧಿವೇಶನಗಳಲ್ಲಿ ಆಹ್ವಾನಿತ ಉಪನ್ಯಾಸಕಿಯಾಗಿಯೂ ಅವರು ವಿಷಯ ಮಂಡನೆ ಮಾಡಿದ್ದಾರೆ.
ಆತ್ಮೀಯ ಹಿರಿಯರೂ ಮಹತ್ವದ ಸಾಧಕಿಯೂ ಆದ ಡಾ. ಆರ್. ಪೂರ್ಣಿಮಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day of Journalist, Editor, Writer, Publisher and activist Dr. Poornima Rajarao Madam 🌷🙏🌷
ಕಾಮೆಂಟ್‌ಗಳು