ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪೀಪಲ್ ಬಾಬಾ

 


ಮಹಾನ್ ಪರಿಸರವಾದಿ ಪೀಪಲ್ ಬಾಬಾ

ಲೇಖಕಿ: ಶ್ರೀಲತಾ ರೆಡ್ಡಿ Sreelatha Reddy 

ಇಂದು ಜೂನ್ ಐದು ವಿಶ್ವ ಪರಿಸರ ದಿನ.

ಪೀಪಲ್ ಬಾಬಾ ಅಥವಾ ಸ್ವಾಮಿ ಪ್ರೇಮ್ ಪರಿವರ್ತನ್ ಒಬ್ಬ ಪರಿಸರವಾದಿ. Give Me Trees Trust ಸ್ಥಾಪಕರು ಹಾಗೂ ವ್ಯವಸ್ಥಾಪಕರು ಆದ ಇವರು ತಮ್ಮ ತಂಡದೊಂದಿಗೆ  ಸೇರಿ 24+ ಮಿಲಿಯನ್  ಮರಗಳನ್ನು ನಮ್ಮ ದೇಶಾದ್ಯಂತ  18 ರಾಜ್ಯಗಳ 202 ಜಿಲ್ಲೆಗಳಲ್ಲಿ ನೆಟ್ಟು ಪೋಷಿಸಿ  ಸಂರಕ್ಷಿಸಿದ ಖ್ಯಾತಿವಂತರು. 

ಭಾರತೀಯ ಸೇನೆಯ ವೈದ್ಯರ ಮಗನಾಗಿ, ಜನವರಿ 26 1966 ರಂದು ಚಂಡಿಗಡದಲ್ಲಿ ಜನಿಸಿದ ಇವರ ಮೂಲ ಹೆಸರು ಆಜಾದ್ ಜೈನ್. 1984ರಲ್ಲಿ ಅಧ್ಯಾತ್ಮದತ್ತ ವಾಲಿದ ಇವರಿಗೆ ಓಶೋ ರಜನೀಶರು ಕೊಟ್ಟ ಹೆಸರು ಸ್ವಾಮಿ ಪ್ರೇಮ್ ಪರಿವರ್ತನ್. ತಮ್ಮ ಇಂಗ್ಲೀಷ್ ಶಿಕ್ಷಕರಿಂದ ಪ್ರೇರಿತರಾದ ಇವರು 11ನೇ ವಯಸ್ಸಿನಿಂದಲೇ ಗಿಡಗಳನ್ನು ನೆಡುವ ಕಾಯಕದಲ್ಲಿ ತೊಡಗಿಕೊಂಡರು. ಅರಳಿ ಮರಗಳನ್ನು ಹೆಚ್ಚು ನೆಟ್ಟ ಕಾರಣದಿಂದಾಗಿ ಇವರಿಗೆ ಪೀಪಲ್ ಬಾಬಾ ಎಂಬ ಹೆಸರು ಬಂದಿತಂತೆ. 1977 ರಲ್ಲಿ ಪುಣೆಯ ಕಿರ್ಕಿ ಸ್ಟೇಷನ್ ಬಳಿ ಮೊದಲ ಬಾರಿಗೆ ಮರಗಳನ್ನು ನೆಡುವುದರೊಂದಿಗೆ ಆರಂಭಗೊಂಡ ಇವರ ಕಾಯಕ ಇಂದಿಗೂ ನಡೆಯುತ್ತಲೇ ಬಂದಿದೆ. 

ಪತ್ರಿಕೋದ್ಯಮ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು  ಪ್ರಾಧ್ಯಾಪಕರಾಗಿ  ಸೇವೆ ಸಲ್ಲಿಸಿದ್ದು ಉಂಟು. ಹೆಸರಿಗಷ್ಟೇ ದೆಹಲಿಯ ನಿವಾಸಿ.   ಅರಣ್ಯೀಕರಣ ಪರಿಸರದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡು ಊರೂರು ಸುತ್ತುವ ಇವರು ತಮ್ಮ ಮನೆಯಲ್ಲಿ ಉಳಿದಿದ್ದು ಬಹಳ ಕಡಿಮೆ. ಅವರೇ ಹೇಳುವಂತೆ "ನನ್ನ ಮನೆ ಎನ್ನುವುದನ್ನು ಬಿಟ್ಟರೆ ಇಡೀ ಪ್ರಪಂಚವೇ ನಮ್ಮ ಮನೆಯಾಗುತ್ತದೆ" (ಇದು ಬಾಲ್ಯದಲ್ಲಿ ಅವರಿಗೆ ಅವರ ಅಜ್ಜಿ ಹೇಳಿದ ಮಾತು). ಪರಿಸರ ಸಂರಕ್ಷಣೆ ಹಾಗೂ ಪರಿಸರದ ಕಾಳಜಿಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವರು ಹೇಳುವ ಮಾತುಗಳು ಬಹಳ ಪ್ರಭಾವಶಾಲಿ ಮತ್ತು ಆಪ್ತತೆಯಿಂದ ಕೂಡಿರುತ್ತದೆ. Give Me Trees Trust ಒಂದು ಸರ್ಕಾರೇತರ ಸಂಸ್ಥೆ. ಇದರ ಉದ್ದೇಶ ಮತ್ತು ಆಶಯಗಳು ಬಹಳಷ್ಟಿವೆ - ನಗರ ಪ್ರದೇಶಗಳಲ್ಲಿ ಹೆಚ್ಚು ಗಿಡ ನೆಡುವುದು, ಮರಗಳ ಸಂರಕ್ಷಣೆ, ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು,ತ್ಯಾಜ್ಯ ನಿರ್ವಹಣೆ , ದೇಶಾದ್ಯಂತ ಅರಣ್ಯೀಕರದ ಮೂಲಕ ಜೈವಿಕ ವೈವಿಧ್ಯದ ಆವಾಸಸ್ಥಾನಗಳ ರಚನೆ ಇವುಗಳಲ್ಲಿ ಕೆಲವು.  ಅವರೇ ಹೇಳುವಂತೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ಮೊದಲು ಬಲಿಯಾಗುವುದು ಮರಗಳು. ತನ್ನ ಸುತ್ತಲಿನ ಪರಿಸರ ಗಿಡ ಮರ ಪ್ರಾಣಿಗಳನ್ನು ರಕ್ಷಿಸದೇ ದೇಶದ ಅಭಿವೃದ್ಧಿ ಹೇಗೆ ಸಾಧ್ಯ.  ದೇಶದ ಸಂಪತ್ತು ಇರುವುದೇ ಪರಿಸರ ಮರ ಗಿಡ ಜಲ...... ಇತ್ಯಾದಿಗಳಲ್ಲಿ. ಮಕ್ಕಳನ್ನು ಮನೆಯ ಹತ್ತಿರದ ಪಾರ್ಕಿಗೆ ಕರೆದುಕೊಂಡು ಹೋಗಿ ಅವರಲ್ಲಿ ಪರಿಸರದ ಕುರಿತಾಗಿ ಅರಿವು ಮೂಡಿಸಲು ನೆರವಾಗಿ ಎನ್ನುತ್ತಾರೆ.   ಸಾಮಾಜಿಕ ಮಾಧ್ಯಮಗಳಲ್ಲಿ  ಆತ್ಮೀಯವಾಗಿ ಮಾತನಾಡುವ ಮೂಲಕ ಬಹಳವೇ ಜನಪ್ರಿಯರಾಗಿರುವ 59 ವರ್ಷದ ಪೀಪಲ್ ಬಾಬಾ ಜನರಲ್ಲಿ ಪರಿಸರ ಸಂರಕ್ಷಣೆಯ ಕುರಿತಾಗಿ ಧನಾತ್ಮಕ ಚಿಂತನೆ ಮೂಡಿಸಿರುವಲ್ಲಿ ಯಶಸ್ವಿ ಆಗಿದ್ದಾರೆ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ