ಪಂಚಮ್ ಹಳಿಬಂಡಿ
ಪಂಚಮ್ ಹಳಿಬಂಡಿ
ಸುಗಮ ಸಂಗೀತ ಕ್ಷೇತ್ರದ ಪ್ರತಿಭೆ ಪಂಚಮ್ ಹಳಿಬಂಡಿ ಪ್ರಖ್ಯಾತ ಗಾಯಕರಾದ ದಿವಂಗತ ಯಶವಂತ್ ಹಳಿಬಂಡಿ ಅವರ ಸುಪುತ್ರ.
ಪಂಚಮ್ ಹಳಿಬಂಡಿ 1977ರ ಜೂನ್ 25ರಂದು ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನಲ್ಲಿ ಜನಿಸಿದರು. ತಾಯಿ ಲಕ್ಷ್ಮೀದೇವಿ ಹಳಿಬಂಡಿ.
ಕಲಾವಿದರ ಕುಟುಂಬದ ವಾತಾವರಣದಲ್ಲಿ ಮೂರನೇ ವಯಸ್ಸಿನಲ್ಲೆ ಗಾಯನ ಮತ್ತು ನಾಟಕರಂಗದ ಕಡೆಗೆ ಆಕರ್ಷಣೆ ಮೂಡಿದ ಪಂಚಮ್ ಅವರಿಗೆ ತಂದೆ ಯಶವಂತ ಹಳಿಬಂಡಿ ಅವರೇ ಗುರುವಾದರು. ಓದಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ಸ್ ಕ್ಷೇತ್ರದಲ್ಲಿ ಡಿಪ್ಲೋಮಾ ಗಳಿಸಿದ ಪಂಚಮ್, ಬೆಂಗಳೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್ಸ್ ಪದವಿ ಕೂಡಾ ಗಳಿಸಿದ್ದಾರೆ. ಟೆಲಿಸಂಪರ್ಕ ಕ್ಷೇತ್ರದ ಪ್ರಸಿದ್ಧ ಸಂಸ್ಥೆಯಲ್ಲಿ ಉದ್ಯೋಗಿಯೂ ಅಗಿದ್ದಾರೆ.
ವಿದ್ವಾನ್ ತಿರುಮಲೆ ಶ್ರೀನಿವಾಸ ಅವರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಆರಂಭಿಸಿದ ಪಂಚಮ್ ಹಳಿಬಂಡಿ, ಮುಂದೆ ವಿದ್ವಾನ್ ವೆಂಕಟರಾಘವನ್ ಅವರ ಮಾರ್ಗದರ್ಶನದಲ್ಲಿ ಜೂನಿಯರ್ ಸಂಗೀತ ಮತ್ತು ವಿದುಷಿ ರಮಾದೇವಿ ಅವರ ಮಾರ್ಗದರ್ಶನದಲ್ಲಿ ಸೀನೀಯರ್ ಸಂಗೀತ ಪರೀಕ್ಷೆಗಳಲ್ಲಿನ ಉತ್ತೀರ್ಣತೆಯನ್ನೂ ಸಾಧಿಸಿದರು.
ಸುಗಮ ಸಂಗೀತ, ಜನಪದ ಗೀತೆಗಳು, ಭಕ್ತಿಗೀತೆಗಳು ಮತ್ತು ವಚನ ಗಾಯನಕ್ಕೆ ಪಂಚಮ್ ಹಳಿಬಂಡಿ ಅವರಿಗೆ ತಂದೆ ಯಶವಂತ ಹಳಿಬಂಡಿ ಅವರ ವಿಶಾಲ ವ್ಯಾಪ್ತಿಯ ಮಾರ್ಗದರ್ಶನದ ಭಾಗ್ಯ ನಿರಂತರವಾಗಿ ಜೊತೆಗಿತ್ತು. ಜೊತೆಗೆ ವಸಂತ ಕನಕಾಪುರ್ ಮತ್ತು ರಾಜು ಅನಂತಸ್ವಾಮಿ ಅವರ ಸಹಯೋಗದಲ್ಲಿ ಸಹಾ ಬಹಳಷ್ಟು ಬೆಳೆದರು.
ಪಂಚಮ್ ಹಳಿಬಂಡಿ ಚಿಕ್ಕ ವಯಸ್ಸಿನಲ್ಲೇ ಅನೇಕ ಶ್ರವ್ಯ ಮಾಧ್ಯಮಗಳಲ್ಲಿನ ಹಾಡುಗಳಿಗೆ ಬಾಲಧ್ವನಿಯಾಗಿದ್ದರಲ್ಲದೆ ಅನೇಕ ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯವನ್ನೂ ಮಾಡಿದ್ದರು. ಆಕಾಶವಾಣಿ ಮತ್ತು ದೂರದರ್ಶನದ ಬಿ ಹೈ ಕಲಾವಿದರೆಂಬ ಮಾನ್ಯತೆ ಪಡೆದರು.
ಪಂಚಮ್ ಹಳಿಬಂಡಿ ರಾಜ್ಯ, ಇತರ ರಾಜ್ಯಗಳು ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳೇ ಅಲ್ಲದೆ ಸುಶ್ರಾವ್ಯ ಕನ್ನಡ ಮತ್ತು ಹಿಂದೀ ಚಲನಚಿತ್ರ ಗೀತೆಗಳೂ ಇವರ ಗಾಯನ ವೈವಿಧ್ಯದಲ್ಲಿ ಸೇರಿವೆ. ರಂಗ ಚಟುವಟಿಕೆಗಳಲ್ಲೂ, ಕಿರುತೆರೆಯ ಧಾರಾವಾಹಿಗಳಲ್ಲೂ ಅವರು ಗಾಯಕರಾಗಿ, ಸಂಗೀತ ಸಂಯೋಜಕರಾಗಿ ಮತ್ತು ನಟರಾಗಿ ಸಕ್ರಿಯರು. ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಮಾಡಿದ್ದಾರೆ. ವಿವಿಧ ರೀತಿಯ ಇನ್ನೂರಕ್ಕೂ ಹೆಚ್ಚು ಗೀತ ಗಾಯನದ ಆಲ್ಬಮ್ಗಳು ಇವರ ಧ್ವನಿಯಲ್ಲಿ ಹೊರಹೊಮ್ಮಿವೆ.
ಪಂಚಮ್ ಹಳಿಬಂಡಿ ಅವರು ‘ಸ್ವರ ಸುನಾದ'ಎಂಬ ಟ್ರಸ್ಟ್ ಅನ್ನು 2002 ವರ್ಷದಲ್ಲಿ ಸ್ಥಾಪಿಸಿದ್ದು ಆ ಮೂಲಕ ಅನೇಕ ಪ್ರತಿಭೆಗಳು ಬೆಳಕಿಗೆ ಬರಲು ಪೋಷಣೆ ಒದಗಿಸುತ್ತಾ ಬಂದಿದ್ದಾರೆ. ಅನೇಕ ಸಂಗೀತ ತದಬೇತಿ ಕಾರ್ಯಕ್ರಮಗಳು ಮತ್ತು ಶಿಬಿರಗಳನ್ನು ನಡೆಸಿದ್ದಾರೆ.
ಆಕಾಶವಾಣಿ ಅಭಿಮಾನಿ ಸಂಘದಿಂದ ವರ್ಷದ ಗಾಯಕ, ಕರ್ನಾಟಕ ವಿದ್ಯಾರ್ಥಿ ಕೂಟದಿಂದ ಗಾನ ಕೋಗಿಲೆ ಬಿರುದು, ಆರ್ಯಭಟ ಪ್ರಶಸ್ತಿ, ಉಪಾಸನಾ ಪ್ರಶಸ್ತಿ, ಕಲಾ ದರ್ಪಣ ಯುವ ಪುರಸ್ಕಾರ, ಹಲವು ಸಂಘ ಸಂಸ್ಥೆಗಳಿಂದ ಪ್ರತಿಭಾ ಪುರಸ್ಕಾರಗಳ ಮತ್ತು ಸನ್ಮಾನಗಳ ಅನೇಕ ಗೌರವಗಳು ಅವರಿಗೆ ಸಂದಿವೆ.
On the birth day talented singer and actor Pancham Halibandi
ಕಾಮೆಂಟ್‌ಗಳು