ವಿಶ್ವ ಸೈಕಲ್ ದಿನದಂದು
ವಿಶ್ವ ಸೈಕಲ್ ದಿನದಂದು
On World Bicycle Day
ಆನಂದದೊಳು ತಾನಿರಲು,
ಸ್ವಾನಂದದಿ ರೆಕ್ಕೆಯ ಕೆದರುತಲಿರಲು
ಭುವಿಯ ಮೇಲೆ ನಿಂತಿರಲು ದೇವ ಶಿಶುನಾಳದೀಶ ಗುರುಗೋವಿಂದನ ವರವು
-ಸಂತ ಶಿಶುನಾಳ ಶರೀಫರು
ಪುಟ್ಟ ಮಕ್ಕಳು ಸೈಕಲ್ ಕಲಿಯುವ ಪ್ರಯತ್ನದಲ್ಲಿ, ಒಂದು ಕಾಲನ್ನು ಪೆಡಲಿನ ಮೇಲೆ, ಮತ್ತೊಂದು ಕಾಲನ್ನು ನೆಲದ ಮೇಲೆ ಇಟ್ಟು ಜೀಕುತ್ತ, ಜೀಕುತ್ತಾ, ಒಂದು ಅಮೂಲ್ಯ ಕ್ಷಣದಲ್ಲಿ ಎರಡೂ ಕಾಲುಗಳೂ ನೆಲದ ಆಶ್ರಯವನ್ನು ಬಿಟ್ಟು, ಎರಡೂ ಪೆಡಲುಗಳ ಮೇಲೆ ನಿಂತು, ತಾನೇ ತಾನಾಗಿ ಸೈಕಲ್ ಚಲಿಸಿದ ಅನುಭವವಿದೆಯೆಲ್ಲಾ, ಅದು ನಮ್ಮೊಳಗಿನ ಚೈತನ್ಯ, ದೇಹವನ್ನು ಮೀರಿ ನಿಂತ ಅಧ್ಯಾತ್ಮದ ಅನುಭಾವದ ಕ್ಷಣವೂ ಹೌದು. ನಿರಂತರವಾಗಿ ಐಶಾರಾಮಿ ಸಾಧನಗಳ ಹಿಂದೆ ಸಾಗುವ ನಮ್ಮ ಬದುಕಿನಲ್ಲಿ ಸೈಕಲ್ಲುಗಳು ತಮ್ಮ ಸ್ಥಾನವನ್ನು ಕಳೆದುಕೊಂಡುಬಿಟ್ಟವು. ನಮ್ಮಲ್ಲಿ ನಮ್ಮ ಶಿಶುಸಹಜ ಸ್ವಭಾವ ಕೂಡಾ ಕಳೆದುಹೋಗಿಬಿಟ್ಟಿವೆ.
ಬದುಕಿನಲ್ಲಿ ವಿಧವಿಧದ ಸಾಧನೆ ಮಾಡಿರುವ ವ್ಯಕ್ತಿಚಿತ್ರಣಗಳನ್ನು ಬ್ಲಾಗಿಸುವ ನನ್ನ ಹವ್ಯಾಸದಲ್ಲಿ, ಒಮ್ಮೆ ಸೈಕ್ಲಿಂಗ್ ಪ್ರೀತಿಸುವ ಒಂದು ಹುಡುಗಿಯನ್ನು ಮಾತನಾಡಿಸಿ ಆಕೆಯ ಅನುಭಾವವನ್ನು ತಿಳಿಯುವ ಅವಕಾಶ ಒದಗಿಬಂತು. ಈ ಮಾತುಕತೆ ನನ್ನ ಬಾಲ್ಯದಲ್ಲಿನ ಸೈಕಲ್ ಪ್ರೀತಿಯನ್ನು ಮೀಟಿದಂತಾಗಿ, ಕಳೆದ 11 ವರ್ಷಗಳಲ್ಲಿ ನಾನೂ ಸೈಕಲ್ ಸವಾರಿಯನ್ನು ಪ್ರೀತಿಸುವವನಾದೆ. ಸುಮಾರು 35 ವರ್ಷಗಳ ನಂತರದಲ್ಲಿ, ನನ್ನ 57ನೇ ವಯಸ್ಸಿನಲ್ಲಿ ಸೈಕಲ್ ಮೇಲೆ ಕುಳಿತಾಗ ‘ನನ್ನಿಂದ ಇದು ಸಾಧ್ಯವೇ?’ ಎಂದು ಮೂಡಿದ್ದ ಅಳುಕು ಕ್ರಮೇಣ ಮಾಯವಾಗಿ, ಒಂದೇ ವರ್ಷದಲ್ಲಿ 7600 ಕಿಲೋಮೀಟರ್ ಸೈಕಲ್ಲಿನಲ್ಲಿ ಕ್ರಮಿಸಿದ್ದೆ. ಬೇಸಿಗೆ, ಚಳಿಗಾಲ, ಹನಿಮಳೆ, ಇನಿತು ದೇಹಶ್ರಮ, ಕೆಲವೊಮ್ಮೆ ಸೈಕಲ್ ಪಂಕ್ಚರ್ ತಾಪತ್ರಯ, ಒಂದೆರಡು ಬಾರಿ ಬಿದ್ದದ್ದು, ಇದ್ಯಾವುದಕ್ಕೂ ಎಗ್ಗಿಲ್ಲದೆ ಪ್ರತಿನಿತ್ಯ ಸೈಕಲ್ ತುಳಿಯುತ್ತಾ ಬಂದೆ. ಮುಂದೆ 2017 ವರ್ಷದಿಂದ ದುಬೈನಲ್ಲಿ ಕಾರ್ಯಕ್ಕಾಗಿ ವಲಸೆ ಬಂದಾಗ ಕೂಡಾ ನಿರಂತರ ಸೈಕಲ್ ನನ್ನ ಆತ್ಮೀಯ ಜೋಡಿಯಾಗಿ ಪಯಣಿಸುತ್ತಿತ್ತು. 2025 ವರ್ಷ ಪುನಃ ಬೆಂಗಳೂರಿನಲ್ಲಿ ಸೈಕಲ್ ಸಹವಾಸ ಮುಂದುವರೆದಿದೆ.
ಪ್ರತಿನಿತ್ಯ ಸೈಕಲ್ ಸವಾರಿಗೆ ನನ್ನನು ಪ್ರಚೋದಿಸುವುದು ಬೆಳಗಿನ ಆಪ್ತ ಆಹ್ಲಾದ ವಾತಾವರಣ. ಬೆಳಗಿನ ನಸುಕಿನಲ್ಲಿ, ಸೈಕಲ್ನಲ್ಲಿ ರಸ್ತೆಗಿಳಿಯುವಾಗ ಅದೆಂತದ್ದೋ ಒಳಗಿನ ಬೆಳಗು ಹೊರಗಿನ ನಸುಬೆಳಗಿನೊಂದಿಗೆ ಮಿಲನವಾದಂತ ಭಾವ ಆಂತರ್ಯದಲ್ಲಿ ಹರಿಯತೊಡಗುತ್ತದೆ. ಕೇವಲ 13 ಕೆ.ಜಿ. ತೂಕದ ಸೈಕಲ್ಲು ನಾನು ಅದರ ಮೇಲಿದ್ದೇನೆ ಎಂಬ ಭಾವವಿಲ್ಲದೆ ಸುಲಲಿತವಾಗಿ ಸಂಚರಿಸುವಂತೆಯೇ, ನನ್ನ ಆಂತರ್ಯ ಕೂಡಾ ನನ್ನ ದೇಹವೆಂಬ ಭಾರದಿಂದ ಸ್ವತಂತ್ರವಾದಂತಹ ಚಲನೆಯಲ್ಲಿ ಸುಖಿಸತೊಡಗುತ್ತದೆ.
2015ವರ್ಷ ನಾನು ಸೈಕಲ್ ತುಳಿಯಲು ಪ್ರಾರಂಭಿಸುವವರೆವಿಗೂ, ನನಗೆ ನಮ್ಮ ಬೆಂಗಳೂರು ಕೆಟ್ಟು ಕೂತಿದೆ ಎಂಬ ಭಾವವೇ ಮನೆ ಮಾಡಿಕೊಂಡಿತ್ತು. ಒಮ್ಮೆ ಸೈಕಲ್ ತುಳಿಯುವ ಅಭ್ಯಾಸ ಆರಂಭಿಸುತ್ತಿದ್ದಂತೆಯೇ ನಾನು ಹಿಂದೆಂದೋ ಇಷ್ಟಪಟ್ಟಿದ್ದ ಜಾಗಗಳಿಗೆ ಹೋಗಬೇಕು ಅನಿಸತೊಡಗಿತು. ಸಾಮಾನ್ಯವಾಗಿ ಆಟೋದಲ್ಲಾಗಲಿ, ಟ್ಯಾಕ್ಸಿಯಲ್ಲಾಗಲಿ, ಸ್ಕೂಟರಿನಲ್ಲಾಗಲಿ ಕಚೇರಿಗೆ, ಶಾಪಿಂಗಿಗೆ, ಸಿನಿಮಾಗೆ, ಹೋಟೆಲಿಗೆ ಹೀಗೆ ಹೋಗಬೇಕಾದಾಗಲೆಲ್ಲಾ ಟ್ರಾಫಿಕ್ ಅನ್ನು, ರಸ್ತೆ ಪರಿಸ್ಥಿತಿಯನ್ನು, ಹವಾಮಾನವನ್ನು, ರಾಜಕಾರಣಿಗಳನ್ನು, ನಿಯಮ ಉಲ್ಲಂಘನೆಗಳನ್ನು, ಹೀಗೆ ಹಲವನ್ನು ಕುರಿತು ಮನವನ್ನು ಕಹಿ ಮಾಡಿಕೊಂಡು ಒತ್ತಡದಲ್ಲಿ ಪಯಣಿಸುವುದೇ ನಮ್ಮ ಜಾಯಮಾನ. ಆದರೆ ಸೈಕಲ್ ಸವಾರಿ ಮಾತ್ರ ನನಗೆ ಹಾಗಲ್ಲ. ಇದು ಪೂರ್ಣ ನನಗಾಗಿ. ಅನಪಾನಸತಿ ಧ್ಯಾನದಲ್ಲಿ ನಮ್ಮ ಉಸಿರಾಟದ ಎಳೆಯನ್ನು ಎಣಿಸುವಷ್ಟೇ ಜಾಗೃತಿಯಲ್ಲಿ, ಸೈಕಲ್ ಸವಾರಿ ಮಾಡುವಾಗ ನನಗೆ ಪೆಡಲ್ ಮೇಲಿನ ನನ್ನ ಕಾಲಿನ ಚಲನೆ, ಸೈಕಲ್ ಚೈನಿನ ಅಲುಗಾಟ, ಚಕ್ರದ ಓಟ, ಹ್ಯಾಂಡಲಿನ ತಿರುಗು, ಮಿಣುಕು ದೀಪದ ಮಿಟುಕು ಮುಂತಾದ ಸೂಕ್ಷ್ಮಗಳೆಲ್ಲ ನನ್ನೊಡನೆ ಸ್ಪಂದಿಸುತ್ತಿರುವ ಅನುಭಾವವಿರುತ್ತದೆ.
ಬಹಳಷ್ಟು ಜನ ಹಾಸಿಗೆ ಸುಖದಲ್ಲಿರುವಾಗಲೇ, ಅಷ್ಟೇಕೆ ಇನ್ನೂ ಆ ಸೂರ್ಯ ಕೂಡಾ ಆಗಸದಲ್ಲಿ ತನ್ನಿರವನ್ನು ಕಾಣಿಸುವುದಕ್ಕೆ ಎಷ್ಟೋ ಮುಂಚೆಯೇ ತರಕಾರಿ-ಹೂವು-ಹಣ್ಣು ಮಾರುವವರು, ಪೇಪರ್ ಹುಡುಗರು, ಹೋಟೆಲಿನ ಕೆಲಸಗಾರರು ತಮ್ಮ ದಿನಚರಿಯ ಬಹುಮುಖ್ಯವಾದ ಕೆಲಸಗಳನ್ನು ಮಾಡಿರುತ್ತಾರೆಂಬ ಸಂವೇದನೆ ನನ್ನಿಂದ ಮರೆಯಾಗಿ ಬಹಳಷ್ಟು ವರುಷಗಳೇ ಕಳೆದಿದ್ದವು. ರಸ್ತೆ ಮತ್ತು ಮೆಟ್ರೊ ಕೆಲಸದವರೆಲ್ಲಾ ಇರುಳಿನಲ್ಲಿ ಯಾವುದರ ಕೆಳಗೆ ಆಶ್ರಯ ಪಡೆದಿರುತ್ತಾರೆ ಎಂಬುದನ್ನು ನಾನು ಯೋಚಿಸಿದ್ದೂ ಅಪರೂಪವೇ. ಇವರುಗಳು ಬೇಸಿಗೆಯಲ್ಲಿ ಫುಟ್ಪಾತಿನಲ್ಲೂ, ಮಳೆಗಾಲದಲ್ಲಿ ಮೆಟ್ರೊ ಸೇತುವೆಯ ಕೆಳಗೂ ತಮ್ಮ ಪುಟ್ಟ ಮಕ್ಕಳನ್ನೊಳಗೊಂಡಂತೆ ಸಮಸ್ತದೊಡನೆ ತಂಗಿರುವುದು ದಿನಂಪ್ರತಿ ಬೆಂಗಳೂರಲ್ಲಿ ಸೈಕಲ್ ಓಡಿಸುವಾಗ ಕಂಡಿದ್ದೇನೆ. ಯಾರಾದರೂ ರಸ್ತೆಗಳನ್ನು ಗುಡಿಸುತ್ತಾರೆಯೇ ಎಂಬ ಸಂದೇಹ ಕೂಡಾ ನನ್ನಲ್ಲಿ ಮೂಡುತ್ತಿತ್ತು. ಈ ರಸ್ತೆಗಳನ್ನು ಬಹಳಷ್ಟು ಜನ ಪ್ರಾಮಾಣಿಕವಾಗಿ, ಜೊತೆಗೆ ಎರಡೆರಡೂ ಕೈಗಳಲ್ಲೂ ಗುಡಿಸುವುದನ್ನು ನಾನು ಕಂಡಿದ್ದೇನೆ. ಹಕ್ಕಿಗಳ ಇಂಚರಕ್ಕೆ ಅಪರೂಪಕ್ಕೊಮ್ಮೆ ನಾ ಕಿವಿಗೊಡುತ್ತಿದ್ದೆ. ತುಂಬಾ ತುಂಬಾ ಅಪರೂಪಕ್ಕೆ ಅರಳಿದ ಹೂಗಳನ್ನು, ಮೂಗ್ಗುಗಳನ್ನು, ಗಿಡ ಮರಗಳನ್ನು ಅನುಭಾವಿಸುತ್ತಿದ್ದೆ. ಸಂಧ್ಯೆಯ ಸೊಬಗಿನ ಆಗಸವನ್ನು ದಿಟ್ಟಿಸಿದ್ದು ಎಂದೋ! ಮುದ ನೀಡುವ ಮಳೆಗಾಲದ ಮಳೆ ಹನಿಗಳಲ್ಲಿ ನೆನೆಯುವ ಸುಖವನ್ನು, ತಣ್ಣನೆಯ ಗಾಳಿಯ ಮೃದು ಸ್ಪರ್ಶವನ್ನು ಪೂರ್ಣವಾಗಿ ಕಳೆದುಕೊಂಡು ಬಿಟ್ಟಿದ್ದೆ. ಈ ಮುದದ ಮಾರುತದ ಸ್ಪರ್ಶವಿದೆಯೆಲ್ಲ ಇದು ನಡೆತಕ್ಕಿಂತ ಸ್ವಲ್ಪ ವೇಗದಲ್ಲಿ ಮತ್ತು ಯಾವುದೇ ಇಂಧನ ವಾಹನದ ವೇಗಕ್ಕಿಂತ ಕಡಿಮೆಯ ವೇಗದಲ್ಲಿ ಮಾತ್ರ ದಕ್ಕುವಂತದ್ದಾಗಿದ್ದು, ಅದು ಸೈಕಲ್ ಚಲನೆಯಲ್ಲಿ ಮಾತ್ರ ದಕ್ಕಲು ಸಾಧ್ಯವಿರುವಂತದ್ದು. ನಾನು ಹಿಂದಿನ ದಶಕಗಳಲ್ಲಿ ಭೇಟಿ ನೀಡುತ್ತಿದ್ದ ಕಬ್ಬನ್ ಪಾರ್ಕ್, ಲಾಲ್ಬಾಗ್, ದೊಡ್ಡ ಆಲದ ಮರ, ಮುತ್ಯಾಲ ಮಡುವು, ಹೊರ ವಲಯದಲ್ಲಿರುವ ಕೃಷಿ ಭೂಮಿ, ನಮ್ಮ ಸುಂದರ ದೇಗುಲಗಳು ಇವನ್ನೆಲ್ಲಾ, ಇಲ್ಲೇ ಇರುವುದೇ ತಾನೇ ಎಂದು ಉಪೇಕ್ಷಿಸಿದ್ದೆ. ನನ್ನ ಸೈಕಲ್ಲು ನಾನು ಕಳೆದುಕೊಂಡಿದ್ದ ಇಂತಹ ಎಲ್ಲ ಸೌಭಾಗ್ಯಗಳ ಸಖ್ಯಕ್ಕೆ ಪುನಃ ನನ್ನನ್ನು ಕರೆತಂದಿದೆ.
ನಾನು ಮುಂದಿನ ದಿನಗಳಲ್ಲಿ ಪ್ರತಿ ದಿನವೂ ಸೂರ್ಯೋದಯವನ್ನು ಕಂಡಿದ್ದೇನೆ, ಪ್ರತಿದಿನ ಹಕ್ಕಿಗಳ ಸಂಗೀತವನ್ನು ಕೇಳಿದ್ದೇನೆ. ಹೂವುಗಳನ್ನು ಮಾತ್ರವಲ್ಲ, ನಮ್ಮ ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗಿನಲ್ಲಿರುವ ಇಂಚಿಂಚು ಹುಲ್ಲನ್ನೂ ಆನಂದಿಸಿದ್ದೇನೆ.
ಮುಂದೆ ದುಬೈಗೆ ಬಂದಾಗ ಅಲ್ಲಿನ ಬಹತ್ ರಸ್ತೆಗಳಲ್ಲಿ ಹಾಯುವ ಬಿರುಸಿನ ಚಾಲನೆಯ ವಾಹನಗಳ ಮಧ್ಯೆ ನಾನು ಸೈಕಲ್ ಸವಾರಿ ಮಾಡಲು ಸಾಧ್ಯವೇ ಇಲ್ಲ ಅಂದುಕೊಂಡಿದ್ದೆ. ಅಲ್ಲಿ ನಾನು ಸೈಕಲ್ ಹತ್ತಿದೊಡನೆಯೇ ತಾನೇ ತಾನಾಗಿ ವಿಶಿಷ್ಟ ಮಾರ್ಗಗಳು ಕೈಬೀಸಿ ಆಪ್ತವಾಗಿ ನನ್ನ ಕರೆಯುತ್ತಿದ್ದವು ಎಂಬುದು ನನ್ನ ಆಪ್ತ ಅನುಭಾವ.
ಕಳೆದ ಕೆಲವು ತಿಂಗಳುಗಳಲ್ಲಿ ಯೂರೋಪ್ ದೇಶಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ದೇಶಗಳು ಸೈಕಲ್ಲುಗಳಿಗೆ ಕೊಡುತ್ತಿರುವ ಪ್ರಾಮುಖ್ಯತೆ ನೋಡಿ, ನಾವು ಅವುಗಳನ್ನು ನಮ್ಮ ಬದುಕಾಗಿಸಿಕೊಳ್ಳದೆ, ಪೆಟ್ರೋಲ್ ವಾಹನಗಳ ಹಿಂದೆ ಹೋಗಿ ಹೋಗಿ, ವಿದೇಶಿ ವಿನಿಮಯ ಉಳಿಸಿ ಎಂದು ಹೇಳುವುದು ಹಾಸ್ಯಾಸ್ಪದ ಅನಿಸಿತು.
ಸೈಕಲ್ ಬಳಸುವವರೆಗೆ, ಗಿಣಿಗಳು, ಪಾರಿವಾಳಗಳು, ಅಳಿಲುಗಳು, ಕಾಗೆಗಳು, ಕೋತಿಗಳು ಮುಂತಾದವುಗಳನ್ನು ನಾನು ಇಷ್ಟೊಂದು ಹತ್ತಿರದಿಂದ, ಆಪ್ತತೆಯಿಂದ ಹಿಂದೆಂದೂ ಕಂಡವನಾಗಿರಲಿಲ್ಲ. ನೋಡಿದರಾಯಿತು ಎಂದುಕೊಂಡು ಬಿಟ್ಟಿದ್ದ ಅನೇಕ ಸುಂದರಾದ್ಭುತ ಸ್ಥಾವರಗಳನ್ನು ನಾನು ಕಾಣತೊಡಗಿದ್ದೇನೆ. ಕಾಕತಾಳೀಯವೊ ಎಂಬಂತೆ ನನ್ನ ದುಬೈ ವಾಸದಲ್ಲಿ ನಾನು ಸೈಕಲ್ ಸವಾರಿ ಆರಂಭಿಸಿದ ನಂತರದಲ್ಲಿ ಎಲ್ಲೆಲ್ಲಿಯೂ ಸೈಕ್ಲಿಂಗ್ ಟ್ರಾಕ್ ನಿರ್ಮಾಣಗೊಂಡಿವು. ಬಾಡಿಗೆ ಸೈಕಲ್ ಸೌಕರ್ಯಗಳು ಕಾರ್ಯನಿರ್ವಹಿಸತೊಡಗಿದವು.
ಈ ಎಲ್ಲ ಸಂದರ್ಭಗಳಲ್ಲಿ ನನ್ನೊಡನಿರುವ ಐಫೋನು ಅದು ಮಾತನಾಡುವ ಸಾಧನ ಎಂಬುದಕ್ಕಿಂತ ಹೆಚ್ಚಾಗಿ ಕ್ಯಾಮೆರಾ ಕಣ್ಣಾಗಿ ಕೆಲಸ ಮಾಡುತ್ತಿದೆ. ಇವೆಲ್ಲಕ್ಕೂ ಮಿಗಿಲೆಂಬಂತೆ, ನನ್ನ ಹೃದಯಾಂತರಾಳವು ಬಗೆ ಬಗೆಯ ಬದುಕಿನ ಸೌಂದರ್ಯದ ತೆನೆಗಳನ್ನು ಬೆಳೆಯಲಿಕ್ಕೆ ಆಸ್ಪದವೀಯಬಲ್ಲ ನೆಲದಂತೆ, ಫಲವತ್ತತೆಯಿಂದಿರುವುದು ನನ್ನ ಅನುಭಾವಕ್ಕೆ ಬಂದಿದೆ.
ಇನ್ನೊಂದು ವಿಚಾರ ಹೇಳಬೇಕೆನಿಸಿದೆ. ನಾನು ಹಾಕುವ ಬೆಳಗಿನ ಫೋಟೋ ಬಗ್ಗೆ ಅನೇಕರು ಕೇಳುತ್ತಾರೆ. ಮೈಸೂರಲ್ಲಿ, ಬೆಂಗಳೂರಲ್ಲಿ, ದುಬೈನಲ್ಲಿ ಹೀಗೆ ವಾತಾವರಣದ ಚಿತ್ರ ಇದೆಯೇ ಎಂದು. ಉತ್ತರ ತುಂಬಾ ಸಿಂಪಲ್. ನೀವು ಯಾವ ಊರಲ್ಲಿದ್ದೀರಿ ಎಂಬುದು ಮುಖ್ಯವಲ್ಲ. ನಿಮ್ಮ ಬಳಿ ಯಾವ ಕ್ಯಾಮರಾ ಇದೆ, ಯಾವ ಮೊಬೈಲ್ ಇದೆ ಎಂಬುದೂ ತುಂಬಾ ಮುಖ್ಯವಲ್ಲ. ಯಾವ ಸಮಯದಲ್ಲಿ, ನೀವು ಮೌನದಿಂದ ನಿಮ್ಮ ಸುತ್ತಲಿನ ವಿಶ್ವದೊಂದಿಗೆ ಇದ್ದು, ಗಮನಿಸಿ, ಗದ್ದಲವಿಲ್ಲದೆ ಅವುಗಳನ್ನು ಮನತುಂಬಿಸಿಕೊಳ್ಳುತ್ತಿದ್ದೀರಿ ಮುಖ್ಯ. ಬೆಳಗಿನ ಸಂಧ್ಯಾಸಮಯದಲ್ಲಿ ನಿಮ್ಮ ಪರಿಸರದಿಂದ ಸಾವಧಾನದಿಂದ ಕೆಲವೇ ಕಿಲೋಮೀಟರ್ ದೂರಹೋಗಿ ಪ್ರಕೃತಿಯೊಂದಿಗಿರಿ. ಆ ಪ್ರಕೃತಿ ಸನಿಹಕ್ಕೆ ನಿಮ್ಮನ್ನು ಕೊಂಡೊಯ್ಯಲು ಸೈಕಲ್ಲಿಗಿಂತ ಆಪ್ತ ಸಖ ಅಥವಾ ಸಖಿ ಮತ್ತೊಂದಿಲ್ಲ.
ಕೃತಜ್ಞತೆ: Shreedevi Kalasad
ಸೈಕ್ಲಿಂಗ್ ಪ್ರೇರಣೆ: Manjula Babaladi
ಈ ಬರಹದ ಮೂಲ 'ವಿಶ್ವವಾಣಿ' ಪತ್ರಿಕೆಯಲ್ಲಿ 19.1.2017 ರಂದು 'ಚಕ್ರಧ್ಯಾನ: ಸೈಕಲ್ಲೇರಿ ಏರಾಏರಿ' ಎಂದು ಪ್ರಕಟವಾಗಿತ್ತು

ಕಾಮೆಂಟ್‌ಗಳು