ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈ. ಕೆ. ಮುದ್ದುಕೃಷ್ಣ


 ವೈ. ಕೆ. ಮುದ್ದುಕೃಷ್ಣ


ಕರ್ನಾಟಕ ರಾಜ್ಯಸರ್ಕಾರದಲ್ಲಿನ ಆಡಳಿತಾಧಿಕಾರಿಗಳಾಗಿದ್ದ ವೈ. ಕೆ. ಮದ್ದುಕೃಷ್ಣ ಸುಗಮಸಂಗೀತ ಗಾಯಕರಾಗಿಯೂ ಹೆಸರಾದವರು. 

ಮುದ್ದುಕೃಷ್ಣ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಡಕೆರೆ ಗ್ರಾಮದಲ್ಲಿ 1947ರ ಜೂನ್ 5ರಂದು ಜನಿಸಿದರು. ತಂದೆ ಕೃಷ್ಣೇಗೌಡ. ತಾಯಿ ಕೆಂಚಮ್ಮ. ಕೃಷಿಕರ ಮನೆತನದಲ್ಲಿ ಬೆಳೆದ ಮುದ್ದುಕೃಷ್ಣ ಜಾನಪದ ಗಾಯನ ಮತ್ತು ರಂಗಾಸಕ್ತಿಗಳನ್ನು ಮೈಗೂಡಿಸಿಕೊಂಡರು.

ಮುದ್ದುಕೃಷ್ಣ ಅವರ ಊರಾದ ಯಡಕೆರೆ ಅಂದರೆ ಸುತ್ತಲೂ ಮುಗಿಲೆತ್ತರಕ್ಕೆಬೆಳೆದು ನಿಂತ ಗಿರಿಶ್ರೇಣಿ.  ಅಂದಿನ ದಿನಗಳಲ್ಲಿ ಸರಿಸುಮಾರು ಆರು ತಿಂಗಳು ಸೂರ್ಯನ ಮುಖದರ್ಶನವೇ ಇಲ್ಲದ ತಾಣ.  ಸದಾ ಭೋರ್ಗರೆಯುವ ನದಿ-ತೊರೆಗಳು. ಅಲ್ಲಿಗೆ ಸಾರಿಗೆ ಸಾಧನಗಳು ಇಲ್ಲದಿದ್ದರೂ ಜಾನಪದ ಗಾರುಡಿಗ ಎಸ್. ಕೆ. ಕರೀಂಖಾನ್ ಅವರು ನದಿ-ತೊರೆಗಳನ್ನು ದಾಟಿಕೊಂಡು ಬರುತ್ತಿದ್ದರು. ಕಲ್ಲಚ್ಚಿನಲ್ಲಿ ಮುದ್ರಿತವಾಗಿದ್ದ ಹಾಡಿನ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರು.  ಹಾಗೊಮ್ಮೆ ಬಂದಾಗ ಬಾಲಕ ಮುದ್ದುಕೃಷ್ಣನನ್ನು ತೊಡೆಯ ಮೇಲೆ ಕೂರಿಸಿಕೊಂಡು 'ಜವರಾಯ ಬಂದಾರೆ... ' ಹಾಡು ಹೇಳಿಸಿದರು.  ಜಾನಪದ ಗಾರುಡಿಗ ನೀಡಿದ ಆ ದೀಕ್ಷೆ ಇವರನ್ನು ಇಂದೂ ಮುನ್ನಡೆಸುತ್ತಲೇ ಇದೆ. ಜೊತೆಗೆ ತಂದೆಯವರು ಮನೆಗೆ ಯಕ್ಷಗಾನ ಭಾಗವತರನ್ನು ಕರೆಸಿ ಹಾಡಿಸಿದಾಗ ಆ ಹಾಡನ್ನೆಲ್ಲ ಮುದ್ದುಕೃಷ್ಣರು ಕಲಿತು ಹಾಡುವುದನ್ನು ರೂಡಿಸಿಕೊಂಡಿದ್ದರು. ಶಾಲೆಯಲ್ಲಿ ಹಾಡಿ ಬಹುಮಾನ ಗೆಲ್ಲುತ್ತಿದ್ದರು.  ಕೋಲಾರದಲ್ಲಿ ಕಾಲೇಜು ಓದುವಾಗ ಸಮಾರಂಭವೊಂದರಲ್ಲಿ ದೇಜಗೌ, ಪಿ. ಕಾಳಿಂಗರಾವ್ ಮತ್ತು ಜಿ. ಪಿ. ರಾಜರತ್ನಂ ಅವರ ಉಪಸ್ಥಿತಿಯಲ್ಲಿ ಕೈಯಲ್ಲಿ ಬಾಟಲ್ ಹಿಡಿದು 'ಬ್ರಮ್ಮ ನಿಂಗೆ ಜೋಡಿಸ್ತೀನಿ ಹಾಡಿ' ಮೆಚ್ಚುಗೆಗೆ ಪಾತ್ರರಾಗಿದ್ದರು.

ವೈ. ಕೆ. ಮುದ್ದುಕೃಷ್ಣ ಅವರು ಬಿ.ಎಸ್ಸಿ ಪದವಿ ಪಡೆದು ಲೋಕ ಸೇವಾ ಆಯೋಗದ ಮೂಲಕ ರಾಜ್ಯ ಅಬಕಾರಿ ಇಲಾಖೆಗೆ ಸೇರ‍್ಪಡೆಗೊಂಡರು. ಡೆಪ್ಯುಟಿ ಕಮೀಷನರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ, ಬೆಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ, ಎಂ.ಎಸ್. ಐ.ಎಲ್. ನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ವೈ. ಕೆ. ಮುದ್ದುಕೃಷ್ಣ  ಅವರು ಹತ್ತನೆಯ ವಯಸ್ಸಿನಿಂದಲೇ ರಂಗ ಗೀತೆಗಳನ್ನು ಹಾಡಿ, ನಾಟಕಗಳಲ್ಲಿ ಪಾತ್ರ ವಹಿಸಿ ಹಿರಿಯರ ಮಚ್ಚುಗೆ ಗಳಿಸುತ್ತಾ ಬಂದರು. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ಅನಂತಸ್ವಾಮಿಯವರ ಹಾಡುಗಾಡಿಕೆಗಳಿಂದ ಪ್ರಭಾವಿತರಾಗಿ ಸುಗಮ ಸಂಗೀತಕ್ಕೊಲಿದರು. ಅನೇಕ ಪ್ರಸಿದ್ಧರೊಡಗೂಡಿ ಹಾಡಿದರೂ ತಮ್ಮದೇ ಸ್ವತಂತ್ರ ಶೈಲಿ ರೂಪಿಸಿಕೊಂಡರು. ಹಂಪಿ ಉತ್ಸವ, ಕದಂಬೋತ್ಸವ ಮುಂತಾದ ಉತ್ಸವಗಳಲ್ಲದೆ  ಅನೇಕ ವೇದಿಕೆಗಳಲ್ಲಿ ನಿರಂತರ ಭಾಗಿಯಾಗುತ್ತಾ ಬಂದರು. ಹವ್ಯಾಸಿ ರಂಗಭೂಮಿಯ ಕಲಾವಿದರಾಗಿ, ನೂರಾರು ನಾಟಕಗಳಲ್ಲಿ ಅಭಿನಯಿಸಿದರು. ನಿರ್ದೇಶನ ಮಾಡಿದರು.  ಕಿರುತೆರೆಯಲ್ಲೂ ಅಭಿನಯಿಸಿದರು.  ಅನೇಕ ಧ್ವನಿಸುರುಳಿ ಮತ್ತು ಸಿ.ಡಿ.ಗಳಿಗೆ ಧ್ವನಿಯಾದರು. ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದರು. ಸುಗಮ ಸಂಗೀತಗಾರರನ್ನು ಒಂದುಗೂಡಿಸಿ ವಿವಿಧ ಊರುಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮುದ್ದುಕೃಷ್ಣ ಅವರು ನಿರ್ವಹಿಸಿದ ಪಾತ್ರ ಹಿರಿದು.

ವೈ. ಕೆ. ಮುದ್ದುಕೃಷ್ಣ ಅವರು ಹಲವಾರು ಸಂಘ ಸಂಸ್ಥೆಗಳ ಒಡನಾಟ ಹೊಂದಿದ್ದರು. ಯುವರಂಗ ಸ್ಥಾಪಕ ಅಧ್ಯಕ್ಷರಾಗಿ, ‘ಧ್ವನಿ’ ಸುಗಮ ಸಂಗೀತದ ವ್ಯವಸ್ಥಾಪಕ ಟ್ರಸ್ಟಿಯಾಗಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 

ವೈ. ಕೆ. ಮುದ್ದುಕೃಷ್ಣ ಅವರು ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಅಂಚೆ ಮೂಲಕ ಕನ್ನಡ, ದೂರದರ್ಶನ, ಆಕಾಶವಾಣಿ ಮೂಲಕ ಕನ್ನಡ, ಸಂಘ ಸಂಸ್ಥೆಗಳಲ್ಲಿ, ಉದ್ದಿಮೆಗಳಲ್ಲಿ ಕನ್ನಡ ಕಲಿಕೆಯ ಶಿಬಿರದ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದ್ದರು. ’ಕನ್ನಡ ಭವನ’ದ ರೂವಾರಿಗಳಲ್ಲೊಬ್ಬರಾದರು. 

ವೈ. ಕೆ. ಮುದ್ದುಕೃಷ್ಣ ಅವರಿಗೆ ದಸರಾ ರಾಜ್ಯಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪುರಸ್ಕಾರ, ಸರ್‌.ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಕಲಾಶ್ರೀ ಪ್ರಶಸ್ತಿ, ಎಸ್.ಕೆ. ಕರೀಂ ಖಾನ್‌ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಿ. ಕಾಳಿಂಗರಾವ್ ಪ್ರಶಸ್ತಿ,  ಸಂತ ಶಿಶುನಾಳ ಷರೀಫ್ ಪ್ರಶಸ್ತಿ  ಮುಂತಾದ ಅನೇಕ ಗೌರವಗಳು ಸಂದಿವೆ.

ಹಿರಿಯರಾದ ವೈ. ಕೆ. ಮುದ್ದುಕೃಷ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

On the birthday of Y. K. Muddukrishna

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ