ಎಸ್. ಪಿ. ಬಿ.
ಎಸ್. ಪಿ. ಬಾಲಸುಬ್ರಹ್ಮಣ್ಯಂ
ಇಂದು ಅಮರ ಗಾಯಕ ನಮ್ಮೆಲ್ಲರ ಮೆಚ್ಚಿನ ಎಸ್. ಪಿ. ಬಾಲಸುಬ್ರಹ್ಮಣ್ಯಂ ಸಾರ್ ಅವರ ಜನ್ಮದಿನ.
ನಮ್ಮ ಎಸ್‍ಪಿಬಿ ಎಂದರೆ ಅದೇ ಒಂದು ಭಾವ. ಎಸ್‍ಪಿಬಿ ಅಂದರೆ ಸಂಗೀತ. ಎಸ್‍ಪಿಬಿ ಅಂದರೆ ಅದೊಂದು ಮೇರುಶಿಖರ. ಅದೊಂದು ಸೌಜನ್ಯ, ಸ್ನೇಹ, ಸಂಗೀತ, ಸಂಸ್ಕೃತಿ, ಸರ್ವ ಸದ್ಗುಣಗಳ ಮಹತ್ಸಂಗಮ. ಅವರಿದ್ದ ಕಾಲದಲ್ಲಿದ್ದ ನಾವೇ ಧನ್ಯರು. 2020ರ ಸೆಪ್ಟೆಂಬರ್ 25ರಂದು ಈ ಲೋಕವನ್ನಗಲಿದ ಅವರು ನಮ್ಮೊಂದಿಗಿಲ್ಲ ಎಂದು ನೆನೆದರೆ ನಂಬಲಾಗುತ್ತಿಲ್ಲ. ಅವರು ಅಷ್ಟೊಂದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದವರು.
ನಮ್ಮ ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ 1946ರ ಜೂನ್ 4. ಆಗೊಂದು ಯುಗ, ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ.ಎಂ. ಸೌಂದರ್ ರಾಜನ್, ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರು. ಬಾಲು ಬಂದರು ನೋಡಿ ಈ ಎಲ್ಲ ಭಾಷೆಗಳಿಗೂ ಸಾರ್ವಭೌಮರಾಗಿಬಿಟ್ಟರು. ಒಮ್ಮೆ ಅವರು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ತಮಿಳಿನಲ್ಲೂ ಒಂದೇ ದಿನ 17 ಗೀತೆಗಳನ್ನು ಮತ್ತು ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್‍ಪಿಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿದ್ದ ವೈಶಾಲ್ಯತೆಗಳಿಗಿದ್ದ ನಿದರ್ಶನ.
ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ. ಇದನ್ನೇ ಡಾ. ರಾಜ್‍ಕುಮಾರ್ ಅವರು ಒಮ್ಮೆ ಪಿಬಿಎಸ್ ಬಗ್ಗೆ ಹೇಳುತ್ತಾ ‘ಪಿಬಿಎಸ್ ನನ್ನ ಆತ್ಮ, ನಾನು ಶರೀರ’ ಎನ್ನುತ್ತಿದ್ದರು. ರಾಜ್ ಕಪೂರ್ ಮುಖೇಶ್ ಬಗ್ಗೆ ಇದನ್ನೇ ಹೇಳುತ್ತಿದ್ದರು. ಹಾವಿನ ದ್ವೇಷ ಹನ್ನೆರಡು ವರುಷ ಎಂದು ಎಸ್‍ಪಿಬಿ ಹಾಡಿದಾಗ ವಿಷ್ಣುವರ್ಧನ್ ರಾಮಾಚಾರಿಯಾಗಿಬಿಟ್ಟರು, ಸ್ನೇಹದ ಕಡಲಲ್ಲಿ ಎಂದು ಹಾಡಿದಾಗ ಶ್ರೀನಾಥ್ ಗರಿಗೆದರಿಬಿಟ್ಟರು, ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಅನಂತ್ ನಾಗ್ ಆಕಾಶಕ್ಕೆ ಹಾರಿದರು, ನಲಿವಾ ಗುಲಾಬಿ ಹೂವೆ ಎಂದು ಶಂಕರನಾಗ್ ಭಾವಸ್ಥರಾದರು. ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಂತರ್ಧ್ವನಿ ಶಕ್ತಿ ಬಾಲು ಅವರದ್ದು. ಅವರ ಧ್ವನಿಯ ಮೋಡಿ ಎಂಜಿಆರ್, ಶಿವಾಜಿ ಗಣೇಶನ್, ಎನ್.ಟಿ. ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಆಗಾಗ ಇಣುಕಿತ್ತು. ಹಿಂದಿಯಲ್ಲಿ 'ಏಕ್ ದೂಜೇ ಕೆ ಲಿ ಲಿಯೇ' ಬಂದಾಗ ಬಾಲು ಹಿಂದೀ ಚಿತ್ರರಂಗವನ್ನೂ ತಮ್ಮ ಮೋಡಿಗೆ ಸೆಳೆದುಕೊಂಡರು. ಸಾಜನ್, ಮೈ ನೇ ಪ್ಯಾರ್ ಕಿಯಾ ಮುಂತಾದ ಚಿತ್ರಗಳು ಬಂದಾಗ ರಫಿ, ಕಿಶೋರ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದ ಹಿಂದಿ ಚಿತ್ರರಂಗಕ್ಕೆ ಬಾಲು ಬೆನ್ನೆಲುಬಾಗಿದ್ದರು.
ಬಾಲು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು.
1966ರ ವರ್ಷದಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಬಾಲು ಹೇಳುತ್ತಿದ್ದರು 'ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ'. ಅದೇ ರೀತಿ ಮಹಮ್ಮದ್ ರಫಿ ಎಂದರೆ ಅವರಿಗೆ ಪ್ರಾಣ. ಅವರ ಹಾಡುಗಳನ್ನೂ ಎಸ್‍ಪಿಬಿ ಆತ್ಮ ತುಂಬಿ ಹಾಡುತ್ತಿದ್ದರು.
ಎಂಭತ್ತರ ದಶಕದಲ್ಲಿನ ಒಂದು ಘಟನೆಯಿದು. ಅದೊಂದು ತೆಲುಗು ಚಿತ್ರದ ಬಗ್ಗೆ ಯಾವುದೋ ಒಂದು ಪತ್ರಿಕೆ ಸಣ್ಣ ಲೇಖನ ಬರೆದು, ಅದರಲ್ಲಿ ಕರ್ನಾಟಕ ಸಂಗೀತ ಚೆನ್ನಾಗಿ ಮೂಡಿ ಬಂದಿರುವುದಾಗಿ ವ್ಯಾಖ್ಯಾನಿಸಿತ್ತು. ಬೆಂಗಳೂರಿನ ಸೆಂಟ್ರಲ್ ಚಿತ್ರಮಂದಿರದ ಮುಂದೆ ಅದರ ಪೋಸ್ಟರ್ ನೋಡಿ ಖಾಲಿಯಿದ್ದ ಚಿತ್ರ ಮಂದಿರಕ್ಕೆ ನಾನು ಕಾಲಿಟ್ಟಾಗ ಆ ಚಿತ್ರ ಇನ್ನಿಲ್ಲದಂತೆ ಮನ ಸೆಳೆಯಿತು. ಡಾ. ಬಾಲಮುರಳೀ ಕೃಷ್ಣ ಎಷ್ಟು ಚೆನ್ನಾಗಿ ಹಾಡಿದ್ದಾರೆ ಎಂದು ಅಂದುಕೊಂಡು ಮನೆಗೆ ತೆರಳಿದೆ. ಕೆಲವೇ ದಿನಗಳಲ್ಲಿ ಆ ಚಿತ್ರ ಇನ್ನಿಲ್ಲದಂತೆ ಯಶಸ್ವಿಯಾದಾಗ ಪತ್ರಿಕೆಗಳಲ್ಲಿ ಸುದ್ಧಿ ಬಂದಾಗಲೇ ತಿಳಿದಿದ್ದು. ಆ ಚಿತ್ರದ ಹಾಡುಗಳನ್ನು ಹಾಡಿದವರು ಡಾ. ಬಾಲಮುರಳಿ ಕೃಷ್ಣರಲ್ಲ, ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅಂತ. ಆ ಚಿತ್ರ ನಿಮಗೆ ಗೊತ್ತಾಗಿರಬೇಕು. 'ಶಂಕರಾಭರಣಂ'. ಆ ಚಿತ್ರ ಬಂದ ಹಲವು ವರ್ಷಗಳ ನಂತರ ಬಾಲು ಶಾಸ್ತ್ರೀಯ ಸಂಗೀತವನ್ನು ಕೂಡಾ ಸುದೀರ್ಘವಾಗಿ ಅಭ್ಯಾಸ ಮಾಡಿದರು. ಅಭ್ಯಾಸ ಮಾಡಿದರು ಎಂಬುದಕ್ಕಿಂತ ತಮ್ಮೊಳಗೆ ಅಂತರ್ಧಾನದಲ್ಲಿದ್ದ ಸಂಗೀತಕ್ಕೆ ಒಂದು ದೃಷ್ಟಿ ನೀಡಿಕೊಂಡರು. ಇಂತಹ ಅಗಾಧ ಸಂಗೀತ ಪರ್ವತಕ್ಕೆ ಸಂಗೀತ ಗೊತ್ತಿರಲಿಲ್ಲ ಎಂದು ಹೇಗೆ ತಾನೇ ಹೇಳಲಿಕ್ಕೆ ಸಾಧ್ಯ.
ಶಂಕರಾಭರಣಂ, ಗಾನಯೋಗಿ ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಏಕ್ ದೂ ಜೆ ಕೆ ಲಿಯೆ, ರುದ್ರವೀಣ, ಮಿನ್ಸಾರ ಕನವು ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಪದ್ಮಶ್ರೀ, ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಮರಣೋತ್ತರವಾಗಿ ಪದ್ಮವಿಭೂಷಣ ಸಂದಿತು. ಎಸ್‍ಪಿಬಿ ಅವರು ಹಾಡಿರುವ ಸಹಸ್ರ ಸಹಸ್ರ ಹಾಡುಗಳು ಲೆಕ್ಕವಿಲ್ಲದಷ್ಟು. ಗಾಯಕರೊಬ್ಬರು ಅತ್ಯಂತ ಹೆಚ್ಚಿನ ಹಾಡುಗಳ ಹಿನ್ನೆಲೆ ಗಾಯನ ನೀಡಿರುವ ಕೀರ್ತಿ ಅವರದ್ದು ಎಂಬ ಮಾತೂ ಇದೆ. ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿತ್ತು. ಅವರ ಪುತ್ರ ಕೂಡಾ ಚಿತ್ರರಂಗದಲ್ಲಿ ಚಿತ್ರನಿರ್ಮಾಪಕರಾಗಿ, ನಟರಾಗಿ, ಗಾಯಕರಾಗಿ ಹೆಸರಾಗಿದ್ದಾರೆ.
ಕಿರುತೆರೆಯಲ್ಲಿ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವಂತೆ, ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ಬಾಲು ನಡೆಸುತ್ತಿದ್ದರು. ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುತ್ತಿದ್ದುದನ್ನು ಕಾಣುವುದೇ ಒಂದು ಸೌಭಾಗ್ಯವಾಗಿತ್ತು. ಈ ಬದುಕಿನಲ್ಲಿ ಎಲ್ಲರೂ ಬಾಲುವಿನಂತೆಯೇ ನಮ್ಮನ್ನು ನಡೆಸಿಕೊಳ್ಳುವಂತಿದ್ದರೆ ನಮ್ಮ ಬಾಳು ಎಷ್ಟು ಭವ್ಯವಾಗಿರುತ್ತಿತ್ತು ಎಂದು ಮನಸ್ಸು ಭಾವಲೋಕದಲ್ಲಿ ಮೂಕವಾಗುತ್ತದೆ. ಕಲೆ ತರುವ ನಿಜವಾದ ಸಂಸ್ಕೃತಿ ಎಂದರೆ ಇದೇ. ಈ ಎಲ್ಲ ನಿಟ್ಟಿನಲ್ಲಿ ನಮ್ಮ ಬಾಲು ಒಬ್ಬ ನೈಜ ಸಾಂಸ್ಕೃತಿಕ ರಾಯಭಾರಿಯಂತಿದ್ದರು.
ಈ ಅಗಾಧತೆಯ ಸಾಂಸ್ಕೃತಿಕ ಹಿರಿಯರಾದ ನಮ್ಮ ಬಾಲು 2020ರ ಸೆಪ್ಟೆಂಬರ್ 25ರಂದು ಜೀವದ ಹಂಗು ತೊರೆದು ಈಲೋಕದಿಂದ ಹೊರನಡೆದರು. ಆದರೂ ಅವರು ನಮ್ಮೊಂದಿಗಿದ್ದಾರೆ. ನಾವಿರುವವರೆಗೂ ‘ಒಲವಿನ ಜೀವ’ವಾದ ಎಸ್. ಪಿ. ಬಾಲಸುಬ್ರಹ್ಮಣ್ಯಂ ನಮ್ಮಂತರಂಗದಲ್ಲಿ ‘ಜೊತೆಯಲಿ, ಜೊತೆ ಜೊತೆಯಲಿ, ಎಂದೂ ಹೀಗೆ....’ ಅಳಿಯದೆ ಇದ್ದೇ ಇರುತ್ತಾರೆ.
On the birth anniversary of great playback singer Dr. S.P. Balasubrahmanyam
ಕಾಮೆಂಟ್‌ಗಳು