ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪರಮೇಶ್ವರಾಚಾರ್ಯ


 ರಥಶಿಲ್ಪಿ ಪರಮೇಶ್ವರಾಚಾರ್ಯ


ರಥಶಿಲ್ಪಿ ಪರಮೇಶ್ವರಾಚಾರ್ಯರು ರಥ ನಿರ್ಮಾಣಕ್ಕೆ ಹೆಸರಾದ ಪ್ರಸಿದ್ಧ  ಕುಟುಂಬಕ್ಕೆ ಸೇರಿದವರು.

ಪರಮೇಶ್ವರಾಚಾರ್ಯರು  ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ 1924ರ ಜೂನ್ 24ರಂದು ಜನಿಸಿದರು. ತಂದೆ ಮಾನಾಚಾರ್ಯರು.  ತಾಯಿ ವೀರಮ್ಮನವರು. ಬಾಲ್ಯದಲ್ಲಿಯೇ ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ಪರಮೇಶ್ವರಾಚಾರ್ಯರು  ಸೋದರ ಮಾವಂದಿರಾದ ಕೆಂಚವೀರಾಚಾರ್ಯ ಮತ್ತು  ಕಾಳಾಚಾರ್ಯರ ಪೋಷಣೆಯಲ್ಲಿ ಬೆಳೆದರು.

ಪರಮೇಶ್ವರಾಚಾರ್ಯರಿಗೆ ಚಿಕ್ಕಂದಿನಿಂದಲೇ ಮರಗೆಲಸದೊಡನೆ ಬದುಕು ಆರಂಭಗೊಂಡಿತು. ರೇಖಾಚಿತ್ರಗಳ ರಚನೆ ಮತ್ತು  ವಿಗ್ರಹ ಕೆತ್ತನೆ ಕೆಲಸದ ಅಭ್ಯಾಸ ಚಿಕ್ಕಂದಿನಿಂದಲೇ ಕೈಗೂಡಿತು. ಸೋದರ ಮಾವನ ಮಗ ಮೌನಾಚಾರ್ಯರೊಡನೆ ಹೊಸದುರ್ಗದ ಬಳಿಯ ನೀರಗುಂದದ ಭೈರವೇಶ್ವರ ರಥದ ನಿರ್ಮಾಣ ಮಾಡಿದರು. ಕಲಾತ್ಮಕವಾಗಿ ರಥ ನಿರ್ಮಿಸಿ ಖ್ಯಾತಿ ಪಡೆದ ಪರಮೇಶ್ವರಾಚಾರ್ಯರು, ಅಜ್ಜಹಳ್ಳಿಯ ಶಿಲ್ಪಶಾಸ್ತ್ರ ಪ್ರವೀಣರಾದ ನಾಗೇಂದ್ರಾಚಾರ್ಯರಲ್ಲಿ ಉನ್ನತ ಮಟ್ಟದ ಶಿಲ್ಪ ರಚನೆಯ ಶಿಕ್ಷಣವನ್ನೂ ಪಡೆದರು. ಕುಸುರಿ ಕೆಲಸದಲ್ಲಿ ಕೂಡಾ  ಪ್ರಾವೀಣ್ಯತೆ ಪಡೆದರು. ಮಾವಂದಿರಾದ ಕೆಂಚವೀರಾಚಾರ್ಯರಿಂದ ಅವರಿಗೆ ಶಿಲೆ, ಚಿನ್ನಬೆಳ್ಳಿ ಮತ್ತು ಎರಕದ ಕೆಲಸದಲ್ಲಿ  ಶಿಕ್ಷಣ ದೊರಕಿತು.

ಪರಮೆಶ್ವರಾಚಾರ್ಯರು ರಚಿಸಿದ ಮಹತ್ವದ ರಥ ರಚನೆಗಳಲ್ಲಿ  ಮೈಸೂರಿನ ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣ ಸ್ವಾಮಿ ರಥ ಪ್ರಮುಖವಾದುದು. 22½  ಅಡಿ ಎತ್ತರದ ಈ  ರಥದ ಸುತ್ತಲೂ ಕುಸುರಿ ಕೆತ್ತನೆಯಿಂದ ಜೀವ ತುಂಬಿದ ಮೂರ್ತಿಗಳಿವೆ.   ಮುಂದೆ ಪರಮೇಶ್ವರಾಚಾರ್ಯರು ಹಲವಾರು ದೇವತಾ ಮೂರ್ತಿಗಳ ರಚನೆ ಮಾಡಿದರು. ಚಳ್ಳಕೆರೆ ಕುಮಾರಸ್ವಾಮಿ, ವಿನಾಯಕ, ಶಿವಮೊಗ್ಗಕ್ಕೆ ಅಂಬಾ ಭವಾನಿ, ಬಳ್ಳಾರಿಯ ವೇಣುಗೋಪಾಲ, ಹೊಳಲೂರಿನ ವೀರಭದ್ರ ಮುಂತಾದ ಶಿಲಾ ಮೂರ್ತಿಗಳನ್ನು ರಚಿಸಿದರು.

ದೇವಾ ಹಳ್ಳಿಯ ರಂಗನಾಥ ಸ್ವಾಮಿ, ಚಿತ್ರದುರ್ಗ ಜಿಲ್ಲೆಗೆ ಬೆಳ್ಳಿಯ ವೀರಭದ್ರಸ್ವಾಮಿ, ತರಿಕೆರೆಗೆ ಪಂಚಲೋಹದ ಬನಶಂಕರಿ, ಮಳವಳ್ಳಿಯ ಆಂಜನೇಯ ಸ್ವಾಮಿಗೆ ಪ್ರಭಾವಳಿ, ಸಿದ್ಧರೂಢ ಸ್ವಾಮಿಗಳು, ಹರ್ಡೇಕರ್‌ ಮಂಜಪ್ಪ, ಮಹಾತ್ಮಗಾಂಧಿ,  ಮರುಳು ಸಿದ್ದೇಶ್ವರ ಸ್ವಾಮಿ, ಬಾಬಾ ಸಾಹೇಬ್ ಅಂಬೇಡ್ಕರ್‌, ಗಂಜಿ ವೀರಪ್ಪ ಮುಂತಾದವರ ವ್ಯಕ್ತಿ ಶಿಲ್ಪರಚನೆ ಮುಂತಾದವು ಪರಮೆಶ್ವರಾಚಾರ್ಯರ ಮಹತ್ವದ ಕೃತಿಗಳು. ಇದಲ್ಲದೆ ಯಗಚಿಯ ಮಲ್ಲಿಕಾರ್ಜುನ ಸ್ವಾಮಿ ರಥ, ಬಿಂಡಿಗನವಿಲೆ ಚೆನ್ನಕೇಶವ ಸ್ವಾಮಿರಥ. ಹಂಪೆ ವಿರೂಪಾಕ್ಷಸ್ವಾಮಿ ರಥ, ನಾಯ್ಕರ ಹಟ್ಟಿಯ ತಿಪ್ಪೆರುದ್ರಸ್ವಾಮಿ ರಥ ಮುಂತಾದವು ಅವರ ವೈಶಿಷ್ಟ್ಯಪೂರ್ಣ ರಥ ನಿರ್ಮಾಣಗಳು.

ಪರಮೆಶ್ವರಾಚಾರ್ಯರಿಗೆ 1995ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಜಕಣಾಚಾರಿ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.  

Rathashilpi Parameshwaracharya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ