ದೇವಂಗಿ ಚಂದ್ರಶೇಖರ್
ದೇವಂಗಿ ಚಂದ್ರಶೇಖರ್
ದೇವಂಗಿ ಚಂದ್ರಶೇಖರ್ ಸುಗಮ ಸಂಗೀತದ ಪ್ರಾರಂಭಿಕ ರೂಪಗಳಾದ ಲಘು ಸಂಗೀತ ಮತ್ತು ಭಾವಗೀತೆಗಳ ಹಾಡುಗಾರಿಕೆಯನ್ನು ಬಳಕೆಗೆ ತಂದ ಪ್ರಮುಖರಲ್ಲಿ ಒಬ್ಬರು.
ದೇವಂಗಿ ಚಂದ್ರಶೇಖರ್ 1921ರ ಜೂನ್ 7ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇವಂಗಿಯಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ದೇವಂಗಿ ಮತ್ತು ತೀರ್ಥಹಳ್ಳಿಯಲ್ಲಿ ನಡೆಯಿತು. ಮುಂದೆ ಮೈಸೂರು ಮಹಾರಾಜಾ ಹೈಸ್ಕೂಲಿನಲ್ಲಿ ಓದಿ, ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು.
ದೇವಂಗಿ ಚಂದ್ರಶೇಖರ್ ಬಾಲ್ಯದಲ್ಲೇ ಹಾಡುಗಳನ್ನು ಗುನುಗುತ್ತಿದ್ದು, ಸಭೆ ಸಮಾರಂಭಗಳಲ್ಲಿ ಸೈಗಾಲ್, ಕಾನನ್ ದೇವಿ, ಪಂಕಜ್ ಮಲ್ಲಿಕ್, ಕೆ.ಸಿ.ದೇ ಮುಂತಾದವರ ಹಾಡುಗಳನ್ನು ಅನುಕರಿಸಿ ಹಾಡುತ್ತಿದ್ದರು. ಸಮಾರಂಭವೊಂದರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ನಂ. ಶಿವರಾಮ ಶಾಸ್ತ್ರಿಗಳು ಕೆ.ಎಸ್.ನ.ರವರ “ನಮ್ಮೂರು ಚೆಂದವೊ…” ಹಾಡಿದ್ದು ಕೇಳಿ, ಆ ಹಾಡಿನ ಮೋಡಿಗೆ ಒಳಗಾಗಿ ಕೆ.ಎಸ್.ನ. ಭೇಟಿ ಮಾಡಿದರು. ಹೀಗೆ ಕನ್ನಡ ಕವಿಗಳ ಕಾವ್ಯಾಭ್ಯಾಸಕ್ಕೆ ತೊಡಗಿ ಬೇಂದ್ರೆ, ಪು.ತಿ.ನ. ಆದಿಯಾಗಿ ಹಿರಿಕಿರಿಯ ಕವನಗಳಿಗೆ ಕವನಗಳಿಗೆ ರಾಗ ಸಂಯೋಜಿಸಿ ಹಾಡತೊಡಗಿದರು. ಇವರ ಕಂಠಸಿರಿಗೆ ಮಾರುಹೋಗಿದ್ದ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು. “ಸಂಗೀತ ಕಲಿಸ್ತೇನೆ ಬಾರಯ್ಯಾ, ಎಂದು ಕೈ ಹಿಡಿದು ಎಳೆದಿದ್ದರಂತೆ.” ಇವರು ಹೋಗಲಿಲ್ಲ. ಮುಂದೆ ಪಶ್ಚಾತ್ತಾಪ ಪಟ್ಟರು.
ದೇವಂಗಿ ಚಂದ್ರಶೇಖರ್ ಕೆ.ಎಸ್.ನ. ಅವರ “ರಾಯರು ಬಂದರು, ಬಳೆಗಾರ ಚೆನ್ನಯ್ಯ, ನವಿಲೂರಿನೊಳಗೆಲ್ಲ, ಶ್ಯಾನುಭೋಗರ ಮಗಳು” ಮುಂತಾದ ಗೀತೆಗಳಿಗೆ ಜೀವತುಂಬಿದರು. ಚಂದ್ರಶೇಖರ್‌ರವರ ಹಾಡುಗಳು ಆಕಾಶವಾಣಿಯಿಂದಲೂ ಭಿತ್ತರಗೊಂಡವು. ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ಸಾಧಿಸಿದ್ದು ಅಪಾರ.
ಬರಹಗಾರರಾಗಿಯೂ ದೇವಂಗಿ ಚಂದ್ರಶೇಖರ್ ಅಮೂಲ್ಯ ಕೃತಿಗಳ ರಚನೆ ಮಾಡಿದರು. ಹೊಸಗನ್ನಡ ಭಾವಗೀತೆಗಳಲ್ಲಿ ಜೀವನವಿಕಾಸ, ಬಣ್ಣವಾಡು, ಜಾನಪದ ಗೀತೆಗಳಲ್ಲಿ ಸಂಸಾರ ಚಿತ್ರಗಳು, ತೀರ್ಥಹಳ್ಳಿ ತಾಲ್ಲೂಕು ದರ್ಶನ, ಗೋಪಾಲಗೌಡರು ಮುಂತಾದ ಕೃತಿಗಳನ್ನು ರಚಿಸಿದರು.
ದೇವಂಗಿ ಚಂದ್ರಶೇಖರ್ ಅವರ ಬಣ್ಣವಾಡು ಪುಸ್ತಕಕ್ಕೆ ಕುವೆಂಪುರವರ ಆಶೀರ‍್ವಾದ ಸಂದಿತು. ಭಾವಗೀತೆಗಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 1982ರಲ್ಲಿ ಕರ್ನಾಟಕ ಸಂಗೀತ ಅಕಾಡಮಿಯಿಂದ ಸನ್ಮಾನ ಸಂದಿತು.
ದೇವಂಗಿ ಚಂದ್ರಶೇಖರ್ 1999ರ ಜೂನ್ 6ರಂದು ನಿಧನರಾದರು.
On the birth anniversary of great singer and writer Devangi Chandrashekhar
ಕಾಮೆಂಟ್‌ಗಳು