ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಏಕ್ತಾ ಕಪೂರ್


ಏಕ್ತಾ ಕಪೂರ್

ಏಕ್ತಾ ಕಪೂರ್ ಕಿರುತೆರೆ ಧಾರಾವಾಹಿಗಳ ನಿರ್ಮಾಣದ ಮೂಲಕ ಅಸಾಮಾನ್ಯ ಯಶಸ್ಸು ಕಂಡಾಕೆ.  ಸಿನಿಮಾ ನಿರ್ಮಾಣ‍ ಕ್ಷೇತ್ರದಲ್ಲೂ ಯಶ ಸಾಧಿಸಿರುವ ಈಕೆ, ಚಿತ್ರಕಥೆ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ. 

ಏಕ್ತಾ ಕಪೂರ್ ಪ್ರಸಿದ್ಧ ಚಲನಚಿತ್ರ ನಟ ಜಿತೇಂದ್ರ ಮತ್ತು ಶೋಭಾ ಕಪೂರ್ ದಂಪತಿಗಳ ಪುತ್ರಿಯಾಗಿ 1975ರ ಜೂನ್ 7ರಂದು ಜನಿಸಿದರು. ನಟ ತುಷಾರ್ ಕಪೂರ್ ಈಕೆಯ ಸೋದರ. ಈಕೆ ಬಾಂಬೆ ಸ್ಕಾಟಿಷ್ ಸ್ಕೂಲ್ ಮತ್ತು ಮಿಥಿಬಾಯಿ ಕಾಲೇಜಿನಲ್ಲಿ ಓದಿದರು. 

ಏಕ್ತಾ ಕಪೂರ್ ಹದಿನೈದನೇ ವಯಸ್ಸಿಗೆ ಕೈಲಾಶ್ ಸುರೇಂದ್ರನಾಥ್ ಅವರ ಬಳಿ ಜಾಹೀರಾತು ಮತ್ತು ಚಿತ್ರನಿರ್ಮಾಣ ಕ್ಷೇತ್ರದಲ್ಲಿ ಕಲಿಕೆ ಆರಂಭಿಸಿದರು. 1994ರಲ್ಲಿ ತಂದೆ ಜಿತೇಂದ್ರ ಅವರ ಹಣಹೂಡಿಕೆಯಲ್ಲಿ ಬಾಲಾಜಿ ಟೆಲಿಫಿಲಂಸ್ ಲಿಮಿಟೆಡ್ ಸ್ಥಾಪಿಸಿ 130ಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಹಮ್ ಪಾಂಚ್, ಸಾಸ್ ಭಿ ಕಭೀ ಬಹು ಥಿ, ಕಹಾನಿ ಘರ್ ಘರ್ ಕಿ, ಕಾಹಿನ್ ಕಿಸ್ಸೀ ರೋಜ್, ಕಸೌತೀ ಜಿಂದಗೀ ಕೇ, ಕಹೀನ್ ತೊ ಹೋಗ, ಕಸಮ್ಹ್ ಸೆ, ಪವಿತ್ರ್ ರಿಶ್ತಾ, ಬಡೇ ಅಚ್ಚೇ ಲಗತೇ ಹೈನ್,  ಯೇಹ್ ಹೈ ಮೊಹಬತ್ತೇನ್, ಜೋಧಾ ಅಕ್ಬರ್, ನಾಗಿನ್,  ಕುಂಕುಮ್ ಭಾಗ್ಯ, ಕಸಮ್ ತೇರೇ ಪ್ಯಾರ್ ಕಿ, ಕುಂಡಲಿ ಭಾಗ್ಯ ಮುಂತಾದ ಪ್ರಸಿದ್ಧ ಧಾರಾವಾಹಿಗಳು ಇವುಗಳಲ್ಲಿ ಸೇರಿವೆ.  ಹೀಗೆ ಆಕೆ ಕಿರುತೆರೆಯ ರಾಣಿ ಎನಿಸಿಕೊಂಡಿದ್ದಾರೆ.  ಇವರ ಧಾರಾವಾಹಿಗಳ ನಿರ್ಮಾಣಗಳು ಕನ್ನಡವನ್ನೊಳಗೊಂಡಂತೆ ಇತರ ಭಾಷೆಗಳನ್ನು ಸಹಾ ವ್ಯಾಪಿಸಿಕೊಂಡು ಯಶಸ್ಸು ಸಾಧಿಸಿದೆ.

ಚಲನಚಿತ್ರ ನಿರ್ಮಾಣಕ್ಕೂ ಲಗ್ಗೆ ಇಟ್ಟ ಏಕ್ತಾ ಕಪೂರ್ ಅಲ್ಲೂ ಯಶಸ್ಸು ಸಾಧಿಸಿದ್ದಾರೆ. ಕ್ಯೋ ಕೀ ಮೈನ್ ಜೂಟ್ ನಹಿನ್ ಬೋಲ್ತಾ, ಕುಚ್ ತೋ ಹೈ, ಕೃಷ್ಣಾ ಕಾಟೇಜ್, ಕ್ಯಾ ಕೂಲ್ ಹೈ ಹಮ್, ಶೂಟೌಟ್ ಅಟ್ ಲೊಖಾಂಡ್‍ವಾಲಾ, ಮಿಷನ್ ಇಸ್ತಾನ್‍ಬುಲ್, ಇಎಮ್‍ಐ - ಲಿಯಾ ಹೈ ತೋಹ್ ಚುಕಾನಾ ಪಡೇಗಾ, ಲವ್ ಸೆಕ್ಸ್ ಅಂಡ್ ಧೋಖಾ, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಶೋರ್ ಇನ್ ದ ಸಿಟಿ ಮುಂತಾದವು ಇವರು ತಮ್ಮ ಸಂಸ್ಥೆಯ ನೇರ ನಿರ್ಮಾಣ‍ ಅಥವಾ ಇತರರ ಸಹಯೋಗಗಳಲ್ಲಿ ನಿರ್ಮಿಸಿರುವ ಚಿತ್ರಗಳು.

ಏಕ್ತಾ ಕಪೂರ್ 2012ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಎಕ್ಸಲೆನ್ಸ್ ಎಂಬ ಮಾಧ್ಯಮ ತರಬೇತಿ ಸಂಸ್ಥೆಯನ್ನು ಆರಂಭಿಸಿ ಅನೇಕ ಪ್ರತಿಭೆಗಳನ್ನು ಬೆಳೆಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. 'ಆಲ್ಟ್ ಬಾಲಾಜಿ' ಎಂಬ ಡಿಜಿಟಲ್ ಆಪ್ ಮೂಲಕ ಅನೇಕ ಧಾರಾವಾಹಿಗಳನ್ನು ಆನ್ಲೈನ್‍ನಲ್ಲಿ ಒದಗಿಸಿದ್ದಾರೆ.

ಏಕ್ತಾ ಕಪೂರ್ ಅವರಿಗೆ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಯಶಸ್ಸು ಎಂಬುದು "ಕೆಲವರಿಗೆ ಮಾತ್ರಾ, ಕೆಲವೊಮ್ಮೆ ಮಾತ್ರಾ" ದೊರಕುವಂತದ್ದು.  ಏಕ್ತಾ ಕಪೂರ್ ಅದನ್ನು ನಿರಂತರವಾಗಿ ಜೊತೆಗಿರಿಸಿಕೊಂಡಿರುವುದು ಸಾಮಾನ್ಯ ಸಾಧನೆಯಲ್ಲ.

Ektha Kapoor

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ