ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ. ಎಸ್. ಧರಣೇಂದ್ರಯ್ಯ


 ಎ. ಎಸ್.‍ ಧರಣೇಂದ್ರಯ್ಯ


ಎ. ಎಸ್.‍ ಧರಣೇಂದ್ರಯ್ಯ ಅವರು ಮನೋವಿಜ್ಞಾನ ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದವರು.

ಧರಣೇಂದ್ರಯ್ಯ ನವರು 1933ರ ಜೂನ್ 14ರಂದು ಹಾಸನ ಜಿಲ್ಲೆಯ ಅಡುಗೂರು ಎಂಬಲ್ಲಿ ಜನಿಸಿದರು. ತಂದೆ ಸಿಂದಪ್ಪಶೆಟ್ಟರು, ತಾಯಿ ಪದ್ಮಾವತಮ್ಮ.  ಧರಣೇಂದ್ರಯ್ಯ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಡುಗೂರು, ಹಾಸನದಲ್ಲಿ ಮುಗಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. (ಆನರ್ಸ್), ಎಂ.ಎ. ಪದವಿಗಳನ್ನು ಪಡದರು.  "A study of occupational interest patterns of scientists” ಎಂಬ ಮಹಾ ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.  

ಧರಣೇಂದ್ರಯ್ಯನವರು ಪದವಿಯ ನಂತರ ಉದ್ಯೋಗಕ್ಕೆ ಮೈಸೂರು ಬನುಮಯ್ಯ ಕಾಲೇಜು ಸೇರಿದರು. ನಂತರ ತಿಪಟೂರು ಕಾಲೇಜು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ಅಧ್ಯಾಪನ ನಡೆಸಿದರು. ಮನೋವಿಜ್ಞಾನ ಅಧ್ಯಾಪಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಧರಣೇಂದ್ರಯ್ಯನವರಿಗೆ ಸಾಹಿತ್ಯ, ಜೈನ ಸಿದ್ಧಾಂತಗಳಲ್ಲಿ ಸಮಾನ ಪ್ರಭುತ್ವ-ಪಾಂಡಿತ್ಯವಿತ್ತು. ಮನೋವಿಜ್ಞಾನವನ್ನು ಜೈನದರ್ಶನದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಗೋಷ್ಠಿ, ಅಖಿಲ ಭಾರತ ಮನೋವಿಜ್ಞಾನ ಸಮ್ಮೇಳನ, ಯು.ಜಿ.ಸಿ. ಸೆಮಿನಾರು, ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದೀಯ ಸಮ್ಮೇಳನ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸಮ್ಮೇಳನಗಳು, ಹಲವಾರು ಮನೋವಿಜ್ಞಾನ ಕಮ್ಮಟ, ಸಮ್ಮೇಳನಗಳಲ್ಲಿ ಭಾಷಣ, ಪ್ರಬಂಧ ಮಂಡಿಸಿದರು. 

ಧರಣೇಂದ್ರಯ್ಯನವರು ಮೈಸೂರಿನಲ್ಲಿದ್ದಾಗಲೇ ಮಕ್ಕಳಿಗಾಗಿ ‘ರತ್ನತ್ರಯಸಂಘ’ ಪ್ರಾರಂಭಿಸಿದರು. ಜೈನಧರ‍್ಮದ ಅರಿವು ಮೂಡಿಸಲು ಜೈನತತ್ತ್ವ, ಸಂಸ್ಕೃತಿ, ಪ್ರಚಾರ ಕಾರ್ಯ ನಡೆಸಿದರು. ಮುಂದೆ ಧಾರವಾಡದಲ್ಲೂ ಈ ಕಾರ್ಯ ಮುಂದುವರಿಸಿದರು. ಇವರು ಬರೆದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ರೇಡಿಯೋದಿಂದ ಭಾಷಣಗಳು ಪ್ರಸಾರವಾದವು. 

ಧರಣೇಂದ್ರಯ್ಯನವರು ಮನೋವಿಶ್ಲೇಷಣೆ ನಡೆದು ಬಂದ ದಾರಿ, ವಿಕಾಸ ಮನೋವಿಜ್ಞಾನ, ಸಾಮಾನ್ಯ ಮನೋವಿಜ್ಞಾನ, ಮಾನಸಿಕ ಆರೋಗ್ಯ, ವ್ಯಕ್ತಿತ್ವ, ಮಾನವ ಮತ್ತು ಶಾಖಾಹಾರ, ಅಭಿರುಚಿಗಳು, ನೆನಪು ಮತ್ತು ಮರೆವು, ಪ್ರತಿಭಾವಂತ ಮಕ್ಕಳಿಗೆ ಮಾರ್ಗದರ್ಶನ, ಮನೋವೈಜ್ಞಾನಿಕ ಪಾರಿಭಾಷಿಕ ಕೋಶ ಮುಂತಾದ  ಮಹತ್ವದ ಕೃತಿಗಳನ್ನು ನೀಡಿದ್ದಾರೆ.  ಜೈನಮತ ತತ್ತ್ವಗಳಿಗೆ ಸಂಬಂಧಿಸಿದಂತೆ ಜೈನ ಮನೋವಿಜ್ಞಾನ, ರತ್ನಾಕರ ಕವಿಯ ಅಪರಾಜಿತೇಶ್ವರ ಶತಕ (ಭಾವಾರ್ಥ ಸಹಿತ), ಜೈನಧರ್ಮ ಮತ್ತು ಸಾಮಾಜಿಕ ಐಕ್ಯಮತ್ಯ, ಸಪ್ತತತ್ತ್ವಗಳು, ಅಹಿಂಸಾಧರ್ಮ ಮುಂತಾದುವುಗಳನ್ನು ರಚಿಸಿದ್ದಾರೆ. 

ಧರಣೇಂದ್ರಯ್ಯನವರಿಗೆ ಮುನಿ ನಾಥಮಲ್‌ಜಿಯವರ ‘ಮಚ್ ಇನ್ ಲಿಟ್ಲ್’ ಗ್ರಂಥಾನುವಾದವಾದ ‘ಬಿಂದುವಿನಲ್ಲಿ ಸಿಂಧು’ ಮನೋವಿಜ್ಞಾನ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಬಹುಮಾನ ಸೇರಿದಂತೆ ಅನೇಕ  ಗೌರವಗಳು ಸಂದಿದ್ದವು.

ಧರಣೇಂದ್ರಯ್ಯನವರು 2000ದ ಏಪ್ರಿಲ್ 8ರಂದು ಈ ಲೋಕವನ್ನಗಲಿದರು.

Great scholar A. S. Dharanendraiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ