ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದುಲೀಪ್ ಸಿಂಹಜಿ


 ದುಲೀಪ್ ಸಿಂಹಜಿ 


ದುಲೀಪ್ ಸಿಂಹಜಿ ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲೊಬ್ಬರೆನಿಸಿದವರು. ಅವರ ಹೆಸರು 'ದುಲೀಪ್ ಟ್ರೋಫಿ' ಪಂದ್ಯಾವಳಿಗಳ ಮೂಲಕ ಇಂದೂ ಚಿರಸ್ಮರಣೀಯ.  

ದುಲೀಪ್ ಸಿಂಹಜಿ 1905ರ ಜೂನ್ 13ರಂದು ಗುಜರಾಥಿನ ಕಥಿಯಾವಾರ್ ಎಂಬಲ್ಲಿ ಜನಿಸಿದರು. ಭಾರತದ ಇನ್ನೋರ್ವ ಶ್ರೇಷ್ಠ ಕ್ರಿಕೆಟ್ ಆಟಗಾರ ರಣಜಿತ್ ಸಿಂಹಜಿ ಇವರ ಚಿಕ್ಕತಂದೆ. ಅವರು ಸ್ವೀಕರಿಸಿದ ಅಣ್ಣನ ನಾಲ್ಕು ದತ್ತುಮಕ್ಕಳಲ್ಲಿ ಇವರು ಅತಿ ಕಿರಿಯವರು. ಕ್ರಿಕೆಟ್ ಆಡುವುದರಲ್ಲಿ ಇವರಿಗೆ ರಣಜಿತ್ ಸಿಂಹಜಿಯ ಅಮೂಲ್ಯ ಮಾರ್ಗದರ್ಶನ ದೊರೆಯಿತು. 

ದುಲೀಪ್ ಸಿಂಹಜಿ ಅವರ ಶಿಕ್ಷಣ ಇಂಗ್ಲೆಂಡಿನಲ್ಲಾಯಿತು. ಕೇಂಬ್ರಿಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗಲೇ ಇವರು ಕೇಂಬ್ರಿಜ್ ಕ್ರಿಕೆಟ್ ತಂಡದಲ್ಲಿ ಆಟವಾಡಿದರು.  ದುಲೀಪ್ ಸಿಂಹಜಿ  ಆಕರ್ಷಕ ಬ್ಯಾಟುಗಾರರಲ್ಲದೆ ದಕ್ಷ ಫೀಲ್ಡರೂ ಆಗಿದ್ದರು. 

ದುಲೀಪ್ ಸಿಂಹಜಿ 1930ರಲ್ಲಿ ಇಂಗ್ಲೆಂಡಿನಲ್ಲಿ ಕೌಂಟಿ ಪಂದ್ಯದಲ್ಲಿ ಆಡಿ ಈತ ಒಂದು ಹೊಸ ದಾಖಲೆ ನಿರ್ಮಿಸಿದರು. ಆ ತಂಡ ಗಳಿಸಿದ 521 ರನ್ನುಗಳಲ್ಲಿ ಇವರು ಗಳಿಸಿದ್ದು 333. ಇನ್ನೊಮ್ಮೆ ಇಂಗ್ಲೆಂಡಿನಲ್ಲಿ ಸಸೆಕ್ಸ್ ತಂಡದ ಪರವಾಗಿ ಒಂದೇ ಪಂದ್ಯದ ಎರಡು ಇನ್ನಿಂಗ್‍ಗಳಲ್ಲಿ ಕ್ರಮವಾಗಿ 125 ಮತ್ತು 103 ರನ್ನುಗಳಿಸಿ ಇಂಗ್ಲೆಂಡಿನ ಕ್ರಿಕೆಟ್ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರಲ್ಲದೆ ಎರಡನೆಯ ಇನ್ನಿಂಗ್‍ನಲ್ಲಿ ಔಟಾಗದೆ ಉಳಿದರು. ಚೆಂಡನ್ನು ಇವರು ಬಾರಿಸುವ ವಿಧಾನ ತುಂಬಾ ಆಕರ್ಷಕವಾಗಿತ್ತು. ಆಸ್ಟ್ರೇಲಿಯದ ವಿರುದ್ಧ ಆಡಿದ ಪ್ರಥಮ ಟೆಸ್ಟಿನಲ್ಲಿ ಇವರು 173ರನ್ ಗಳಿಸಿ ಭಾರತದ ಕ್ರಿಕೆಟ್ ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ತಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದರು.

1929ರಲ್ಲಿ ಪ್ರಥಮವಾಗಿ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ದುಲೀಪ್ ಸಿಂಹಜಿ ಒಟ್ಟು 12 ಸಲ ಟೆಸ್ಟ್ ಪಂದ್ಯಗಳಲ್ಲಾಡಿದರು. 1931ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದು ಇವರ ಕೊನೆಯ ಟೆಸ್ಟ್ ಪಂದ್ಯ. ಆ ಮೇಲೆ ಕ್ಷಯರೋಗ ಬಂದ ಕಾರಣ ಕ್ರಿಕೆಟಿನಿಂದ ನಿವೃತ್ತಿ ಪಡೆದರು.

ಭಾರತ ಸ್ವಾತಂತ್ರ್ಯ ಗಳಿಸಿದ ಅನಂತರ ದುಲೀಪ್ ಸಿಂಹಜಿ ಆಸ್ಟ್ರೇಲಿಯದಲ್ಲಿ ಭಾರತದ ಹೈಕಮಿಷನರಾಗಿ ಸೇವೆ ಸಲ್ಲಿಸಿದರು.

ದುಲೀಪ್ ಸಿಂಹಜಿ 1959ರ ಡಿಸೆಂಬರ್ 5ರಂದು ಮುಂಬೈನಲ್ಲಿ ನಿಧನರಾದರು.

ದುಲೀಪ್ ಸಿಂಹಜಿಯವರ ಹೆಸರು ಶಾಶ್ವತವಾಗಿ ನೆನಪಿನಲ್ಲಿರಬೇಕು ಮತ್ತು ಅವರ ಹೆಸರಿನಿಂದ ಕ್ರಿಕೆಟ್ ಆಟಗಾರರು ಪ್ರೋತ್ಸಾಹಿತರಾಗಬೇಕು ಎಂಬ ಉದ್ದೇಶಗಳಿಂದ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ 1961ರಲ್ಲಿ ಭಾರತದ ವಿವಿಧ ವಲಯಗಳ ಕ್ರಿಕೆಟ್ ತಂಡಗಳಿಗಾಗಿ ಹೊಸ ಪಂದ್ಯಾವಳಿಯನ್ನು ಪ್ರಾರಂಭಿಸಿತು. ಈಗ ಭಾರತದಲ್ಲಿ ಪ್ರತಿವರ್ಷವೂ ಈ ಪಂದ್ಯಗಳಾಗುತ್ತವೆ.

On the birthday of great cricketer Duleepsinhji

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ