ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಟ್ ನಾರಾಯಣ ಮಹಾರಾಜ್

 


ಬೇಟ್ ನಾರಾಯಣ ಮಹಾರಾಜ್


ಬೇಟ್ ನಾರಾಯಣ ಮಹಾರಾಜ್ ಆಧ್ಯಾತ್ಮಿಕ ಗುರುಗಳಾಗಿದ್ದು, ಅವರ ಅನುಯಾಯಿಗಳು ಅವರನ್ನು ಸದ್ಗುರು ಎಂದು ಪರಿಗಣಿಸಿದ್ದಾರೆ. ಅವರು ಭಾರತದ ಪುಣೆಯ ಪೂರ್ವದ ಕೆಡ್ಗಾಂವ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇಂದು ಅವರ ಜಯಂತಿ.

ನಾರಾಯಣ್ ಅವರು 1885ರ ಮೇ 20 ರಂದು ಕರ್ನಾಟಕ ನರಗುಂದದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು ಕೇವಲ 14 ತಿಂಗಳ ಮಗುವಾಗಿದ್ದಾಗ ಅವರ ತಂದೆ ಮತ್ತು ನಾಲ್ಕು ವರ್ಷದವರಿದ್ದಾಗ ಅವರ ತಾಯಿ ನಿಧನರಾದರು. ಆಗ ಆತನನ್ನು ಆತನ ಅಜ್ಜಿ ನೋಡಿಕೊಳ್ಳುತ್ತಿದ್ದರು. ನಾರಾಯಣ್ ಅವರು ಕೌಟುಂಬಿಕ ಕಲಹಗಳಿಂದ ವ್ಯತಿಥರಾಗಿ, ಮನೆ ತೊರೆದು, ಕೊನೆಗೆ ಶಿವನ ದೇವಸ್ಥಾನದಲ್ಲಿ ಏಕಾಂತವನ್ನು ಅರಸಿದರು. ನಂತರ, ಒಬ್ಬ ಸಂತನ ಸಲಹೆಯ ಮೇರೆಗೆ, ಅವರು ಸುಮಾರು 10 ತಿಂಗಳ ಕಾಲ ಗಂಗಾಪುರಕ್ಕೆ ಹೋಗಿ, ಸಾಕ್ಷಾತ್ಕಾರವನ್ನು ಗಳಿಸಿಕೊಂಡರು.

ಮುಂದೆ ನಾರಾಯಣ್ ಅವರು ವಾರಣಾಸಿ, ಕೇದಾರನಾಥ, ಬದರಿನಾಥ, ನೇಪಾಳ, ಓಂಕಾರೇಶ್ವರ, ಮಹಾಕಾಳೇಶ್ವರ, ರಾಮೇಶ್ವರ, ಮಧುರೈ, ಚಿದಂಬರಂ, ಕಾಂಚೀಪುರಂ, ತಿರುಪತಿ, ರಾಮಕೃಷ್ಣ ಆಶ್ರಮ, ಕಲ್ಕತ್ತಾ, ಬೆಂಗಳೂರು, ಮೈಸೂರು, ದ್ವಾರಕಾ, ಸೋಮನಾಥ ಮತ್ತು ಮಹಾಬಲೇಶ್ವರ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳಿಗೆ ಸದ್ಗುರುವಾಗಿ ಸಂಚರಿಸಿದರು.

ನಾರಾಯಣರು ಆಗಾಗ್ಗೆ ಅದ್ದೂರಿಯಾಗಿ ಬಟ್ಟೆಗಳನ್ನು ಧರಿಸಿ ಅರಮನೆಯ ವಾತಾವರಣದಲ್ಲಿ ವಾಸಿಸುತ್ತಿದ್ದರಂತೆ; ಅವರು ಬೆಳ್ಳಿಯ ಸಿಂಹಾಸನವನ್ನು ಸಹ ಹೊಂದಿದ್ದರಂತೆ. ಆದಾಗ್ಯೂ, ಅವರು ನಿಸ್ವಾರ್ಥ ವ್ಯಕ್ತಿಯಾಗಿದ್ದು ಬಡವರಿಗೆ ನಿರಂತರವಾಗಿ ಸಹಾಯ ನೀಡುತ್ತಿದ್ದರಂತೆ. "ಎಲ್ಲರನ್ನೂ ದೇವರಂತೆ ನೋಡಿಕೊಳ್ಳಿ" ಎಂಬುದು ಅವರ ಬೋಧನೆಯಾಗಿತ್ತು.

ಮೆಹರ್ ಬಾಬಾ ಅವರು 1915ರಲ್ಲಿ ನಾರಾಯಣ ಮಹಾರಾಜರನ್ನು ತಮ್ಮ ಯೌವನದಲ್ಲಿ ಸಂಪರ್ಕಿಸಿದ್ದರು. ನಾರಾಯಣ್ ಅವರು ತಮ್ಮ ಕಾಲದ ಐದು ಪರಿಪೂರ್ಣ ಗುರುಗಳಲ್ಲಿ ಒಬ್ಬರು ಎಂದು ಮೆಹರ್ ಬಾಬಾ ಹೇಳಿದ್ದಾರೆ.

ಬೇಟ್ ನಾರಾಯಣ ಮಹಾರಾಜರು 1942 ರಿಂದ, ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಕೆಲಕಾಲ ಊಟಿಯಲ್ಲಿದ್ದರು. ಅಂತಿಮವಾಗಿ ಬೆಂಗಳೂರಿಗೆ ಬಂದ ಅವರು ಮಲ್ಲಿಕಾರ್ಜುನ ದೇವರಿಗೆ ಅತಿ ರುದ್ರ ಯಜ್ಞವನ್ನು ನಡೆಸಲು ಬಯಸಿದರು. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನದಿಂದ ಅದ್ದೂರಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಲವು ಸಹಸ್ರ ಜನ ಈ ಯಾಗದಲ್ಲಿ ಭಾಗವಹಿಸಿದ್ದರು. ಮಹಾಪೂಜೆಯ ನಂತರ, ಉಪಸ್ಥಿತರಿದ್ದ ಭಕ್ತರಿಗೆ ಮಂತ್ರವನ್ನು ನೀಡಿ ತಮ್ಮ ಕೋಣೆಗೆ ಹೋಗಿ ಪದ್ಮಾಸನದಲ್ಲಿ ಕುಳಿತು, 1945ರ ಸೆಪ್ಟೆಂಬರ್ 3ರಂದು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿದರು.

ನಾರಾಯಣ ಮಹಾರಾಜರು ತಮ್ಮ ದೇಹವನ್ನು ತ್ಯಜಿಸಿದಾಗ ಮೈಸೂರು ರಾಜ್ಯವು ಅವರ ದೇಹವನ್ನು ಬೇಟ್‌ಗೆ ಕೊಂಡೊಯ್ಯಲು ವಿಮಾನವನ್ನು ಒದಗಿಸಲು ಮುಂದೆ ಬಂದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಬೆಂಗಳೂರಿನ ಕೆಂಪಾಂಬುದಿ ಕೆರೆಯ ಬಳಿ ಸುಮಾರು ಎರಡು ಎಕರೆ ಸುಂದರವಾದ ಭೂಮಿಯನ್ನು ಅವರ ಸಮಾಧಿ ಮತ್ತು ಮಂದಿರ ನಿರ್ಮಾಣಕ್ಕೆ ನೀಡಿತು.ಶ್ರೀ ಬೇಟ್ ನಾರಾಯಣ ಮಹಾರಾಜರ ಆಶ್ರಮ ಮತ್ತು ಬೃಂದಾವನವು ಬೆಂಗಳೂರಿನ ಗವಿ ಗಂಗಾಧರೇಶ್ವರ ವೃತ್ತದಲ್ಲಿದೆ.

Bet Narayana Maharaj

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ