ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಲ್ಮಾನ್ ರಶ್ದಿ


 ಸಲ್ಮಾನ ರಶ್ದಿ 


ಸಲ್ಮಾನ ರಶ್ದಿ ವಿಶ್ವಪ್ರಸಿದ್ಧ ಭಾರತೀಯ ಮೂಲ ಸಂಜಾತ ಲೇಖಕರಲ್ಲೊಬ್ಬರು. 1981ರಲ್ಲಿ ಇವರ 'ಮಿಡ್‌ನೈಟ್ಸ್‌ ಚಿಲ್ಡ್ರನ್‌ ಬೂಕರ್‌ ಪ್ರಶಸ್ತಿ’ ಪಡೆದದ್ದು ಮತ್ತು ಇವರ 'ದ ಸಟಾನಿಕ್ ವರ್ಸಸ್' ಕೃತಿಗೆ ವಿಶ್ವದ ಕೆಲವು ರಾಷ್ಟ್ರಗಳು ತೋರಿದ ತೀವ್ರರೋಷ ಪ್ರತಿಕ್ರಿಯೆಗಳಿಂದ ಇವರ ಹೆಸರು ಅವರ ಬರಹಗಳ ಗುಣಕ್ಕೆ ಮೀರಿದ ಪ್ರಸಿದ್ಧಿ ಗಳಿಸುವಂತಾಯಿತು.

ಸಲ್ಮಾನ್‌ ರಶ್ದಿ 1947ರ ಜೂನ್ 19ರಂದು ಮುಂಬೈನಲ್ಲಿ ಜನಿಸಿದರು.  ಇವರ ತಂದೆ ಅನೀಸ್ ಅಹಮ್ಮದ್‌ ರಶ್ದಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಮೊದಲು ವಕೀಲರಾಗಿದ್ದು ನಂತರ ವ್ಯಾಪಾರಸ್ತರಾದರು.  ತಾಯಿ ನೆಗಿನ್ ಭಟ್ ಶಿಕ್ಷಕಿ ಆಗಿದ್ದರು. ಸಲ್ಮಾನ್‌ ರಶ್ದಿ ಮುಂಬಯಿನ ಕೆಥೆಡ್ರಲ್ ಹಾಗೂ ಜಾನ್‌ ಕೊನನ್ ಸ್ಕೂಲ್‌ನಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿದರು. ನಂತರ ಕೆಂಬ್ರಿಡ್ಜ್‌ನ ರಗ್‌ಬಿ ಸ್ಕೂಲ್‌ ಹಾಗೂ ಕಿಂಗ್ಸ್ ಕಾಲೇಜ್‌‌ನಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. 

ಸಲ್ಮಾನ್‌ ರಶ್ದಿ ಮೊದಲು ಒಗಿಲ್ವಿ ಅಂಡ್ ಮ್ಯಾಥರ್  ಐಯರ್ ಬಾರ್ಕರ್ ಮುಂತಾದ ಜಾಹಿರಾತು ಸಂಸ್ಥೆಗಳಲ್ಲಿ 
ಕಾರ್ಯನಿರ್ವಹಿಸುತ್ತಿದ್ದರು.

ಸಲ್ಮಾನ್‌ ರಶ್ದಿ  ಅವರ ಮೊದಲನೆಯ ಕಾದಂಬರಿ 'ಗ್ರಿಮಸ್'.  ಇದು ಭಾಗಶಃ ವೈಜ್ಞಾನಿಕ ಕಾದಂಬರಿ. ಅದು ಯಾವುದೇ ಸದ್ದು ಮಾಡಲಿಲ್ಲ.  ಅವರ ಮುಂದಿನ ಕಾದಂಬರಿ 'ಮಿಡ್‌ನೈಟ್ಸ್ ಚಿಲ್ಡ್ರನ್' ಅವರಿಗೆ ಹೆಸರು ತಂದಿತು. ಇದರ ಯಶಸ್ಸು ಹಲವು ಯುವ ಭಾರತೀಯ ಇಂಗ್ಲೀಷ್ ಬರವಣಿಗೆಗಳಿಗೂ ಸ್ಪೂರ್ತಿಯಾಯಿತು.  1981ರಲ್ಲಿ ಬೂಕರ್ ಪ್ರೈಜ್ ಗಳಿಸಿದ್ದೇ ಅಲ್ಲದೆ ಬಹುಮಾನಿತ ಪುಸ್ತಕಗಳಲ್ಲೂ ಶ್ರೇಷ್ಠವೆಂದು 25ನೇ ಪ್ರಶಸ್ತಿ ವರ್ಷ ಮತ್ತು 40ನೇ ಪ್ರಶಸ್ತಿ ವರ್ಷಗಳಲ್ಲಿ ಗೌರವ ಪಡೆಯಿತು.  ಸಲ್ಮಾನ್‌ ರಶ್ದಿ  ಅವರ ಹಲವು ಬರಹಗಳು ಭಾರತ ಉಪಖಂಡದ ಘಟನೆಗಳನ್ನಾದರಿಸಿವೆ. ಮುಂದೆ
ಅವರು ಶೇಮ್ (1983) ಕಾದಂಬರಿಯನ್ನು ಬರೆದರು. 1987ರಲ್ಲಿ 'ಜಾಗ್ವಾರ್ ಸ್ಮೈಲ್' ಎಂಬ ಕೃತಿ ಪ್ರಕಟಿಸಿದರು.

ಸಲ್ಮಾನ್‌ ರಶ್ದಿ  ಅವರ ನಾಲ್ಕನೆಯ ಕಾದಂಬರಿ 'ದಿ ಸಟಾನಿಕ್ ವರ್ಸಸ್'(1988).  ಈ ಕಾದಂಬರಿಯು ಹಲವಾರು ದೇಶಗಳ ಮುಸ್ಲಿಮ್‌ರಿಂದ ತೀವ್ರ ಪ್ರತಿಭಟನೆಗೆ ಒಳಗಾಯಿತು. ಇರಾನ್ ಮತ್ತು ಇತರ ದೇಶಗಳಿಂದ ರಶ್ದಿ ಪ್ರಾಣ ಬೆದರಿಕೆಯನ್ನೂ ಎದುರಿಸಬೇಕಾಯಿತು. ಬ್ರಿಟಿಷ್ ಸರಕಾರ ಅವರನ್ನು ತನ್ನ ರಕ್ಷಣೆಯಲ್ಲಿ ಇರಿಸಿತು.

ರಶ್ದಿ ಅವರು ಹಲವಾರು ಸಣ್ಣಕತೆಗಳನ್ನೂ ಬರೆದರು.   ಅವೆಲ್ಲವುಗಳು ’ಈಸ್ಟ್‌ ವೆಸ್ಟ್‌’ (1994)ಎಂಬ ಸಂಕಲನದಲ್ಲಿ ಪ್ರಕಟಗೊಂಡವು. 1995ರಲ್ಲಿ ಪ್ರಕಟವಾದ ’ದಿ ಮೂರ್ಸ್‌ ಲಾಸ್ಟ್‌ ಸೈ’ ಕೃತಿ ಭಾರತೀಯ ಕುಟುಂಬವೊಂದರ ಮಹಾಕಾವ್ಯದಂತಿದ್ದು, ಇದು ಸುಮಾರು 100 ವರ್ಷಗಳ ಭಾರತೀಯ ಇತಿಹಾಸದ ವಾತಾವರಣವನ್ನು ಹೊಂದಿದೆ.

ರಶ್ದಿ ಅವರ 'ದಿ ಗ್ರೌಂಡ್‌ ಬಿನಿತ್‌ ಹರ್ ಫೀಟ್'‌ (1999) ಆಧುನಿಕ ರಾಕ್‌ ಸಂಗೀತದ ಪರ್ಯಾಯ ಇತಿಹಾಸವನ್ನು ಒಳಗೊಂಡಿರುವ ಕಾಲ್ಪನಿಕ ಕೃತಿಯಾಗಿದೆ.

ರಶ್ದಿ  ತಮ್ಮ 2002ರ ಸಂಗ್ರಹ 'ಸ್ಟೆಪ್ ಅಕ್ರಾಸ್ ದಿಸ್ ಲೈನ್'‌ ಕೃತಿಯಲ್ಲಿ ಇಟಾಲಿಯನ್ ಬರಹಗಾರರಾದ ಇಟಾಲೊ ಕ್ಯಾಲ್ವಿನೊ ಹಾಗೂ ಅಮೇರಿಕಾದ ಬರಹಗಾರರಾದ ಥೋಮಸ್ ಪೈನ್‌ಚನ್‌ರ ಮುಂತಾದ ಇತರ ಬರಹಗಾರರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಶ್ದಿ ಅವರ 2005ರ ಕಾದಂಬರಿ 'ಶಾಲಿಮಾರ್ ದ ಕ್ಲೌನ್'‌ ಗೆ ಭಾರತದಲ್ಲಿ ಪ್ರತಿಷ್ಠಿತ ಕ್ರಾಸ್‌ವರ್ಡ್ ಫಿಕ್ಷನ್ ಪ್ರಶಸ್ತಿ ದೊರಕಿತು. ಬ್ರಿಟನ್‌ನಲ್ಲಿ ವ್ಹಿಟ್‌ಬ್ರೆಡ್ ಬುಕ್ ಪ್ರಶಸ್ತಿಗೆ ಅಂತಿಮ-ಸ್ಪರ್ಧಿಯಾಗಿತ್ತು. ಸಲ್ಮಾನ್‌ ರಶ್ದಿ  ಅವರ ಮತ್ತೊಂದು ಕಾದಂಬರಿ 'ದಿ ಎನ್‌ಚಾಂಟರ್ಸ್‌ ಆಫ್‌ ಫ್ಲೋರೆನ್ಸ್' ಜೂನ್ 2008ರಲ್ಲಿ ಪ್ರಕಟಗೊಂಡಿತು

1983ರಲ್ಲಿ ಸಲ್ಮಾನ್ ರಷ್ದಿ ಅವರಿಗೆ ರಾಯಲ್ ಸೊಸೈಟಿ ಆಫ್ ಲಿಟರೇಚರ್ ಗೌರವ ಸದಸ್ಯತ್ವ ಸಂದಿತು. ಸಲ್ಮಾನ್‌ ರಶ್ದಿ ಅವರನ್ನು ಇಂಗೆಂಡಿನ ರಾಣಿ ಎಲಿಜಬೆತ್‌  ಜೂನ್ 2007ರಲ್ಲಿ ಇವರ ನೈಟ್ ಬ್ಯಾಚಲರ್ ಇತ್ತು ಗೌರವಿಸಿದರು. 1999ರಲ್ಲಿ ಅವರು ಫ್ರಾನ್ಸಿನ 'ಆಡ್ರ್ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್‌‌' ಕಮಾಂಡರ್ ಪದವಿ ಸಂದಿತು. ಮೇ 2008ರಲ್ಲಿ ಇವರನ್ನು ಅಮೇರಿಕನ್ ಅಕಾಡೆಮಿ ಆಪ್‌ ಆರ್ಟ್ಸ್ ಅಂಡ್ ಲೆಟ್ಟರ್ಸ್‌ಗೆ ಆಯ್ಕೆ ಮಾಡಲಾಯಿತು.  2008ರಲ್ಲಿ ದಿ ಟೈಮ್ಸ್ ಪ್ರಕಟಿಸಿದ 1945ರಿಂದ ಈಚೆಗಿನ 50 ಶ್ರೇಷ್ಠ ಬ್ರಿಟಿಷ್ ಬರಹಗಾರರ ಪಟ್ಟಿಯಲ್ಲಿ ಹದಿಮೂರನೆಯ ಸ್ಥಾನ ಪಡೆದಿದ್ದರು.  

2000ದ ವರ್ಷದಿಂದ ಸಲ್ಮಾನ್ ರಷ್ದಿ ಅಮೆರಿಕದಲ್ಲಿ ನೆಲೆಸಿದರು. 2015ರಲ್ಲಿ ನ್ಯೂ ಯಾರ್ಕ್ ವಿಶ್ವವಿದ್ಯಾಲಯದ ಆರ್ಥರ್ ಎಲ್. ಕಾರ್ಟರ್ ಜರ್ನಲಿಸಮ್ ಇನ್ಸ್ಟಿಟ್ಯೂಟ್ ಸಲ್ಮಾನ್ ರಶ್ದಿ ಅವರನ್ನು ವಿಶಿಷ್ಟ ಬರಹಗಾರ ಎಂದು ಹೆಸರಿಸಿ ಗೌರವಿಸಿತು. 2007ರಲ್ಲಿ ಐದು ವರ್ಷಗಳ ಕಾಲ ಎಮೊರಿ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಅಲ್ಲಿ ವಾಸವಿರುವ ಮಹೋನ್ನತ ಬರಹಗಾರ ಎಂಬ ಗೌರವಕ್ಕೆ ಪಾತ್ರರಾದರು. ಅಮೆರಿಕನ್ ಅಕಾಡಮಿ ಆಫ್ ಆರ್ಟ್ಸ್ ಅಂಡ್ ಲೆಟರ್ಸ್‍'ಗೆ ಆಯ್ಕೆ ಆದರು. 

On the birthday of popular writer Samsn Rushdie

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ