ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡೆಕ್ಕನ್ ಹೆರಾಲ್ಡ್


 ಡೆಕ್ಕನ್ ಹೆರಾಲ್ಡ್


ಡೆಕ್ಕನ್‍ಹೆರಾಲ್ಡ್ ಮೊದಲ ಸಂಚಿಕೆ ಪ್ರಕಟವಾದದ್ದು 1948ರ ಜೂನ್ 17ರಂದು. ಇಂಥದೊಂದು ಬೆಳವಣಿಗೆಗೆ ನಾಂದಿ ಹಾಡಿದ್ದು ನೆಟ್ಕಲ್ಲಪ್ಪ ಕುಟುಂಬದವರು.  ಉದ್ಯಮಿ ಕೆ. ಎನ್. ಗುರುಸ್ವಾಮಿ ಅವರು  ತಮ್ಮ ಮಿತ್ರರೊಡಗೂಡಿ ಆರಂಭಿಸಿದ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ  ದಿನಪತ್ರಿಕೆಯನ್ನು ಆರಂಭಿಸಿತು.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿದ್ದ ಅಚ್ಚುಕಟ್ಟುತನದ ಸೊಗಸು, ಬೆಂಗಳೂರಿಗರನ್ನು ಅದರಲ್ಲೂ ಮುಖ್ಯವಾಗಿ ಬೆಂಗಳೂರು ಕನ್ನಡಿಗರನ್ನು,  ಹೆಚ್ಚು ಇಂಗ್ಲಿಷಿಗೆ ವಾಲುವಂತೆ ಮಾಡಿತೇನೋ ಎಂದು ನನಗನ್ನಿಸಿದ್ದಿದೆ.

ಅನೇಕ ರಾಷ್ಟ್ರಮಟ್ಟದ ಖ್ಯಾತ ಪತ್ರಿಕಾ ಸಂಸ್ಥೆಗಳ ಸ್ಪರ್ಧೆಯನ್ನು ಎದುರಿಸಿಯೂ, ರಾಜ್ಯದ ಪರಿಪೂರ್ಣ ದಿನಪತ್ರಿಕೆಯಾಗಿ ನಡೆದು ಬಂದಿರುವ  ಡೆಕ್ಕನ್ ಹೆರಾಲ್ಡ್  ಇಂದೂ ರಾಷ್ಟ್ರದ ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಒಂದೆನಿಸಿದೆ. 

ಡೆಕ್ಕನ್‍ ಹೆರಾಲ್ಡ್ ಪ್ರಾರಂಭವಾದ ಮೊದಲಿಗೆ ಟ್ಯಾಬ್ಲಾಯ್ಡ್ ಆಕಾರದಲ್ಲಿತ್ತು. ಮರು ವರ್ಷ ಶಿಷ್ಟ ಆಕಾರ ತಳೆಯಿತು. ಪ್ರಜಾಪ್ರಭುತ್ವದ ಯಾವುದೇ ಆಧುನಿಕ ವೃತ್ತ ಪತ್ರಿಕೆಯಂತೆ, ಇದೂ ಕೂಡ ತನ್ನ ಓದುಗರಿಗೆ ಸುದ್ದಿ ಸಮಾಚಾರ ತಿಳಿಸುವುದರ ಜೊತೆಗೆ ಸಮುದಾಯದ ಹಿತದೃಷ್ಟಿಯಿಂದ ಸಾರ್ವಜನಿಕ ಅಭಿಪ್ರಾಯವನ್ನು ವ್ಯಾಖ್ಯಾನಿಸುವ, ಪ್ರತಿಬಿಂಬಿಸುವ ಕೆಲಸವನ್ನು ಮಾಡಿದೆ. ಡೆಕ್ಕನ್‍ಹೆರಾಲ್ಡ್ ಪತ್ರಿಕೆಯ ಕ್ಲಾಸಿಫೈಡ್ಸ್ ಜಾಹೀರಾತು ಸೊಗಸು ಇನ್ನೆಲ್ಲೂ ಅಷ್ಟು ಸುಂದರವಾಗಿ ಮನಸೂರೆಗೊಳ್ಳುವಂತದಾಗಿರಲಿಲ್ಲ.

ಅಂದಿನ ದಿನದಲ್ಲಿ ಖುಷ್ವಂತ್‍ಸಿಂಗ್ ಮೊದಲಾದ ಖ್ಯಾತಬರಹಗಾರರ ಲೇಖನಗಳು,  ಅಂಕಣಗಳು, ನಿರ್ಭೀತ ಸಂಪಾದಕೀಯ ಬರಹಗಳು ಈ ಪತ್ರಿಕೆಯ ವಿಶೇಷವಾಗಿದ್ದವು. ಈ ಪತ್ರಿಕೆಯ ಸಂಪಾದಕೀಯದ ವಿಚಾರವನ್ನು ಮಾತಾಡುವುದೂ ಒಂದು ಬುದ್ಧಿವಂತ ನಡವಳಿಕೆ ಎಂಬ ಭಾವ ನಮ್ಮ ತಲೆಮಾರಿನಲ್ಲಿತ್ತು.

ಭಾನುವಾರದ ವೈಶಿಷ್ಟ್ಯಪೂರ್ಣ ಪುರವಣಿಯಲ್ಲದೆ, ಮಹಿಳೆ, ಮಕ್ಕಳು, ಚಲನಚಿತ್ರ, ಕಲೆ, ಕ್ರೀಡೆ, ವಾಹನ, ಆಧುನಿಕ ತಂತ್ರಜ್ಞಾನ, ಕುರಿತಾದ ದೈನಿಕ ಪುರವಣಿಗಳು ಓದುಗರ ವಿವಿಧ ನಿರಂತರ ಆಸಕ್ತಿಯನ್ನು ತಣಿಸುತ್ತಿದ್ದವು.  

ಡೆಕ್ಕನ್ ಹೆರಾಲ್ಡ್ ಆರಂಭದಲ್ಲಿ ಪೋತನ್ ಜೊಸೆಫ್ ಒಂದು ದಶಗಳ ಕಾಲ ಸಂಪಾದಕರಾಗಿದ್ದರು. 'ಓವರ್ ಎ ಕಪ್ ಆಫ್ ಟೀ' ದೈನಿಕ ಅಂಕಣ ಜನಪ್ರಿಯವಾಗಿತ್ತು. ಅನಂತರ, ಜಿ.ವಿ ಕೃಪಾನಿಧಿ, ವಿ.ಬಿ.ಮೆನನ್, ವಿ.ಕೆ. ನರಸಿಂಹನ್, ಎಂ.ಪಿ. ಯಶವಂತಕುಮಾರ್ ಮುಂತಾದ ಪ್ರಸಿದ್ಧರು ಇದರ ಸಂಪಾದಕರಾಗಿದ್ದರು. ವಿಜ್ಞಾನ ಶಿಕ್ಷಣ, ವಾಹನಗಳು, ಮಹಿಳೆ, ಸ್ಥಿರಾಸ್ತಿ, ಸೈಬರ್ ಮನರಂಜನೆ ಮೊದಲಾದ ಉಪಯುಕ್ತ ವಿಷಯ ಸಂಬಂಧಿತ ಪುರವಣಿಗಳ ಜತೆಗೆ ಬೆಂಗಳೂರು ನಗರಕ್ಕೆ ಸೀಮೀತವಾದ ಮೆಟ್ರೊಲೈಫ್ ನಾಲ್ಕು ಪುಟಗಳ ಪುರವಣಿಯನ್ನು ನೀಡಿ ಓದುಗರಿಗೆ ಮಾರ್ಗದರ್ಶನ ನೀಡುತ್ತ ಬಂತು. 

ಕಾಲಾನುಕ್ರಮದಲ್ಲಿ ದಿ ಪ್ರಿಂಟರ್ಸ್  ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎನ್. ಹರಿಕುಮಾರ್ ಪ್ರಧಾನ ಸಂಪಾದಕರಾದರು. ಮುಂದೆ  ಕೆ. ಎನ್. ಶಾಂತಕುಮಾರ್ ಪ್ರಧಾನ ಸಂಪಾದಕರಾದರು. ಇತ್ತೀಚಿನ ವರ್ಷಗಳಲ್ಲಿ ಕೆ. ಎನ್. ತಿಲಕ್ ಕುಮಾರ್ ಡೆಕ್ಕನ್ ಹೆರಾಲ್ಡ್ ಪ್ರಧಾನ ಸಂಪಾದಕರಾಗಿದ್ದಾರೆ.

ಆರಂಭದಲ್ಲಿ ಬೆಂಗಳೂರಿನಿಂದಲೇ ಪತ್ರಿಕೆ ಅಚ್ಚಾಗಿ, ರಾಜ್ಯಾದ್ಯಂತ ವಿತರಣೆಯಾಗುತ್ತಿತ್ತು.  ಮುಂದೆ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಹೊಸಪೇಟೆ, ದಾವಣಗೆರೆ,ಗುಲ್ಬರ್ಗಾ ಮತ್ತು ಶಿವಮೊಗ್ಗ ಕೇಂದ್ರಗಳಿಂದಲೂ ಪ್ರಕಟವಾಗುತ್ತಿದೆ. ಪ್ರಜಾವಾಣಿ ಕನ್ನಡ ದೈನಿಕ, ಸುಧಾ ವಾರಪತ್ರಿಕೆ ಮತ್ತು ಮಯೂರ ಮಾಸಪತ್ರಿಕೆ, ಈ ಸಂಸ್ಥೆಯ ಹೆಸರಾಂತ ಕನ್ನಡ ಪ್ರಕಟಣೆಗಳು.

ಇಂದು ದಿನಪತ್ರಿಕೆಯನ್ನು ಓದುವವರೂ ಮೊಬೈಲಲ್ಲಿ, ಕಂಪ್ಯೂಟರ್ ಅಲ್ಲಿ  ಓದುತ್ತಾರೆ.  ಟಿ ವಿ ಸುದ್ಧಿ ಮಾಧ್ಯಮ ಮತ್ತು ಅದನ್ನು ಮಾತಿನಲ್ಲಿ ಮತ್ತು  ಸೋಷಿಯಲ್ ಮೀಡಿಯಾಗಳಲ್ಲಿ ಮಾತನಾಡುವ ಜನ, ಕರೋನಾಗಿಂತ ಹೆಚ್ಚು ಭಯಹುಟ್ಟಿಸುವ ಇಂದಿನ ದಿನಗಳಲ್ಲಿ, ಅಂದಿನ ದಿನಗಳಲ್ಲಿ  ಎದ್ದಕೂಡಲೇ  'ಮಿಸ್ಟರ್ ಸಿಟಿಜನ್' ಅದರೂ ನೋಡಲು ಪತ್ರಿಕೆಗೆ ಹಂಬಲಿಸುತ್ತಿದ್ದ ಸಿಟಿಜನ್ಗಳಾಗಿದ್ದ ನಮ್ಮ ಸವಿನೆನಪು ಮರೆಯುವಂತದ್ದಲ್ಲ.

On the birth day of Deccan Herald 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ