ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ಶೆಣೈ


 ಗೀತಾ ಶೆಣೈ


ಡಾ. ಗೀತಾ ಶೆಣೈ ಅವರ ಪ್ರಬುದ್ಧ ರೀತಿಯ ವ್ಯಕ್ತಿ ಪರಿಚಯಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ. ಗೀತಾ ಶೆಣೈ ಕನ್ನಡ ಮತ್ತು ಕೊಂಕಣಿ ಭಾಷೆಗಳ ಸಾಹಿತ್ಯಗಳಿಗೆ ಕೊಂಡಿಯಾಗಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷ್ ಭಾಷೆಯ ಹಲವು ಪ್ರಸಿದ್ಧ ಕೃತಿಗಳನ್ನೂ ಅವರು ಕನ್ನಡಕ್ಕೆ ತಂದಿದ್ದಾರೆ.

ಇಂದು ಡಾ. ಗೀತಾ ಶೆಣೈ ಅವರ ಹುಟ್ಟುಹಬ್ಬ. 
ಉಡುಪಿಯವರಾದ ಗೀತಾ ಶೆಣೈ ಅವರು ಬಿ.ಎಸ್‍ಸಿ ಪದವಿಯ ನಂತರದಲ್ಲಿ ಕನ್ನಡ ಎಂ.ಎ ಮತ್ತು ಪಿಎಚ್.ಡಿ ಸಾಧನೆಯ ಜೊತೆಗೆ ಮಹಿಳಾ ಅಧ್ಯಯನ ಕುರಿತಾದ ವಿಶಿಷ್ಟ ವಿದ್ಯಾರ್ಹತೆ ಕೂಡಾ ಗಳಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಸುಲಲಿತವಾಗಿ ಬಲ್ಲ ಗೀತಾ ಶೆಣೈ ಅವರಿಗೆ ಸಂಶೋಧನೆ, ಭಾಷಾಂತರ ಮತ್ತು ಮಹಾನ್ ಸಾಧಕರ ಜೀವನ ಚರಿತ್ರೆಗಳನ್ನು ಬೆಳಕಿಗೆ ತರುವಲ್ಲಿ ನಿರಂತರ ಉತ್ಸಾಹ. 

‘ಕನ್ನಡ ಕಥನ ಸಾಹಿತ್ಯದಲ್ಲಿ ಸ್ತ್ರೀನಿರ್ವಚನ’ ಎಂಬ ಮಹಾನ್ ಪ್ರಬಂಧ ಗೀತಾ ಶೆಣೈ ಅವರ ಪಿಎಚ್.ಡಿ ಸಂಶೋಧನೆಯ ಕೃತಿ. ಇವರ ಸಂಚರ ಎಂಬುದು ಸಹಸ್ರಮಾನದ ಲೇಖಕಿಯರನ್ನು ಪರಿಚಯಿಸುವ ಬೃಹತ್ ಕೃತಿ.  ಗೀತಾ ಶೆಣೈ ಅವರು ಝಂಪಾ ಲಾಹಿರಿ ಅವರ ‘ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್’ ಕೃತಿಯನ್ನು ‘ಬೇನೆಗಳ ದುಭಾಷಿ’ ಎಂದು ಕನ್ನಡಕ್ಕೆ ತಂದಿದ್ದಾರೆ. 

ಕಮಲಾದೇವಿ ಚಟ್ಟೋಪಾಧ್ಯಾಯ, ಮದರ್ ತೆರೆಸಾ, ಕಸ್ತೂರಬಾ ಗಾಂಧೀ, ಇಳಾ ಭಟ್, ರಾಜಕುಮಾರಿ ಅಮೃತ್ ಕೌರ್, ಆನಿ ಬೆಸೆಂಟ್, ಇರಾವತಿ ಕರ್ವೆ, ಮಹಾ ಶ್ವೇತಾ ದೇವಿ, ಆರ್. ಕಲ್ಯಾಣಮ್ಮ, ಮೃಣಾಲಿನಿ ಸಾರಾಭಾಯಿ, ಅರುಣಾ ಅಸಫ್ ಅಲಿ, ರಾಹುಲ ಸಾಂಕೃತ್ಯಾಯನ, ಕೃಷ್ಣಾನಂದ ಕಾಮತ್, ಜ್ಯೋತ್ಸ್ನಾ ಕಾಮತ್, ಸರಸ್ವತಿದೇವಿ ಗೋಡರ್, ಪಂಡಿತ ರಮಾಬಾಯಿ ಸರಸ್ವತಿ, ಪದ್ಮಾ ಶೆಣೈ, ಪ್ರೇಮಾ ಕಾರಂತ, ಗಂಗೂಬಾಯಿ ಹಾನಗಲ, ಬಸ್ತಿ ವಾಮನ ಶೆಣೈ,  ಗೋಪಾಲಕೃಷ್ಣ ಪೈ, ಧರ್ಮಾನಂದ ಕೊಸಂಬಿ ಮುಂತಾದ ಅನೇಕ ಮಹತ್ಸಾಧಕರ ವ್ಯಕ್ತಿಚಿತ್ರಣಗಳ ಕೃತಿಗಳನ್ನು ಗೀತಾ ಶೆಣೈ ಅವರು ವನಿತಾ ಚಿಂತನ ಮಾಲೆ, ವಿಶ್ವಮಾನ್ಯರು ಮುಂತಾದ ಕೃತಿಸರಣಿಗಳಲ್ಲಿ ಮೂಡಿಸಿದ್ದಾರೆ. ಪರಿಸರ ಅರ್ಥಶಾಸ್ತ್ರ, ಸಮಾಜ ಶಾಸ್ತ್ರದ ಸ್ಥಾಪಕ ಪಿತಾಮಹರು, ಮಧ್ಯಕಾಲೀನ ಭಾರತದ ಚರಿತ್ರೆ, ದೇವರು ಮತ್ತು ಧರ್ಮದ ಚಿಂತನೆ, ಅನನ್ಯ, ಸಮೃದ್ಧಿ, ಅಂಚಿತ, ಕತೆಯಾದಳು ಹುಡುಗಿ, ಅಂಕುರ - ಸಾಧಕಿಯರ ವ್ಯಕ್ತಿ ಚಿತ್ರಗಳು, ಕೇತಕಿ ಮತ್ತು ಇತರ ಕಥೆಗಳು, ಸಂಚರ (ಸಹಸ್ರಮಾನದ ಲೇಖಕಿಯರು), ಸ್ತ್ರೀ ವಿಮುಕ್ತಿ ಚಿಂತನೆ, ಬೇನೆಗಳ ದುಭಾಷಿ, ಋತು ಸಂಕ್ರಮಣ ಮುಂತಾದವು ಗೀತಾ ಶೆಣೈ ಅವರ ಇನ್ನಿತರ ವೈವಿಧ್ಯಮಯ ಕೃತಿಗಳಲ್ಲಿ ಸೇರಿವೆ. ಕೊಂಕಣಿ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಲೇಖಕಿ ಮೀನಾ ಕಾಕೊಡಕಾರರ ಸಮಗ್ರ ಕಥಾಸಾಹಿತ್ಯದ ಅನುವಾದ ಮಾಲಿಕೆಯಲ್ಲಿ ‘ಚಂದನದ ಮರ’, ‘ಪಾರಿಜಾತ’,  ‘ಮನ ಸಾಂಗತ್ಯ’ ಮುಂತಾದವು ಬೆಳಕು ಕಂಡಿವೆ. ಮಹಾಬಳೇಶ್ವರ ಸೈಲ್ ಅವರ 'ಅರಣ್ಯಕಾಂಡ' ಇವರ ಮತ್ತೊಂದು ಪ್ರಸಿದ್ಧ ಅನುವಾದ.

ಡಾ. ಗೀತಾ ಶೆಣೈ ಅವರು ವಚನ ಸಾಹಿತ್ಯವನ್ನು ಕೊಂಕಣಿಭಾಷೆಗೆ ಅನುವಾದಿಸುವ ಕಾರ್ಯದ ಮುಂದಾಳತ್ವವನ್ನು ಯಶಸ್ವಿಯಾಗಿ ಪೂರೈಸಿದ್ದು, ಕನಕದಾಸರ ಕೃತಿಗಳನ್ನು ಕೊಂಕಣಿ ಭಾಷೆಯಲ್ಲಿ ಮೂಡಿಸುವ ಕಾರ್ಯದ ನೇತೃತ್ವದಲ್ಲಿ ಸಹಾ ಕಾರ್ಯಪ್ರವೃತ್ತರಾಗಿದ್ದಾರೆ. ಇದಲ್ಲದೆ ಕೊಂಕಣಿಗರ ಭಾಷೆ, ವಲಸೆ ಮತ್ತು ಸಂಸ್ಕೃತಿಯ ಬಗೆಗೆ ಮಹತ್ವದ ಸಂಶೋಧನಾ ಕಾರ್ಯವನ್ನೂ ನಡೆಸುತ್ತಿದ್ದಾರೆ. ವಿವಿಧೆಡೆಗಳಲ್ಲಿ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಕೆ, ವಿವಿಧ ನಿಯತಕಾಲಿಕೆಗಳಿಗೆ ನೂರಾರು ಲೇಖನಗಳು, ಸಂದರ್ಶನಗಳು ಮುಂತಾದ ಹತ್ತಾರು ರೀತಿಯ ಚಟುವಟಿಕೆಗಳಲ್ಲೂ ಅವರು ಸದಾ ನಿರತರು.

ಗೀತಾ ಶೆಣೈ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರತಿಷ್ಠಾನದ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಹೀಗೆ ವಿಶಿಷ್ಟ ರೀತಿಯಲ್ಲಿ ಸಾಹಿತ್ಯ ಕ್ರಿಯಾಶೀಲರಾದ ಡಾ. ಗೀತಾ ಶೆಣೈ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳುತ್ತಾ ಅವರ ಬರವಣಿಗೆ ಹೆಚ್ಚು ಹೆಚ್ಚು ಜನಮಾನಸವನ್ನು ತಲುಪುತ್ತಾ ನಮ್ಮೆಲ್ಲರನ್ನೂ ನಿರಂತರ ಪ್ರೇರಿಸುತ್ತಿರಲಿ ಎಂದು ಆಶಿಸೋಣ. 

Happy birthday Geetha Shenoy Madam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ