ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ವಿ. ರಂಗನಾಥನ್


 ವಿ. ವಿ. ರಂಗನಾಥನ್


ಸಂಗೀತ ವಿದ್ವಾನ್ ವಿ. ವಿ. ರಂಗನಾಥನ್ ಮೃದಂಗ ಮತ್ತು ಖಂಜರ ವಾದನ ಹಾಗೂ ಕೊನ್ನುಕೋಲು ಹೇಳುವುದರಲ್ಲಿ ಹೆಸರಾದವರು.

ರಂಗನಾಥನ್‌ 1918ರ ಜೂನ್ 17ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಭಾರತಿ ವೀಣಾ ವಿಶ್ವನಾಥ ಶಾಸ್ತ್ರಿಗಳು. ತಾಯಿ ಕಲ್ಯಾಣಮ್ಮ. ರಂಗನಾಥನ್‌ ಅವರ‍ ತಾತ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ಭಾರತಿ ಅಣ್ಣಯ್ಯನವರು. ರಂಗನಾಥನ್ ಅವರಿಗೆ ಬಾಲ್ಯದಿಂದಲೇ ಹರಿಕಥೆ ಮತ್ತು ಮೃದಂಗ ವಾದನದತ್ತ  ಮನಸ್ಸು ಹರಿಯಿತು. ಪ್ರಾರಂಭಿಕ ಸಂಗೀತ ಶಿಕ್ಷಣ ಪಾಲಘಾಟ್ ಅಯ್ಯಾಮಣಿ ಅಯ್ಯರ್‌ ಅವರಲ್ಲಿ ಮತ್ತು ತಿರುವಯ್ಯಾರ್‌ ಶಂಕರನಾರಾಯಣ ಭಾಗವತರಲ್ಲಿ ನಡೆಯಿತು. ನಂತರ ಪಾಲಘಾಟ್ ಸೋಮೇಶ್ವರ ಭಾಗವತರ್, ಪಂದಮಂಗಳಂ ಕೃಷ್ಣಸ್ವಾಮಿ ಅಯ್ಯರ್‌, ಟೈಗರ್‌ ವರದಾಚಾರ್‌, ವಿದ್ವಾನ್ ಡಿ. ಸುಬ್ಬಯ್ಯ, ವಿ. ಶ್ರೀನಿವಾಸರಾವ್ ಮುಂತಾದವರಲ್ಲಿ ತಾಳ, ಲಯ, ಪಲ್ಲವಿಯಲ್ಲಿ ವಿಶೇಷ ಜ್ಞಾನಾರ್ಜನೆ ಮಾಡಿದರು.

ವಿ. ವಿ. ರಂಗನಾಥನ್ ಆಕಾಶವಾಣಿಯ ನಿಲಯದ ಕಲಾವಿದರಾಗಿ ಮತ್ತು ಕರ್ನಾಟಕ ಗಾನ ಕಲಾ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತಸಭಾ, ಮುಂತಾದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ  ಇವರ ಪ್ರಸ್ತುತಿ ನಡಯಿತು. ಹಿರಿಯ ಸಂಗೀತ ವಿದ್ವಾಂಸರಾದ ಟಿ. ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಚೆಂಬೈ ವೈದ್ಯನಾಥ ಭಾಗವತರ್‌, ಅರಿಯಾಕುಡಿ ರಾಮಾನುಜ ಅಯ್ಯಂಗಾರ್‌, ಬಾಲಮುರಳಿಕೃಷ್ಣ, ಆಲತ್ತೂರು ಸಹೋದರರು ಸೇರಿದಂತೆ ಅನೇಕ ಸಂಗೀತ ಕಲಾವಿದರಿಗೆ ಪಕ್ಕ ವಾದ್ಯ ಸಹಕಾರ ನೀಡಿದರು. 

ರಂಗನಾಥನ್ ಅವರಿಗೆ ತ್ಯಾಗರಾಜ ಸಭಾದಿಂದ ಲಯ ವಾದ್ಯದುರಂಧರ, ಬಿ. ದೇವೇಂದ್ರಪ್ಪ ಸಂಗೀತೋತ್ಸವ ಸಮಿತಿಯಿಂದ ತಾಳ ವಾದ್ಯಕಲಾನಿಧಿ, ತ್ಯಾಗರಾಜ ಭವನ ಸಭಾದವರಿಂದ ಕಲಾಜ್ಯೋತಿ, ಪರ್‌ಕಸಿವ್ ಆರ್ಟ್ ಸೆಂಟರಿನಿಂದ ಲಯ ಕಲಾ ನಿಪುಣ ಮತ್ತು ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ, ಮುಳಬಾಗಿಲು ಪುರಂದರ ಆರಾಧನಾ ಮಹೋತ್ಸವ ಸನ್ಮಾನ, ಅಯ್ಯನಾರ್‌ ಕಾಲೇಜು ಸನ್ಮಾನ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದವು.

ಈ ವಿದ್ವಾಂಸರು 2008ರ ಜನವರಿ 14ರಂದು ಈ ಲೋಕವನ್ನಗಲಿದರು.

Great Musician V. V. Ranganathan 

ಕಾಮೆಂಟ್‌ಗಳು

  1. ನಿಮಗೆ ಅನಂತ ಧನ್ಯವಾದಗಳು. ನಾನು ಶ್ರೀ ವಿ ವಿ ಆರ್ ರವರ ಕಿರಿಯ ಅಳಿಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ಕಂಡರೆ ಮಾವನವರಿಗೆ ಅತ್ಯಂತ ಪ್ರೀತಿಯಿತ್ತು

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ