ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ರಾಮಕೃಷ್ಣ


 ಜಿ. ರಾಮಕೃಷ್ಣ


ಡಾ. ಜಿ. ರಾಮಕೃಷ್ಣ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ.

ಡಾ. ಜಿ. ರಾಮಕೃಷ್ಣ 1939ರ ಜೂನ್ 17 ರಂದು ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು. ವಂಶದ ಮೂಲದಿಂದ ಅವರ ಹೆಸರು ಗಂಪಲಹಳ್ಳಿ ರಾಮಕೃಷ್ಣ.   ಅವರ ತಂದೆ ಸುಬ್ರಹ್ಮಣ್ಯಂ. ತಾಯಿ ನರಸಮ್ಮ. 

ರಾಮಕೃಷ್ಣ ಅವರ ಪ್ರಾಥಮಿಕ ವಿದ್ಯಾಭ್ಯಾಸ ಕೆಂಪಸಾಗರ ಮತ್ತು ಪ್ರೌಢಶಾಲೆ ಓದು ಮಾಗಡಿಯಲ್ಲಿ ನಡೆಯಿತು. ವಾರಾನ್ನ, ಭಿಕ್ಷಾನ್ನ ಮಾಡಿಕೊಂಡು ಕಷ್ಟಪಟ್ಟು ಓದಿ ಮೈಸೂರಿಗೆ ಹೋಗಿ ಸಂಸ್ಕೃತ, ವೇದ, ತತ್ವಶಾಸ್ತ್ರಗಳನ್ನು ಕಲಿತು ಪಂಡಿತರಾದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್), ಎಂ.ಎ. (ಸಂಸ್ಕೃತ) ಪದವಿ ಮತ್ತು ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲದಲ್ಲಿ  'Origin and growth of rhuta in vedic literatute' ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು.   ವೇಲ್ಸ್ ವಿಶ್ವವಿದ್ಯಾಲಯದಿಂದ ‘ಕೋಲ್‌ರಿಜ್ ಅಂಡ್ ಮಿಸ್ಟಿಸಿಸಮ್’ ಎಂಬ ಮಹಾಪ್ರಬಂಧ ಮಂಡಿಸಿ ಮತ್ತೊಂದು ಉನ್ನತ  ಡಿಪ್ಲೊಮ ಪದವಿ ಗಳಿಸಿದರು. 

ರಾಮಕೃಷ್ಣ ಅವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ.  ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ  ನಂತರ ಮೈಸೂರು ವಿಶ್ವವಿದ್ಯಾಲಯದ ಯುಜಿಸಿ ರಿಸರ್ಚ್ ಫೆಲೊ ಆಗಿ ಆಯ್ಕೆಗೊಂಡರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಸಂಶೋಧನಾ ಸಹಾಯಕರಾಗಿದ್ದರು.

ರಾಮಕೃಷ್ಣ ಅವರು ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರಾಗಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿಶ್ವವಿದ್ಯಾಲಯದಲ್ಲಿ  ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ವಿಶ್ವಾದ್ಯಂತ ಸಂಚರಿಸಿ ವಿಶಾಲ ಅನುಭವ ಪಡೆದರು. 

ಡಾ. ರಾಮಕೃಷ್ಣ ಅವರು ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದರು. ಮಾಲೆ ಪ್ರಕಾಶನ ಮತ್ತು ಅಚಲ ಮಾಸ ಪತ್ರಿಕೆ ಪ್ರಕಾಶನದ ಸಂಪೂರ್ಣ ಹೊಣೆ ಹೊತ್ತರು. ಹೊಸತು ಪತ್ರಿಕೆಯ ಸಂಪಾದಕತ್ವವನ್ಮೂ ನಿರ್ವಹಿಸಿದರು.

ರಾಮಕೃಷ್ಣ ಅವರ ವಿಚಾರ ಸಾಹಿತ್ಯಕ ಕೃತಿಗಳಲ್ಲಿ ಮುನ್ನೋಟ, ವೈಚಾರಿಕ ಜಾಗೃತಿ, ದೇವಿಪ್ರಸಾದ್,  ಲೋಕಾಯತ ದರ್ಶನ, ಬಾನೊಣವೇ, ವಾನರನಿಂದ ಮಾನವ, ದರ್ಶನ, ಭಾರತೀಯ ವಿಜ್ಞಾನದ ಹಾದಿ ಸೇರಿವೆ.‍ ಭಗತ್‌ಸಿಂಗ್, ಭೂಪೇಶಗುಪ್ತ, ಚೆಗೆವಾರ, ಲೆನಿನ್ ಮುಂತಾದವು ವ್ಯಕ್ತಿ ಚಿತ್ರಗಳು. ಅವರು ಹಲವಾರು ಕೃತಿಗಳ ಸಂಪಾದನೆಯನ್ನೂ ಮಾಡಿದ್ದಾರೆ. ಭಾರತೀಯ ಮೂಲತತ್ವಗಳ ಜೊತೆಗೆ ಮಾರ್ಕ್ಸ್ ತತ್ವಗಳ ಬಗೆಗೂ ಒಲವು ಹೊಂದಿರುವ ರಾಮಕೃಷ್ಣ ಅವರು ಆ ಕುರಿತಾದ ಅನೇಕ ಅನುವಾದಗಳನ್ನೂ ಕನ್ನಡಕ್ಕೆ ತಂದಿದ್ದಾರೆ.

ಡಾ. ಜಿ. ರಾಮಕೃಷ್ಣ ಅವರ ಮುನ್ನೋಟ, ಆಯತನ, ಭಾರತೀಯ ವಿಜ್ಞಾನದ ಹಾದಿ ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡಮಿ ಬಹುಮಾನ ಸಂದಿದೆ. 2002ರ ರಾಜ್ಯೋತ್ಸವ ಪ್ರಶಸ್ತಿಯನ್ನು ವಿನಯದಿಂದ ನಿರಾಕರಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಗೌರವ ಪ್ರಶಸ್ತಿಯೂ ಸಂದಿದೆ.

On the birth day of great scholar and writer Dr. G. Ramakrishna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ