ಅನಂತಕೃಷ್ಣ
ಅನಂತಕೃಷ್ಣ ದೇಶಪಾಂಡೆ
ವರಕವಿ ದರಾ ಬೇಂದ್ರೆಯವರ ನೆನಪನ್ನು ಮತ್ತು ಧಾರವಾಡದ ಸಾಧನಕೇರಿಯ ಬೇಂದ್ರೆ ಸಂಸ್ಕೃತಿಯನ್ನು ಎಲ್ಲರ ಮನೆ ಮನಗಳಲ್ಲಿ ನೆಲೆಸುವಂತೆ ಮಾಡುತ್ತಿರುವ ಮಹಾನ್ ಕಲಾವಿದ ಮತ್ತು ಹಿರಿಯ ಚೇತನ ಅನಂತಕೃಷ್ಣ ದೇಶಪಾಂಡೆ ಅವರು.
ಅನಂತಕೃಷ್ಣ ದೇಶಪಾಂಡೆಯವರು 1957ರ ಜೂನ್ 21ರಂದು ವಿಜಾಪುರದಲ್ಲಿ ಜನಿಸಿದರು. ತಂದೆ ಕೃಷ್ಣ. ತಾಯಿ ಉಷಾ. ಈ ದಂಪತಿಗಳದು ಆರು ಜನ ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣುಮಕ್ಕಳ ತುಂಬು ಕುಟುಂಬ. ಮುಂಬೈಯಲ್ಲಿ ಟೆಲಿಗ್ರಾಫ್ ವೃತ್ತಿಯನ್ನು ನಡೆಸುತ್ತಿದ್ದ ತಂದೆಯವರು ನಿವೃತ್ತಿಯ ನಂತರ ಧಾರವಾಡದಲ್ಲಿ ತಮ್ಮ ಜೀವನವನ್ನು ಸಾಗಿಸತೊಡಗಿದರು.
ಹಿರಿಯ ಜಮೀನುದಾರರಾಗಿದ್ದ ಗುರುರಾಜ ರಾವ್ ಮತ್ತು ರುಕ್ಮಿಣಿ ದಂಪತಿಗಳು ಅನಂತಕೃಷ್ಣ ದೇಶಪಾಂಡೆಯವರ ಅಜ್ಜ-ಅಜ್ಜಿಯರಾಗಿದ್ದರು. ಇವರ ಆಶ್ರಯದಲ್ಲಿ ಎರಡು ವರ್ಷದ ಮಗುವಾಗಿನಿಂದ ಬೆಳೆದ ಅನಂತಕೃಷ್ಣ ದೇಶಪಾಂಡೆಯವರು ವಿದ್ಯಾಭ್ಯಾಸವನ್ನು ಧಾರವಾಡದ ಬಾಸೆಲ್ ಮಿಷನ್ ಶಾಲೆ ಮತ್ತು ಕರ್ನಾಟಕ ಹೈಸ್ಕೂಲಿನಲ್ಲಿ ಪೂರೈಸಿದರು.
ಸಾಧನಕೇರಿಯಲ್ಲಿ ಪ್ರಕೃತಿಯ ಮಡಿಲಲ್ಲಿ ತಮ್ಮ ಬೆಳವಣಿಗೆಯ ದಿನಗಳನ್ನು ಅನುಭವಿಸುತ್ತಾ, ಎಂಟಿಟಿಎಫ್‍ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡರು.
ಅನಂತಕೃಷ್ಣ ದೇಶಪಾಂಡೆಯವರು ಉದ್ಯೋಗಕ್ಕಾಗಿ ಲಾಟರಿ ಟಿಕಟ್ಟು ಮಾರುತ್ತಾ ತಮ್ಮ ಬಡತನದ ಬದುಕನ್ನು ಪ್ರಾರಂಭಿಸಿದರು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ಜಯತೀರ್ಥ ಜೋಶಿ ರಂಗ ಕಲಾವಿದರು ಅವರ ಶಿಬಿರದಲ್ಲಿ ಮೊದಲು ಪಾಲ್ಗೊಂಡರು. ಹೀಗೆ ಅವರ ಮನದಲ್ಲಿ ಬೆಳೆದ ಅಭಿನಯಾಸಕ್ತಿ ರಂಗ ನಾಟಕದ ಕಡೆ ಮುಖಮಾಡಿ ಸಾಗಿತು.
ಅನಂತಕೃಷ್ಣ ದೇಶಪಾಂಡೆಯವರು 1986ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ 'ಬಿ'ಹೈ ಗ್ರೇಡ್ ಕಲಾವಿದರಾಗಿ ಮಾನ್ಯತೆ ಪಡೆದರು. ಅವರು ಕಲೋದ್ಧಾರಕ ಸಂಘವು ರಾಷ್ಟ್ರೀಯ ರಂಗ ಶಾಲೆಯಲ್ಲಿ ಪರಿಣಿತರಾದ ಜಯತೀರ್ಥ ಜೋಶಿ ಅವರ ನಿರ್ದೇಶನದಲ್ಲಿ 1986ರಲ್ಲಿ ನಡೆಸಿದ ಸಮುದಾಯದ ರಂಗಮೇಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು. ಮುಂದೆ ಸಿ ಬಸವಲಿಂಗಯ್ಯ ಅವರ ನಿರ್ದೇಶನದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ನಟನೆಯ ವಿವಿಧ ಆಯಾಮಗಳನ್ನು ಅಳವಡಿಸಿಕೊಂಡು ಹಲವಾರು ನಾಟಕಗಳಲ್ಲಿ ಅಭಿನಯಿಸಿದರು.
ಅನಂತಕೃಷ್ಣ ದೇಶಪಾಂಡೆಯವರು ಮುದ್ರಾರಾಕ್ಷಸ, ನಮ್ ಕಂಪನಿ, ಸಂತ್ಯಾಗ ನಿಂತಾನ ಕಬೀರ, ಕೆರೆಗೆಹಾರ, ಮೃಚ್ಛಕಟಿಕ, ಹಯವದನ, ಒಳ್ಳೆಯದಲ್ಲ ನಿನ್ನ ಸಲುಗೆ, ಹಳೆಯ ಗೆಣಿಯರು, ಜಾತ್ರೆ, ಜೋಕುಮಾರಸ್ವಾಮಿ, ದೇವ ಬಂದಾನಮ್ನ, ಕುರುಡು ಕಾಂಚಾಣ, ಗೌರಿ, ನೀಲಾಂಬಿಕಾ, ಬಂಗಾರದ ಕೊಡ ವಿದೂಷಕ, ಬಲಿದಾನ, ಗುಂಡನ ಮದುವೆ, ದೇವಲಾಪುರ ಆಸ್ಪತ್ರೆ, ಸಾಯೋ ಆಟ, ಕದಡಿದ ನೀರು, ಹಿಟ್ಟಿನ ಹುಂಜ, ಜನತೆ, ವರೋಪಚಾರ, ಪ್ರಜಾಪ್ರಭುತ್ವ, ಸ್ವಂತ ಸತ್ಕಾರ, ನಗೆಯು ಬರುತಿದೆ, ದಾರಿ ಯಾವುದಯ್ಯಾ ವೈಕುಂಠಕೆ, ಹೀರೋ ಹನುಮಂತರಾಯ, ಪಾರ್ವತಿ ಬಾಯಿ ಪಂಚ ಸೂತ್ರಗಳು, ವಿಜಯದಾಸರು ಮುಂತಾದ ಸುಮಾರು 150 ನಾಟಕಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸೂರೆಗೊಂಡಿದ್ದಾರೆ.
ಅನಂತಕೃಷ್ಣ ದೇಶಪಾಂಡೆಯವರು ಸರೋಜಿನಿ, ಮೂಡಲ ಮನೆ, ಅಣ್ಣ ಬಸವಣ್ಣ, ಸ್ವಾಮಿ ಸ್ವಾಮಿ, ಈಶ್ವರ ಎಲ್ಲ ನೀನೆ ಎಲ್ಲ, ಮೌನ ಸಂಕ್ರಾಂತಿ, ಸಂಗೊಳ್ಳಿ ರಾಯಣ್ಣ, ಪರಂಪರೆ, ಮಹಾನವಮಿ ಮುತ್ತಿನ ತೋರಣ, ಸೌಭಾಗ್ಯವತಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ
ಏರಲಿ ಹಾರಲಿ ಏಕತೆಯ ಸಾರಲಿ, ಅಣ್ಣ ಚಾಚಾ, ಗೌರಿ ಮುಂತಾದ ಟೆಲಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಅನಂತಕೃಷ್ಣ ದೇಶಪಾಂಡೆಯವರು ಅಭಿನಯಿಸಿರುವ ಚಲನಚಿತ್ರಗಳಲ್ಲಿ ಗಂಗವ್ವ ಗಂಗಾಮಾಯಿ, ರಮ್ಯ ಚೈತ್ರ ಕಾಲ, ಸಿಂಗಾರೆವ್ವ, ಕೂರ್ಮಾವತಾರ, ಕತ್ತಲೆ ದಾರಿ ಬೆಳಕಿಗೆ, ಅಲೆಮಾರಿಗಳ ಆತ್ಮಕಥೆ ,ಕೊನೆಯ ನಮಸ್ಕಾರ, ಕೈಟ್ ಬ್ರದರ್ಸ್ ಸೇರಿದ್ದು ಮುಂತಾದವು ಸೇರಿವೆ. ಅಂಬಿಕಾತನಯದತ್ತ ರೂಪಕದಲ್ಲಿ ಬೇಂದ್ರೆಯವರ ಪಾತ್ರನಿರ್ವಹಣೆಯನ್ನು ವಹಿಸಿದ್ದಾರೆ.
ಇಷ್ಟೆಲ್ಲ ಸಾಧಿಸಿರುವ ಅನಂತಕೃಷ್ಣ ದೇಶಪಾಂಡೆಯವರು ಇಂದು ಬೇಂದ್ರೆಯವರ ಕುರಿತಾದ ಏಕವ್ಯಕ್ತಿ ಪ್ರದರ್ಶನದಿಂದಲಂತೂ ಎಲ್ಲೆಡೆ ಪ್ರಸಿದ್ಧರಾಗಿಬಿಟ್ಟಿದ್ದಾರೆ. ಬೇಂದ್ರೆಯವರ ದರ್ಶನದ ಸುಮಾರು ಐನೂರಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ನಾಡಿನೆಲ್ಲೆಡೆ ಅಲ್ಲದೆ ನಾಡಿನ ಆಚೆಗೂ ಕೂಡ ಪ್ರದರ್ಶಿಸಿ ಬೇಂದ್ರೆಯವರನ್ನು ಎಲ್ಲರ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ.
ಅನಂತಕೃಷ್ಣ ದೇಶಪಾಂಡೆಯವರು ಹತ್ತು ವರ್ಷದ ಬಾಲಕನಿರುವಾಗಲೇ ಶ್ರೀಮಾತ ಮನೆಯಲ್ಲಿ ಬೇಂದ್ರೆ ಅಜ್ಜನ ಒಡನಾಟ ಅನುಭವಿಸಿದವರು. ಆಗಾಗ ಬೇಂದ್ರೆ ಮಾತು ಕೇಳುತ್ತಾ, ಅವರ ನಡೆ, ನುಡಿ, ಹಾವ, ಭಾವ ನೋಡುತ್ತಾ ಬೇಂದ್ರೆಯವರನ್ನು ತಮ್ಮ ಹೃದಯದಲ್ಲಿ ತುಂಬಿಕೊಂಡರು. ಬುದ್ದಿ ಪಾಠವನ್ನ ಬೇಂದ್ರೆಯವರಿಂದ ಹೇಳಿಸಿಕೊಂಡ, ಕಲಿತುಕೊಂಡ ಭಾಗ್ಯಶಾಲಿಗಳಾದರು.
ಅನಂತಕೃಷ್ಣ ದೇಶಪಾಂಡೆಯವರು ಅನೇಕ ವ್ಯಕ್ತಿಗಳ, ಗಾಯಕರ, ಚಿತ್ರನಟರ ಅನುಕರಣೆಯನ್ನು ಪ್ರಾರಂಭದಿಂದಲೂ ಮಾಡುತ್ತಿದ್ದರು. ಬೇಂದ್ರೆಯವರು ಮತ್ತು ಅವರ ಮಗ ವಾಮನ ಬೇಂದ್ರೆಯವರ ಆಪ್ತರಾದ ಕೆ. ಎಸ್. ಶರ್ಮಾ ಅವರ ವಿಶ್ವಚೇತನದಲ್ಲಿ ಬೇಂದ್ರೆಯವರ ನೂರನೆಯ ವರ್ಷದ ಆಚರಣೆಯ ಸಂದರ್ಭದಲ್ಲಿ ಅನಂತಕೃಷ್ಣ ದೇಶಪಾಂಡೆಯವರು 'ಮಕ್ಕಳೊಂದಿಗೆ ಬೇಂದ್ರೆ' ಎನ್ನುವ ಪ್ರಥಮ ಕಾರ್ಯಕ್ರಮವನ್ನು ನೀಡಿದರು. ವಾಮನ ಬೇಂದ್ರೆ, ಗುರುಪ್ರಸಾದ್ ಇನಾಮ್ದಾರ್, ಡಾ. ಶ್ಯಾಮಸುಂದರ ಬಿದರಕುಂದಿ ಮುಂತಾದವರು ಇವರ ಈ ಕಾರ್ಯಕ್ರಮ ವೈಖರಿಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.
ಅನಂತಕೃಷ್ಣ ದೇಶಪಾಂಡೆಯವರಿಗೆ ಬೇಂದ್ರೆಯವರ ಮೊದಲ ವೇಷಭೂಷಣವನ್ನು ತೊಡಿಸಿದವರು ಪ್ರಸಿದ್ಧರಾಗಿರುವ ಮೇಕಪ್ ಗಜಾನನ ಮಾಲೆಯವರು. ಮುಂದಿನ ದಿನಗಳಲ್ಲಿ ಬೇಂದ್ರೆಯವರ ವೇಷಭೂಷಣಗಳನ್ನು ತಾವೇ ಮಾಡಿಕೊಳ್ಳತೊಡಗಿದರು. ದ. ರಾ ಬೇಂದ್ರೆ ಅವರ ನಡೆ-ನುಡಿಗಳನ್ನು ಆರಾಧಿಸಿ, ನಟಿಸಿ, ಅಜ್ಜನ ಮಾಂತ್ರಿಕತೆಯನ್ನು ಜನತೆಗೆ ಇಂದು ಉಣಬಡಿಸುತ್ತಿದ್ದಾರೆ. ಬ್ರಹ್ಮಚಾರಿಯಾಗಿ ಬಡತನದಲ್ಲಿ ಜೀವವನ್ನು ಸವೆಸುತ್ತಿರುವ ಅನಂತಕೃಷ್ಣ ದೇಶಪಾಂಡೆಯವರು ಬೇಂದ್ರೆಯವರ ಆರಾಧನೆಯನ್ನು ಅನುಭವಿಸುತ್ತಾ ಬೇಂದ್ರೆಯಂತೆಯೇ ನಟನೆ ಮಾಡುತ್ತಿರುವ ತಪಸ್ವಿಯೇ ಆಗಿದ್ದಾರೆ. ಅವರ ಸರಳ ಜೀವನ, ವಿನೀತ ಸ್ವಭಾವದ ನಡೆ-ನುಡಿ, ಸ್ನೇಹ ಸಜ್ಜನಿಕೆ, ಮೃದು ಹಿತ ಮಾತು, ಅವರ ಎಲ್ಲ ಆಪ್ತವಲಯಕ್ಕೆ ಅಚ್ಚುಮೆಚ್ಚು. ಅವರ ಕಂಠದಲ್ಲಿ ಬೇಂದ್ರೆಯವರ ಸುಂದರ ಮಾತುಗಳು, ಜೀವನದ ಘಟನೆಗಳು, ಜೀವನೋತ್ಸಾಹದ ಮಾತುಗಳು ಇವುಗಳನ್ನು ಕೇಳುವುದೇ ಒಂದು ಸೊಗಸು. ಬೇಂದ್ರೆಯವರ ಕವನಗಳನ್ನೂ ಇವರು ಸುಂದರವಾಗಿ ವಾಚಿಸುತ್ತಾರೆ.
ಅನಂತಕೃಷ್ಣ ದೇಶಪಾಂಡೆಯವರಿಗೆ ಉತ್ತಮ ರಂಗನಟ ಪ್ರಶಸ್ತಿ , ಶಾಲ್ಮಲಾ ಪ್ರಶಸ್ತಿ , ರಂಗ ಸಪ್ತಾಹ 2010 ವಿದ್ಯಾವರ್ಧಕ ಸಂಘದಿಂದ ರಂಗ ಪ್ರಶಸ್ತಿ,ಕನ್ನಡದ ಕಲಾಭೂಷಣ ಪ್ರಶಸ್ತಿ, ಬೇಂದ್ರೆಯ ಅಭಿನಯಕ್ಕೆ ಹತ್ತು ಹಲವು ಸಂಘ ಸಂಸ್ಥೆಗಳ ಗೌರವಗಳು, ವಿಶ್ವರಂಗ ದಿನಾಚರಣೆಯ ಅಂಗವಾಗಿ ಧಾರವಾಡದ ರಂಗ ಸ್ನೇಹಿತ ಪ್ರಶಸ್ತಿ, ಬೇಂದ್ರೆ ಆಕೃತಿ ತಂಡದಿಂದ ಕನ್ನಡಶ್ರೀ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಕಲಾಸೇವೆಯನ್ನು ಅದರಲ್ಲೂ ಬೇಂದ್ರೆ ಅಂತಹ ಮೇರುವ್ಯಕ್ತಿತ್ವವನ್ನು ಜೀವಂತವಾಗಿರಿಸುತ್ತಾ ಬದುಕನ್ನು ಸಾಗಿಸುತ್ತಿರುವ ಹಿರಿಯರಾದ ಅನಂತಕೃಷ್ಣ ದೇಶಪಾಂಡೆಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
ಕೊಡುಗೆ: ಡಾ. ಸರ್ವಮಂಗಳಾ ಶಾಸ್ತ್ರಿ Sarvamangala Shastry
On the birth day of a dedicated artiste Anantha Krishna Deshpande
ಕಾಮೆಂಟ್‌ಗಳು