ವೈಜನಾಥ ಬಿರಾದಾರ್
ವೈಜನಾಥ ಬಿರಾದಾರ್
ವೈಜನಾಥ ಬಿರಾದಾರ್ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದರು.
ವೈಜನಾಥ ಬಿರಾದಾರ್ 1952ರ ಜೂನ್ 26ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಗಾಂಪುರದಲ್ಲಿ ಜನಿಸಿದರು. ತಂದೆ ಬಸಪ್ಪ ಬಿರಾದಾರ್. ತಾಯಿ ನಾಗಮ್ಮ.
ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡದ್ದರಿಂದ ವೈಜನಾಥ ಬಿರಾದಾರ್ ಶಾಲೆ ಬಿಟ್ಟರು. ಚಿಕ್ಕಂದಿನಲ್ಲೇ ಅಮ್ಮ ಹೇಳುತ್ತಿದ್ದ ಲಾವಣಿಗಳು, ಮುಲಾಯಿ ಪದ ಮುಂತಾದವುಗಳಿಂದ ಪ್ರಭಾವಿತರಾದ ಇವರು ಕೋಲಾಟ ಮತ್ತು ದೊಡ್ಡಾಟದ ಮೂಲಕ ತಮ್ಮನ್ನು ಗುರುತಿಸಿಕೊಂಡರು. ನಾಟಕದ ಗೀಳು ಅಂಟಿತು. ಬೆಳಗಾವಿ ಜಿಲ್ಲೆಯ ಗೋಕಾಕದ ಅಪ್ಪಾಸಾಬ್ ಅವರ ರಂಗ ತಂಡದಲ್ಲಿ ಕೆಲಸ ಮಾಡಿದರು. ತಮ್ಮದೇ ಆದ 'ಬಿರಾದಾರ ಮಿತ್ರ ಮಂಡಳಿ' ತಂಡದೊಂದಿಗೆ ಈಗಲೂ ನಾಟಕಗಳನ್ನು ಆಡುತ್ತಾರೆ. ಸುಮಾರು 25 ನಾಟಕಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ ಬೃಹತ್ ಸಾಧನೆ ಇವರದ್ದು.
ವೈಜನಾಥ ಬಿರಾದಾರ್ ಅವರು ಎಂ.ಎಸ್. ಸತ್ಯು ನಿರ್ದೇಶನದ 'ಬರ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಮೊದಲು ನಟಿಸಿದರು. ಮುಂದೆ ಬೆಂಗಳೂರಿಗೆ ಬಂದ ಅವರು 'ಓ ಮಲ್ಲಿಗೆ', 'ಅಕ್ಕ', 'ಹುಲಿಯಾ', 'ಮಠ', 'ಲವ್ ಟ್ರೈನಿಂಗ್ ಸ್ಕೂಲ್', 'ತರ್ಲೆ ನನ್ಮಗ', ಶಂಖನಾದ' ಸೇರಿದಂತೆ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 4 ಲಂಬಾಣಿ, 1 ತುಳು ಮತ್ತು 'ಹ್ಯಾಂಗ್ ಟು ಡೆತ್' ಎಂಬ ಒಂದು ಹಿಂದೀ ಚಿತ್ರದಲ್ಲೂ ನಟಿಸಿದ್ದಾರೆ.
ವೈಜನಾಥ ಬಿರಾದಾರ್ ಅವರು ಗಿರೀಶ್ ಕಾಸರವಳ್ಳಿ ಅವರ 'ಕನಸೆಂಬೋ ಕುದುರೆಯನ್ನೇರಿ' ಚಿತ್ರದಲ್ಲಿನ ಅಭಿನಯಕ್ಕಾಗಿ 2011ರಲ್ಲಿ ಸ್ಪೇನ್ ದೇಶದ ಮ್ಯಾಡ್ರಿಡ್ನಲ್ಲಿ ನಡೆದ 'ಇಮ್ಯಾಜಿನ್ ಇಂಡಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವ'ದಲ್ಲಿ 'ಗೋಲ್ಡನ್ ವೀಲ್' ಪ್ರಶಸ್ತಿ ಗೌರವಕ್ಕೆ ಪಾತ್ರರಾದರು. ಹೀಗೆ ಬಿರಾದಾರ್ ವಿದೇಶೀ ನೆಲದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡ ಪ್ರಥಮ ನಟ ಎಂಬ ಕೀರ್ತಿಗೆ ಪಾತ್ರರಾದರು. 2014 ವರ್ಷದಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಗೌರವ, ಫಿಲಂಫೇರ್ ಪೋಷಕ ನಟ ಪ್ರಶಸ್ತಿ ಮುಂತಾದ ಗೌರವಗಳು ಸಹಾ ಅವರಿಗೆ ಸಂದಿವೆ.
ವೈಜನಾಥ ಬಿರಾದಾರ್ ಕೆಲವು ವರ್ಷಗಳ ಹಿಂದೆ ಕನ್ನಡ ಭವನದಲ್ಲಿ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಸಹಾ ಮೂರೂವರೆ ದಶಕಗಳ ಕಾಲದಿಂದ ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿದ್ದರೂ ನೆಲೆಯಿಲ್ಲದ ತಮ್ಮಂತಹ ಕಲಾವಿದರ ಬದುಕಿನ ಬಗ್ಗೆ ಮಾತಾಡಿದ್ದರು.
ಬದುಕೆಂಬ ಅಭದ್ರತೆ ಬಿರಾದಾರ್ ಅವರ ಬದುಕಿಗೆ ತೊಂದರೆ ತರದಿರಲಿ. ಅವರ ಬದುಕು ಅರೋಗ್ಯ, ಸಂತಸ, ಅನುಕೂಲತೆಗಳು ಮತ್ತು ಸಾಧನೆಗಳಿಂದ ಕೂಡಿದ ಸುಭದ್ರ ನೆಲೆಯಲ್ಲಿರಲಿ.
On the birth day of Vaijanath Biradar
ಕಾಮೆಂಟ್‌ಗಳು