ಬಾಲಗಂಧರ್ವ
ಬಾಲಗಂಧರ್ವ
ಬಾಲಗಂಧರ್ವ ಭಾರತೀಯ ರಂಗಭೂಮಿಯಲ್ಲಿನ ಮಹಾನ್ ಹೆಸರು.
ಇವರು ಮರಾಠೀ ರಂಗಭೂಮಿಯ ಶ್ರೇಷ್ಠ ನಟರು. ಗಾಯನ ಹಾಗೂ ಸ್ತ್ರೀಪಾತ್ರಧಾರಣೆ ಇವರ ವೈಶಿಷ್ಟ್ಯವಾಗಿತ್ತು. ಇವರ ಪೂರ್ಣ ಹೆಸರು ನಾರಾಯಣ ಶ್ರೀಪಾದ ರಾಜಹಂಸ.
ಬಾಲಗಂಧರ್ವ 1888ರ ಜೂನ್ 26ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ ತಾಲ್ಲೂಕಿನ ನಾಗಠಾಣಾ ಎಂಬಲ್ಲಿ ಜನಿಸಿದರು. ತಂದೆ ಶ್ರೀಪಾದರಾವ್ ಒಳ್ಳೆಯ ಗಾಯಕ ಹಾಗೂ ಸಿತಾರ್ ವಾದಕರಾಗಿದ್ದರು. ಇವರ ಸೋದರಮಾವ ವಾಸುದೇವರಾವ್ ಪುಣತಾಂಬೇಕರ್ ನಾಟ್ಯಕಲಾಪ್ರವರ್ತಕ ಮಂಡಲಿಯ ಮಾಲೀಕರಾಗಿದ್ದರು. ಆದ್ದರಿಂದ ರಾಜಹಂಸ ಕುಟುಂಬಕ್ಕೆ ಮಂಡಲಿಯ ನಾಟಕಗಳನ್ನು ನೋಡುವ ಅವಕಾಶ ದೊರಕಿತ್ತು. ಹೀಗಾಗಿ ಇವರಿಗೆ ಇತ್ತ ತಂದೆ ಅತ್ತ ತಾಯಿಯ ತವರುಮನೆ ಎರಡೂ ಕಡೆಯಿಂದಲೂ ಗಾಯನಾಭಿನಯಗಳ ವಾತಾವರಣ ದೊರಕಿತು.
ನಾರಾಯಣನ ಪ್ರಾಥಮಿಕ ಶಿಕ್ಷಣ ನಾಗಠಾಣದಲ್ಲಾಯಿತು. ಅನಂತರ ಜಳಗಾಂವ್ ನಗರದಲ್ಲಿ ಅಭ್ಯಾಸ ನಡೆಯಿತು. ವಿದ್ಯಾರ್ಥಿ ದೆಸೆಯಲ್ಲಿ ಈತ ಓದಿಗಿಂತ ಗಾಯನ ಅಭ್ಯಾಸದಲ್ಲೇ ಹೆಚ್ಚು ಸಮಯ ಕಳೆದರು. ಮ್ಹಾಳಸ್ ಮೆಹಬೂಬ್‍ಖಾನ್ ಎಂಬ ಗವಾಯಿಯ ಹತ್ತಿರ ಗಾಯನದ ಶಿಕ್ಷಣ ಪಡೆದರು. ಒಮ್ಮೆ ಪುಣೆಗೆ ಆಗಮಿಸಿದ ಲೋಕಮಾನ್ಯ ತಿಲಕರು ಬಾಲಕ ನಾರಾಯಣನ ಗಾಯನ ಕೇಳಿ ಸಂತೋಷಿಸಿ ಈತ ಸಾಕ್ಷಾತ್ ಬಾಲಗಂಧರ್ವ ಎಂದು ಉದ್ಗಾರವೆತ್ತಿದರು. ಈ ಉದ್ಗಾರವೇ ಮುಂದೆ ನಾರಾಯಣ ರಾಜಹಂಸನ ನಿಜನಾಮವಾಗಿ ಬಳಕೆಯಲ್ಲಿ ಬಂದಿತು.
ಬಾಲಗಂಧರ್ವರ ಬಾಲ್ಯದಲ್ಲೇ ತಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಾಗ ಓದಿಗೆ ತೆರೆಬಿದ್ದಿತು. ಈತ ಕೊಲ್ಲಾಪುರಕ್ಕೆ ಹೋದಾಗ ಅಲ್ಲಿನ ರಾಜ ಛತ್ರಪತಿ ಶಾಹೂ ಮಹಾರಾಜ ಈತನ ಗಾಯನ ಕೇಳಿ ಮೆಚ್ಚಿಕೊಂಡು ಸಹಾಯಕ್ಕೆ ನಿಂತರು. ಇಲ್ಲಿಯೇ ಈತನ ಮದುವೆ ಪಾರ್ಗಾಂವಕರ್ ಮನೆತನದ ಲಕ್ಷ್ಮೀ ಎಂಬಾಕೆಯೊಂದಿಗೆ ಆಯಿತು. ಅನಂತರ ಕಿರ್ಲೋಸ್ಕರ್ ಕಂಪನಿಯಲ್ಲಿ ನಾಟ್ಯಾಚಾರ್ಯ ದೇವಲ್ ಅವರ ಬಳಿ ಶಕುಂತಲಾ ಪಾತ್ರದ ಅಧ್ಯಯನ ಆರಂಭವಾಯಿತು. ರೂಪ, ವಯಸ್ಸು ಧ್ವನಿಗಳ ಹುರಿಯಲ್ಲಿ ಪ್ರೇಕ್ಷಕ ಸಂದಣಿಯನ್ನು ಬಾಲಗಂಧರ್ವ ಕಟ್ಟಿಹಾಕಿದರು. ಅಂದಿನಿಂದ ಯಾವುದೇ ಪಾತ್ರವನ್ನು ನಿರ್ವಹಿಸಲಿ ಮೋಹಕದರ್ಶನ, ಗಂಧರ್ವತುಲ್ಯ ಗಾಯನ ಪರಿಣಾಮಕಾರಕ ಅಭಿನಯ, ವಿಪುಲದ್ರವ್ಯಾರ್ಜನೆ, ಲೋಕಪ್ರಿಯತೆ, ರಂಗಭೂಮಿಗಾಗಿ ಮಾಡುವ ವಿಶೇಷ ಖರ್ಚು ಬಾಲಗಂಧರ್ವನ ಆಯುಷ್ಯದ ಚಿತ್ರವಾಯಿತು. ಸುಭದ್ರ ಇಲ್ಲವೇ ರುಕ್ಮಿಣಿಯ ಪ್ರೇಮಕಾತುರತೆ, ದೇವಯಾನಿ ಇಲ್ಲವೇ ದ್ರೌಪದಿಯ ತೇಜಸ್ವೀತನ ಭಾಮಿನಿಯ ಶೃಂಗಾರ (ಮಾನಾಪಮಾನ ನಾಟಕ), ರೇವತಿಯ ವೈಯಾರ (ಸಂಶಯ ಕಲ್ಲೋಲ ನಾಟಕ) ವಸಂತಸೇನೆಯ ಉದಾರ ಪ್ರೇಮ ಸಿಂಧೂವಿನ (ಏಕಚ್ ಪ್ಯಾಲಾ) ಕಾರುಣ್ಯ-ಯಾವುವೂ ಪ್ರೇಕ್ಷಕರಿಗೆ ಅಭಿನಯವಾಗಿ, ಸುಳ್ಳಿನ ಕಂತೆಯಾಗಿ, ಸತ್ಯದ ಆಭಾಸವಾಗಿ ತೋರಲೇ ಇಲ್ಲ. ಪ್ರೇಕ್ಷಕರಿಗೆ ಅವು ನಾಟಕಗಳಾಗದೆ ಜೀವಂತ ಅನುಭವಗಳಾಗಿ ತೋರಿದವು. ವೇಷಭೂಷಣ, ಕೇಶಭೂಷಣ ಹೆಸರಿನ ಅನುಕರಣ ಮಹಾರಾಷ್ಟ್ರದಲ್ಲಿ ಅಷ್ಟೇ ಅಲ್ಲ ಪಕ್ಕದ ಕನ್ನಡ ನಾಡಿನ ಜನಜೀವನದಲ್ಲೂ ಪ್ರವಹಿಸಿಬಿಟ್ಟಿತು. ಅಂದು ಪಾತ್ರಧಾರಿ ವ್ಯಕ್ತಿ ಧರಿಸುವ ಆಭರಣಗಳು ಚಿನ್ನದವೇ ಆಗಿರುತ್ತಿದ್ದವು. ಆ ಕಾರಣದಿಂದ ಈತ ರಂಗಭೂಮಿಯ ರಾಜ ರಾಜೇಶ್ವರ ಎನ್ನಿಸಿಕೊಂಡರು. ಕಿರ್ಲೋಸ್ಕರ ಕಂಪನಿ, ಗಂಧರ್ವ ನಾಟಕಮಂಡಲಿ ಇವು ಬಾಲಗಂಧರ್ವರ ಮೂಲಕ ಮರಾಠಿ ರಂಗಭೂಮಿಯ ಸುಂದರ ಸ್ವಪ್ನಲೋಕಗಳೆನಿಸಿಕೊಂಡವು.
ಗಂಧರ್ವನಾಟಕ ಮಂಡಳಿಯ ಸಾಲದ ಹೊರೆ ಹೆಚ್ಚಾದಾಗ ಬಾಲಗಂಧರ್ವರು ವಿ. ಶಾಂತಾರಾಮರ ಅಭಿಪ್ರಾಯದ ಮೇರೆಗೆ ಪ್ರಭಾತ ಫಿಲ್ಮ್ ಕಂಪನಿಯಲ್ಲೂ ಕೆಲಸ ಮಾಡಿದರು. ಕರಾರು ಮುಗಿದ ಕೂಡಲೇ ಮತ್ತೆ ರಂಗಭೂಮಿಗೆ ಮರಳಿದರು. ಆದರೆ ಇವರ ಜೀವನ ಮೊದಲಿನಂತೆ ಸುಖಮಯವಾಗಲಿಲ್ಲ.
1955ರಲ್ಲಿ ಬಾಲಗಂಧರ್ವರಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಸಂದಿತು. ಮುಂದಿನ ದಿನಗಳಲ್ಲಿ ಇದೇ ಪ್ರಶಸ್ತಿಯು ಸಂಗೀತ ನಾಟಕ ಅಕಾಡೆಮಿ ಎಂದು ರೂಪಾಂತರ ಪಡೆದಿದೆ. 1964ರಲ್ಲಿ ಅವರಿಗೆ ಪದ್ಮಭೂಷಣ ಗೌರವ ಸಂದಿತು.
ಕೊನೆಯ ದಿನಗಳಲ್ಲಿ ಆರ್ಥಿಕ ದುಸ್ಥಿತಿಗೆ ಒಳಗಾದ ಬಾಲಗಂಧರ್ವ 1967ರ ಜುಲೈ 15ರಂದು ನಿಧನರಾದರು.
On the birth anniversary of great singer and actor Bal Gandharva
ಕಾಮೆಂಟ್‌ಗಳು