ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ


 ಗೀತಾ


ಗೀತಾ ನನ್ನ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರು. ಅವರದ್ದು ಗಾಂಭೀರ್ಯ ತುಂಬಿದ ಚೆಲುವು, ಒಲವು ಮತ್ತು ಭಾವಪೂರ್ಣತೆಗಳು ಸಮ್ಮಿಳನಗೊಂಡ ಅಪೂರ್ವ ತೇಜಸ್ಸು.

ಗೀತಾ ಕಡಾಂಬಿ ಅವರು 1962ರ ಜುಲೈ 14ರಂದು ಬೆಂಗಳೂರಿನಲ್ಲಿ ಜನಿಸಿದರು. 

ಗೀತಾ ಶಾಲೆಯಲ್ಲಿ ಓದುವಾಗಲೇ ಚಲನಚಿತ್ರಗಳಲ್ಲಿ ನಟಿಸುವ ಆಹ್ವಾನ ಬರಲಾರಂಭಿಸಿ ಹೈಸ್ಕೂಲು ಓದನ್ನು ನಿಲ್ಲಿಸಿ ಚಿತ್ರರಂಗದಲ್ಲಿ ಆಸಕ್ತಿ ವಹಿಸಿದರು. 1978ರಲ್ಲಿ ತಮಿಳು ಚಿತ್ರ ಭೈರವಿಯಲ್ಲಿ ಅವರು ರಜನೀಕಂತ್ ತಂಗಿಯಾಗಿ ಅಭಿನಯಿಸಿದರು. ಕಮಲಹಾಸನ್ ಜೊತೆ ಸಾಗರಸಂಗಮಂ ಚಿತ್ರದಲ್ಲೂ ಕಿರುಪಾತ್ರ ವಹಿಸಿದ್ದರು.  ಕನ್ನಡ, ತೆಲುಗು, ಮಲಯಾಳಂ, ತಮಿಳು ಚಿತ್ರರಂಗದ ಎಲ್ಲಾ ಪ್ರಮುಖ ನಟರೊಂದಿಗೆ ಅವರು ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದೆರಡು ಹಿಂದೀ ಚಿತ್ರಗಳೂ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1986ರಲ್ಲಿ ಗೀತಾ ಅವರು ಮಲಯಾಳಂನಲ್ಲಿ ನಟಿಸಿದ ಪಂಚಾಗ್ನಿ ಚಿತ್ರದ ಅಭಿನಯವನ್ನು ಲ್ಯಾಂಡ್‍ಮಾರ್ಕ್  ಅಭಿನಯವೆಂದು 'ದ ಹಿಂದೂ' ಪತ್ರಿಕೆ ಪ್ರಶಂಸಿಸಿತು. 

ಕನ್ನಡದಲ್ಲಿ ಗೀತಾ ರಾಜ್‍ಕುಮಾರ್, ವಿಷ್ಣುವರ್ಧನ್, ಅನಂತನಾಗ್, ಅಂಬರೀಷ್, ಶ್ರೀನಾಥ್, ಶಂಕರನಾಗ್ ಮುಂತಾದ ಎಲ್ಲ ಪ್ರಮುಖರೊಂದಿಗೆ ಉತ್ತಮ ಅಭಿನಯ ನೀಡಿದ್ದಾರೆ. 

ಧ್ರುವತಾರೆ, ದೇವತಾ ಮನುಷ್ಯ, ಅನುರಾಗ ಅರಳಿತು, ಶೃತಿ ಸೇರಿದಾಗ, ಆಕಸ್ಮಿಕ ಮುಂತಾದವು ಗೀತಾ ಅವರು ರಾಜ್‍ಕುಮಾರ್ ಅವರ ಜೊತೆ ನಟಿಸಿದ ಚಿತ್ರಗಳು. ಎರಡು ರೇಖೆಗಳು, ಮಿಥಿಲೆಯ ಸೀತೆಯರು, ಹರಕೆಯ ಕುರಿ, ನೆನಪಿನ ದೋಣಿ, ರಾಮಾಪುರದ ರಾವಣ, ಹೃದಯ ಪಲ್ಲವಿ, ಆರಾಧನೆ, ದಾದಾ, ಅರುಣರಾಗ, ಪ್ರಥಮ ಉಷಾಕಿರಣ ಮುಂತಾದ ಅನೇಕ ಚಿತ್ರಗಳಲ್ಲೂ ಅವರು ಮನೋಜ್ಞ ಅಭಿನಯ ನೀಡಿದ್ದಾರೆ.

ಅರುಣರಾಗ ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ನಟಿ ಪ್ರಶಸ್ತಿ, ಒರು ವಡಕ್ಕನ್ ವೀರಕಥಾ ಚಿತ್ರಕ್ಕೆ ಕೇರಳ ರಾಜ್ಯ ಪುರಸ್ಕಾರ, ಶೃತಿ ಸೇರಿದಾಗ. ಮತ್ತು ಆರಾಧನಂ ಚಿತ್ರಗಳಿಗೆ ಫಿಲಂಫೇರ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಗೀತಾ ಅವರಿಗೆ ಸಂದಿವೆ.

1997ರಲ್ಲಿ ಅಮೆರಿಕದಲ್ಲಿರುವ ವಾಸನ್
ಅವರನ್ನು ವಿವಾಹವಾದ ಗೀತಾ ಅವರು 1998-2002 ವರ್ಷಗಳಲ್ಲಿ ಚಿತ್ರರಂಗದಿಂದ ವಿರಾಮ ಪಡೆದು, ನಂತರ ಪುನಃ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಹಲವು ಕಿರುತೆರೆಯ ಹಲವು ಪ್ರಸಿದ್ಧ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.  ಇವುಗಳಲ್ಲಿ ಕೈ ಅಳವು ಮನಸು, ಎಂಗಿರಿಂದೋ ವಂದಾಳ್ ಮುಂತಾದ ಕೆ. ಬಾಲಚಂದರ್ ಅವರ ನಿರ್ದೇಶನದ ಧಾರಾವಾಹಿಗಳೂ ಇವೆ.  ಅವರು ಬಾಲಚಂದರ್ ಅವರ ನಿರ್ದೇಶನದಲ್ಲಿ ಎರಡು ರೇಖೆಗಳು ಅಲ್ಲದೆ ತಮಿಳಿನ ಹಲವು ಪ್ರಸಿದ್ಧ ಚಿತ್ರಗಳಲ್ಲೂ ನಟಿಸಿದ್ದರು. 

ಸುಂದರ ಕಲಾವಿದೆ ಗೀತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

First photograph by: Thippeswamy S Sir 🌷🙏🌷

On the birthday of actress Geetha 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ