ಮುಮ್ಮಡಿ
ಮುಮ್ಮಡಿ ಕೃಷ್ಣರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರಿನ ರಾಜವಂಶದ 22ನೆಯ ಅರಸರು. ಇವರ ಆಳ್ವಿಕೆಯ ಕಾಲ 1799-1868.
1831ರಲ್ಲಿ ರಾಜ್ಯದಲ್ಲಿ ತಲೆದೋರಿದ ಪ್ರಕ್ಷುಬ್ಧ ಪರಿಸ್ಥಿತಿಯ ನೆವದಿಂದ ಬ್ರಿಟಿಷರು ಸಂಸ್ಥಾನದ ಸೂತ್ರವನ್ನು ತಾವೇ ವಹಿಸಿಕೊಂಡು ಕಮಿಷನರುಗಳ ಮೂಲಕ 1868ರವರೆಗೂ, ಅಂದರೆ ಇವರ ಮರಣದವರೆಗೂ ಆಡಳಿತ ನಡೆಸುತ್ತಿದ್ದರೂ ಹೆಸರಿಗೆ ಮಾತ್ರ ಇವರೇ ಅರಸರಾಗಿದ್ದರು. ಮೈಸೂರಿನ ಚರಿತ್ರೆಯಲ್ಲಿ ಇವರ ಕಾಲದಲ್ಲಿ ಉಂಟಾದ ವಿಷಮಪರಿಸ್ಥಿತಿ ಮತ್ತು ಸಾಹಿತ್ಯನಿರ್ಮಾಣ ಇವೆರಡೂ ಗಮನಾರ್ಹವಾದವು. ಕೃಷ್ಣರಾಜರು ಸ್ವತ: ಕವಿ. ಅಲ್ಲದೆ ಅನೇಕ ಕವಿಗಳಿಗೆ ಆಶ್ರಯ ಕೊಟ್ಟು ಕವಿಜನ ಕಾಮಧೇನು, ಕನ್ನಡದ ಭೋಜ ಎಂದೆಲ್ಲ ಪ್ರಸಿದ್ಧರಾಗಿದ್ದರು. ಇವರ ಅಂಕಿತದಲ್ಲಿರುವ ಕೃತಿಗಳ ಸಂಖ್ಯೆ ಐವತ್ತೊಂಬತ್ತು. ಇವರ ಘನತೆ, ಗಾಂಭೀರ್ಯ, ರಸಿಕತೆ, ಕಲಾಪ್ರೇಮ ಅನುಪಮವಾದವೆಂದು ಹೇಳಲಾಗಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1794ರ ಜುಲೈ 14ರಂದು ಶ್ರೀರಂಗಪಟ್ಟಣದಲ್ಲಿ ಜನಿಸಿದರು ಎಂದು ನಂಬಲಾಗಿದೆ.
ಹೈದರ್ ಆಲಿಯ ಮತ್ತು ಟಿಪ್ಪುವಿನ ಕಾಲದಲ್ಲಿ ಅಧಿಕಾರ ಕಳೆದುಕೊಂಡಿದ್ದ ರಾಜ ಮನೆತನ 1799ರಲ್ಲಿ, ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣ ಹೊಂದಿದಾಗ, ಮತ್ತೆ ಅಧಿಕಾರ ಪಡೆಯಿತು. ದುರಾಡಳಿತ, ಎಡೆಬಿಡದ ಯುದ್ಧಗಳು, ಕ್ಷಾಮದ ಭಯ-ಇವುಗಳಿಂದ ಸಂಸ್ಥಾನ ನರಳುತ್ತಿದ್ದಾಗ 1799ರಲ್ಲಿ ಕೃಷ್ಣರಾಜರು ತಮ್ಮ ಆರನೆಯ ವಯಸ್ಸಿನಲ್ಲಿ ಪಟ್ಟಕ್ಕೆ ಬಂದರು.
ಇವರು ಬಾಲಕರಾಗಿದ್ದುದರಿಂದ ದಿವಾನ್ ಪೂರ್ಣಯ್ಯ ಮತ್ತು ರಾಣಿ ಲಕ್ಷಮ್ಮಣ್ಣಿ ಆಡಳಿತ ಸೂತ್ರಗಳನ್ನು ವಹಿಸಿಕೊಳ್ಳಬೇಕಾಯಿತು. ರಾಣಿ ಲಕ್ಷಮ್ಮಣ್ಣಿ ಬಹಳ ಚತುರಮತಿಯುಳ್ಳ ಸ್ತ್ರೀ. ಟಿಪ್ಪುವಿನ ಕೈಯಿಂದ ರಾಜ್ಯವನ್ನು ಹಿಂದಕ್ಕೆ ಗಳಿಸಲು ಅವರು ಕಂಪನಿ ಸರ್ಕಾರದೊಂದಿಗೆ ನಡೆಸಿದ ವ್ಯವಹಾರ ಉತ್ತಮ ರಾಜಕಾರಣದ ನಿದರ್ಶನ. ಇದರ ಜೊತೆಗೆ ಆಡಳಿತನಿಪುಣನೂ, ಅನುಭವಿಯೂ ಆದ ಪೂರ್ಣಯ್ಯ ದಿವಾನನಾದುದು ಆಡಳಿತ ಸುಸೂತ್ರವಾಗಲು ಕಾರಣವಾಯಿತು.
ಪೂರ್ಣಯ್ಯ ಕೃಷ್ಣರಾಜರಿಗೆ ರಾಜಯೋಗ್ಯವಾದ ಸಕಲ ಶಿಕ್ಷಣವನ್ನೂ ನೀಡಿದ್ದ. ಕನ್ನಡ, ಸಂಸ್ಕೃತ, ಮರಾಠಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಕೃಷ್ಣರಾಜರಿಗೆ ಪಾಂಡಿತ್ಯವಿತ್ತು. 1812ರಲ್ಲಿ ಪೂರ್ಣಯ್ಯ ಮೃತನಾದಾಗ 18 ವಯಸ್ಸಿನ ಕೃಷ್ಣರಾಜರು ಆಡಳಿತವನ್ನು ವಹಿಸಿಕೊಂಡರು. ಪೂರ್ಣಯ್ಯನ ದಕ್ಷ ಆಡಳಿತದಿಂದ ರಾಜ್ಯ ಸುಧಾರಿಸತೊಡಗಿದ್ದರೂ, ಇನ್ನೂ ಪರಿಸ್ಥಿತಿ ಪೂರ್ಣ ಹತೋಟಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿ ಬ್ರಿಟಿಷರು ಪಿಂಡಾರೆ ಮತ್ತು ಮರಾಠರೊಂದಿಗೆ ನಡೆಸುತ್ತಿದ್ದ ಯುದ್ಧಗಳಲ್ಲಿ ಮೈಸೂರಿನ ಸೈನ್ಯ ಪಾಲುಗೊಳ್ಳಬೇಕಾಯಿತು. 1816-17 ಮತ್ತು 1823-24ರಲ್ಲಿ ದೇಶದಲ್ಲಿ ಭೀಕರ ಕ್ಷಾಮ ತಲೆದೋರಿತು. ತ್ವರಿತವಾಗಿ ಪರಿಹಾರ ಒದಗಿಸಬೇಕಾಯಿತು. ಜನತೆಯ ಬಗ್ಗೆ ಅಪಾರ ಅನುಕಂಪವಿದ್ದ ಕೃಷ್ಣರಾಜರು ಪರಿಹಾರಕಾರ್ಯಗಳಿಗೆ ಅಧಿಕ ಹಣ ಖರ್ಚು ಮಾಡಿದರು. ಇದರಿಂದಾಗಿ ದೇಶದ ಆರ್ಥಿಕಸ್ಥಿತಿ ಹದಗೆಟ್ಟಿತು.
ಇದೇ ಸಮಯದಲ್ಲಿ 1830ರಲ್ಲಿ ರಾಜ್ಯದ ಹಲವು ಕಡೆ ದಂಗೆಗಳುಂಟಾದುವು. ಇವುಗಳಲ್ಲಿ ನಗರ ಪ್ರಾಂತ್ಯದ ಗಲಭೆ ಮುಖ್ಯವಾದುದು. ಈ ಭಾಗದಿಂದ ರಾಜ್ಯಕ್ಕೆ ಬರಬೇಕಾದ ಕಂದಾಯ ಸರಿಯಾಗಿ ಬಂದಿರಲಿಲ್ಲ. ಹದಿಮೂರು ಲಕ್ಷ ರೂಪಾಯಿಗಳವರೆಗೆ ಬಾಕಿ ಏರಿತ್ತು. ಅಲ್ಲಿಯ ಪೌಜುದಾರ ಏಳೂವರೆ ಲಕ್ಷ ರೂಪಾಯಿಗಳ ಕಂದಾಯ ಮಾಫಿಗೆ ಶಿಫಾರಸು ಮಾಡಿದಾಗ ಅರಸರು ಅದನ್ನು ಒಪ್ಪಲಿಲ್ಲ. ಅಲ್ಲಿಗೆ ಹೊಸ ಪೌಜುದಾರನನ್ನು ಕಳಿಸಿ ವಿವರಗಳನ್ನು ಪಡೆದಾಗ ಅಲ್ಲಿ ನಡೆದಿದ್ದ ಮೋಸ ಬೆಳಕಿಗೆ ಬಂತು. ಆದ್ದರಿಂದ ಮೊದಲಿನ ಕಂದಾಯವನ್ನೇ ಖಾಯಂಗೊಳಿಸಲಾಯಿತು. ಇದರಿಂದ ಅಸಮಾಧಾನಗೊಂಡ ಸಂಬಂಧಪಟ್ಟವರು ಏನೂ ಅರಿಯದ ಜನತೆಯನ್ನು ರಾಜ್ಯದ ವಿರುದ್ಧ ಎತ್ತಿ ಕಟ್ಟಿದರು. ಇದೇ ಸಮಯದಲ್ಲಿ ಬಿದನೂರಿನ ಅರಸು ಮನೆತನದ ಹಕ್ಕುದಾರನೆಂದು ನಟಿಸುತ್ತಿದ್ದ ಬೂದಿಬಸವಯ್ಯ ದಂಗೆಯ ನಾಯಕನಾದ. ಗಲಭೆಯನ್ನು ಅಡಗಿಸಲು ಮೈಸೂರು ಸೈನ್ಯಕ್ಕೆ ಸಾಧ್ಯವಾಗದೆ ಬ್ರಿಟಿಷ್ ಸೈನ್ಯದ ಸಹಾಯ ಪಡೆದು ದಂಗೆಗಳನ್ನು ಅಡಗಿಸಲಾಯಿತು. ಮೈಸೂರಿನಲ್ಲಿದ್ದ ಬ್ರಿಟಿಷ್ ರೆಸಿಡೆಂಟ್ ಅರಸರ ವಿರುದ್ಧ ವರದಿ ಕಳಿಸಿ, ಅವರು ರಾಜ್ಯದ ಹಣವನ್ನು ಪೋಲು ಮಾಡುತ್ತಿದ್ದಾರೆಂದೂ ಆಡಳಿತ ಹದಗೆಡಲು ಅವರೇ ಕಾರಣರೆಂದೂ ಆಪಾದಿಸಿದ. ಈ ವರದಿಯ ಸತ್ಯಾಸತ್ಯತೆಗಳನ್ನು ಪರೀಕ್ಷಿಸುವ ಮೊದಲೇ ಗವರ್ನರ್-ಜನರಲ್ ಬೆಂಟಿಂಕ್ ಮೈಸೂರು ಸಂಸ್ಥಾನದ ಆಡಳಿತವನ್ನು ಕಂಪನಿ ವಹಿಸಿಕೊಳ್ಳತಕ್ಕದ್ದೆಂದು ಆಜ್ಞೆ ಮಾಡಿದ.
ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಬ್ರಿಟಿಷ್ ಸರ್ಕಾರದೊಡನೆ 37 ವರ್ಷಕಾಲ ಕೃಷ್ಣರಾಜರು ಪತ್ರ ವ್ಯವಹಾರ ನಡೆಸುತ್ತ ಹೋರಾಡಿದರು. ಬ್ರಿಟನ್ನಿನಲ್ಲಿ ಉದಾರವಾದ ಬೆಳೆಯುತ್ತಿದ್ದ ಆ ಕಾಲದಲ್ಲಿ ಅಲ್ಲಿಯ ಜನತೆಯ ಮತ್ತು ಪತ್ರಿಕೆಗಳ ಅಭಿಪ್ರಾಯ ಮೈಸೂರರಸರಿಗಾದ ಈ ಅನ್ಯಾಯವನ್ನು ಸರಿಪಡಿಸುವಂತೆ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ತಂದಿತು. ಪ್ರಸಿದ್ಧ ಬ್ರಿಟಿಷ್ ರಾಜಕಾರಣಿಗಳಾದ ಬೆಲ್, ಕ್ಯಾಂಬೆಲ್, ಮಾರ್ಲೆ ಇವರ ಪ್ರಯತ್ನದಿಂದಾಗಿ 1867ರಲ್ಲಿ ಬ್ರಿಟಿಷ್ ಸರ್ಕಾರ ಮಕ್ಕಳಿಲ್ಲದ ಕೃಷ್ಣರಾಜರು ದತ್ತು ಪಡೆಯಬಹುದೆಂದೂ ಆ ದತ್ತುಪುತ್ರ ಪ್ರಾಪ್ತವಯಸ್ಕನಾದಮೇಲೆ ಸಿಂಹಾಸನವನ್ನು ಅವರಿಗೆ ವಹಿಸಿಕೊಡುವುದಾಗಿಯೂ ಒಪ್ಪಿತು.
1867ರ ಜುಲೈ 18ರಂದು ರಾಜಮನೆತನದವರೇ ಆದ, 17 ವರ್ಷದ ಚಾಮರಾಜ ಒಡೆಯರನ್ನು ದತ್ತು ತೆಗೆದುಕೊಳ್ಳಲಾಯಿತು. ಇದಾದ ಒಂದೇ ವರ್ಷದಲ್ಲಿ 1868ರ ಜೂನ್ 27ರಂದು ಮುಮ್ಮಡಿ ಕೃಷ್ಣರಾಜರು ದೈವಾಧೀನರಾದರು.
ಮುಮ್ಮಡಿ ಕೃಷ್ಣರಾಜರು ಅಧಿಕಾರವನ್ನು ಕಳೆದುಕೊಂಡರೂ ಮನಸ್ವಾಸ್ಥ್ಯವನ್ನು ಕಳೆದುಕೊಳ್ಳಲಿಲ್ಲ. ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅಪಾರವಾದ ಒಲವನ್ನು ಹೃದಯದಲ್ಲಿ ತುಂಬಿಕೊಂಡಿದ್ದ ಇವರು ಕೈಬಿಟ್ಟು ಹೋಗಿದ್ದ ಅಧಿಕಾರವನ್ನು ಹಿಂದಕ್ಕೆ ಪಡೆಯಲು ಕ್ರಮಬದ್ಧ ವ್ಯವಹಾರದಲ್ಲಿ ತೊಡಗಿದರಾದರೂ ಅಧಿಕಾರದ ಆಸೆಯ ಕನಸಿನಲ್ಲಿ ಕಾಲ ಕಳೆಯಲಿಲ್ಲ. ತಮ್ಮ ಬಿಡುವಿನ ವೇಳೆಯನ್ನೆಲ್ಲ ಸಾಹಿತ್ಯಾಧ್ಯಯನಕ್ಕೆ ಮೀಸಲಾಗಿರಿಸಿದರು.
ಮುಮ್ಮಡಿ ಕೃಷ್ಣರಾಜರ ಆಶ್ರಯದಲ್ಲಿ ಪ್ರಸಿದ್ಧರಾದ ವಿದ್ವಾಂಸರು, ಕವಿಗಳು, ಶಿಲ್ಪಿಗಳು ಮತ್ತು ಸಂಗೀತಗಾರರು ಕಲಾಸೃಷ್ಟಿಯಲ್ಲಿ ನಿರತರಾಗಿದ್ದರು. ವೀಣೆ ವೆಂಕಟಸುಬ್ಬಯ್ಯ, ಕುಣಿಗಲ್ ರಾಮಶಾಸ್ತ್ರಿ, ಸೋಸಲೆ ಗರಳಪುರಿಶಾಸ್ತ್ರಿ, ಅಳಿಯ ಲಿಂಗರಾಜ, ಕೆಂಪುನಾರಾಯಣ, ದೇವಲಾಪುರದ ನಂಜುಂಡ, ಬಸವಪ್ಪಶಾಸ್ತ್ರಿ ಮೊದಲಾದ ಕವಿ, ಕಲಾವಿದರನ್ನಿಲ್ಲಿ ಹೆಸರಿಸಬಹುದು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಇಂಥ ಕವಿಗಳಿಗೆ, ಕಲಾವಿದರಿಗೆ ಆಶ್ರಯ ನೀಡಿದುದಷ್ಟೇ ಅಲ್ಲದೆ ಸ್ವತ: ಕನ್ನಡದಲ್ಲಿ ಹೇರಳವಾಗಿ ಕೃತಿ ರಚನೆ ಮಾಡಿದ್ದಾರೆ. ಸಂಸ್ಕೃತದಲ್ಲಿ ಕೃಷ್ಣಕಥಾ ಪುಷ್ಪಮಂಜರಿ, ರಾಮಾಯಣ ಕಥಾ ಪುಷ್ಪಮಂಜರಿ, ಚಾಮುಂಡಿ ಮಂಗಳ ಮಾಲಿಕಾ ಎಂಬ ಕೃತಿಗಳನ್ನು ರಚಿಸಿದ್ದಾರೆ. ಇವರ ಕನ್ನಡ ಕೃತಿ ರಚನೆಯಂತೂ ಯಾರನ್ನಾದರೂ ದಂಗುಬಡಿಸುವಂತಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಸುಮಾರು ಐವತ್ತೊಂಬತ್ತು ಗ್ರಂಥಗಳು ಇವರ ಹೆಸರಿನಲ್ಲಿದ್ದು ಇವರ ವಿದ್ವತ್ತು, ಪ್ರತಿಭೆಗಳಿಗೆ ಸಾಕ್ಷಿಯಾಗಿವೆ.
ಸಂಸ್ಕೃತ ಸಾಹಿತ್ಯದ ಪ್ರಮುಖ ಗ್ರಂಥಗಳನ್ನು ಕನ್ನಡ ಜನಕ್ಕೆ ಪರಿಚಯ ಮಾಡಿಕೊಡಬೇಕೆಂದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಸೆಯಾಗಿದ್ದಂತೆ ಕಂಡುಬರುತ್ತದೆ. ಶೃಂಗಾರಪ್ರಧಾನವಾದ ರತ್ನಾವಳಿ ನಾಟಕದ ಕತೆಯನ್ನು ವಿಸ್ತಾರವಾಗಿ ಸುಲಲಿತವಾದ ಗದ್ಯದಲ್ಲಿ ಬರೆದು ವತ್ಸರಾಜಕಥೆ ಎಂಬ ಹೆಸರಿಟ್ಟಿದ್ದಾರೆ. ಯೌಗಂಧರಾಯಣ ಹೂಡಿದ ಉಪಾಯಗಳಿಂದ ಸಿಂಹಳದ ರಾಜಕುಮಾರಿ ರತ್ನಾವಳಿಯನ್ನು ಕೌಶಾಂಬಿಯ ವತ್ಸರಾಜ ಮದುವೆಯಾದ ಪ್ರಸಂಗವೇ ಇದರ ಕತೆ. ಸೌಗಂಧಿಕಾಪರಿಣಯವನ್ನು ಭಾಮಿನಿ ಷಟ್ಪದಿಯಲ್ಲಿಯೂ ಗದ್ಯದಲ್ಲಿಯೂ ಬರೆದಿದ್ದಾರೆ. ದುರ್ವಾಸ ಮುನಿಯ ಶಾಪದಿಂದ ಇಂದ್ರ ರತ್ನಪುರಿಯ ರಾಜನಾದ ಸುಚರಿತ್ರನಿಗೆ ಗುಣವತಿಯ ಗರ್ಭದಲ್ಲಿ ಸುಗಂಧರಾಯನೆಂಬ ಮಗನಾಗಿ ಹುಟ್ಟಿ ಸೌಗಂಧಿಕಾದೇವಿಯಾಗಿ ಹುಟ್ಟಿದ್ದ ಶಚೀದೇವಿಯನ್ನು ಮುದುವೆಯಾದುದೇ ಈ ಕೃತಿಯ ಕಥಾವಸ್ತು. ಕೃಷ್ಣಕಥಾಸಂಗ್ರಹದಲ್ಲಿ ಕೃಷ್ಣನ ಅನೇಕ ಅವತಾರಗಳು ವರ್ಣಿತವಾಗಿವೆ. ರಾಮಾವತಾರದ ಕಥೆ 77 ಅಧ್ಯಾಯಗಳಲ್ಲಿ ವಿಸ್ತಾರವಾಗಿ ವರ್ಣಿತವಾಗಿದೆ. ಬೌದ್ಧಾವತಾರ, ಕಪಿಲಾವತಾರಗಳೂ ದತ್ತಾತ್ರೇಯ ವೃತ್ತಾಂತವೂ ವೆಂಕಟೇಶ ಮಹಾತ್ಮ್ಯೆ, ಶ್ರೀನಿವಾಸ ಕೊರವಂಜಿಯ ವೇಷ ಧರಿಸಿದ ಪ್ರಸಂಗಗಳೂ ಇಲ್ಲಿ ಸೇರಿವೆ.
ಸಂಸ್ಕೃತ ಭಾಷೆಯಲ್ಲಿದ್ದು ಸಾಮಾನ್ಯ ಜನರಿಗೆ ನಿಲುಕದಿದ್ದ ಭಾರತ, ಭಾಗವತಗಳನ್ನು ಇವರು ತಿಳಿಯಾದ ಕನ್ನಡದಲ್ಲಿ ವಿಸ್ತಾರವಾಗಿ ಗದ್ಯರೂಪದಲ್ಲಿ ಬರೆದಿದ್ದಾರೆ. ಕಾಳಿದಾಸನ ಶಾಕುಂತಲ, ವಿಕ್ರಮೋರ್ವಶೀಯ, ಮಾಳವಿಕಾಗ್ನಿಮಿತ್ರ ನಾಟಕಗಳನ್ನು ಕನ್ನಡ ಗದ್ಯರೂಪಕ್ಕೆ ತಂದಿದ್ದಾರೆ. ಪಂಚತಂತ್ರದ ನೀತಿಕಥೆಗಳನ್ನು ಕನ್ನಡದಲ್ಲಿ 'ಬಾಲಹಿತಾರ್ಥ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳುವ ಕಲೆ ಕೃಷ್ಣರಾಜರಿಗೆ ಸಿದ್ಧಿಸಿದೆ.
ಪದ್ಮಪುರಾಣಾಂತರ್ಗತವಾದ ಅರ್ಕಪುಷ್ಕರಿಣಿ ಮಾಹಾತ್ಮ್ಯವೂ ಅಖಂಡ ಕಾವೇರಿ ಮಹಾತ್ಮ್ಯವೂ ಸಾಮಾನ್ಯ ಜನರಿಗಾಗಿ ಬರೆದ ಕೃತಿಗಳು. ಅಖಂಡ ಕಾವೇರಿ ಮಾಹಾತ್ಮ್ಯ ಟೀಕು ಸ್ಕಂದಪುರಾಣದ ಆಧಾರದ ಮೇಲೆ ರಚಿತವಾದುದು. ಇದರಲ್ಲಿ ಸಂಸ್ಕೃತ ಶ್ಲೋಕಗಳಿಗೆ ವಿವರಣಾತ್ಮಕ ಟೀಕೆಯಿದೆ.
ಶ್ರೀತತ್ತ್ವನಿಧಿ ಮುಮ್ಮಡಿಯವರಿಂದ ರಚಿತವಾದ ಒಂದು ವಿಶಿಷ್ಟ ಗ್ರಂಥ. ಅದರಲ್ಲಿ ಶಕ್ತಿನಿಧಿ, ವಿಷ್ಣುನಿಧಿ, ಶಿವನಿಧಿ, ಬ್ರಹ್ಮನಿಧಿ, ಗ್ರಹನಿಧಿ, ವೈಷ್ಣವನಿದಿ, ಶೈವನಿಧಿ, ಆಗಮನಿಧಿ ಮತ್ತು ಕೌತುಕನಿಧಿ ಎಂಬ ಒಂಬತ್ತು ನಿಧಿಗಳಿವೆ. ಅವುಗಳಲ್ಲಿರುವ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುವಂತೆ ಚಿತ್ರಗಳನ್ನು ಕೊಡಲಾಗಿದೆ. ಈಗ ಉಪಲಬ್ಧವಿರುವ ಹಸ್ತಪ್ರತಿಯಲ್ಲಿ ಸುಮಾರು ನಾಲ್ಕು ಸಾವಿರ ಚಿತ್ರಗಳಿವೆ. ಈ ಚಿತ್ರಗಳ ಕಲಾಕೌಶಲ ಅದ್ಭುತವಾದುದು. ಕೊನೆಯದಾದ ಕೌತುಕ ನಿಧಿಯಲ್ಲಿ ಪುರಾತನ ಕಾಲದಿಂದ ರೂಢಿಯಲ್ಲಿ ಬಂದಿರುವ ಹಸ್ತಿಬಂದಾಧಿ ಕ್ರೀಡೆಗಳ ವಿವರಣೆ, ಚತುರಂಗಾದಿ ಆಟಗಳ ನಿರೂಪಣೆ ವಿವರವಾಗಿ ಬಂದಿವೆ. ಇದೊಂದು ಸಣ್ಣ ವಿಶ್ವಕೋಶ. ಸಂಖ್ಯಾರತ್ನಮಾಲಾ, ತ್ರೇತಾಗ್ನಿ, ತ್ರಿಮೂರ್ತಿಗಳು, ಗುಣತ್ರಯ, ಪಂಚಮಹಾಪಾತಕಗಳು, ಪಂಚಪ್ರಾಣ, ಪಂಚೇಂದ್ರಿಯಗಳು ಮುಂತಾದವುಗಳ ಸಾರಸಂಗ್ರಹವಿಲ್ಲಿದೆ.
ಸಂಸ್ಕೃತದ ಪರಿಚಯವಿಲ್ಲದ ತಮ್ಮ ಪ್ರಜೆಗಳು ಅರಿಯಲಿ ಎಂದು ಕಾಳಿದಾಸನ ಶಾಕುಂತಲ ನಾಟಕವನ್ನು ಗದ್ಯದಲ್ಲಿ ಇವರು ಬರೆದಿದುದಾಗಿ ತಿಳಿದುಬರುತ್ತದೆ. ಮೂಲ ನಾಟಕದೊಡನೆ ಇದನ್ನು ಹೋಲಿಸಿ ನೋಡಿದರೆ ಕಾಳಿದಾಸನ ಒಂದೊಂದು ಮಾತಿಗೂ ತಮ್ಮದೊಂದು ವಿವರಣೆಯ ಮಾತು ಸೇರಿಸಿ ಮೂಲವನ್ನು ಹಿಗ್ಗಿಸಿರುವುದು ಕಂಡುಬರುತ್ತದೆ. ಮೂಲ ಒಂದು ಪಾಲು ನವೀನ ಟೀಕೆ ಮೂರು ಪಾಲು ಆಗಿದೆ. ಇವರ ಟೀಕೆಗಳಲ್ಲಿ ಒಬ್ಬ ಸಮರ್ಥ ಉಪಾಧ್ಯಾಯನ ಮನೋಧರ್ಮ ಎದ್ದು ಕಾಣುತ್ತದೆ.
ರಾಜ್ಯಾಧಿಕಾರವನ್ನು ಕಳೆದುಕೊಂಡ ಮುಮ್ಮಡಿ ಕೃಷ್ಣರಾಜರು ಆಳವಾದ ಅಧ್ಯಯನದಲ್ಲಿ ತೊಡಗಿದರು. 'ಮುುಮ್ಮಡಿ ಶ್ರೀಕೃಷ್ಣಕಂಠೀರವರು ಶ್ರೀಮದ್ರಾಮಯಣ, ವಿಷ್ಣುಪುರಾಣ, ಪಾದ್ಮ, ಕೂರ್ಮ, ಆಧ್ಯಾತ್ಮ ರಾಮಾಯಣ, ಶಿವ, ವಿಷ್ಣು ಧರ್ಮೋತ್ತರ, ಜೈಮಿನ್ಯಾದಿ ಗ್ರಂಥಗಳಲ್ಲಿರುವ ಅನೇಕ ರಾಮ ಕಥೆಗಳ ಪರಿಶೋಧನೆಯಂ ಮಾಡಿ' ಎಂಬ ಮಾತುಗಳು ಇವರ ಸಂಶೋಧನಾ ದೃಷ್ಟಿಯ ಅಧ್ಯಯನ ನಿಷ್ಟೆಯ ಪ್ರತೀಕವಾಗಿವೆ. ಅಧ್ಯಯನ ಹೆಚ್ಚಿದಂತೆಲ್ಲ ಇವರ ಹೃದಯ, ಮನಸ್ಸುಗಳು ಲೌಕಿಕ ಕ್ರಿಯೆಗಳಿಂದ ದೂರವಾಗಿ ಪಾರಮಾರ್ಥಿಕದತ್ತ ತುಯ್ಯುತ್ತಿರುವುದನ್ನು 'ಕೆಂದುಟಿಯಂ ಪೆರ್ಮೊಲೆಯಂ ಚಂದದ ಮುಖವನ್ನು ನೋಡಿ ಸುಂದರಿಯರ ನಾಂ ಪೊಂದಿ ಮದದಿಂದ ಮರೆತೆನು ಚಂದಿರಧರ ನಿನ್ನ ಪದವ' ಎಂಬ ಇವರ ಮಾತುಗಳಲ್ಲಿ ಕಾಣಬಹುದು.
ಮುಮ್ಮಡಿ ಕೃಷ್ಣರಾಜರು ಕನ್ನಡದಲ್ಲೊಂದು ಸಂಧಿಕಾಲವನ್ನು ಪ್ರತಿನಿಧಿಸುತ್ತಾರೆ. ಇವರ ಕಾಲದಲ್ಲಿ ರಚನೆಗೊಂಡ ವಾಙ್ಮಯ ರಾಶಿಯಲ್ಲಿ ಹಳೆಯದು ಬೇಕಾದಷ್ಟಿದೆ. ಅದರೆ, ಹೊಸದರ ಬೀಜಗಳೂ ಅದರಲ್ಲಿ ಅಡಗಿವೆ ಎಂಬುದು ಪ್ರಮುಖವಾದ ಸಂಗತಿ. ಇಪ್ಪತ್ತನೆಯ ಶತಮಾನದ ಪ್ರಾರಂಭದ ಕಾಲ ಕನ್ನಡ ಸಾಹಿತ್ಯದ ನವೋದಯ ಕಾಲ. ಅದರ ಹಿನ್ನಲೆ, ಹತ್ತೊಂಬತ್ತನೆಯ ಶತಮಾನದಲ್ಲಿ ಮುಮ್ಮಡಿ ಕೃಷ್ಣರಾಜರ ಆಳ್ವಿಕೆಯ ದಿನಗಳಲ್ಲಿ ರೂಪಗೊಂಡಿತೆಂದು ಹೇಳಬೇಕು.
ಕೃಷ್ಣರಾಜರ ಕಾಲದಲ್ಲಿದ್ದ ಇಬ್ಬರು ಪ್ರಮುಖ ಗದ್ಯ ಕವಿಗಳೆಂದರೆ ದೇವಚಂದ್ರ ಮತ್ತು ಕೆಂಪುನಾರಾಯಣ. ದೇವಚಂದ್ರನ ರಾಮಕಥಾವತಾರ ಜೈನ ಸಂಪ್ರದಾಯದ ರಾಮಕಥೆಯಾಗಿದೆ. ಆತನ ಇನ್ನೊಂದು ಕೃತಿಯಾದ ರಾಜಾವಳೀ ಕಥೆ ಸಾಹಿತ್ಯ ದೃಷ್ಟಿಯಿಂದ ಮುಖ್ಯವಾದುದು. ಈ ಗದ್ಯ ಕೃತಿಯಲ್ಲಿ ಜೈನಮತಕ್ಕೆ ಸಂಬಂಧಿಸಿದ ಕಥೆಗಳು ಅನೇಕ ರಾಜರ ಚರಿತ್ರೆಗಳು ಮೈಸೂರು ಒಡೆಯರ ವಂಶಾವಳಿಯಲ್ಲೂ ಇವೆ. ಆಧುನಿಕ ಗದ್ಯಕಥಾಶೈಲಿಯನ್ನು ನಿರ್ಮಾಣ ಮಾಡಿದವನೆಂದೂ ಪ್ರಸಿದ್ಧನಾಗಿರುವ ಕೆಂಪುನಾರಾಯಣನ ಕೃತಿ ಮುದ್ರಾಮಂಜೂಷ. ಇದು ಮತ್ತು ಕೃಷ್ಣ ರಾಜರ ಕೆಲವು ಕೃತಿಗಳು ಇಂದಿನ ಗದ್ಯಕ್ಕೆ ಬುನಾದಿ ಹಾಕಿದಂಥವು. ರಾಜಾಶ್ರಯದಲ್ಲಿದ್ದು ಅನೇಕ ಕೃತಿಗಳನ್ನು ರಚಿಸಿದ ಖ್ಯಾತಿಗೆ ಪಾತ್ರನಾದ ಇನ್ನೊಬ್ಬನೆಂದರೆ ಅಳಿಯ ಲಿಂಗರಾಜ.
ಹೀಗೆ ಮುಮ್ಮಡಿ ಕೃಷ್ಣರಾಜರ ಕಾಲ ಚರಿತ್ರೆಯ ದೃಷ್ಟಿಯಿಂದಲೂ ಸಾಹಿತ್ಯಾದಿ ಸಾಂಸ್ಕೃತಿಕ ದೃಷ್ಟಿಯಿಂದಲೂ ಮಹತ್ತ್ವಪೂರ್ಣವಾಗಿದೆ.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
On the birth anniversary of Krishna Raja Wadiyar III, Mysore
Mummadi Krishnaraja Wadiyar
#ಮುಮ್ಮಡಿ
ತುಂಬಾ ಉತ್ತಮವಾದ ಮಾಹಿತಿ ಇದೆ ಸರ್, ಧನ್ಯವಾದಗಳು
ಪ್ರತ್ಯುತ್ತರಅಳಿಸಿ