ಕೋಮಲ್
ಕೋಮಲ್
ಕೋಮಲ್ ಕುಮಾರ್ ಕನ್ನಡ ಚಿತ್ರರಂಗ. ಪ್ರತಿಭಾವಂತ ಕಲಾವಿದ.
ಕೋಮಲ್ ಕುಮಾರ್ 1973ರ ಜುಲೈ 4ರಂದು ಜನಿಸಿದರು. ಇವರು ನಟ ಜಗ್ಗೇಶರ ತಮ್ಮ. ಇವರಿಬ್ಬರೂ ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರೆಂದು ಕನ್ನಡ ಚಿತ್ರರಂಗದಲ್ಲಿ ಸಾಬೀತು ಪಡಿಸಿದ್ದಾರೆ.
ಕೋಮಲ್ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ದುಡಿಯುತ್ತಿದ್ದಾರೆ. ಚಿತ್ರರಂಗದಲ್ಲಿ ತಮ್ಮ ನಕ್ಷೆಯನ್ನು ತಾವೇ ಬಿಡಿಸಿಕೊಂಡು ನಡೆಯುತ್ತಿರುವ ಧೀಮಂತನೀತ. ಪ್ರಾರಂಭದಲ್ಲಿ ಕೆಲವೊಂದು ಪಾತ್ರಗಳಲ್ಲಿ ನಟಿಸಿದ್ದು, ವಿತರಕನಾಗಿ ಕೆಲಸ ಮಾಡಿದ್ದು ಇವೆಲ್ಲಾ ಈತನನ್ನು ಹಲವಾರು ತಪ್ಪಿದ ದಾರಿಗಳಲ್ಲಿ ಕೊಂಡೊಯ್ದಿತ್ತು. ಚಿತ್ರರಂಗದಲ್ಲಿ ಹಣಕಾಸಿನ ನಷ್ಟ ಅಂದ್ರೆ ಅದೊಂದು ಪ್ರಪಾತ ಎಂಬುದು ಅಲ್ಲಿಯ ಜನರಿಗೆ ಮಾತ್ರ ಅರ್ಥವಾಗುವ ವಿಚಾರ. ಹೀಗೆ ಕೋಮಲ್ ಈ ಪ್ರಪಾತಗಳಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಸಾಫ್ಟ್ ವೇರ್ ಉದ್ಯೋಗದಲ್ಲಿರುವ ಅವರ ಪತ್ನಿ, ಪುರಾಣದಲ್ಲಿ ಸಾವಿತ್ರಿ ಸತ್ಯವಾನನ್ನು ಸಲಹಿದಂತೆ ಈತನನ್ನು ಸಾಲ ವಿಮುಕ್ತಿ ಮಾಡಿದ್ದರಿಂದ ಇವರು ಜೀವನದ ಪ್ರಮುಖ ವಾಹಿನಿಗೆ ಬಂದರು. ಹಾಗಾಗಿ ಕೋಮಲ್ ತಮಗೆ ಹೆಂಡತಿ ಒಬ್ಬರೇ ಇದ್ದರೂ ಹೆಂಡತಿ ಸಂತತಿ ಸಾವಿರವಾಗಲಿ ಎಂದು ಹೇಳುತ್ತಾ ತಮ್ಮ ಪತ್ನಿಯ ಬಗ್ಗೆ ಕೋಮಲ ಭಾವನೆಯಲ್ಲಿ ಕೃತಜ್ಞತೆಯ ಮಾತಾಡುತ್ತಾರೆ. ಅಂದ ಹಾಗೆ ಕೋಮಲ್ ಪ್ರಖ್ಯಾತನಾಗಿದ್ದು ಕೂಡಾ ‘ಸಾವಿತ್ರಿ’ಯಿಂದ. ಅಂದರೆ, ಅವರು ತಿಪ್ಪೇಗೌಡ ಪಾತ್ರದಲ್ಲಿ ಮಿಂಚಿದ ‘ಸತ್ಯವಾನ್ ಸಾವಿತ್ರಿ’ ಚಿತ್ರದಿಂದ.
ಕೋಮಲ್ ಹಾಗೆ ನೋಡಿದರೆ ಚಿತ್ರರಂಗಕ್ಕೆ ಬಂದು ಕಷ್ಟಪಡುವ ದೆಸೆಯಿರಲಿಲ್ಲ. ಅವರು ಕಾನೂನು ಪದವಿಯನ್ನು ಉನ್ನತ ದರ್ಜೆಯಲ್ಲಿ ಪಾಸುಮಾಡಿದಾತ. ತಮ್ಮನ ಬಗ್ಗೆ ಹಮ್ಮೆಯಿಂದ ಹೇಳುವ ಜಗ್ಗೇಶ್ ಹೇಳುತ್ತಾರೆ, “ಕೋಮಲ್ ನಮ್ಮ ಮನೆಯಲ್ಲಿ ಮಗುವಿನಂತೆ. ನಮಗೆಲ್ಲರಿಗೂ ಪ್ರೀತಿಪಾತ್ರ. ತುಂಬಾ ಬುದ್ಧಿವಂತ. ನನ್ನಂತೆ ಓದದವನಲ್ಲ” ಅಂತ. ಆದರೆ ಅವರು ಚಿತ್ರರಂಗಕ್ಕೆ ಬಂದರು. ಅವರು ಬರದಿದ್ರೆ ನಾವು ಇಂದು ಖುಷಿಪಟ್ಟಿರುವ ‘ಸತ್ಯವಾನ್ ಸಾವಿತ್ರಿ’, ‘ಹುಡುಗಾಟ’, ‘ಚೆಲುವಿನ ಚಿತ್ತಾರ’, ‘ತಮಾಷೆಗಾಗಿ’, ‘ನಿನಗೋಸ್ಕರ’, ‘ಅಣ್ಣ ತಂಗಿ’, ‘ಮಿಲ್ಟ್ರಿ ಮಾವ’, ‘ಐಶ್ವರ್ಯ’, ‘ತೆನಾಲಿ ರಾಮ’, ‘ಸಂತ’, ‘ದತ್ತ’, ‘ವರ್ಷ’, ‘ಶ್ರೀ’, ಚೆಲ್ಲಾಟ’, ‘ಕತ್ತೆಗಳು ಸಾರ್, ಕತ್ತೆಗಳು’, ‘ಆಪ್ತರಕ್ಷಕ’, ‘ಮಿಸ್ಟರ್ ಗರಗಸ’, ‘’ಚಮ್ಕಾಯ್ಸಿ ಚಿಂದಿ ಉಡಾಯ್ಸಿ’, ‘ಕಳ್ ಮಂಜ’, ‘ಓಂ ಗೋವಿಂದಾಯ ನಮಃ’ ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯದ ಕೊಡುಗೆಗಳನ್ನು ನಾವು ಸವಿಯಲಾಗುತ್ತಿರಲಿಲ್ಲ. ಆ ಪಾತ್ರಗಳಲ್ಲಿ ಕೋಮಲ್ ಪರಕಾಯ ಪ್ರವೇಶ ಮಾಡಿ ಸಂಭಾಷಣೆ ಹೇಳಿದ ಪರಿ ಅದ್ಭುತ. ಅದೂ ಕೋಮಲ್ ಆ ಪಾತ್ರಗಳಲ್ಲಿ ಮೂಡಿಸುವ ಕನ್ನಡತನ, ಅವರ ಮಾತು ಮತ್ತು ಶಾರೀರಿಕ ಅಭಿನಯಗಳಲ್ಲಿನ ಕ್ಷಿಪ್ರ ಹೊಂದಾಣಿಕೆ ಇವೆಲ್ಲಾ ಖಂಡಿತವಾಗಿ ಮನೋಲ್ಲಾಸ ಉಂಟುಮಾಡುವಂತದ್ದು. ಇಂತಹ ಸಾಮರ್ಥ್ಯ ಇರುವ ಮತ್ತೊಬ್ಬ ನಟ ಅಂದರೆ ಅವರ ಸಹೋದರ ಜಗ್ಗೇಶ್ ಮಾತ್ರ. ಈ ಜೋಡಿ ಹಲವು ಚಿತ್ರಗಳಲ್ಲಿ ಸಖತ್ ಮೋಡಿ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸಾಧ್ಯತೆಗಳಿವೆ ಅನಿಸುತ್ತದೆ. 'ತವರಿಗೆ ಬಾ ತಂಗಿ' ಚಿತ್ರದ ಪೋಷಕ ಪಾತ್ರ ನಿರ್ವಹಣೆಗೆ ಕೋಮಲ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿತು.
ಕೋಮಲ್ ಇತರ ಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಒಬ್ಬ ಪೋಷಕ ನಟ, ಖಳ ನಟ, ಹಾಸ್ಯ ನಟ ಇವರೆಲ್ಲಾ ಹೀರೋ ಆಗೋದು ಎಷ್ಟು ಸರಿ ಎಂಬ ಪ್ರಶ್ನೆಗಳು ಆಗಾಗ ಕನ್ನಡದಲ್ಲಿ ಕೇಳಿ ಬಂದಿದ್ದಿದೆ. ಕೋಮಲ್ ವಿಚಾರದಲ್ಲೂ ಅಂತಹ ಮಾತುಗಳು ಬಂದಿವೆ. ಯಾವುದೇ ಒಬ್ಬ ವ್ಯಕ್ತಿಗೆ ತಾನಿರುವ ಪರಿಧಿಯಿಂದ ತನ್ನನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿಕೊಳ್ಳಬೇಕು ಎಂದು ಅನಿಸುವುದು ಸಹಜ. ಕೋಮಲ್ ಪ್ರಧಾನ ಪಾತ್ರವಹಿಸಿದ ‘ಓಂ ಗೋವಿಂದಾಯ ನಮಃ’ ಯಶಸ್ಸು ಕಂಡಿತು. ಮುಂದೆ ಹಲವಾರು ಪಾತ್ರಗಳಲ್ಲಿ ನಟಿಸಿ ಕೆಂಪೇಗೌಡ 2 ಚಿತ್ರದಲ್ಲಿ ವಿಭಿನ್ನ ರೀತಿಯ ಹೀರೋ ಆಗಿ ಗೆದ್ದಿದ್ದಾರೆ.
ಕೋಮಲ್ ವಿವಿಧಮುಖಗಳ ಪ್ರತಿಭಾವಂತ. ಅವರು ಉದ್ಯಮಿಯೂ ಆಗಿದ್ದಾರೆ. ಅವರು ಬರಹದಲ್ಲೂ ಪರಿಣತ ಎಂಬುದು ಅವರ ನಗೆನಗಾರಿ ಬ್ಲಾಗ್ ಸ್ಪಾಟ್ ಲೇಖನಗಳಿಗೆ ಇಣುಕಿದರೆ ತಿಳಿಯುತ್ತದೆ. ಹೀಗಾಗಿ ಅವರು ಚಿತ್ರರಂಗ ನಿರಂತರವಾಗಿ ಬರ ಅನುಭವಿಸುತ್ತಿರುವ ಚಿತ್ರಸಾಹಿತ್ಯದಂತಹ ಕ್ಷೇತ್ರದಲ್ಲಿ ಸಹಾ ಉತ್ತಮ ಕಥೆಗಳನ್ನು ರೂಪಿಸುವಂತಾಗಲಿ ಎಂದು ಹಾರೈಸೋಣ.
ಕಾಮೆಂಟ್‌ಗಳು