ರಾಜಯ್ಯಂಗಾರ್
ಬಿ. ಎಸ್. ರಾಜಯ್ಯಂಗಾರ್
'ಜಗದೋದ್ಧಾರನ ಆಡಿಸಿದಳೆ ಯಶೋದೆ' ಗೀತೆ ಎಂದರೆ ಮೊದಲು ನೆನಪಿಗೆ ಬರುವುದು ಸಂಗೀತದ ಮಹಾನ್ ಇನಿಧ್ವನಿ ಬಿ. ಎಸ್. ರಾಜಯ್ಯಂಗಾರ್. ಅವರು ಹಾಡಿದ ಪ್ರತಿ ಕೀರ್ತನೆಯೂ ವಿಶಿಷ್ಟ.
ರಾಜಯ್ಯಂಗಾರ್ 1901ರಲ್ಲಿ
ಹಾಸನ ಜಿಲ್ಲೆಯ ಬಾಣಾವರದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಪಿತೃವಿಯೋಗವನ್ನು ಅನುಭವಿಸಿ ತಾಯಿಯ ಅಕ್ಕರೆಯಲ್ಲಿ ಬೆಳೆದರು. 13ನೆಯ ವಯಸ್ಸಿನ ವೇಳೆಗೆ ತಾಯಿಯೂ ನಿಧನರಾಗಿ ಸೋದರಮಾವ ಶಾಮಾಚಾರ್ ಆಶ್ರಯದಲ್ಲಿ ಬೆಳೆದರು.
ರಾಜಯ್ಯಂಗಾರ್ ನಾಟಕ ಶಿರೋಮಣಿ ವರದಾಚಾರ್ಯರ ನಾಟಕ ಕಂಪೆನಿ ಸೇರಿ ಅಲ್ಲಿ ಸಂಗೀತ ಮತ್ತು ಅಭಿನಯಗಳಲ್ಲಿ ಶಿಕ್ಷಣ ಪಡೆದರು. ಮುಂದೆ ಮದರಾಸಿನಲ್ಲಿ ಟೈಗರ್ ವರದಾಚಾರ್ಯರ ಸೋದರ ಕೆ.ಎ. ಶ್ರೀನಿವಾಸ ಅಯ್ಯಂಗಾರ್ ಅವರಲ್ಲಿ ಉನ್ನತ ಸಾಧನೆ ಮಾಡಿ ಸಂಗೀತಗಾರರ ಪಂಕ್ತಿಯಲ್ಲಿ ಅಗ್ರಸ್ಥಾನ ಗಳಿಸಿದರು.
ರಾಜಯ್ಯಂಗಾರ್ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಛೇರಿಗಳನ್ನು ನಡೆಸಿ ಜನಮನ್ನಣೆ ಪಡೆದರು. 1930ರಲ್ಲಿ ಮದರಾಸಿನ 'ಎಗ್ಮೋರ್ ಸಂಗೀತ ಸಭಾ'ದಲ್ಲಿ ನಡೆಸಿದ ಕಛೇರಿ ಇವರಿಗೆ ಪ್ರಖ್ಯಾತಿ ತಂದುಕೊಟ್ಟಿತು. 1932ರಲ್ಲಿ 'ಓಡಿಯನ್ ಜರ್ಮನ್ ಕಂಪೆನಿ' ಇವರ ಜಗದೋದ್ಧಾರನಾ, ಕಂಡು ಕಂಡು ನೀ ಎನ್ನ, ಕ್ಷೀರಸಾಗರ ಶಯನ, ಬ್ರೋಚೇವಾರೆವರುರಾ ಮುಂತಾದ ಕೀರ್ತನೆಗಳ ಧ್ವನಿಸುರುಳಿ ಹೊರತಂದಿತು. ಈ ಮೂಲಕ ರಾಜಯ್ಯಂಗಾರ್ ದೇಶಾದ್ಯಂತ ಜನಪ್ರಿಯರಾದರು. ಎಲ್ಲೆಡೆ ಇವರ ಕಛೇರಿಗಳಿಗೆ ಜನ ಕಿಕ್ಕಿರಿದು ತುಂಬಿರುತ್ತಿದ್ದರು. 1954ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ನೀಡಿದ 'ರಾಗಂ-ತಾನಂ-ಪಲ್ಲವಿ' ಎಂಬ ವಿಶಿಷ್ಟ ಕಛೇರಿ ಜನಪ್ರಿಯವಾಯಿತು. ಅಕಾಶವಾಣಿ ಇವರ ಗಾಯನವನ್ನು ನಿರಂತರವಾಗಿ ಪ್ರಸಾರ ಮಾಡುತ್ತಲೇ ಬಂದಿದೆ.
ರಾಜಯ್ಯಂಗಾರ್ ಅವರ ಆಪ್ತಮಿತ್ರರಾದ ಆರ್. ನಾಗೇಂದ್ರರಾಯರು ಬಲವಂತವಾಗಿ ಇವರನ್ನು ಚಿತ್ರರಂಗಕ್ಕೆ ಎಳೆದು ತಂದರು. 'ಹರಿಶ್ಚಂದ್ರ' ಚಿತ್ರದಲ್ಲಿ ನಾರದನ ಪಾತ್ರ ನಿರ್ವಹಣೆಯೊಂದಿಗೆ, ಅವರು ಹಾಡಿದ 'ದೇವ ದೇವನೆ ಶರಣು'ಎಂಬ ಕೀರ್ತನೆ ಜನಪ್ರಿಯವಾಯಿತು. ನಾಗೇಂದ್ರರಾಯರ 'ಜಾತಕಫಲ'ದಲ್ಲಿ ಕೂಡಾ ನಟಿಸಿದರು. ತೆಲುಗಿನ 'ಜಲಂಧರ', ತಮಿಳಿನ 'ನಾಟ್ಯರಾಣಿ', ಹಿಂದಿಯ 'ತುಳಸಿದಾಸ್' ಇವರು ನಟಿಸಿದ ಚಿತ್ರಗಳಲ್ಲಿ ಸೇರಿವೆ. 1951ರಲ್ಲಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ಸಿನಿಮಾ ತ್ಯಜಿಸಿ, ಸಂಗೀತ ಕ್ಷೇತ್ರದಲ್ಲೇ ಮುಂದುವರೆಯಲು ನಿರ್ಧರಿಸಿದರು.
ರಾಜಯ್ಯಂಗಾರ್ ಅವರಿಗೆ ಮದರಾಸಿನಲ್ಲಿ ‘ಗಾನ ಕಲಾನಿಧಿ’ ಪ್ರಶಸ್ತಿ ಸಂದಿತು. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1966-67ರಲ್ಲಿ ಗಾನಕಲಾ ಪರಿಷತ್ತು ‘ಗಾನ ಕಲಾಭೂಷಣ’ ಗೌರವ ಸಲ್ಲಿಸಿತು. 1973ರಲ್ಲಿ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸಂದಿತು.
ರಾಜಯ್ಯಂಗಾರ್ ಅವರ ಮಕ್ಕಳೆಲ್ಲ ಸಂಗೀತ ಕಲೆಯ ವಿವಿಧ ಪ್ರಕಾರಗಳಲ್ಲಿ ನಿರತರಾಗಿ ತಂದೆಯ ಕೀರ್ತಿಯನ್ನು ಜೀವಂತವಾಗಿರಿಸಿದವರು. ರಾಜಯ್ಯಂಗಾರ್ ಅವರ ಧ್ವನಿಮುದ್ರಿಕೆಗಳು ಇಂದಿಗೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿವೆ.
ಬಿ. ಎಸ್. ರಾಜಯ್ಯಂಗಾರ್ 1978ರ ಜುಲೈ 4ರಂದು ಈ ಲೋಕವನ್ನಗಲಿದರು.
Great Musician of Jagadoddarana fame Vidwan B. S. Raja Iyengar
ಕಾಮೆಂಟ್‌ಗಳು