ವೆಂಕಟಗಿರಿಯಪ್ಪ
ನಮ್ಮ ನಡುವಿನ ವಿಶಿಷ್ಟರು
ಈ ಮಹನೀಯರನ್ನು ನಾನು ಪ್ರತೀದಿನ ಲಾಲ್ಬಾಗ್ ಪ್ರವೇಶಿಸುವಾಗ ಗಮನಿಸುತ್ತಾ ಬಂದಿದ್ದೇನೆ. ಇವರ ಹೆಸರು ವೆಂಕಟಗಿರಿಯಪ್ಪ. ನಾನು ಬೆಳಿಗ್ಗೆ 6.30ರ ಸಮಯದಲ್ಲಿ ಲಾಲ್ಬಾಗ್ ಪ್ರವೇಶಿಸುವಾಗ, ಅವರು ಪ್ರತೀದಿನ ಮಾರುವ ಎಳೆಯ ಸೌತೇಕಾಯಿ, ಅವರ ಸೈಕಲ್ ಹಿಂಬದಿಯ ಬುಟ್ಟಿ ಮತ್ತು ಪಕ್ಕದಲ್ಲಿನ ಚೀಲಗಳಲ್ಲಿ ತುಂಬಿದ್ದು ನಾನು ಹೊರಬರುವ 7.30ರ ವೇಳೆಗೆ ಬಹುತೇಕ ಮಾರಾಟವಾಗಿ ಬಿಟ್ಟಿರುತ್ತಿತ್ತು. ಕೆಲವೊಂದು ದಿನ ಅದು ಪೂರ್ಣ ಖಾಲಿಯಾಗಿದ್ದನ್ನೂ ನೋಡಿದ್ದೇನೆ. ಲಾಲ್ಬಾಗ್ ಬಾಗಿಲಿನಲ್ಲಿ ಇವರೊಬ್ಬರೇ ತರಕಾರಿ ಮಾರುವವರಲ್ಲ. ಹಲವಾರು ಜನ ಮಾರುವರಿದ್ದಾರೆ. ಆದರೆ ಇವರ ಮಾರಾಟ ಮಾತ್ರಾ ಯಾಕೆ ಹೆಚ್ಚು? ಇವರು ತರುವ ತರಕಾರಿಯಾದರೊ ಸೌತೇಕಾಯಿ ಮಾತ್ರಾ. ಇವರು ತರುವ ಸೌತೇಕಾಯಿಗಳು ನಾನು ಕಂಡ ಬಹುತೇಕ ದಿನ ಎಳೆಯದಾಗಿಯೇ ಇರುತ್ತಿತ್ತು. ಮತ್ತೊಂದು, ಅವರ ಪ್ರಶಾಂತ ಮುಖ. ತನ್ನ ಬಳಿ ಕೊಳ್ಳುವವರ ಬಳಿ ಅವರು ನಡೆದುಕೊಳ್ಳುವ ಸೌಜನ್ಯಯುತ ನಡವಳಿಕೆ. ಇವರ ವಾಸವಿದ್ದದ್ದು ಜೆ.ಪಿ. ನಾಗರದಲ್ಲಿ. ಬೆಳಿಗ್ಗೆ ನಾಲ್ಕರ ವೇಳೆಗೇ ಕೃಷ್ಣರಾಜ ಮಾರುಕಟ್ಟೆ ತಲುಪಿ ಅಲ್ಲಿ ಸೌತೇಕಾಯಿಗಳನ್ನು ಸೈಕಲ್ಲಿನಲ್ಲಿ ಹೊತ್ತು ತಂದು ಸುಮಾರು ಅರುಗಂಟೆಯ ವೇಳೆಗೆ ಲಾಲ್ಬಾಗ್ ಬಾಗಿಲ ಬಳಿ ಇರುತ್ತಿದ್ದರು. ಎಲ್ಲರೂ ಏಳುವುದಕ್ಕೆ ಬಹುತೇಕ ಮುಂಚೆಯೇ ಎದ್ದು ನಡೆಸಬೇಕಾದ ತನ್ನ ಬದುಕಿನ ಬಗೆಗಾಗಲಿ, ತನ್ನ ಮುಂದಿನ ಪ್ರಪಂಚದ ಬಗೆಗಾಗಲೀ ಯಾವುದೇ ಬೇಸರವಿಲ್ಲದೆ, ತನ್ನ ಬಳಿ ಬರುವವರನ್ನೆಲ್ಲಾ ಆತ್ಮೀಯ ಭಾವದಿಂದ ನೋಡುತ್ತಾ ತನ್ನ ಬದುಕನ್ನು ನೆಮ್ಮದಿಯಿಂದ ಸಾಗಿಸುವ ಈ ಹಿರಿಯರನ್ನು ಕಂಡರೆ ಎಂತದ್ದೋ ಹೃದಯದಲ್ಲಿ ಆಪ್ತಭಾವ ಮೂಡುತ್ತಿತ್ತು. (ಬರೆದದ್ದು 4.7.2016ರಂದು)
A Man of difference amongst us
ಕಾಮೆಂಟ್‌ಗಳು