ಚಕ್ರಕೋಡಿ ಎನ್. ಶಾಸ್ತ್ರಿ
ಚಕ್ರಕೋಡಿ ನಾರಾಯಣ ಶಾಸ್ತ್ರಿ
ಚಕ್ರಕೋಡಿ ನಾರಾಯಣ ಶಾಸ್ತ್ರಿ ಸಂಗೀತದಲ್ಲಿ ಅದರಲ್ಲೂ ವಿಶೇಷವಾಗಿ ವಚನಸಂಗೀತದಲ್ಲಿ ಮಹತ್ವದ ಕೊಡುಗೆ ನೀಡಿದವರು.
ನಾರಾಯಣಶಾಸ್ತ್ರಿ ಅವರು 1913ರ ಜುಲೈ 4ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕೋಳ್ಸೂರು ಗ್ರಾಮದಲ್ಲಿ ಜನಿಸಿದರು. ಇವರದ್ದು ಸಂಸ್ಕೃತ, ಜ್ಯೋತಿಶಾಸ್ತ್ರ ಗಣಿತಗಳಲ್ಲಿ ಖ್ಯಾತಿ ಪಡೆದಿದ್ದ ಚಕ್ರಕೋಡಿ ಮನೆತನ. ತಂದೆ ಶ್ಯಾಮಾಶಾಸ್ತ್ರಿಗಳು. ನಾರಾಯಣನಿಗೆ ಬಾಲ್ಯದಿಂದಲೂ ಸಂಗೀತದಲ್ಲಿದ್ದ ಗೀಳು ಗಾಢವಾಗಿದ್ದುದನ್ನು ಗುರುತಿಸಿ ತಂದೆಯವರೇ ಪ್ರಾರಂಭಿಕ ಶಿಕ್ಷಣವಿತ್ತರು. ನಂತರ ಪಾಲ್ಘಾಟ್ ವೀರಮಣಿ ಭಾಗವತರು ಮತ್ತು ಉಡುಪಿಯ ಲಕ್ಷ್ಮೀಬಾಯಿಯವರು ಮಾರ್ಗದರ್ಶಕರಾದರು.
ಡಾ|| ಬಿ. ದೇವೇಂದ್ರಪ್ಪನವರ ಗರಡಿಯಲ್ಲಿ ಚಕ್ರಕೋಡಿ ನಾರಾಯಣ ಶಾಸ್ತ್ರಿ ಅವರು ನುರಿತ ಗಾಯಕರಾಗಿ ಸಂಗೀತ ಜಗತ್ತಿಗೊಂದು ವರವಾಗಿ ಪರಿಣಮಿಸಿದರು. ಪ್ರೊ. ದೇವಧರ ಸಂಗೀತ ವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದ ಶ್ರೀ ವಿಶ್ವೇಶ್ವರ ಪಂಡಿತರಲ್ಲಿ ಹಿಂದೂಸ್ಥಾನಿ ಸಂಗೀತವನ್ನೂ ಅಭ್ಯಾಸ ಮಾಡಿದರು. ಪಿಟೀಲು, ಹಾರ್ಮೋನಿಯಂ, ಜಲತರಂಗ್ ವಾದ್ಯಗಳ ನುಡಿಸುವಿಕೆಯಲ್ಲೂ ಸಾಧನೆ ಮಾಡಿದ್ದರು.
ಮೊದಲು ಮೈಸೂರು ಆಕಾಶವಾಣಿ ನಿಲಯದಲ್ಲಿದ್ದು ಮುಂದೆ ಧಾರವಾಡ ನಿಲಯದ ವಿದ್ವಾಂಸರಾಗಿ ‘ಎ’ ದರ್ಜೆಯ ಕಲಾವಿದರಾಗಿ, ರಾಗ ಸಂಯೋಜಕರಾಗಿ ಅವರು ನೀಡಿದ ಸೇವೆ ಅಪಾರ.
ಚಕ್ರಕೋಡಿ ನಾರಾಯಣ ಶಾಸ್ತ್ರಿ ಅವರು ದೇವರನಾಮ, ವಚನಗಳನ್ನು ಕೃತಿಯಂತೆ ಪ್ರಸ್ತುತ ಪಡಿಸುವ ರೂಢಿಯನ್ನು 1937ರ ವೇಳೆಗೆ ತಂದ ಪ್ರತಿಭಾಶಾಲಿಗಳು. ಹಲವಾರು ಉತ್ತಮ ಶಿಷ್ಯರಿಗೆ ಶಿಕ್ಷಣ ನೀಡಿ ಸಂಗೀತ ಜಗತ್ತಿಗೆ ಕಾಣಿಕೆ ನೀಡಿರುವ ಹಿರಿಮೆಗೆ ಪಾತ್ರರಾದ ಶ್ರೀಯುತರು ಬರೆದಿರುವ ‘ಕರ್ನಾಟಕ ಸಂಗೀತ ವೈಭವ’ ಪುಸ್ತಕವನ್ನು ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದೆ.
ಆಧ್ಯಾತ್ಮ ಗುರುಗಳಾದ ಶ್ರೀ ರಮಣ ಮಹರ್ಷಿಗಳನ್ನು ಸ್ತುತಿಸುವ ಹಲವಾರು ಕೃತಿಗಳನ್ನು ನಾರಾಯಣ ಶಾಸ್ತ್ರಿಗಳು ರಚಿಸಿದ್ದಾರೆ. ಮಧುರ ಭಾವಭರಿತವಾದ ಅವರ ಗಾಯನದಲ್ಲಿ ಸಾಹಿತ್ಯ ಶುದ್ಧಿ, ವೈವಿಧ್ಯತೆ ಎದ್ದು ಕಾಣುತ್ತಿದ್ದ ಅಂಶಗಳು.
ಚಕ್ರಕೋಡಿ ನಾರಾಯಣ ಶಾಸ್ತ್ರಿ ಅವರಿಗೆ ‘ಕನ್ನಡದ ಕೋಗಿಲೆ’, ‘ಗಾನಾಲಂಕಾರ’, ‘ಹರಿದಾಸ ಸಂಗೀತ ಸುಧಾಕರ’, ‘ವಚನ ಗಾಯನ ಹರಿಕಾರ’ ಮುಂತಾದ ಬಿರುದುಗಳ ಜೊತೆಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಯೂ ಸಂದಿತ್ತು.
ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು 1993ರ ಸೆಪ್ಟೆಂಬರ್ 6ರಂದು ನಿಧನರಾದರು.
On the birth anniversary of Chakrkodi Narayana Shastri
ಕಾಮೆಂಟ್‌ಗಳು