ಅಮೆರಿಕಾ, ಅಮೆರಿಕಾ
ಅಮೆರಿಕಾ, ಅಮೆರಿಕಾ
ವಿಶ್ವದಲ್ಲಿ ಬೇಕೆಂದರೂ ಬೇಡವೆಂದರೂ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಧಾನವಾಗಿ ಗೋಚರಿಸುವ ದೇಶ. ಅಲ್ಲಿನ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಹದಿನೆಂಟನೆಯ ಶತಮಾನದಿಂದೀಚೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರಗಳಿಗೆ ಪ್ರೇರಣೆ ಕೊಟ್ಟ ಘಟನೆ.
ಕೊಲಂಬಸ್ಸನ ಸಮುದ್ರಯಾನ ಸಾಹಸದಿಂದ ಪಶ್ಚಿಮ ಮತ್ತು ಪೂರ್ವದೇಶಗಳ ಸಮಾಗಮಕ್ಕೆ ಅನುಕೂಲವಾಯಿತು. ಆತ ಫ್ಲಾರಿಡ ತೀರ ಪ್ರದೇಶದ ಬಹಾಮಾಸ್ ಗುಂಪಿನ ಸಾನ್ ಸಾಲ್ವಡಾರ್ ದ್ವೀಪವನ್ನು ತಲುಪಿ (1492) ತಾನು ಪೌರಸ್ತ್ಯ ದೇಶಗಳಿಗೆ ಜಲಮಾರ್ಗವನ್ನು ಕಂಡುಹಿಡಿದೆನೆಂದು ತಿಳಿದು ಅಲ್ಲಿನ ನಿವಾಸಿಗಳನ್ನು ಇಂಡಿಯನ್ಸ್ ಎಂದು ಕರೆದ. ಅನಂತರ ಅಮೆರಿಗೊ ವೂಚಿ ಎಂಬಾತನ ಸಾಹಸದಿಂದಾಗಿ ಆ ಭೂಭಾಗಕ್ಕೆ ಅವನ ಹೆಸರನ್ನೇ ಇಟ್ಟು ಅಮೆರಿಕವೆಂದು ಕರೆಯಲಾಯಿತು. ಅಮೆರಿಕ ಹೊಸ ಪ್ರಪಂಚವೆಂದು ಕರೆಯಲ್ಪಟ್ಟರೂ ಅದು ಹಳೆಯ ಪ್ರಪಂಚವೇ ಆಗಿತ್ತು. ಸಮುದ್ರಯಾನ ಸಾಹಸಿಗಳು ಕಂಡುಹಿಡಿದ ಭೂಭಾಗ ಪೌರಸ್ತ್ಯ ಸಂಸ್ಕೃತಿಗಳ ಮೂಲಾಂಶಗಳನ್ನು ಹೊಂದಿದ್ದ ಜನಾಂಗಗಳದ್ದಾಗಿದ್ದಿತು. ಈ ಸಂಸ್ಕೃತಿಗಳ ಕೇಂದ್ರಸ್ಥಾನಗಳು ಉತ್ತರ ಅಮೆರಿಕ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳ ಎಲ್ಲೆಗಳಲ್ಲಿ ಕಂಡುಬರುತ್ತವೆ. ಯುಕಾಟನ್ನಿನ ಮಾಯ ಜನ, ಮೆಕ್ಸಿಕೊದ ಆಜ್ಟೆಕ್ ಜನ ಮತ್ತು ಪೆರುವಿನ ಇಂಕ ಜನ, ಸಂಯುಕ್ತಸಂಸ್ಥಾನಗಳ ಆಗ್ನೇಯ ಭಾಗದ ಪ್ಯೂಬೋ ನಿವಾಸಿಗಳು, ಸ್ಥಿರವಾಗಿ ನೆಲಸಿ ಉತ್ತಮ ನಾಗರಿಕತೆಯನ್ನು ಬೆಳೆಸಿದ್ದರು. ಆಟ್ಲಾಂಟಿಕ್ ತೀರ ಪ್ರದೇಶದಲ್ಲಿದ್ದ ಇಂಡಿಯನ್ನರು ಅಲೆಮಾರಿ ಜನ. ಈ ನಾಗರಿಕತೆಗಳ ಜನರಿಗೆ ದೊಡ್ಡ ಪಟ್ಟಣಗಳನ್ನು, ದೇವಾಲಯಗಳನ್ನು, ಅರಮನೆಗಳನ್ನು ಕಟ್ಟುವುದು ಗೊತ್ತಿತ್ತು; ಬರವಣಿಗೆ, ಮಣ್ಣಿನ ಪಾತ್ರೆಗಳನ್ನು ಮಾಡುವುದು, ಸಾಮಾಜಿಕ ವ್ಯವಸ್ಥೆ , ಕಲೆ ಮೊದಲಾದ ವಿಷಯಗಳು ತಿಳಿದಿದ್ದುವು. ಮೂಢನಂಬಿಕೆಗಳನ್ನು ಅತಿಯಾಗಿ ಬೆಳೆಸಿಕೊಂಡಿದ್ದರು; ನರಬಲಿ ಕೊಡುವ ಪದ್ಧತಿ ಇವರಲ್ಲಿ ರೂಢಿಯಲ್ಲಿತ್ತು. ಇವುಗಳಲ್ಲದೆ ಪೆರುವಿನ ಇಂಕ ಜನ ಹೇರಳವಾಗಿ ದೊರೆಯುತ್ತಿದ್ದ ಚಿನ್ನ ಮತ್ತು ಬೆಳ್ಳಿಯನ್ನು ಮನೆಕಟ್ಟುವ ಇಟ್ಟಿಗೆಗಳನ್ನಾಗಿ ಬಳಸುತ್ತಿದ್ದರು. 16ನೆಯ ಶತಮಾನದಲ್ಲಿ ಸ್ಪೇನಿನವರು ಮತ್ತು ಪೋರ್ಚುಗೀಸರು, ವಸಾಹತು ಸ್ಥಾಪನೆ ಮತ್ತು ವ್ಯಾಪಾರದ ದೃಷ್ಟಿಯಿಂದ ಆ ಪ್ರದೇಶಗಳನ್ನೂ ಸ್ವಾದೀನಪಡಿಸಿಕೊಂಡ ಮೇಲೆ, ಆ ನಾಗರಿಕತೆಗಳ ನೆಲೆವೀಡುಗಳು ನಿರ್ನಾಮಗೊಂಡು, ಇಂದು ಅವುಗಳ ವಿಷಯ ಒಂದು ಕಟ್ಟು ಕಥೆಯಂತಾಗಿದೆ. ಅಮೆರಿಕದ ಇನ್ನಿತರ ಭಾಗಗಳಲ್ಲಿ ವಾಸಮಾಡಿಕೊಂಡಿದ್ದ ರೆಡ್ ಇಂಡಿಯನ್ನರ ಸಾಹಸ ಶೌರ್ಯಗಳು ಯುರೋಪಿನವರ ಆಧುನಿಕ ಯುದ್ಧಸಲಕರಣೆಗಳ ಮುಂದೆ ವಿಫಲಗೊಂಡು ಅವರ ಪ್ರಭಾವ ಕುಗ್ಗಿತು.
15ನೆಯ ಶತಮಾನದ ಅಂತ್ಯಭಾಗದಲ್ಲಿ ಕೊಲಂಬಸ್, ಅಮೆರಿಗೊ ವೂಚಿಗಳ ಅನಂತರ ಇಂಗ್ಲಿಷ್ ನಾವಿಕ ಜಾನ್ ಕ್ಯಾಬಟ್ ಮತ್ತು ಫ್ರೆಂಚರ ಜಾಕ್ವಿಯಸ್ ಕಾರ್ಡಿಯರ್ ಎಂಬ ನಾವಿಕರು ಅಮೆರಿಕವನ್ನು ಸಂದರ್ಶಿಸಿದರು. ಪರಿಣಾಮವಾಗಿ ಸ್ಪೇನಿನವರು, ಇಂಗ್ಲಿಷರು, ಫ್ರೆಂಚರು ಕೆಲವು ಕಾಲದಮೇಲೆ ಡಚ್ಚರು ಮತ್ತು ಸ್ವೀಡನ್ನಿನವರು ಅಮೆರಿಕದ ವಿವಿಧ ಭಾಗಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಇವರಲ್ಲಿ ಸ್ಪೇನಿನವರು, ಇಂಗ್ಲಿಷರು ಮತ್ತು ಫ್ರೆಂಚರು ಮುಖ್ಯರು. ಸ್ಪೇನಿನವರು ಫ್ಲಾರಿಡದಲ್ಲಿ ಸ್ಥಾಪಿಸಿದ್ದೇ ಅಮೆರಿಕದಲ್ಲಿ ಯುರೋಪಿಯನ್ನರ ಪ್ರಥಮ ವಸಾಹತು. ಸ್ವಲ್ಪ ಕಾಲದಲ್ಲಿಯೇ ಸ್ಪೇನಿನವರು ತಮ್ಮ ಅಧಿಕಾರವನ್ನು ಪಶ್ಚಿಮದಲ್ಲಿ ಕ್ಯಾಲಿಫೋರ್ನಿಯದವರೆಗೆ ವಿಸ್ತರಿಸಿದರು. ಫ್ರೆಂಚರು ತಮ್ಮ ವಸಾಹತುಗಳನ್ನು ಮೊದಲು ಕೆನಡದಲ್ಲಿ ಸ್ಥಾಪಿಸಿ ಅನಂತರ ಲೂಸಿಯಾನದವರೆಗೆ ತಮ್ಮ ಪ್ರಭಾವವನ್ನು ವಿಸ್ತರಿಸಲೆತ್ನಿಸಿದರು. ಬ್ರಿಟಿಷರ ವಸಾಹತುಗಳು ಹೆಚ್ಚಾಗಿ ಅಟ್ಲಾಂಟಿಕ್ ತೀರ ಪ್ರದೇಶದಲ್ಲಿ ಸ್ಥಾಪಿತವಾಗಿದ್ದವು. ಅವರು 1607ರಲ್ಲಿ ವರ್ಜಿನಿಯದಲ್ಲಿನ ಜೇಮ್ಸ್ ಟೌನಿನಲ್ಲಿ ಸ್ಥಾಪಿಸಿದ ಪಾಳಯವೇ ಅವರ ಪ್ರಥಮ ವಸಾಹತು. ಈ ವಸಾಹತುಗಳು ಬ್ರಿಟಿಷ್ ಚಕ್ರವರ್ತಿಯಿಂದ ಅಪ್ಪಣೆ ಪಡೆದ ಕಂಪನಿಗಳಿಂದ ಸ್ಥಾಪಿಸಲ್ಪಟಿದ್ದವು. 1620ರಲ್ಲಿ ಅಮೆರಿಕವನ್ನು ತಲುಪಿದ ಕೈಸ್ತ ಪಾದ್ರಿಗಳು ಮತಪ್ರಸಾರಕ್ಕಾಗಿ ಮತೊಂದು ರೀತಿಯ ವಸಾಹತುಗಳನ್ನು ಸ್ಥಾಪಿಸಿದರು. ಇಂಗ್ಲೆಂಡಿನ ಧನಿಕ ವರ್ತಕರು ಮೇರಿಲ್ಯಾಂಡ್ ಮತ್ತು ಪೆನ್ಸಿಲ್ವೇನಿಯಗಳಲ್ಲಿ ಸ್ಥಾಪಿಸಿದ್ದ ವಸಾಹತುಗಳು ಮತ್ತೊಂದು ರೀತಿಯವು. ಇವು ಬ್ರಿಟಿಷ್ ಚಕ್ರವರ್ತಿಯಿಂದ ಆಸ್ತಿಪಾಸ್ತಿಗಳನ್ನು ಹೊಂದುವ ಅನುಕೂಲತೆಯನ್ನು ಪಡೆದಿದ್ದವು. ಅವುಗಳಿಗೆ ಪಶ್ಚಿಮದಲ್ಲಿದ್ದ ಫ್ರೆಂಚರ ವಸಾಹತುಗಳಿಂದ ತೊಂದರೆ ಇತ್ತಾದ ಕಾರಣ ಈ ವಸಾಹತುಗಳಿಗೆ ಬ್ರಿಟಿಷ್ ನೌಕಾಪಡೆಯ ರಕ್ಷಣೆ ಇತ್ತು.
ಫ್ರೆಂಚರು ಕೆನಡದಿಂದ ಲೂಸಿಯಾನದವರೆಗೂ ಕೋಟೆಗಳನ್ನು ನಿರ್ಮಿಸಬೇಕೆಂಬ ಪ್ರಯತ್ನದಲ್ಲಿದ್ದರು. ಸಪ್ತವಾರ್ಷಿಕ ಯುದ್ಧದಲ್ಲಿ (1750-65) ಫ್ರೆಂಚರು ಮತ್ತು ಇಂಗ್ಲಿಷರು ಯುರೋಪು ಮತ್ತು ಭಾರತದಲ್ಲೇ ಅಲ್ಲದೆ ಅಮೆರಿಕದಲ್ಲೂ ಹೋರಾಡಿದರು. ಯುದ್ಧದಲ್ಲಿ ಫ್ರೆಂಚರು ಸೋತು ಅಮೆರಿಕದಲ್ಲಿದ್ದ ತಮ್ಮ ವಸಾಹತುಗಳನ್ನು ಇಂಗ್ಲಿಷರಿಗೆ ಬಿಟ್ಟುಕೊಟ್ಟರು. ಉತ್ತರ ಅಮೆರಿಕದಲ್ಲಿ ಸ್ಥಾಪಿತವಾಗಿದ್ದ ಬ್ರಿಟಿಷರ ಹದಿಮೂರು ಕಾಲೊನಿಗಳು: ಮೆಸಾಚುಸೆಟ್ಸ್, ನ್ಯೂ ಹ್ಯಾಂಪ್ ಷೈರ್, ರೋಡ್ ಐಲೆಂಡ್, ಕನೆಕ್ಟಿಕಟ್, ಪೆನ್ಸಿಲ್ವೇನಿಯ, ನ್ಯೂಯಾರ್ಕ್, ನ್ಯೂಜೆರ್ಸಿ, ಡೆಲಾವೇರ್, ಮೇರಿಲ್ಯಾಂಡ್, ವರ್ಜಿನಿಯ, ನಾರ್ತ್ ಕೆರೊಲಿನ, ಸೌತ್ ಕೆರೊಲಿನ ಮತ್ತು ಜಾರ್ಜಿಯ. ಇವುಗಳೆಲ್ಲ ಇಂಗೆಂಡಿನ ರಕ್ಷಣೆಯಲ್ಲಿದ್ದು ಪ್ರತಿಯೊಂದೂ ಒಬ್ಬೊಬ್ಬ ಇಂಗ್ಲಿಷ್ ಗವರ್ನರ್ ಮೇಲ್ವಿಚಾರಣೆಯಲ್ಲಿತ್ತು. ಈ ರೀತಿಯ ರಾಜಕೀಯ ವ್ಯವಸ್ಥೆಯಲ್ಲಿದ್ದ ವಸಾಹತುಗಳಲ್ಲಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಪಂಚದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಾಂತಿ ನಡೆಯಿತು. ಈ ಕ್ರಾಂತಿಯನ್ನು ಅಮೆರಿಕದ ಸ್ವಾತಂತ್ರ್ಯ ಹೋರಾಟವೆಂದು ಕರೆಯಲಾಗುತ್ತದೆ.
ಅಮೆರಿಕದ ಸ್ವಾತಂತ್ರ್ಯ ಹೋರಾಟ 1775ರಲ್ಲಿ ಪ್ರಾರಂಭವಾಯಿತು. ಇದಕ್ಕೆ ಕಾರಣಗಳು ಅನೇಕ. ಅವುಗಳಲ್ಲಿ ರಾಜಕೀಯ, ಆರ್ಥಿಕ ಮತ್ತು ರಕ್ಷಣಾ ವಿಷಯಕ್ಕೆ ಸಂಬಂಧಪಟ್ಟ ಕಾರಣಗಳು ಮುಖ್ಯ. ರಾಜಕೀಯವಾಗಿ ವಸಾಹತುಗಳ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳಿದ್ದವು. ಪ್ರತಿಯೊಂದು ವಸಾಹತೂ ಪ್ರತ್ಯೇಕ ಆಡಳಿತವ್ಯವಸ್ಥೆಯನ್ನು ಹೊಂದಿ ಬ್ರಿಟಿಷ್ ಚಕ್ರವರ್ತಿಯ ಪರವಾಗಿ ಆಡಳಿತ ನಡೆಸುವ ರಾಜ್ಯಪಾಲನ ಅಧೀನದಲ್ಲಿತ್ತು. ರಾಜ್ಯಪಾಲರು ಪ್ರತಿನಿಧಿಸಭೆಗಳನ್ನು ಕಡೆಗಣಿಸಿ, ನಿರಂಕುಶಪ್ರಭುಗಳಂತೆ ವರ್ತಿಸುತ್ತಿದ್ದು ಜನನಿಂದೆಗೆ ಗುರಿಯಾಗಿದ್ದರು. ಇದಲ್ಲದೆ ಆ ಜನರ ಪ್ರತಿನಿಧಿಗಳನ್ನು ಹೊಂದದೆ ಇದ್ದ ಬ್ರಿಟನ್ನಿನ ಪಾರ್ಲಿಮಂಟ್ ಸಭೆ ವಸಾಹತುಗಳಿಗೆ ಕಾನೂನುಗಳನ್ನು ಮಾಡುವುದೂ ಅವರಲ್ಲಿ ಅತೃಪ್ತಿ ಅಸಮಾಧಾನಗಳು ಬೆಳೆಯುವಂತೆ ಮಾಡಿತ್ತು. ಆರ್ಥಿಕ ವ್ಯವಸ್ಥೆಯಲ್ಲೂ ಅನೇಕ ಕುಂದುಕೊರತೆಗಳಿದ್ದು ಕ್ರಾಂತಿಗೆ ಪ್ರೋತ್ಸಾಹ ದೊರಕಿತು. ವಸಾಹತುಗಳು ತಮ್ಮ ಹಿತಕ್ಕಾಗಿಯೇ ಇರುವುವೆಂದು ತಿಳಿದು ಬ್ರಿಟಿಷರು ಅವುಗಳ ವ್ಯಾಪಾರ ವಾಣಿಜ್ಯಗಳ ಮೇಲೆ ಅನೇಕ ರೀತಿಯ ನಿರ್ಬಂಧಗಳನ್ನು ಹಾಕಿದ್ದರು. ವಸಾಹತುಗಳು ತಮ್ಮಲ್ಲಿನ ಕಚ್ಚಾಪದಾರ್ಥಗಳನ್ನು ಬ್ರಿಟನ್ನಿಗಲ್ಲದೆ ಮತ್ತಾವ ದೇಶಗಳಿಗೂ ಕಳುಹಿಸಕೂಡದೆಂದೂ ನೇರವಾಗಿ ಯಾವ ದೇಶದೊಂದಿಗೂ ವ್ಯಾಪಾರ ಸಂಪರ್ಕವನ್ನಿಟ್ಟುಕೂಳ್ಳಕೂಡದೆಂದೂ ವಿಧಿಸಿದ್ದು ಒಂದು ನಿದರ್ಶನ. ಇಂಥ ಕ್ರಮ ಕಳ್ಳ ವ್ಯಾಪಾರಕ್ಕೆ ಪ್ರೋತ್ಸಾಹಕೊಟ್ಟಿತು. ಇದನ್ನರಿತ ಬ್ರಿಟಿಷ್ ಸರ್ಕಾರ ಅವುಗಳ ಮೇಲೆ ಉಗ್ರಕ್ರಮಗಳನ್ನು ಕೈಗೊಂಡಿತು. ಇದರಿಂದ ಕೋಪಗೂಂಡ ವಸಾಹತುಗಳು ದಂಗೆಯೆದ್ದುವು. ಇವುಗಳಲ್ಲದೆ ರಕ್ಷಣಾ ವೆಚ್ಚದ ಸಮಸ್ಯೆಯೂ ಕ್ರಾಂತಿಗೆ ಕಾರಣವಾಯಿತು. ಸಪ್ತವಾರ್ಷಿಕ ಯುದ್ಧದಲ್ಲಿ ಬ್ರಿಟಿಷರು ಗೆದ್ದರೂ ಅಪಾರ ಹಾನಿಯನ್ನನುಭವಿಸಿದ್ದರು. ಯುದ್ಧದಿಂದಾಗಿ ಅವರ ಬೊಕ್ಕಸ ಬರಿದಾಯಿತು. ಅಲ್ಲದೆ ಈ ಯುದ್ಧವಾದ ಮೇಲೆ ಅಮೆರಿಕನ್ನರು ಮತ್ತೆ ದಂಗೆ ಎದ್ದುದರಿಂದ ಅವರ ವಿರುದ್ಧ ಹೋರಾಡಲು ಅಗತ್ಯವಾದ ಭೂ ಮತ್ತು ನೌಕಾಬಲವನ್ನು ನಿರ್ಮಿಸಲು ಆಲೋಚಿಸಿದ ಬ್ರಿಟಿಷ್ ಸರ್ಕಾರ, ವಸಾಹತುಗಳ ದಿನಬಳಕೆಯ ವಸ್ತುಗಳಾದ ಸಕ್ಕರೆ, ಚಹ ಹಾಗೂ ಕಾಗದಪತ್ರಗಳ ಮೇಲೆ ಹೊಸ ತೆರಿಗೆಗಳನ್ನು ಹಾಕಿ ಹಣ ಕೂಡಿಸಲು ಯತ್ನಿಸಿತು. ಕ್ರೋಧಗೊಂಡ ಅಮೆರಿಕನ್ನರು ಅವುಗಳನ್ನು ತೀವ್ರವಾಗಿ ವಿರೋಧಿಸಿದ್ದಲ್ಲದೆ ತಮ್ಮ ಪ್ರತಿನಿಧಿಗಳಿಲ್ಲದ ಶಾಸನಸಭೆ ತಮ್ಮ ಮೇಲೆ ವಿಧಿಸುವ ಯಾವ ಕಾಯಿದೆಗೂ ತಾವು ಬದ್ಧರಲ್ಲವೆಂದು ಹೇಳಿಬಿಟ್ಟರು.
1773ರಲ್ಲಿ ನಡೆದ ಬಾಸ್ಟನ್ ಘಟನೆಯಿಂದ ಅಮೆರಿಕದ ಸ್ವಾತಂತ್ರ್ಯ ಹೋರಾಟ ಆರಂಭವಾಯಿತೆಂದು ಹೇಳಬಹುದು. ಬಾಸ್ಟನ್ ರೇವಿನ ಕೆಲವು ಜನ ಹೊಸ ತೆರಿಗೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಸಲುವಾಗಿ ಈಸ್ಟ್ ಇಂಡಿಯ ಕಂಪನಿಗೆ ಸೇರಿದ ಚಹ ತುಂಬಿದ ಕೆಲವು ಹಡಗುಗಳನ್ನು ಲೂಟಿ ಮಾಡಿ ಅವುಗಳಲ್ಲಿದ್ದ ಚಹವನ್ನು ಸಮುದ್ರಕ್ಕೆಸೆದರು. ಉದ್ರೇಕಗೂಂಡ ಬ್ರಿಟಿಷ್ ಸರ್ಕಾರ ಗಲಭೆಕೋರರ ವಿರುದ್ಧ ಉಗ್ರಕ್ರಮಗಳನ್ನು ಕೈಗೊಂಡು ಬಾಸ್ಟನ್ ರೇವುಪಟ್ಟಣವನ್ನು ಮುಚ್ಚಿ ಮೆಸಾಚುಸೆಟ್ಸ್ ವಸಾಹತಿಗೆ ಸ್ವಯಮಾಡಳಿತವನ್ನು ರದ್ದು ಮಾಡಿತು. ಈ ಕ್ರಮ ವಸಾಹತುಗಳವರನ್ನು ರೊಚ್ಚಿಗೆಬ್ಬಿಸಿತು. ಅವರು ಶಸ್ತ್ರ ಕದನಕ್ಕೆ ಸಿದ್ಧರಾದರು; 1774ರಲ್ಲಿ ವಸಾಹತಿನವರು ತಮ್ಮತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಫಿಲಡೆಲ್ಫಿಯದಲ್ಲಿ ಸಮಾವೇಶಗೊಂಡು ಹಕ್ಕುಗಳ ಘೋಷಣೆಯೊಂದನ್ನು ಹೊರಡಿಸಿ ಬ್ರಿಟನ್ನಿನ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಲು ತೀರ್ಮಾನ ಕೈಗೊಂಡು ಜಾರ್ಜ್ ವಾಷಿಂಗ್‍ಟನ್ ಎಂಬುವನನ್ನು ಮುಖ್ಯ ನಾಯಕನನ್ನಾಗಿ ಮಾಡಿಕೊಂಡರು.
1775ರಲ್ಲಿ ಮೊದಲ ಕಾಳಗ ಜರುಗಿತು. ಹೋರಾಟದ ಮೊದಲ ದಿನಗಳಲ್ಲಿ ಅಮೆರಿಕನ್ನರು ಸುಸಜ್ಜಿತರಾದ ಬ್ರಿಟಿಷ್ ಸೈನಿಕರಿಂದ ಬ್ರೂಕ್ಲಿನ್ (1777) ಮತ್ತು ಬ್ರಾಂಡಿವೈನ್ (1777) ಮೊದಲಾದ ಸ್ಥಳಗಳಲ್ಲಿ ಸೋತರು. ಆದರೂ ಧೃತಿಗೆಡದೆ ಹೋರಾಟವನ್ನು ಮುಂದುವರಿಸಿದರು. 1776ರ ಜುಲೈ 4ರಂದು ಥಾಮಸ್ ಜೆಫರ್‍ಸನ್ನನಿಂದ ನಿರೂಪಿತವಾದ ವಸಾಹತುಗಳ ಸ್ವಾತಂತ್ರ್ಯ ಘೋಷಣೆಯೊಂದನ್ನು ಹೊರಡಿಸಿದರು. 1777ರ ಅಕೋಬರ್ 17ರಲ್ಲಿ ಜಾರ್ಜ್ ವಾಷಿಂಗ್‍ಟನ್ನನ ನೇತೃತ್ವದಲ್ಲಿ ಅಮೆರಿಕದ ಸೈನಿಕರು ಸಾರಟೋಗ ಯುದ್ಧದಲ್ಲಿ ಮೊದಲಬಾರಿ ವಿಜಯ ಸಂಪಾದಿಸಿದರು. ಇದು ಅವರ ಬಿಡುಗಡೆಯ ಹೋರಾಟದಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿತು. ಇದಾದಮೇಲೆ ಫ್ರಾನ್ಸ್ ಮತ್ತು ಸ್ಪೇನ್ ದೇಶಗಳು ಸಪ್ತವಾರ್ಷಿಕ ಯುದ್ಧದಲ್ಲಿ ತಮಗುಂಟಾದ ಅಪಜಯದ, ಅವಮಾನದ ಸೇಡನ್ನು ತೀರಿಸಿಕೊಳುವ ಸಲುವಾಗಿ ಅಮೆರಿಕನ್ನರಿಗೆ ಸಹಾಯ ಮಾಡಲು ಮುಂದೆ ಬಂದುವು. ಇದರಿಂದ ಅಮೆರಿಕನ್ನರ ಪ್ರಾಬಲ್ಯ ಹೆಚ್ಚಿ ಅವರು ವಿಜಯಗಳ ಮೇಲೆ ವಿಜಯಗಳನ್ನು ಗಳಿಸಿದರು. ಕೊನೆಗೆ 1781ರ ಅಕ್ಟೋಬರ್ 19ರಲ್ಲಿ ಬ್ರಿಟಿಷರ ದಂಡನಾಯಕನಾದ ಕಾರನ್‍ವಾಲೀಸ್ ಯಾರ್ಕ್‍ಟೌನ್ ಎಂಬಲ್ಲಿ ಅಮೆರಿಕನ್ನರಿಗೆ ಸೋತು ಶರಣಾಗತನಾದ. ಅಲ್ಲಿಗೆ ಅಮೆರಿಕದ ಸ್ವಾತಂತ್ರ್ಯ ಯುದ್ಧ ಮುಕ್ತಾಯಗೊಂಡು, 1783ರಲ್ಲಿ ಆದ ಪ್ಯಾರಿಸ್ ಒಪ್ಪಂದದ ಪ್ರಕಾರ ಅಮೆರಿಕದ ವಸಾಹತುಗಳು ಸ್ವತಂತ್ರವೆಂದು ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು. ಅಮೆರಿಕ ಸಂಯುಕ್ತ ಸಂಸ್ಥಾನ ಹೀಗೆ ಜನ್ಮತಾಳಿತು. ಪೂರ್ವತೀರದ ಹದಿಮೂರು ಪ್ರಾಂತ್ಯಗಳ ಈ ಸಾಹಸದಿಂದ ರೂಪುಗೊಂಡ ಸಂಯುಕ್ತ ಸಂಸ್ಥಾನ ಪೆಸಿಫಿಕ್ ಸಾಗರದವರೆಗೂ ವ್ಯಾಪಿಸಿ ಉತ್ತರ ಅಮೆರಿಕದ ಮಧ್ಯ ಭಾಗವನ್ನೆಲ್ಲ ಒಳಗೊಂಡಿದೆ.
ಬ್ರಿಟಿಷರ ವಿರುದ್ಧ ಹೋರಾಡಿದ 13 ವಸಾಹತುಗಳು ಶಾಶ್ವತವಾದ ಒಕ್ಕೂಟವೊಂದನ್ನೇರ್ಪಡಿಸಿಕೊಂಡುವು. ಫಿಲಡೆಲ್ಫಿಯದಲ್ಲಿ 1787ರಲ್ಲಿ ಕೆಲವು ದೇಶಾಭಿಮಾನಿಗಳೂ ರಾಜಕೀಯತಜ್ಞರೂ ಸಭೆಸೇರಿ ತಮ್ಮ ರಾಷ್ಟ್ರಕ್ಕೆ ಪ್ರಪಂಚದಲ್ಲಿ ಮತ್ತೆಲ್ಲಿಯೂ ಕಾಣಸಿಗದಂಥ ಒಂದು ಹೊಸ ರಾಜ್ಯಾಂಗವನ್ನು ರಚಿಸಿಕೊಂಡರು. ಇದರ ರಚನೆಯಲ್ಲಿ ಅಲೆಗ್ಸಾಂಡರ್ ಹ್ಯಾಮಿಲ್ಟನ್, ಜೇಮ್ಸ್ ಮ್ಯಾಡಿಸನ್, ಥಾಮಸ್ ಜೆಫರ್‍ಸನ್ ಮೊದಲಾದವರು ಬಹು ಮುಖ್ಯ ಪಾತ್ರವಹಿಸಿದ್ದರು. ಲೇಖರೂಪ ರಾಜ್ಯಾಂಗಗಳಲ್ಲಿ ಅಮೆರಿಕದ ರಾಜ್ಯಾಂಗವೇ ಮೊಟ್ಟಮೊದಲನೆಯದು. ಇದರ ನಿರ್ಮಾಪಕರು ಬಹುಮಟ್ಟಿಗೆ ರೂಸೋ ಮತ್ತು ಮಾಂಟೆಸ್ಕೊ ವಿಚಾರಧಾರೆಗಳಿಂದ ಪ್ರೇರಿತರು. ಇವರ ರಾಜ್ಯಾಂಗದ ಪ್ರಕಾರ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಪ್ರತ್ಯೇಕವಾಗಿದ್ದು, ಆಡಳಿತ ನಿರ್ವಹಣೆಯ ಜವಾಬ್ದಾರಿ ಕೇಂದ್ರದಲ್ಲಿ ಹೆಚ್ಚಿನ ಅಧಿಕಾರವನ್ನು ಹೊಂದಿರುವ ಅಧ್ಯಕ್ಷನ ಕೈಲಿದೆ. ರಾಷ್ಟ್ರಕ್ಕೆ ಶಾಸನ ಮಾಡುವ ಹೊಣೆಗಾರಿಕೆ ಪ್ರತಿನಿಧಿಸಭೆ ಮತ್ತು ಸೆನೆಟ್ಟುಗಳಿಗೆ ಸೇರಿದೆ. ಇವರ ರಾಜಕೀಯ ರಂಗದಲ್ಲಿ ಮುಖ್ಯವಾಗಿ ರಿಪಬ್ಲಿಕ್ ಮತ್ತು ಡೆಮೊಕ್ರೆಟಿಕ್ ಎಂಬ ಎರಡು ಪಕ್ಷಗಳಿವೆ. ರಿಪಬ್ಲಿಕ್ ಪಕ್ಷಕ್ಕೆ ಆನೆಯೂ ಡೆಮೊಕ್ರೆಟಿಕ್ ಪಕ್ಷಕ್ಕೆ ಕತ್ತೆಯೂ ಮುಖ್ಯ ಚಿಹ್ನೆಗಳು. ಶ್ರೇಷ್ಠನ್ಯಾಯಾಲಯ ರಾಷ್ಟ್ರದ ಉಚ್ಚತಮ ನ್ಯಾಯಾಲಯ. ಅಲ್ಲದೆ ಸಂಯುಕ್ತರಾಷ್ರ್ಟಕೂಟಕ್ಕೆ ಸೇರಿದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ರಾಜ್ಯಾಂಗ ಮತ್ತು ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಆದರೂ ಅವು ಎಲ್ಲ ವಿಷಯಗಳಲ್ಲೂ ಸ್ವತಂತ್ರವಲ್ಲ. ಈ ರೀತಿ ರಚಿಸಿಕೊಂಡ ಸರ್ಕಾರ ವ್ಯವಸ್ಥೆಗೆ 1789ರಲ್ಲಿ ಜಾರ್ಜ್ ವಾಷಿಂಗ್‍ಟನ್ ಅವಿರೋಧವಾಗಿ ಸಂಯುಕ್ತಸಂಸ್ಥಾನಗಳ ಪ್ರಥಮಾಧ್ಯಕ್ಷನಾಗಿ (ಅವಧಿ 4 ವರ್ಷ) ಚುನಾಯಿತನಾದ. ಮತ್ತೊಂದು ಚುನಾವಣೆಯಲ್ಲಿ ಎರಡನೆಯ ಬಾರಿ ಚುನಾಯಿತನಾಗಿ ಅಧ್ಯಕ್ಷನಾಗಿದ್ದು 1797ರಲ್ಲಿ ಅಧಿಕಾರದಿಂದ ನಿವೃತ್ತಿ ಹೊಂದಿದ. ಅವನ ಜ್ಞಾಪಕಾರ್ಥವಾಗಿಯೇ ರಾಷ್ಟ್ರದ ರಾಜಧಾನಿಗೆ ವಾಷಿಂಗ್‍ಟನ್ ಎಂದು ಹೆಸರಿಡಲಾಗಿದೆ.
1817-1825 ಅವಧಿಯಲ್ಲಿ ಅಮೆರಿಕ ಸಂಯುಕ್ತ್ತಸಂಸ್ಥಾನದ ಅಧ್ಯಕ್ಷನಾಗಿದ್ದ ಜೇಮ್ಸ್ ಮನ್ರೋ ಘೋಷಣೆಯೊಂದನ್ನು ಹೊರಡಿಸಿದ. ಅದು ಅಮೆರಿಕದ ಇತಿಹಾಸದಲ್ಲಿ ಮನ್ರೋತತ್ತ್ವವೆಂದು ಪ್ರಸಿದ್ಧವಾಗಿದೆ. ಒಂದನೆಯ ನೆಪೋಲಿಯನ್ನನ ಪತನಾನಂತರ ಯುರೋಪಿನ ರಾಜಕೀಯದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಆಸ್ಟ್ರಿಯದ ಛಾನ್ಸಲರ್ ಮೆಟರ್ನಿಕ್ ಪ್ರಜಾಪ್ರಭುತ್ವ್ವದ ತತ್ವಗಳನ್ನು ಹತ್ತಿಕ್ಕಲೋಸುಗ, ಅದರ ವಿರುದ್ಧ ಹೋರಾಡುವ ತೀರ್ಮಾನವೊಂದನ್ನು ಕೈಗೊಂಡ. ಇದರ ಪ್ರಕಾರ ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳಲ್ಲಿದ್ದ ಸ್ಪೇನಿನ ವಸಾಹತುಗಳಲ್ಲಿ ಪುನಃ ನಿರಂಕುಶಾಧಿಕಾರವನ್ನು ಸ್ಥಾಪಿಸುವ ಪ್ರಯತ್ನ ನಡೆಯಲು ಅಲ್ಲಿ ದಂಗೆಗಳಾದುವು. ಈ ಸಂದರ್ಭದಲ್ಲಿ ಅಧ್ಯಕ್ಷ ಜೇಮ್ಸ್ ಮನ್ರೋ ಅಮೆರಿಕ ಅಮೆರಿಕನ್ನರಿಗೆ ಮಾತ್ರ ಸೇರಿದುದೆಂದು ಘೋಷಿಸಿದ. ಯುರೋಪಿನ ಯಾವ ರಾಜ್ಯವೇ ಆಗಲಿ ಅಮೆರಿಕದ ರಾಜ್ಯಗಳ ಆಂತರಿಕ ವ್ಯವಹಾರಗಳಲ್ಲಿ ತಲೆ ಹಾಕುವುದನ್ನು ಸಂಯುಕ್ತಸಂಸ್ಥಾನಗಳು ಸ್ನೇಹವಿರುದ್ಧ ಕ್ರಮವೆಂದು ಭಾವಿಸುತ್ತವೆಂದು ತಿಳಿಸಿದ. ಈ ಘೋಷಣೆ ಲ್ಯಾಟಿನ್ ಅಮೆರಿಕ ರಾಜ್ಯಗಳು ಸ್ವಾತಂತ್ರ್ಯಗಳಿಸಿಕೊಳ್ಳುವುದಕ್ಕೆ ಸಹಾಯಕವಾದುದಲ್ಲದೆ, ಅಮೆರಿಕ ಪ್ರಪಂಚದ ರಾಜಕೀಯ ವ್ಯವಹಾರದಿಂದ ದೂರವಿರುವುದಕ್ಕೂ ಕಾರಣವಾಯಿತು. ಆದರೆ ಇಂಥ ಪ್ರತ್ಯೇಕತೆಯ ತತ್ತ್ವ ವಿಕಾಸಗೊಳ್ಳುತ್ತಿರುವ ಈಚಿನ ವಿಶ್ವದಲ್ಲಿ ಸಾಧ್ಯವಾಗಲಿಲ್ಲ. ಅಧ್ಯಕ್ಷ ಥಿಯೊಡರ್ ರೂಸ್ವೆಲ್ಟ್ (1901-1909) ಈ ತತ್ತ್ವವನ್ನು ನಿರಾಕರಿಸಿ ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳ ಆಂತರಿಕ ವ್ಯವಹಾರಗಳಲ್ಲಿ ಪ್ರವೇಶಿಸಿದ. ಆದರೂ ಮನ್ರೋತತ್ವ ಎರಡನೆಯ ಮಹಾಯುದ್ಧಾನಂತರವೂ ಅಮೆರಿಕನ್ನರ ರಾಜಕೀಯ ಜೀವನದ ಮೇಲೆ ತನ್ನ ಪ್ರಭಾವ ಬೀರಿತು. ಅದರಿಂದಲೇ ಅಮೆರಿಕ ಪ್ರಪಂಚ ರಾಜಕೀಯದ ನಾಯಕತ್ವದ ಜವಾಬ್ದಾರಿಯನ್ನು ಹೊರಲು ಹಿಂಜರಿಯುತ್ತಿತ್ತು.
ನಾನಾ ದೇಶೀಯರು, ನಾನಾ ಜನಾಂಗದವರು, ವಿವಿಧ ವರ್ಣೀಯರನ್ನೊಳಗೊಂಡು ಪ್ರಗತಿ ಸಾಧಿಸತೊಡಗಿದ್ದ ಅಮೆರಿಕ ಸಂಯುಕ್ತ ಸ್ಥಾನಕ್ಕೆ 1861-1865 ಅವಧಿಯಲ್ಲಿ ವಿಷಮ ಪರಿಸ್ಥಿತಿಯೊಂದೊದಗಿ, ದೇಶವೇ ಇಬ್ಭಾಗವಾಗುವ ಭಯ ತಲೆದೋರಿತು. ರಾಜಧಾನಿಗೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿದ್ದ ರಾಜ್ಯಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳಿದ್ದುವು. ಅವುಗಳಲ್ಲಿ ಗುಲಾಮಗಿರಿಯ ರದ್ದಿನ ಪ್ರಶ್ನೆ ಮುಖ್ಯವಾದುದು. ರಾಜಧಾನಿಗೆ ಉತ್ತರ ಭಾಗದಲ್ಲಿದ್ದ ರಾಜ್ಯಗಳು ಕೈಗಾರಿಕೆಯಲ್ಲಿ ಮುಂದುವರಿದು ಗುಲಾಮಗಿರಿಯ ರದ್ದತಿ ಬಯಸಿದುವು. ಆದರೆ ದಕ್ಷಿಣದ ರಾಜ್ಯಗಳು ವ್ಯವಸಾಯವನ್ನೇ ಮುಖ್ಯ ಕಸಬನ್ನಾಗಿ ಮಾಡಿಕೊಂಡಿದ್ದರಿಂದ ರದ್ದತಿಯನ್ನು ನಿಷೇಧಿಸಿದುವು. 1829ರಲ್ಲಿ ಮೆಕ್ಸಿಕೊರಾಜ್ಯ ಗುಲಾಮಗಿರಿಯನ್ನು ನಿಷೇಧಿಸಿತು. ಇದನ್ನು ಟೆಕ್ಸಾಸ್ ವಿರೋಧಿಸಿ 1836ರಲ್ಲಿ ಸ್ವತಂತ್ರವಾಗಿ ಸಂಯುಕ್ತಸಂಸ್ಥಾನಗಳ ಕೂಟಕ್ಕೆ ಸೇರಲು ಅಪ್ಪಣೆ ಕೇಳಿತು. ಗುಲಾಮಗಿರಿಯನ್ನು ಹೊಂದಿದ್ದ ರಾಜ್ಯಗಳ ಪ್ರಭಾವ ಸಂಯುಕ್ತಸಂಸ್ಥಾನಗಳ ಕಾಂಗ್ರೆಸಿನಲ್ಲಿ ಹೆಚ್ಚಾಗುವುದೆಂದು ತಿಳಿದು ಉತ್ತರದ ರಾಜ್ಯಗಳು ಅದನ್ನು ವಿರೋಧಿಸಿದುವು. ಗುಲಾಮಗಿರಿಯ ರದ್ದಿನ ಪ್ರಶ್ನೆ ಚುನಾವಣೆ ವರ್ಷವಾದ 1860ರಲ್ಲಿ ಉತ್ಕಟ ಪರಿಸ್ಥಿತಿಯನ್ನು ಮುಟ್ಟಿತು. ಅಧ್ಯಕ್ಷ ಪದವಿಗೆ ಅಭ್ಯರ್ಥಿಗಳಲ್ಲೊಬ್ಬನಾಗಿದ್ದ ಏಬ್ರಹಾಂ ಲಿಂಕನ್ ಗುಲಾಮಗಿರಿ ಅಮಾನುಷವೆಂದು ನಂಬಿ ಅದಕ್ಕೆ ವಿರೋಧಿಯಾಗಿದ್ದ. ಚುನಾವಣೆ ಏಬ್ರಹಾಂ ಲಿಂಕನ್ನನ ವಿಜಯದಲ್ಲಿ ಕೊನೆಗೊಂಡು 1861ರ ಮಾರ್ಚ್‍ನಲ್ಲಿ ಆತ ಅಧಿಕಾರ ವಹಿಸಿಕೊಂಡ. ದಕ್ಷಿಣದ ರಾಜ್ಯಗಳಾದ ವರ್ಜಿನಿಯ, ನಾರ್ತ್ ಕೆರೊಲಿನ, ಸೌತ್ ಕೆರೊಲಿನ, ಜಾರ್ಜಿಯ, ಫ್ಲಾರಿಡ, ಟೆನೆಸ್ಸಿ, ಅಲಬಾಮ, ಮಿಸಿಸಿಪಿ, ಅರಕಾನ್‍ಸಾಸ್, ಲೂಸಿಯಾನ ಮತ್ತು ಟೆಕ್ಸಾಸ್ ರಾಜ್ಯಗಳು ಸಂಯುಕ್ತ್ತ ರಾಜ್ಯಕೂಟದಿಂದ ಹೊರಬಂದು, ತಮ್ಮದೇ ಆದ ರಾಜ್ಯಾಂಗವನ್ನು ನಿರ್ಮಿಸಿಕೊಂಡು ಜೆಫರ್‍ಸನ್ ಡೇವಿಸ್‍ನನ್ನು ಅಧ್ಯಕ್ಷನನ್ನಾಗೂ ಜನರಲ್ ಲೀಯನ್ನು ಮುಖ್ಯ ಸೇನಾಪತಿಯನ್ನಾಗೂ ನೇಮಿಸಿಕೊಂಡುವು. ಅಲ್ಲದೆ ತಮ್ಮ ರಾಷ್ಟ್ರಕ್ಕೆ ಕಾನ್ಫೆಡರಸಿ ಎಂದು ಹೆಸರನ್ನಿಟ್ಟು ಕೊಂಡರು. ಚಾರಲ್‍ಟನ್ ಬಂದರಿನಲ್ಲಿನ ಪೋರ್ಟ್ ಸಮ್ಟರಿನ ಒಂದು ಸಣ್ಣ ಘಟನೆಯಿಂದಾಗಿ ಉತ್ತರ ಮತ್ತು ದಕ್ಷಿಣ ರಾಜ್ಯಗಳಿಗೆ ಯುದ್ಧ ಪ್ರಾರಂಭವಾಯಿತು. ಅಧ್ಯಕ್ಷ ಲಿಂಕನ್ ಈ ಗಲಭೆಯನ್ನು ಹತ್ತಿಕ್ಕಲು 75,000 ಬಲದ ಸೈನ್ಯವನ್ನು ಸಜ್ಜುಗೊಳಿಸಿದ. ಅಂತೆಯೆ ದಕ್ಷಿಣದವರೂ ಸಿದ್ಧರಾದರು. ಕೈಗಾರಿಕೆಯಲ್ಲಿ ಮುಂದುವರಿದಿದ್ದ ಉತ್ತರದ ರಾಜ್ಯಗಳು ಅತ್ಯುತ್ತಮ ನೌಕಾಪಡೆಯನ್ನೂ ಹೊಂದಿದ್ದುವು. ದಕ್ಷಿಣದ ರಾಜ್ಯಗಳು ಹೆಚ್ಚಿನ ಸೇನಾಪಡೆಯನ್ನು ಹೊಂದಿದ್ದುವು. ಯುದ್ಧ ಪ್ರಾರಂಭವಾದ ಮೊದಲ ವರ್ಷಗಳಲ್ಲಿ ಯಾವುದೂ ಇತ್ಯರ್ಥವಾಗದೆ, 1864ರಲ್ಲಿ ಜನರಲ್ ಗ್ರಾಂಟ್ ಉತ್ತರದ ರಾಜ್ಯಗಳ ಮುಖ್ಯಸೇನಾಧಿಪತಿಯಾಗಿ ನೇಮಕಗೂಂಡ ಮೇಲೆ, ಅದೃಷ್ಟದೇವತೆ ಅವರನ್ನು ಒಲಿದಳು. ಕೊನೆಗೆ ದಕ್ಷಿಣದ ರಾಜ್ಯಗಳ ಸೈನ್ಯ ಅಪ್ಪೊ ಮಾಟಕ್ಸ್ ಎಂಬಲ್ಲಿ ಸೋತು ಶರಣಾಯಿತು. 1865ರಲ್ಲಿ ಅಂತರ್ಯುದ್ಧ ಉತ್ತರ ರಾಜ್ಯಗಳ ವಿಜಯದಲ್ಲಿ ಪರಿಸಮಾಪ್ತಿಗೊಂಡಿತು. ಈ ಯುದ್ಧದಲ್ಲಿ ಆದ ಸಾವುನೋವುಗಳು, ಕಷ್ಟನಷ್ಟಗಳು ಅಪರಿಮಿತ. ಅಧ್ಯಕ್ಷ ಏಬ್ರಹಾಂ ಲಿಂಕನ್ ಸಂಯುಕ್ತಸಂಸ್ಥಾನಗಳ ಏಕತೆಯನ್ನು ಕಾಪಾಡಿದ್ದಲದೆ, ಗುಲಾಮಗಿರಿಯನ್ನು ರದ್ದುಮಾಡಿ ಪ್ರಪಂಚದ ಇತಿಹಾಸದಲ್ಲೇ ಅಮರನಾಗಿದ್ದಾನೆ. ದಕ್ಷಿಣದವರ ಮೇಲೆ ಯುದ್ಧಮಾಡಿದರೂ ಆತ ಅವರ ಹಿತಾಕಾಂಕ್ಷಿಯೂ ಆಗಿದ್ದ.
ಹದಿಮೂರು ರಾಜ್ಯಗಳಿಂದ ಆರಂಭವಾದ ಸಂಯುಕ್ತಸಂಸ್ಥಾನ ಕಾಲಾನುಕ್ರಮದಲ್ಲಿ 50 ರಾಜ್ಯಗಳಿಂದ ಕೂಡಿ, ಉತ್ತರದಲ್ಲಿ ಗ್ರೇಟ್ ಲೇಕ್ಸ್ ಇಂದ ಹಿಡಿದು ದಕ್ಷಿಣದಲ್ಲಿ ಮೆಕ್ಸಿಕೊ ಕೊಲ್ಲಿಯವರೆಗೂ ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರದಿಂದ ಹಿಡಿದು ಪಶ್ಚಿಮದಲ್ಲಿ ಪೆಸಿಫಿಕ್ ಸಾಗರದವರೆಗೂ ವಿಸ್ತರಿಸಿ ಬೃಹತ್ ರಾಷ್ಟ್ರವಾಯಿತು. ಇಂಥ ವಿಸ್ತರಣೆ ಬಹಳಮಟ್ಟಿಗೆ ಯುದ್ಧರಹಿತವಾಗಿತ್ತು. ಬೇರೆ ಬೇರೆ ರಾಷ್ರಗಳ ಅಧೀನದಲ್ಲಿದ್ದ ಕೆಲವು ಪ್ರದೇಶಗಳನ್ನು ಕೊಂಡುಕೊಳ್ಳಲಾಯಿತು. ಮಿಸಿಸಿಪ್ಪಿ ಅಥವಾ ಲೂಸಿಯಾನಕ್ಕೆ ಪಶ್ಚಿಮದಲ್ಲಿದ್ದ ವಿಶಾಲವಾದ ಭೂಭಾಗವನ್ನು ಫ್ರಾನ್ಸಿನ ಒಂದನೆಯ ನೆಪೋಲಿಯನ್ನನಿಂದ (1803), ಫ್ಲಾರಿಡವನ್ನು ಸ್ಪೇನಿನವರಿಂದ (1819) ಕೊಂಡರು.
ಮೆಕ್ಸಿಕೊ ರಾಜ್ಯದಿಂದಹೊರಹೊರಟ (1836) ಟೆಕ್ಸಾಸ್ ರಾಜ್ಯವನ್ನು 1846ರಲ್ಲಿ ಅಧ್ಯಕ್ಷನಾಗಿದ್ದ ಜೇಮ್ಸ್ ನಾಕ್ಸ್ ಪೋಲ್ಕ್ ಮೆಕ್ಸಿಕೊದ ಮೇಲೆ ಯುದ್ಧವನ್ನು ಸಾರಿ ಅದರಿಂದ ನ್ಯೂ ಮೆಕ್ಸಿಕೊ ಮತ್ತು ಕ್ಯಾಲಿಫೋರ್ನಿಯಗಳನ್ನು ಸಂಯುಕ್ತಸಂಸ್ಥಾನಕ್ಕೆ ಸೇರಿಸಿದ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಸಂಯುಕ್ತಸಂಸ್ಥಾನಗಳು ಇನ್ನೂ ವಿಸ್ತಾರಗೊಂಡವು. ಬೇರಿಂಗ್ ಕೊಲ್ಲಿಯಲ್ಲಿ ಮೀನು ಹಿಡಿಯುವ ಸಲುವಾಗಿ ಅಲಾಸ್ಕ ಪ್ರದೇಶವನ್ನು 1867ರಲ್ಲಿ ರಷ್ಯದವರಿಂದ ಕೊಂಡುಕೊಂಡರು. 1898ರ ಫೆಬ್ರವರಿಯಲ್ಲಿ ಸಂಯುಕ್ತಸಂಸ್ಥಾನದ ಮೈನೆ ಎಂಬ ನೌಕೆಯೊಂದು ಹವಾನ ಬಂದರಿನಲ್ಲಿ ಸುಟ್ಟು ಬೂದಿಯಾಗಲು ಅಧ್ಯಕ್ಷ ಮೆಕಿನ್ಲೆ ಸ್ಪೇನಿನ ಮೇಲೆ ಯುದ್ಧ ಘೋಷಿಸಿದ. ಈ ಯುದ್ಧ ಮೂರು ತಿಂಗಳು ನಡೆದು ಸ್ಪೇನಿನವರು ಸೋತರು. 1898ರ ಪ್ಯಾರಿಸ್ಸಿನ ಕರಾರಿನಂತೆ ಸ್ಪೇನಿನವರು ಕ್ಯೂಬದಿಂದ ಹಿಂದೆಗೆದುದಲ್ಲದೆ ಗುಅಮ್ ಮತ್ತು ಫಿಲಿಫೈನ್ಸ್ ದ್ವೀಪಗಳನ್ನು ಸಂಯುಕ್ತಸಂಸ್ಥಾನಕ್ಕೆ ಬಿಟ್ಟುಕೊಟ್ಟರು. ಈ ಅವಧಿಯಲ್ಲೆ ಸಂಯುಕ್ತಸಂಸ್ಥಾನ ಹವಾಯ್ ದ್ವೀಪಗಳನ್ನು ವಶಪಡಿಸಿಕೊಂಡಿತು. ಈ ರೀತಿ ಸಂಯುಕ್ತಸಂಸ್ಥಾನ ವಿಶಾಲಗೊಂಡು ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಸಮುದ್ರಗಳಲ್ಲಿನ ರಾಜ್ಯಗಳ ಮೇಲೂ ತನ್ನ ಅಧಿಕಾರವನ್ನುಹೊಂದಿತ್ತು. ಈ ರಾಜ್ಯಗಳನ್ನು ರಕ್ಷಿಸುವ ಸಲುವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಅದರ ವ್ಯಾಪಾರ ವಾಣಿಜ್ಯಗಳ ಹಿತರಕ್ಷಣೆಗೂ ಸುಸಜ್ಜಿತವಾದ ಸೇನಾಪಡೆ ಮತ್ತು ನೌಕಾಪಡೆಯನ್ನು ನಿರ್ಮಿಸಿಕೊಂಡಿತು. ಸಂಯುಕ್ತಸಂಸ್ಥಾನಗಳ ವಿಸ್ತರಣೆ ಕೇವಲ ಹೊಸ ಪ್ರದೇಶಗಳನ್ನು ವಶಪಡಿಸಿಕೊಳುವುದೇ ಆಗಿರದೆ, ಆ ಪ್ರದೇಶಗಳಲ್ಲಿ ಪ್ರಾಚೀನ ವ್ಯವಸಾಯ ಪದ್ಧತಿಯನ್ನು ಅನುಸರಿಸಿಕೊಂಡಿದ್ದ ಜನಗಳನ್ನು ಆಧುನಿಕ ವ್ಯವಸಾಯ ಪದ್ಧತಿ, ಕೈಗಾರಿಕೆ ಮತ್ತು ಬಂಡವಾಳಶಾಹಿ ಸಮಾಜದತ್ತ ಮಾರ್ಪಡಿಸುವುದೂ ಆಗಿತ್ತು. ಹೊಸಪ್ರಪಂಚದ ಹೇರಳವಾದ ನೈಸರ್ಗಿಕ ಸಂಪತ್ತು, ಜನರ ಶಾರೀರಿಕಸಾಮರ್ಥ್ಯ, ಕಷ್ಟಸಹಿಷ್ಣುತೆ, ದೃಢನಿರ್ಧಾರ ಹಾಗೂ ಅವರ ರಾಜಕೀಯ ಪ್ರತ್ಯೇಕತಾತತ್ವ ಇವು ಆ ದೇಶ ಐಶ್ವರ್ಯಭರಿತ ರಾಷ್ಟ್ರವಾಗಿ ಬೆಳೆಯಲು ಸಹಕಾರಿಯಾದುವು. ಆದ್ದರಿಂದ ಇಂದು ಸಂಯುಕ್ತ್ತ ಸಂಸ್ಥಾನ ವಿಶ್ವದಲ್ಲೇ ಅತ್ಯಂತ ಪ್ರಬಲ, ಸಮೃದ್ಧರಾಷ್ರ್ಟವಾಗಿ ನಿಂತಿದೆ.
ಸಂಯುಕ್ತಸಂಸ್ಥಾನಗಳ ರಾಜಕೀಯ ಪ್ರತ್ಯೇಕತಾನೀತಿ ಇಪ್ಪತ್ತನೆಯ ಶತಮಾನದಲ್ಲಿ ಬದಲಾವಣೆಹೊಂದಿತು. 1914ರಲ್ಲಿ ಪ್ರಾರಂಭವಾದ ಒಂದನೆಯ ಮಹಾಯುದ್ಧದಲ್ಲಿ ಜರ್ಮನರನ್ನು ಸೋಲಿಸುವ ಸಲುವಾಗಿ ಸಂಯುಕ್ತ ಸಂಸ್ಥಾನಗಳು ಮಿತ್ರರಾಷ್ಟ್ರಗಳ ಕಡೆ ಸೇರಬೇಕಾಯಿತು. ಇದರಿಂದ ಜರ್ಮನರ ಸೋಲು ನಿಶ್ಚಿತವಾಗಿ 1918ರ ನವಂಬರಿನಲ್ಲಿ ಜರ್ಮನ್ನರು ಶರಣಾಗತರಾದರು. ಒಂದನೆಯ ಮಹಾಯುದ್ಧದಿಂದ ಇಡೀ ಪ್ರಪಂಚದ ಮಾನವಜನಾಂಗವೇ ಅಪಾರ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು. ಅಂದಿನ ವಿಶ್ವನಾಯಕರುಗಳಲ್ಲಿ ಒಬ್ಬನಾಗಿದ್ದ ಅಮೆರಿಕದ ಅಧ್ಯಕ್ಷ ವುಡ್ರೊ ವಿಲ್ಸನ್ (1913-1921) ವಿಶ್ವದಲ್ಲಿ ಯುದ್ಧವನ್ನು ತಪ್ಪಿಸಿ, ಮಾನವಕೋಟಿಗೆ ಶಾಂತಿಯನ್ನು ದೊರಕಿಸಿಕೊಡುವ ಸಲುವಾಗಿ ಇತರ ಪ್ರಮುಖ ರಾಷ್ಟ್ರಗಳ ಸೌಜನ್ಯದಿಂದ ಲೀಗ್ ಆಫ್ ನೇಷನ್ಸ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ. ಅದು ಪ್ರಜಾಪ್ರಭುತ್ವದ ರಕ್ಷಣೆ ಮತ್ತು ವಿಶ್ವಶಾಂತಿಸ್ಥಾಪನೆಯ ಜವಾಬ್ದಾರಿಯನ್ನು ಹೊತ್ತು ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿತು.
ಆದರೆ 1939ರಲ್ಲಿ ಪ್ರಾರಂಭವಾದ ಎರಡನೆಯ ಮಹಾಯುದ್ಧ (1939-1945) ಮಾನವ ಕೋಟಿಯನ್ನು ಘೋರ ದುರಂತಗಳಿಗೀಡುಮಾಡಿತು. ಈ ಯುದ್ಧದಲ್ಲಿ ಜಪಾನ್ ಜರ್ಮನಿಯ ಪಕ್ಷವನ್ನು ವಹಿಸಿ ಅಮೆರಿಕನ್ನರ ನೆಲೆಗಳ ಮೇಲೆ ಬಾಂಬುದಾಳಿ ನಡೆಸಿತು. ಉದ್ರಿಕ್ತಗೊಂಡ ಅಮೆರಿಕನ್ನರು ಮಿತ್ರರಾಷ್ಟ್ರಗಳ ಪಕ್ಷವನ್ನು ವಹಿಸಿ ಶತ್ರುಗಳ ಸೋಲಿಗೆ ಅಪಾರವಾಗಿ ಸಹಾಯಮಾಡಿದ್ದಲದೆ, ಜಪಾನಿಯರ ಮೇಲೆ ಯುದ್ಧವನ್ನು ಘೋಷಿಸಿ ಆ ರಾಜ್ಯದ ಮುಖ್ಯನಗರಗಳಾದ ನಾಗಸಾಕಿ ಮತ್ತು ಹಿರೋಷಿಮಗಳ ಮೇಲೆ 1945ರಲ್ಲಿ ಪರಮಾಣುಬಾಂಬುಗಳನ್ನು ಹಾಕಿ ನಿಮಿಷಾರ್ಧದಲ್ಲಿ ಲಕ್ಷಾಂತರ ಜನರನ್ನು ಬೂದಿಮಾಡಿ ಜಪಾನಿಯರ ಪ್ರಾಬಲ್ಯವನ್ನು ಮುರಿದರು. ಅನಂತರ ಜಪಾನ್, ಜರ್ಮನಿ ಮತ್ತು ಇಟಲಿಗಳು ಶರಣಾಗತವಾಗಿ ದ್ವಿತೀಯ ಮಹಾಯುದ್ಧ ಕೊನೆಗೊಂಡಿತು. ಯುದ್ಧದಿಂದ ಬಳಲಿದ ಜನತೆಗೆ ಸುಖಶಾಂತಿಗಳನ್ನು ದೊರಕಿಸಿ ಕೊಡಬೇಕೆಂದು ಅಧ್ಯಕ್ಷನಾಗಿದ್ದ ಫ್ರಾಂಕ್ಲಿನ್ ರೂಸ್ವೆಲ್ಟ್ (1933-1945) ಮತ್ತು ಇತರ ಮಹಾವ್ಯಕ್ತಿಗಳ ಸಾಹಸದ ಫಲವಾಗಿ ವಿಶ್ವಸಂಸ್ಥೆ ಜನ್ಮತಾಳಿತು. ಇದು ಮಾನವಜನಾಂಗದ ಕಲ್ಯಾಣಕ್ಕಾಗಿ ಜನ್ಮವೆತ್ತಿದ ಸಂಸ್ಥೆ. ಪ್ರಪಂಚದಲ್ಲಿ ಯುದ್ಧಗಳನ್ನು ತಪ್ಪಿಸಿ ಶಾಂತಿಯನ್ನು ಸ್ಥಾಪಿಸುವುದೇ ಇದರ ಪರಮೋದ್ದೇಶ. ಇದರ ಪ್ರದಾನ ಕಛೇರಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದೆ.
ಕಳೆದ ಒಂದು ಶತಮಾನ ಕಾಲದಲ್ಲಿ ಕೈಗಾರಿಕೆ, ವ್ಯಾಪಾರ, ವಿಜ್ಞಾನ, ಸಾಹಿತ್ಯ ಮುಂತಾದ ಎಲ್ಲ ರಂಗಗಳಲ್ಲೂ ಸಂಯುಕ್ತ್ತ ಸಂಸ್ಥಾನ ಗಣನೀಯ ಪ್ರಗತಿಯನ್ನು ಸಾಧಿಸಿದೆ; ಈ ಸಾಧನೆಗಳಿಗೆ ಅವರ ದೃಢನಿರ್ಧಾರ, ಕಷ್ಟಸಹಿಷ್ಣುತೆಗಳೇ ಕಾರಣ. ಇಂಥ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಅಮೆರಿಕನ್ನರು ವಿಶ್ವದಲ್ಲೇ ಅತ್ಯಂತ ಮುಂದುವರಿದ ಜನಾಂಗದವರಾಗಿದ್ದಾರೆ. ಇಂದು ಬಂಡವಾಳಶಾಹಿ ಮತ್ತು ಸಮಾಜವಾದವೆಂದು ವಿಭಜನೆಗೊಂಡಿರುವ ವಿಶ್ವದಲ್ಲಿ ಅಮೆರಿಕನ್ನರು ಬಂಡವಾಳಶಾಹಿವಾದದ ಪ್ರತಿಪಾದಕರಾಗಿಯೂ ರಷ್ಯನ್ನರು ಸಮಾಜವಾದದ ಪ್ರತಿಪಾದಕರಾಗಿಯೂ ಪ್ರತಿಸ್ಪರ್ಧಿಗಳಾಗಿ ನಿಂತದ್ದನ್ನು 1950ರ ನಂತರದ ಕೆಲವು ದಶಕಗಳು ಕಂಡವು. ಮುಂದೆ ಸೋವಿಯತ್ ಒಕ್ಕೂಟ ವಿಭಜನೆಯಾದ ಹಿನ್ನೆಲೆಯಲ್ಲಿ ಈ ಕಾವು ಕಡಿಮೆಯಾಯ್ತು. ಅಮೆರಿಕ ವಿಯೆಟ್ನಾಂ, ಕುವೈತ್, ಇರಾಕ್ ಯುದ್ಧಗಳಲ್ಲಿ ಭಾಗವಹಿಸಿ ಇತರರನ್ನೂ ಒಂದಿಲ್ಲ ಒಂದು ರೀತಿಯಲ್ಲಿ ದೂಡಿ ಸಾಕಷ್ಟು ಖರ್ಚನ್ನು ತನ್ನ ಮೇಲೆ ಎಳೆದುಕೊಂಡಿತು. ಒಂದಿಲ್ಲೊಂದು ರೀತಿಯಲ್ಲಿ ಜಿಗುಟುವ ಬುದ್ಧಿಯಲ್ಲಿ ವಿಶ್ವದ ಹಲವು ದೇಶಗಳು ಉಗ್ರಗಾಮಿಗಳಿಂದ ನಲುಗುತ್ತಿರುವಂತೆ ತನಗೂ ಆ ಬಿಸಿ ಮುಟ್ಟಿಸಿಕೊಂಡಿತು. ವಿಶ್ವ ವ್ಯವಹಾರದಲ್ಲಿ ಚೀಣಾ ಸಂಪಾದಿಸಿದ ಬೃಹತ್ ಬೆಳವಣಿಗೆ ಮತ್ತು ಭಾರತದಂತಹ ದೇಶ ತೋರಿದ ಸಾಧ್ಯತೆಗಳು ತನ್ನ ಹಿರಿತನದ ಜಂಭಕ್ಕೆ ಮಾರಕವಾಗಿದೆ ಎಂದು ಅದು ಭಾವಿಸಿ ರಾಜಕೀಯವಾಗಿ ಕಂಗಟ್ಟಂತೆ ವರ್ತಿಸಿದ್ದು ಕಳೆದ ಕೆಲವು ವರ್ಷಗಳಲ್ಲಿ ನಿಚ್ಚಳವಾಗಿ ಕಂಡುಬಂತು.
ಆದರೆ ಅಮೆರಿಕ ಸಂಪತ್ತಿನಲ್ಲಿ ಮಾತ್ರವಲ್ಲದೆ ಪ್ರಜಾಪ್ರಭುತ್ವದಲ್ಲೂ ಸಮರ್ಥ ದೇಶ. ವಿಶ್ವದ ಎಲ್ಲ ಜನಾಂಗಗಳನ್ನು ತನ್ನ ಉತ್ಕೃಷ್ಟ ವಿದ್ಯಾಭ್ಯಾಸ ಮತ್ತು ಸಂಶೋಧನಾ ವ್ಯವಸ್ಥೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟು ಆ ಬುದ್ಧಿವಂತ ಜನಾಂಗ ತನ್ನನ್ನು ಬಿಟ್ಟಗಲದಂತೆ ಮಾಡಿ ಆ ಮೂಲಕ ತನ್ನನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಿರುವ ದೇಶ. ಪ್ರಜಾಪ್ರಭುತ್ವ ಹೊಂದಿಲ್ಲದೆ ಸಂಪತ್ತನ್ನು ಗಳಿಸಿಕೊಂಡಿರುವ ಕೆಲವೊಂದು ದೇಶಗಳು ಗುಮ್ಮನಂತೆ ವರ್ತಿಸುತ್ತಾ ವಿಶ್ವದೆಲ್ಲೆಡೆ ಕರೋನಾದಂತಹ ಬೀಜವನ್ನು ಮಾತ್ರವಲ್ಲದೆ ಸಂದೇಹಾಸ್ಪದವಾಗಿ ಹಲವು ಬಾಗಿಲುಗಳಲ್ಲಿ ತನ್ನ ವಿಷ ನಾಲಗೆಗಳನ್ನು ಚಾಚುತ್ತಿರುವ ಸಂದರ್ಭದಲ್ಲಿ ಅಮೆರಿಕದಂತಹ ಪ್ರಜಾಪ್ರಭುತ್ವ ಉಳ್ಳ ದೇಶ, ಅಪಾರ ಜನಸಂಖ್ಯೆ ಉಳ್ಳ ಭಾರತದಂತಹ ಪ್ರಜಾಪ್ರಭುತ್ವ ಉಳ್ಳ ದೇಶದೊಂದಿಗೆ ಉತ್ತಮ ಬಾಂಧವ್ಯದಿಂದಿದ್ದು ವಿಶ್ವಶಾಂತಿ ಮತ್ತು ವಿಶ್ವಜನಾಂಗೀಯ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಅಪೇಕ್ಷಣೀಯ.
On American Indepenndence Day
ಕಾಮೆಂಟ್‌ಗಳು