ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ಯಾ ಮೂರ್ತಿ


 ವಿದ್ಯಾ ಮೂರ್ತಿ 


ನಮ್ಮೆಲ್ಲರ ಆತ್ಮೀಯರಾದ ಸರಳ ಸಜ್ಜನಿಕೆಯ ವಿದ್ಯಾ ಮೂರ್ತಿ ಅವರು ಕಲಾಲೋಕದ ಮಹಾನ್ ಸಾಧಕಿ. ಇವರು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಮೂರೂ ಕ್ಷೇತ್ರಗಳಲ್ಲಿ ತಮ್ಮ ಕಾಯಕಶ್ರದ್ಧೆ ಮತ್ತು ಪ್ರತಿಭೆಗಳಿಂದ ಹೆಸರಾದವರು.

ವಿದ್ಯಾ ಮೂರ್ತಿ 1956ರ ಜುಲೈ 18ರಂದು ಜನಿಸಿದರು.  ವಿದ್ಯಾ ಮೂರ್ತಿ ಅವರ ಪ್ರತಿಭೆ ಗುರುತಿಸಿ ನೀರೆರೆದವರು ಇವರ ಮಿಡ್ಲ್ ಸ್ಕೂಲ್ ಟೀಚರಾಗಿದ್ದ ರತ್ನಮ್ಮ ಮಿಸ್. ಶಾಲಾ ಸಮಾರಂಭಗಳ ಸಂಗೀತ, ನೃತ್ಯ, ನಾಟಕ, ಚರ್ಚಾಸ್ಪರ್ಧೆ, ಭಾಷಣ, ಹೀಗೆ ಎಲ್ಲದರಲ್ಲೂ ಇವರಿಗೊಂದು ಅವಕಾಶ ಮೀಸಲಾಗಿರುತ್ತಿತ್ತು.  ವಿದ್ಯಾ ಅವರ ಮನೆಯಲ್ಲೂ ಸಾಂಸ್ಕೃತಿಕ ವಾತಾವರಣವಿತ್ತು. ಅಣ್ಣ ಭರತನಾಟ್ಯ ಪಟು, ಒಳ್ಳೆಯ ನಟ. ಮತ್ತೊಬ್ಬ ಅಣ್ಣ ಹಾಡುಗಾರ. ತಂದೆ ಕನ್ನಡ ಪಂಡಿತರು, ಕಾವ್ಯವಾಚನ ಮಾಡುತ್ತಿದ್ದರು. ಹೆಣ್ಣುಮಕ್ಕಳನ್ನು ಕಡ್ಡಾಯವೆಂಬಂತೆ ಸಂಗೀತಪಾಠಕ್ಕೆ ಕಳಿಸುತ್ತಿದ್ದರು. ಹೀಗೆ ಸಂಗೀತ ಕಲಿತರು.  ಅಣ್ಣ ನೃತ್ಯ ಕಲಿಸುವಾಗ ಕೋಲಿನಿಂದ ಹೊಡೆದಿದ್ದಕ್ಕೆ ಇವರೂ  ವಾಪಸ್ ಅದೇ ಕೋಲಿನಿಂದ ಅಣ್ಣನಿಗೆ ಹೊಡೆದು ನೃತ್ಯದಿಂದ ವಿಮುಖರಾದರು. ಆದರೆ ರತ್ನಮ್ಮ ಟೀಚರ್ ಪ್ರೋತ್ಸಾಹದಿಂದ ಅಭಿನಯದ ಬಗ್ಗೆ ಹುಟ್ಟಿದ್ದ ಒಲವು ಮೆಲ್ಲಗೆ ಅರಿವಿಲ್ಲದಂತೆ ಬೆಳೆಯುತ್ತಲೇ ಇತ್ತು.

ವಿದ್ಯಾ ಅವರಿಗೆ ಪ್ರತಿಭಾ ಸಾಧನೆಯ ಆಧಾರದ ಮೇಲೆ ಪ್ರತಿಷ್ಟಿತ ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೇಜಿನಲ್ಲಿ ಸೀಟು  ಸೀಟು ದೊರೆಯಿತು.  ಕಾಲೇಜಿನ ಪ್ರಾಂಶುಪಾಲೆ ಚಿ.ನ.ಮಂಗಳಾ, ಮನಃಶಾಸ್ತ್ರ ಅಧ್ಯಾಪಕಿ ಬಿ. ಜೆ. ಸುವರ್ಣ, ಕನ್ನಡ ಅಧ್ಯಾಪಕಿ  ವಸಂತಕುಮಾರಿ ಮುಂತಾದವರೆಲ್ಲರೂ ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲೆಲ್ಲಾ ವಿದ್ಯಾ ಅವರಿಗೆ  ಪ್ರಮುಖ ಪಾತ್ರ ನೀಡಿ ಪ್ರೋತ್ಸಾಹಿಸಿದರು. ಹೋದೆಡೆಯಿಂದಲೆಲ್ಲಾ ಬಹುಮಾನ ತಂದರು.  ಅಣ್ಣ ರಂಗತಂಡಗಳಲ್ಲಿ ನಟಿಸುತ್ತಿದ್ದರೂ, ವಿದ್ಯಾಗೆ ಹೆಣ್ಣುಮಗಳೆಂದು ರಂಗತಂಡಗಳಲ್ಲಿ ಅಭಿನಯಿಸಲು ಅನುಮತಿ ಸಿಗಲಿಲ್ಲ.  

ವಿದ್ಯಾ ಅವರು ಮನಃಶಾಸ್ತ್ರ, ಕನ್ನಡ ಮತ್ತುಅರ್ಥಶಾಸ್ತ್ರ ಓದಿ ಪದವೀಧರೆಯಾದ ನಂತರ ಮದುವೆಯಾದಾಗ ಇನ್ನು ನಟನೆ ಸಾಧ್ಯವಿಲ್ಲದ ಮಾತು ಎಂಬ ನಿರಾಸೆ ಕವಿಯಿತು.  ಮಗ ಹುಟ್ಟಿದ.  ದೂರದರ್ಶನದಲ್ಲಿ ಮೂಡಿಬರುತ್ತಿದ್ದ ಧಾರಾವಾಹಿಗಳು ಮತ್ತೆ ವಿದ್ಯಾರನ್ನ ಅಭಿನಯದತ್ತ ಸೆಳೆಯತೊಡಗಿತು. ಈ ಮಧ್ಯೆ ಅಮ್ಮನ ಮರಣ ಇವರನ್ನು ತುಂಬಾ ಮಂಕುಮಾಡಿತ್ತು. ಇವರನ್ನು ಗಮನಿಸುತ್ತಲೇ ಬಂದಿದ್ದ ಪತಿರಾಯರು ಸ್ವಯಂ ತಾವೇ ಇವರಿಗೆ ಅಭಿನಯದಲ್ಲಿ ತೊಡಗಿಸಿಕೊಳ್ಳಲು ಸಲಹೆ ಮಾಡಿದರು. ಆದರೆ ಅವಕಾಶಗಳು ಕಾದು ಕುಳಿತಿರಲಿಲ್ಲ.  ಶತಾಯಗತಾಯ ತಮ್ಮನ್ನು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲೇಬೇಕೆಂದು ನಿರ್ಧರಿಸಿದರು. 

ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ, ಗೀತಾ ರಾಮಾನುಜಂ ಅವರ ನಿರ್ದೇಶನದ ತಿರುಮಲಾಂಬ ವಿರಚಿತ ನಾಟಕ ‘ಬ್ಯಾರಿಸ್ಟರ್ ರಾಮಚಂದ್ರ’ ನಾಟಕ ಪ್ರದರ್ಶನದ ಸಮಯದಲ್ಲಿ ಹಿಂಜರಿಯುತ್ತಲೇ ಗ್ರೀನ್ ರೂಂನಲ್ಲಿ ಗೀತಾ ರಾಮಾನುಜಂ ಅವರನ್ನು ಭೇಟಿಯಾಗಿ ತಮಗೆ ಅಭಿನಯದಲ್ಲಿ ಇರುವ ಇಷ್ಟವನ್ನು ನಿವೇದಿಸಿದರು. ಜಿ.ವಿ.ಅಯ್ಯರ್ ಅವರ ನಿರ್ದೇಶನದ ‘ಭಗವದ್ಗೀತೆ’ ಚಲನಚಿತ್ರದಲ್ಲಿ ಸಣ್ಣ ಪಾತ್ರ ದೊರಕಿತು.  ಗೀತಾ ರಾಮಾನುಜಂ ಅವರ ನಿರ್ದೇಶನದಲ್ಲಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ‘ಯಶೋಧರಾ’ ನಾಟಕದ ಎರಡನೆಯ ಪ್ರದರ್ಶನದಲ್ಲಿ ಇವರೇ ಯಶೋಧರೆ. ನಾಟಕ ಮುಗಿದ ಮೇಲೆ ಆರಂಭವಾದ ಕರತಾಡನ ಎಷ್ಟೋ ನಿಮಿಷಗಳವರೆಗೂ ನಿಲ್ಲದಿದ್ದಾಗ ಭರವಸೆ ವಿದ್ಯಾರಲ್ಲಿ ಮೂಡಿತು. ಮುಂದೆ ಗೀತಾ ರಾಮಾನುಜಂ ಅವರೇ ರಚಿಸಿ ನಿರ್ದೇಶಿಸಿದ ನಾಟಕಗಳಲ್ಲದೆ ಉಪಾಸನೆ ಸೀತಾರಾಂ, ಬಿ.ಆರ್.ಜಯರಾಂ, ಎಸ್.ಕೆ. ಮಾಧವರಾವ್, ವಾಸುದೇವರಾವ್, ಮೊದಲಾದ ದಿಗ್ಗಜರ ಮಾರ್ಗದರ್ಶನದಲ್ಲಿ ನಟಿಸಿ ಸೈ ಎನಿಸಿಕೊಳ್ಳುವ ಭಾಗ್ಯ ಇವರದಾಯಿತು. ಗೃಹಿಣಿಯಾಗಿ ಅತ್ತಿಂದಿತ್ತ ಹೊಯ್ದಾಡಬೇಕಾದ ಬದುಕಿನಲ್ಲಿ ಮೂಡಿದ ಸಮಸ್ಯೆಗಳು ಅನೇಕ.  ಆದರೆ ಇವರಲ್ಲಿ ಮೂಡಿದ್ದ ಕಲಾವಿದೆ ಇವೆಲ್ಲವನ್ನೂ ಛಾತಿಯಿಂದ ನಿಭಾಯಿಸಿ ಮುನ್ನಡೆದಳು.

ವಿದ್ಯಾ ಅವರಿಗೆ ಕಿರುತೆರೆಯಲ್ಲಿ ಟಿ.ಎನ್ . ಸೀತಾರಾಂ,  ಫಣಿ ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಸೇತುರಾಂ, ಲಿಂಗದೇವರು, ರವಿಕಿರಣ್, ವಿನು ಬಳಂಜ ಅವರಂತಹ ನಿರ್ದೇಶಕರು ಸತ್ವಯುತ ಪಾತ್ರಗಳನ್ನು ನೀಡಿದರು. ಸುನಿಲ್ ಕುಮಾರ್ ದೇಸಾಯಿ, ಮಿಲನ ಪ್ರಕಾಶ್, ಆರ್.ಚಂದ್ರು, ಕಿಶೋರ್ ಮೂಡುಬಿದಿರೆ, ಆಕಾಶ್, ಶ್ರೀ ವತ್ಸ ಮೊದಲಾದ ಯಶಸ್ವೀ ನಿರ್ದೇಶಕರು, ಕನ್ನಡದ ಖ್ಯಾತ ನಾಯಕನಟರೊಡನೆ ಅಭಿನಯಿಸುವ ಅವಕಾಶ ಮಾಡಿಕೊಟ್ಟರು.

ವಿದ್ಯಾ ಮೂರ್ತಿ ಅವರು ಪ್ರಧಾನ ಭೂಮಿಕೆಯಲ್ಲಿರುವ ನಾದಜ್ಯೋತಿ ಮುತ್ತು ಸ್ವಾಮಿ ದೀಕ್ಷಿತರು, ದಾಸ ಪುರಂದರ, ಹೋಂ ರೂಲ್, ಹುತ್ತದಲ್ಲಿ ಸುತ್ತ, ಯಶೋಧರೆ, ಅಮ್ಮಾ ರಿಟೈರ್ ಆಗ್ತಾಳೆ, ತನುವು ನಿನ್ನದೆ, ಮನವು ನಿನ್ನದೇ, ನಿಜಗಲ್ಲಿನ ರಾಣಿ, ಆಷಾಢಭೂತಿ, ಸ್ಮಶಾನ ಕುರುಕ್ಷೇತ್ರ ಮುಂತಾದ ನಾಟಕಗಳು ನಿರಂತರವಾಗಿ ಹಲವು ಜನಪ್ರಿಯ ಪ್ರದರ್ಶನಗಳನ್ನು ಕಂಡಿವೆ.  ಇನ್ನೂ ಬೇರೆ ಬೇರೆ ತಂಡಗಳ ಮೂಲಕ ನಟಿಸಿದ ನಾಟಕಗಳೂ ಸೇರಿ ಸುಮಾರು 500ಕ್ಕೂ ಹೆಚ್ಚಿನ ರಂಗ ಪ್ರದರ್ಶನಗಳಲ್ಲಿ ಇವರು ಭಾಗಿಯಾಗಿದ್ದಾರೆ.

ವಿದ್ಯಾ ಮೂರ್ತಿ ಅವರು ಪಾತ್ರ ನಿರ್ವಹಿಸಿರುವ ಧಾರಾವಾಹಿಗಳಲ್ಲಿ ಶಕ್ತಿ, ಮುಕ್ತ, ದೇವ್ರು, ದಂಡಪಿಂಡಗಳು, ಕಲ್ಯಾಣಿ, ಮುಕ್ತಮುಕ್ತ, ಗೃಹಭಂಗ, ಬದುಕು, ಮೌನರಾಗ, ಪ್ರೀತಿ ಇಲ್ಲದ ಮೇಲೆ, ಉಯ್ಯಾಲೆ, ಚಿತ್ರಲೇಖ, ಮನ್ವಂತರ, ದಶಾವತಾರ, ಮೋಹಿನಿ ವರ್ಸಸ್ ಮಹಾಲಿಂಗ, ಪಾ.ಪ.ಪಾಂಡು, ಸಿಲ್ಲಿ ಲಲ್ಲಿ, ಅಡಚಣೆಗಾಗಿ ಕ್ಷಮಿಸಿ, ಮುಂಬೆಳಗು, ಸುಬ್ಬಣ್ಣ, ಕೃಷ್ಣ ತುಳಸಿ, ಜೋಗುಳ, ಚಿಟ್ಟೆಹೆಜ್ಜೆ, ಜೊತೆಜೊತೆಯಲಿ, ಜನುಮದ ಜೋಡಿ, ನಿಗೂಢ ರಾತ್ರಿ, ಮಗಳು ಜಾನಕಿ, ಶಾಂತಂ ಪಾಪಂ, ಆಕಾಶ ಗಂಗೆ, ಬೆಳದಿಂಗಳಾಗಿ ಬಾ, ಬಣ್ಣದ ಬುಗುರಿ, ಮನೆಯೊಂದು ಮೂರು ಬಾಗಿಲು, ಸ್ತ್ರೀ, ಮುಂತಾದವು ಸೇರಿವೆ.

ವಿದ್ಯಾ ಮೂರ್ತಿ ಅವರು ಪಾತ್ರವಹಿಸಿರುವ ಚಲನಚಿತ್ರಗಳಲ್ಲಿ ಊರ್ವಶಿ, ಸ್ಪರ್ಷ, ಮತದಾನ, ಮೈಲಾರಿ, ವಂಶಿ, ಪೃಥ್ವಿ, ಚಾರ್ಮಿನಾರ್, ಕಿಚ್ಚ ಹುಚ್ಚ, ಚಂದ್ರು, ದಿಲ್ ಹೇಳಿದೆ ನೀ ಬೇಕಂತ, ಅಬ್ಬಾ ಆ ಹುಡುಗಿ, ದುಂಬಿ, ಬಾ ನನ್ನ ಪ್ರೀತಿಸು, ….ರೆ, ಬೇರು, ಪ್ರಪಾತ, ಮಾಲ್ಗುಡಿ ಡೇಸ್, ಶಿವಾಜಿ ಸೂರತ್ಕಲ್, ಅಣ್ಣಾಬಾಂಡ್,  ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಧೀರನ್, ಆದ್ದರಿಂದ, ಲಂಕಾಸುರ ಮುಂತಾದ ಅನೇಕವಿವೆ. 

ಸಂಗೀತ, ಕವನ, ಲೇಖನಗಳನ್ನು ಬರೆಯುವುದು, ಓದುವುದು, ಜಾಹಿರಾತುಗಳಿಗೆ ರೂಪದರ್ಶಿ, ಯೋಗಾಭ್ಯಾಸ ಇತ್ಯಾದಿ ಸಾಲು ಸಾಲು ಹವ್ಯಾಸಗಳೂ ವಿದ್ಯಾ ಮೂರ್ತಿ ಅವರೊಂದಿಗಿವೆ.

ಹೀಗೆ ವಿದ್ಯಾಮೂರ್ತಿ ಅವರ ಕಲಾಪಯಣ ಸಾಗುತ್ತಿದೆ.  ಅದೃಷ್ಟವಶಾತ್ ನಮಗೂ ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಸಾಧಕರ ಆತ್ಮೀಯ ಪರಿಚಯ ಲಭ್ಯವಾಗಿದೆ.  ಆತ್ಮೀಯರೂ ಹಿರಿಯ ಸಾಧಕರೂ ಆದ ಕಲಾವಿದೆ ವಿದ್ಯಾಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Vidya Murthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ