ಖಡಕವಾಸ್ಲಾ ಕಟ್ಟೆ
ಖಡಕವಾಸ್ಲಾ ಕಟ್ಟೆ
ಪುಣೆ ನಗರದ ನೈಋತ್ಯಕ್ಕೆ 17.7 ಕಿಮೀ. (11 ಮೈ.) ದೂರದಲ್ಲಿರುವ ಖಡಕವಾಸ್ಲಾ ಹಳ್ಳಿಯ ಹತ್ತಿರ ಮುಠಾ ನದಿಗೆ ಕಟ್ಟಿದ ಕಟ್ಟೆ ಇದು. ಉದ್ದ 4,820 ಅಡಿ. ಎತ್ತರ 167 ಅಡಿ. ಇದನ್ನು 1879ರಲ್ಲಿ ಕಟ್ಟಲಾಯಿತು.
ಇದರಿಂದ ಇಲ್ಲಿ ಒಂದು ದೊಡ್ಡಜಲಾಶಯದ ನಿರ್ಮಾಣವಾಗಿದೆ. ಅಲ್ಲಿಂದ ಎರಡು ಮುಖ್ಯ ಕಾಲುವೆಗಳನ್ನು ತೆಗೆದಿದ್ದಾರೆ. ಮೊದಲನೆಯದು ಹಡಪಸರದಿಂದ ಪಾಟಸ್ ಪರ್ಯಂತ ಮತ್ತು ಎರಡನೆಯದು ಕೋಥರೂಡದಿಂದ ಖಡಕೀ ವರೆಗೆ ಸಾಗುತ್ತವೆ.
ಖಡಕವಾಸ್ಲಾ ಕಟ್ಟೆಗೆ ಪಶ್ಚಿಮದಲ್ಲಿ ಘಟ್ಟಪ್ರದೇಶದಲ್ಲಿ ಮಳೆ ಹೇರಳವಾಗಿ ಬೀಳುತ್ತದೆ; ಈ ನೀರು ಉಪಯೋಗವಾಗದೆ ಹರಿದುಹೋಗುತ್ತಿದ್ದುದನ್ನು ತಪ್ಪಿಸಿ ಇದನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಉದ್ದೇಶದಿಂದಲೂ ಈ ಕಟ್ಟೆಯನ್ನು ಹೆಚ್ಚು ದೃಢಪಡಿಸಲೂ ಕ್ಷೇತ್ರವನ್ನು ವಿಸ್ತಾರಮಾಡಲೂ ಯೋಚಿಸಿ ಪಶ್ಚಿಮ ದಿಕ್ಕಿನಲ್ಲಿರುವ ಅಂಬಿ ನದಿಗೆ ಪಾನಶೇತ್ ಎಂಬಲ್ಲಿ ಒಂದು ಮಣ್ಣಿನ ಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಆ ಕಟ್ಟೆ ಮುಕ್ತಾಯದ ಘಟ್ಟದಲ್ಲಿದ್ದಾಗ ಬಿದ್ದ ಅತಿಶಯ ಮಳೆಯಿಂದಾಗಿ ಅದು ತೇಲಿಹೋಗಿ, ಪ್ರವಾಹದ ರಭಸದಿಂದಾಗಿ ಖಡಕವಾಸ್ಲಾ ಕಟ್ಟೆಯೂ ಒಡೆದು ಹೋಯಿತು. ಈ ದುರ್ಘಟನೆ 1961ರ ಜುಲೈ 12 ರಂದು ಸಂಭವಿಸಿತು. (ಕಡೇಪಕ್ಷ ಎರಡು ಸಾವಿರ ಜನ ಜೀವ ಕಳೆದುಕೊಂಡರು ಎನ್ನಲಾಗಿದೆ)
ಮುಂದೆ ಪುನಃ ಪಾನಶೇತ್ ಕಟ್ಟೆಯನ್ನು ಕಟ್ಟಿ ಮುಗಿಸಲಾಗಿದೆಯಲ್ಲದೆ, ಖಡಕವಾಸ್ಲಾ ಕಟ್ಟೆಯ ದುರಸ್ತಿಯೂ ಆಗಿದೆ. ಈ ಕಟ್ಟೆಯ ಒಂದು ಪಕ್ಕದಲ್ಲಿ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನ ಕೇಂದ್ರವಿದೆ. ಇದು ಈ ಕ್ಷೇತ್ರದಲ್ಲಿ ಏಷ್ಯದಲ್ಲೇ ಅತ್ಯಂತ ದೊಡ್ಡದಾದ ಮತ್ತು ಮಹತ್ತ್ವದ ಸಂಶೋಧನ ಕೇಂದ್ರ. ಕಟ್ಟೆಯ ಇನ್ನೊಂದು ಪಕ್ಕದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಎಂಬ ಸೈನಿಕ ಶಿಕ್ಷಣ ಮಹಾವಿದ್ಯಾಲಯವಿದೆ.
ಮಾಹಿತಿ: ಮೈಸೂರು ವಿಶ್ವಕೋಶ
Khadakwasla Dam Pune
ಕಾಮೆಂಟ್‌ಗಳು