ಕೆ. ಕೃಷ್ಣಮೂರ್ತಿ
ಕೆ. ಕೃಷ್ಣಮೂರ್ತಿ
ಒಮ್ಮೆ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳು ಒಬ್ಬ ಯುವಕನನ್ನು ಡಿ. ವಿ.ಜಿ. ಅವರ ಬಳಿಗೆ ಕರೆದುಕೊಂಡು ಬಂದರು. ಆ ವೇಳೆಗಾಗಲೇ ತರುಣನ ಅನೇಕ ಲೇಖನಗಳು ಪ್ರಕಟಗೊಂಡಿದ್ದವು. ಹುಡುಗ ತನ್ನ ಪುಸ್ತಕವನ್ನು ಡಿವಿಜಿ ಅವರಿಗೆ ಕೊಟ್ಟ. ಪುಸ್ತಕವನ್ನು ಸಮೀಕ್ಷಿಸಿದ ಡಿವಿಜಿ ಹಲವು ಪ್ರಶ್ನೆಗಳನ್ನು ಕೇಳಿದಾಗ ಹುಡುಗ ತನ್ನ ಜ್ಞಾನ ಭಂಡಾರದಿಂದ ಮಧುರವಾಗಿ ಉತ್ತರಿಸಿದ. ಡಿವಿಜಿ ಅವರಿಗೆ ಸಮ್ಮತವೆನಿಸಿತಾದರೂ ತೋರಗೊಡದೆ ಪುಸ್ತಕದಲ್ಲಿನ ಒಂದು ಕಾವ್ಯಪ್ರಯೋಗವನ್ನು ತೆಗೆದು, ಇದೇನು ಹೀಗಿದೆಯೆಲ್ಲ ತಪ್ಪಲ್ಲವೇ ಎಂದರು. ಹುಡುಗನ ಬೆಂಬಲಕ್ಕೆ ಬಂದ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳು ಹಲವಾರು ವಿದ್ವಾಂಸರು ಇದನ್ನು ಒಪ್ಪಿದ್ದಾರೆ ಎಂದರು. ಡಿ.ವಿ.ಜಿ. ಅವರಿಗೆ ಸಮ್ಮತವಾಗಲಿಲ್ಲ. ಅವರು ಹುಡುಗನಿಂದ ಉತ್ತರ ನಿರೀಕ್ಷಿಸುತ್ತಿದ್ದರು. ಹುಡುಗ ಅದು ಏಕೆ ಸರಿ ಎಂದು ವಿವರಿಸಿ, ಯಾವ ಯಾವ ವಿದ್ವಾಂಸರು ಎಲ್ಲಿ ಹೀಗೆ ಈ ಪ್ರಯೋಗವನ್ನು ಮಾಡಿದ್ದಾರೆ ಎಂದು ಚೊಕ್ಕವಾಗಿ ವಿಚಾರ ಮಂಡಿಸಿದ. ಡಿ.ವಿ.ಜಿ ಅವರು ಸಂತಸದಿಂದ ತಲೆದೂಗಿ ತಮ್ಮ ಕಪಾಟಿನಿಂದ ಅಂತಃಪುರ ಗೀತೆಗಳು ಮತ್ತು ಶ್ರೀರಾಮಪರೀಕ್ಷಣಮ್ ಕೃತಿಗಳನ್ನು ತೆಗೆದು ಒಂದರಲ್ಲಿ ಬರೆದದ್ದು ಹೀಗೆ:
"ಕೀರು ಕೊಟ್ಟವರಿಗೆ ಈ ಕಾಕಂಬಿ ನೀರು ಮುಯ್ಯಿ"
ಮತ್ತೊಂದರಲ್ಲಿ ಬರೆದದ್ದು ಹೀಗೆ:
"ಪರಮಾನ್ನವಿಟ್ಟವರಿಗೆ ಹುರಿಹಿಟ್ಟಾದರೂ ಕೊಡಬೇಡವೇ?"
ಈ ಯುವಕನೇ ಮಹಾನ್ ವಿದ್ವಾಂಸರೆಂದು ಪ್ರಸಿದ್ಧರಾದ ಡಾ. ಕೆ. ಕೃಷ್ಣಮೂರ್ತಿ. ಅಲಂಕಾರ ಶಾಸ್ತ್ರದಲ್ಲಿ ಕೃಷ್ಣಮೂರ್ತಿ ಒಂದಿನಿತೂ ತಪ್ಪುಮಾಡುವುದಿಲ್ಲ ಎಂದು ಮಹಾನ್ ವಿದ್ವಾಂಸ ಪ್ರೊ. ಎಂ. ಹಿರಿಯಣ್ಣನವರಿಂದ ಪ್ರಶಂಸೆ ಪಡೆವಷ್ಟು ಹಿರಿಮೆ ಗಳಿಸಿದವರು ಇವರು. ಭಾರತೀಯ ಅಲಂಕಾರ ಶಾಸ್ತ್ರದಲ್ಲಿ ಡಾ. ಕೆ. ಕೃಷ್ಣಮೂರ್ತಿ ಬಹುದೊಡ್ಡ ಹೆಸರು.
ಮಹಾನ್ ವಿದ್ವಾಂಸರಾದ ಕೆ. ಕೃಷ್ಣಮೂರ್ತಿ ಅವರು 1923ರ ಜುಲೈ 30ರಂದು ಹಾಸನ ಜಿಲ್ಲೆಯ ಕೇರಳಾಪುರ ಗ್ರಾಮದಲ್ಲಿ ಜನಿಸಿದರು. ತಂದೆ ಎನ್. ವೆಂಕಟಸುಬ್ಬಯ್ಯ. ತಾಯಿ ಗೌರಮ್ಮ.
ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ಪೂರೈಸಿದ ಕೃಷ್ಣಮೂರ್ತಿ, ಮೈಸೂರಿನಲ್ಲಿ ಪ್ರೌಢಶಾಲಾ ವಿದ್ಯಭ್ಯಾಸದಿಂದ ಮೊದಲುಗೊಂಡು, ಮೈಸೂರು ವಿಶ್ವವಿದ್ಯಾಲಯದಿಂದ 1942ರಲ್ಲಿ ಬಿ.ಎ. ಪದವಿ, 1943ರಲ್ಲಿ ಎಂ.ಎ ಪದವಿ ಪಡೆದರು. ಬಿ. ಎ. ಪದವಿ ಪರೀಕ್ಷೆಯಲ್ಲಿ ಕೆ. ಕೃಷ್ಣಮೂರ್ತಿ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಮೂರು ಭಾಷೆಗಳಲ್ಲೂ ಸುವರ್ಣ ಪದಕಗಳನ್ನು ಗಳಿಸಿದರು. ಅಂದಿನ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಮಹಾನ್ ವಿದ್ವಾಂಸರುಗಳ ಪ್ರಾಧ್ಯಾಪಕರಿಂದ ಕಂಗೊಳಿಸುತ್ತಿತ್ತು. ಅಂತಹ ದಿನಗಳಲ್ಲಿ ಕೃಷ್ಣಮೂರ್ತಿ ಅವರಿಗೆ ಬಂದಷ್ಟು ಅಂಕಗಳನ್ನು, ಅವರಿಗೆ ಹಿಂದೆ ಇಪ್ಪತ್ತು ವರ್ಷಗಳು ಯಾರೂ ಪಡೆದಿರಲಿಲ್ಲ ಹಾಗೂ ಮುಂದೆ ಹದಿನೆಂಟು ವರ್ಷಗಳ ಕಾಲ ಯಾರಿಗೂ ಪಡೆಯಲು ಸಾಧ್ಯವಾಗಲಿಲ್ಲ ಅಂದರೆ, ವಿದ್ಯಾರ್ಥಿಯಾಗಿ ಅವರ ವಿದ್ವತ್ತು ಎಂಥದ್ದು ಎಂಬ ಊಹೆ ನಮಗೆ ಸಿಗಬಹುದು. ಎಂ.ಎ. ಪದವಿಯಲ್ಲಿ ಅವರು ಮೂರು ಪ್ರಶ್ನೆಗಳನ್ನು ಮೂರು ಗಂಟೆಗಳ ಕಾಲದಲ್ಲಿ ಉತ್ತರಿಸಬೇಕಿತ್ತು. ಅವರು ಒಂದೇ ಪ್ರಶ್ನೆಗೆ ಎಂಭತ್ತು ಪುಟಗಳ ಉತ್ತರ ಬರೆದು, ಉಳಿದೆರಡು ಪ್ರಶ್ನೆಗಳಿಗೆ ಉತ್ತರ ಮೊದಲ ಪ್ರಶ್ನೆಯ ಉತ್ತರದಲ್ಲೇ ಇದೆ ಎಂದು ಬರೆದರಂತೆ.
ಹದಿನೆಂಟನೇ ವಯಸ್ಸಿನಲ್ಲೇ 'ಅಲಂಕಾರ ಶಾಸ್ತ್ರ'ದ ಕುರಿತು ಕೃಷ್ಣಮೂರ್ತಿ ಅವರು ಬರೆದ ಪ್ರಬಂಧಕ್ಕೆ ಪ್ರತಿಷ್ಠಿತ ಬಹುಮಾನ ಸಂದಿದ್ದೇ ಅಲ್ಲದೆ ಅವರನ್ನು ಪ್ರಖ್ಯಾತರನ್ನಾಗಿಸಿತು. ಕ್ರಮೇಣ ಇದೇ ವಿಚಾರದಲ್ಲಿ ಹಾದಿ ನಿರ್ಮಿಸಿಕೊಂಡು ಸಾಗಿದ ಕೃಷ್ಣಮೂರ್ತಿ ಬಹುದೊಡ್ಡ ಸಾಧನೆ ಮಾಡಿದರು. ಕೃಷ್ಣಮೂರ್ತಿ ಅವರು ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪಡೆದ ಪ್ರಥಮರು. 1944ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿ ಪಡೆದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿಗಾಗಿ ಅವರು ಸಲ್ಲಿಸಿದ ಪ್ರಬಂಧ 'ಧ್ವನ್ಯಾಲೋಕ ಅಂಡ್ ಇಟ್ಸ್ ಕ್ರಿಟಿಕ್ಸ್' ಪರಿಶೀಲಿಸಿದ ಭಾರತರತ್ನ ಪಿ.ವಿ. ಕಾಣೆ ಮತ್ತು ಮಹಾಮಹೋಪಾಧ್ಯಾಯ ಎಚ್.ಡಿ. ವೇಲಂಕರ್ ಸಂದರ್ಶನದ ಅಗತ್ಯವೇ ಇಲ್ಲದೆ ಪಿಎಚ್.ಡಿ ನೀಡಬಹುದು ಎಂದು ನಿರ್ಣಯಿಸುವಷ್ಟು ಇವರ ಪ್ರಬಂಧ ಪ್ರಭಾವಶಾಲಿಯಾಗಿತ್ತು.
ಕೆ. ಕೃಷ್ಣಮೂರ್ತಿ ಅವರು ಬಾಗಲಕೋಟೆ, ಕುಮಟಾ, ಮೈಸೂರು ಮುಂತಾದೆಡೆ ಅಧ್ಯಾಪಕರಾಗಿದ್ದು, ಕಡೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಕಳೆದ ಎರಡು ಶತಮಾನಗಳಲ್ಲಿ ಭಾರತೀಯರ ಬಗ್ಗೆ ಅಪಪ್ರಚಾರ ನಡೆಸಿದ ಬಹುಮಂದಿ ಪಾಶ್ಚಾತ್ಯ ವಿದ್ವಾಂಸರಿದ್ದರು. ಉದಾಹರಣೆಯಾಗಿ ಮಾಕ್ಸ್ ಮುಲರ್ ಅವರ ಈ ಹೇಳಿಕೆಯನ್ನೇ ಗಮನಿಸಬಹುದು: "The idea of the Beautiful in Nature did not exist in the Hindu mind … The Beautiful as such did not exist for them.” (Quoted by William Knight in The Philosophy of The Beautiful.) ಭಾರತೀಯರಿಗೆ ಅಲಂಕಾರ ಸೌಂದರ್ಯ ಎಂದರೆ ಏನು ಎಂದು ಗೊತ್ತಿಲ್ಲ ಎಂದ ಅಲ್ಪಜ್ಞಾನದಿಂದ ಅಪಪ್ರಚಾರ ಮಾಡಿದ ಮ್ಯಾಕ್ಸ್ಮುಲರ್ ಅಂತಹ ಅನೇಕರ ಕ್ಷುಲ್ಲಕ ವಾದವನ್ನು ಯಶಸ್ವಿಯಾಗಿ ಅಲ್ಲಗಳೆದು, ಭಾರತದ ಸಂಸ್ಕೃತಿಯ ಶ್ರೇಷ್ಠತೆಯನ್ನು ತಮ್ಮ ಇಂಗ್ಲಿಷ್ ಬರಹಗಳ ಮೂಲಕ ವಿಶ್ವದೆದುರು ತರೆದಿಟ್ಟ ಮಹತ್ವದ ವಿದ್ವಾಂಸರಲ್ಲಿ ಕೃಷ್ಣಮೂರ್ತಿಗಳು ಪ್ರಥಮ ಸಾಲಿನವರು. ಕೇವಲ ಅಲಂಕಾರ ಶಾಸ್ತ್ರ ಮಾತ್ರವಲ್ಲದೆ ತರ್ಕ, ವ್ಯಾಕರಣ, ಛಂದಸ್ಸು ಮತ್ತು ವೇದಾಂತಗಳಲ್ಲೂ ಕೃಷ್ಣಮೂರ್ತಿ ಪಾಂಡಿತ್ಯ ಹೊಂದಿದ್ದರು.
ಮಹಾರಾಣಿ ಸೇತೂ ಪಾರ್ವತಿಭಾಯಿ ಅವರ ಹೆಸರಿನಲ್ಲಿ ಕೇರಳ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಸಾಹಿತ್ಯ ಅಥವಾ ಹಿಂದೂ ತತ್ತ್ವಶಾಸ್ತ್ರದ ಯಾವುದೇ ವಿಭಾಗದಲ್ಲಿ ಪ್ರಕಟಗೊಂಡ ಅತ್ಯುತ್ತಮ ಗ್ರಂಥಕ್ಕೆ ಕೊಡಮಾಡುವ ಪ್ರಶಸ್ತಿಯನ್ನು ಕೃಷ್ಣಮೂರ್ತಿಯವರ “ಎಸ್ಸೇಸ್ ಇನ್ ಸಂಸ್ಕೃತ ಕ್ರಿಟಿಸಿಸಂ” ಕೃತಿ ಪಡೆದುಕೊಂಡಾಗಲೇ ಕೃಷ್ಣಮೂರ್ತಿಯವರತ್ತ ಎಲ್ಲರ ಗಮನ ಹರಿಯಿತು. ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ಅಭಿನವ ಭಾರತಿ ಅವರೊಂದಿಗಿನ ನಾಟ್ಯಶಾಸ್ತ್ರ ಕೃತಿಗಳು ಕೃಷ್ಣಮೂರ್ತಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ತಂದಿತು.
ಡಾ. ಕೆ. ಕೃಷ್ಣಮೂರ್ತಿ ಅವರು ಇಂಗ್ಲಿಷ್‌ನಲ್ಲಿ ಧ್ವನ್ಯಾಲೋಕ ಅಂಡ್ ಇಟ್ಸ್ ಕ್ರಿಟಿಕ್ಸ್, ಸಮ್ ಥಾಟ್ಸ್ ಆನ್ ಇಂಡಿಯನ್ ಏಸ್ತಿಟಿಕ್ಸ್ , ಎಸ್ಸೇಸ್ ಇನ್ ಸಂಸ್ಕೃತ್ ಕ್ರಿಟಿಸಿಸ್ಮ್, ಸ್ಟಡೀಸ್ ಇನ್ ಇಂಡಿಯನ್ ಏಸ್ತಿಟಿಕ್ಸ್ ಅಂಡ್ ಕ್ರಿಟಿಸಿಸ್ಮ್, ಇಂಡಿಯನ್ ಲಿಟರರಿ ಥಿಯರೀಸ್ - ಎ ರಿಅಪ್ರೈಸಲ್ ಮುಂತಾದ ಕೃತಿಗಳನ್ನು ರಚಿಸಿದ್ದರು. ಕನ್ನಡದಲ್ಲಿ ಆನಂದ ವರ್ಧನ ಕಾವ್ಯ ಮೀಮಾಂಸೆ, ಕನ್ನಡ ಧ್ವನ್ಯಾಲೋಕ, ಮುಮ್ಮುಟನ ಕಾವ್ಯ ಪ್ರಕಾಶ, ಕ್ಷೇಮೇಂದ್ರನ ಔಚಿತ್ಯ ವಿಚಾರ ಚರ್ಚೆ, ದಂಡಿಯ ಕಾವ್ಯಾದರ್ಶ, ಬಾಮಹನ ಕಾವ್ಯಾಲಂಕಾರ, ವಾಮನನ ಕಾವ್ಯಾಲಂಕಾರ ಸೂತ್ರವೃತ್ತಿ, ರಾಜಶೇಖರನ ಕಾವ್ಯಮೀಮಾಂಸೆ ಮುಂತಾದ ಕೃತಿಗಳನ್ನು ರಚಿಸಿದ್ದರು. ಇವುಗಳ ಜೊತೆಗೆ ಭಾಸ, ಪಾಣಿನಿ, ಬಾಣಭಟ್ಟ, ಶೂದ್ರಕ, ಕಾಳಿದಾಸ, ಭವಭೂತಿ, ಶಕ್ತಿಭದ್ರ, ಭಾರವಿ ಮುಂತಾದವರ ಗ್ರಂಥಗಳನ್ನು ಕನ್ನಡಕ್ಕೆ ತಂದರು. ಹೀಗೆ ಅವರು ಒಟ್ಟು 54 ಕೃತಿಗಳನ್ನು ಪ್ರಕಟಿಸಿದರು.
ಡಾ. ಕೆ. ಕೃಷ್ಣಮೂರ್ತಿ ಅವರಿಗೆ 1978ರಲ್ಲಿ ರಾಷ್ಟ್ರಪತಿಗಳ ಗೌರವ, ಮೈಸೂರು ವಿಶ್ವವಿದ್ಯಾಲಯದ ಸ್ವರ್ಣಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಉತ್ತರ ಪ್ರದೇಶದ ಸಂಸ್ಕೃತ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಡಾ. ಕೆ. ಕೃಷ್ಣಮೂರ್ತಿ ಅವರು 1997ರ ಜುಲೈ 18ರಂದು ಈ ಲೋಕವನ್ನಗಲಿದರು.
On the birth anniversary of great scholar Dr. K. Krishnamurthy
ಕಾಮೆಂಟ್‌ಗಳು