ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕ್ಯೂರಿ ದಂಪತಿಗಳು


 ಕ್ಯೂರಿ ದಂಪತಿಗಳು


ವಿಜ್ಞಾನ ಕ್ಷೇತ್ರದಲ್ಲಿ ಕ್ಯೂರಿ ದಂಪತಿಗಳು ನೀಡಿರುವ ಕೊಡುಗೆ ಅಪಾರ  ಫ್ರಾನ್ಸಿನ ರಸಾಯನ ವಿಜ್ಞಾನಿ ಪಿಯರ್ ಕ್ಯೂರಿ (1859-1906) ಮತ್ತು ಈತನ ಪತ್ನಿ ಪೋಲಿಷ್-ಫ್ರೆಂಚ್ ರಸಾಯನ ವಿಜ್ಞಾನಿ ಮೇರಿ ಸ್ಕ್ಲೊಡಾವ್‍ಸ್ಕ ಕ್ಯೂರಿ (1867-1934) ಮಹಾನ್ ವಿಜ್ಞಾನಿಗಳು. ಇವರು ವಿಕಿರಣಪಟುತ್ವವನ್ನು ಮೊಟ್ಟ ಮೊದಲಿಗೆ ಆವಿಷ್ಕರಿಸಿದ ಪ್ರತಿಭಾಶಾಲಿಗಳು; ರೇಡಿಯಂ ಮತ್ತು ಪೊಲೋನಿಯಂ ಎಂಬ ಧಾತುಗಳನ್ನು ಕಂಡುಹಿಡಿದವರು.

ಪಿಯರ್ ಕ್ಯೂರಿ ಪ್ಯಾರಿಸ್‍ನಲ್ಲಿ 1859ರ ಮೇ 15ರಂದು ಜನಿಸಿದರು. ಅಲ್ಲಿನ ಸೋರ್‍ಬೊನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸಮಾಡಿ ಅಲ್ಲೇ ಭೌತವಿಜ್ಞಾನದ ಪ್ರಾಧ್ಯಾಪಕರಾದರು. ಈತ ಮೊದಲು ಪೀಸೋವಿದ್ಯುತ್ ಪ್ರಕ್ರಿಯೆಯ ಮೇಲೆ ಸಂಶೋಧನೆಗಳನ್ನು ನಡೆಸಿದರು. ಅನಂತರ ಉಷ್ಣತೆಯ ಬದಲಾವಣೆಗಳಿಂದ ಉಂಟಾಗುವ ಕಾಂತಗುಣಗಳ ಬದಲಾವಣೆಗಳನ್ನು ಪರಿಶೀಲನೆ ಮಾಡಿ ಈಗ ಇವರ ಹೆಸರಿನಿಂದ ಕರೆಯಲ್ಪಡುವ ಕ್ಯೂರಿತತ್ತ್ವವನ್ನು ಸೂತ್ರರೂಪಕ್ಕೆ ತಂದರು.

ಮೇರಿ ಸ್ಕ್ಲೊಡಾವ್‍ಸ್ಕ ಪೋಲೆಂಡಿನ ವಾರ್ಸಾ ನಗರದಲ್ಲಿ 1867ರ ನವೆಂಬರ್ 7ರಂದು ಜನಿಸಿದರು. ಈಕೆಯ ತಂದೆ ಹುಡುಗರ ಶಾಲೆಯ ಮುಖ್ಯಸ್ಥರಾಗಿದ್ದರು; ಮುಂದೆ ಅದರ ಪ್ರಾಧ್ಯಾಪಕರಾದರು. ತಾಯಿ ಉತ್ತಮ ಸಂಗೀತಗಾರ್ತಿ, ಸುಸಂಸ್ಕೃತೆ.  ಇವರ ಐದು ಜನ ಮಕ್ಕಳಲ್ಲಿ ಮೇರಿಯೇ ಕೊನೆಯವರು. ಇವರಿಗೆ ಚಿಕ್ಕಂದಿನಲ್ಲಿಯೇ ತನ್ನ ತಂದೆಯಿಂದ ವಿಜ್ಞಾನದಲ್ಲಿ ತರಬೇತು ದೊರೆಯಿತು. ಚಿಕ್ಕವರಾಗಿದ್ದಾಗ ರಷ್ಯನರ ಆಡಳಿತದ ವಿರುದ್ಧ ಕ್ರಾಂತಿಕಾರಕ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದರು. ಪೋಲೆಂಡಿನಲ್ಲಿ ಪ್ರೌಢಶಾಲೆಗಿಂತ ಮೇಲಿನ ವಿದ್ಯಾಭ್ಯಾಸ ಮಾಡಲು ಆಗದೆ 1891ರಲ್ಲಿ ಈಕೆ ಫ್ರಾನ್ಸಿಗೆ ಪ್ರಯಾಣ ಮಾಡಿದರು. ಸೋರ್‍ಬೋನಿನಲ್ಲಿ ವಿದ್ಯಾಭ್ಯಾಸ ಮಾಡಲು ಪ್ರಾರಂಭಿಸಿ ಉಚ್ಚ ದರ್ಜೆಯಲ್ಲಿ ವಿಜ್ಞಾನದ ಡಿಗ್ರಿ ಪಡೆದರು. ಅದೇ ಸಮಯದಲ್ಲಿ ಪಿಯರ್ ಕ್ಯೂರಿಯ ಪರಿಚಯವಾಯಿತು. 1895ರಲ್ಲಿ ಅವರಿಬ್ಬರೂ ಮದುವೆಯಾದರು. 

ಸ್ವತಃ ಉತ್ತಮದರ್ಜೆಯ ವಿಜ್ಞಾನಿಯಾದರೂ ಪಿಯರ್ ಕ್ಯೂರಿ ತಮ್ಮ ಪತ್ನಿಯ ಅದ್ಭುತಶಕ್ತಿಗಳನ್ನು ಗಮನಿಸಿ ಸ್ವಂತೇಚ್ಛೆಯಿಂದ ಆಕೆಯ ಅನುಯಾಯಿಯಾಗಿ ವಿಜ್ಞಾನ ರಂಗದಲ್ಲಿ ದುಡಿಯಲು ನಿರ್ಧರಿಸಿದರು (1898). ಯುರೇನಿಯಂನಿಂದ ಉಂಟಾಗುವ ವಿಕಿರಣಪಟುತ್ವವನ್ನು ಹೆನ್ರಿ ಬೆಕರಲ್ 1896ರಲ್ಲಿ ಕಂಡುಹಿಡಿದಮೇಲೆ ಕ್ಯೂರಿ ದಂಪತಿಗಳು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಪ್ರಾರಂಭಿಸಿದರು. ಯುರೇನಿಯಂ ಇರುವ ಪಿಚ್‍ಬ್ಲೆಂಡ್ ಅದುರಿನಿಂದ ಬಹಳ ಕಷ್ಟಪಟ್ಟು ಎರಡು ಹೊಸ ಧಾತುಗಳನ್ನು ಕಂಡುಹಿಡಿದರು. ಅವಕ್ಕೆ ಪೊಲೋನಿಯಂ (ಮೇರಿ ಹುಟ್ಟಿದ ಪೋಲೆಂಡ್ ದೇಶದ ಗೌರವಾರ್ಥಕ್ಕಾಗಿ) ಮತ್ತು ರೇಡಿಯಂ ಎಂದು ಹೆಸರಿಡಲಾಯಿತು. ಮುಂದಿನ ವರ್ಷಗಳಲ್ಲಿ ರೇಡಿಯಂನ ಗುಣಗಳ ವಿಚಾರವಾಗಿಯೂ ಇತರ ವಿಷಯಗಳ ಮೇಲೂ ಸಂಶೋಧನೆ ನಡೆಸಿ ಈಗಿನ ಪರಮಾಣು ಭೌತ ಮತ್ತು ರಸಾಯನವಿಜ್ಞಾನಗಳ ತಳಹದಿಯನ್ನು ಈ ದಂಪತಿಗಳು ಹಾಕಿದರು.

1903ರಲ್ಲಿ ಕ್ಯೂರಿ ದಂಪತಿಗಳಿಗೆ ರಾಯಲ್ ಸೊಸೈಟಿಯ ಡೇವಿ ಪದಕ ದೊರೆಯಿತು. ಬೆಕರಲ್ಲನ ಜೊತೆಯಲ್ಲಿ ಭೌತವಿಜ್ಞಾನದ ನೊಬೆಲ್ ಪಾರಿತೋಷಿಕವನ್ನು ಈ ದಂಪತಿಗಳು ಪಡೆದರು (1903). ಈ ಪಾರಿತೋಷಿಕವನ್ನು ಗಳಿಸಿದ ಮಹಿಳೆಯರಲ್ಲಿ ಮೇರಿಯೇ ಮೊದಲನೆಯವರು. ಅದೇ ವರ್ಷ ಮೇರಿ ತಮ್ಮ ಸಂಶೋಧನೆಗಳ ಪರಿಣಾಮಗಳನ್ನು ವಿಶ್ವವಿದ್ಯಾಲಯಕ್ಕೆ ಒಪ್ಪಿಸಿ ಡಾಕ್ಟರೇಟ್ ಪ್ರಶಸ್ತಿಯನ್ನು ಗಳಿಸಿದರು. ಪಿಯರ್ ಕ್ಯೂರಿ 1904ರಲ್ಲಿ ಸೋರ್‍ಬೋನಿನಲ್ಲಿ ಭೌತವಿಜ್ಞಾನದ ವಿಶೇಷ ಪ್ರಾಧ್ಯಾಪಕರಾದರು ಮತ್ತು 1905ರಲ್ಲಿ ವಿಜ್ಞಾನದ ಅಕಾಡೆಮಿಗೆ ಚುನಾಯಿತರಾದರು. 1906ರ ಏಪ್ರಿಲ್ 19ರಂದು ಈತ ರಸ್ತೆಯನ್ನು ದಾಟುತ್ತಿದ್ದಾಗ ಆಕಸ್ಮಿಕವಾಗಿ ಕುದುರೆ ಬಂಡಿಯೊಂದಕ್ಕೆ ಸಿಕ್ಕಿ ಮೃತಪಟ್ಟರು. ಈತನಿದ್ದ ಪ್ರಾಧ್ಯಾಪಕ ಕೆಲಸಕ್ಕೆ ಮೇರಿಯನ್ನು ನೇಮಿಸಿದರು. ಫ್ರೆಂಚ್ ವಿಶ್ವವಿದ್ಯಾಲಯಗಳ ಚರಿತ್ರೆಯಲ್ಲಿಯೇ ಈ ಉನ್ನತ ಪದವಿಯನ್ನು ಪಡೆದ ಮೊದಲನೆಯ ಮಹಿಳೆ ಈಕೆ. 

ಮುಂದೆಯೂ ರೇಡಿಯಂನ ಮೇಲೆ ಮೇರಿ ಸಂಶೋಧನೆಗಳನ್ನು ಮುಂದುವರಿಸಿ 1911ರಲ್ಲಿ ರಸಾಯನ ವಿಜ್ಞಾನದ ನೊಬೆಲ್ ಪಾರಿತೋಷಿಕವನ್ನು ಪಡೆದರು. ಎರಡು ಬಾರಿ ಈ ಪಾರಿತೋಷಿಕವನ್ನು ಗಳಿಸಿರುವವರಲ್ಲಿ ಇವರೇ ಮೊದಲನೆಯವರು.

1918ರ ತರುವಾಯ ಹಿರಿಯ ಮಗಳಾದ ಐರೀನ್ (1897-1956) ಮೇರಿಗೆ ಸಹಾಯಮಾಡುತ್ತಿದ್ದರು. ಚಿಕ್ಕ ಮಗಳಾದ ಇವಾ ತನ್ನ ತಾಯಿಯ ಜೀವನ ಚರಿತ್ರೆಯನ್ನು ಮೇಡಂ ಕ್ಯೂರಿ (1937) ಎಂಬ ಪುಸ್ತಕದಲ್ಲಿ ಬರೆದಿದ್ದರೆ. ಮೇರಿ ತಾನು ಹುಟ್ಟಿದ ವಾರ್ಸಾನಗರದಲ್ಲಿ ವಿಕಿರಣಪಟುತ್ವದ ಸಂಶೋಧನೆಗಳಿಗಾಗಿ ಪ್ರಯೋಗಶಾಲೆಯೊಂದನ್ನು ಸ್ಥಾಪಿಸಲು ಬಹಳ ಸಹಾಯ ಮಾಡಿದರು.

ವಿಜ್ಞಾನಕ್ಕೆ ಮೇರಿ ಸಲ್ಲಿಸಿದ ಸೇವೆಯ ಜ್ಞಾಪಕಾರ್ಥವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದ (1912) ಹಾರ್ಡಿಂಗ್ ಅವರು ಅಮೆರಿಕದ ಮಹಿಳೆಯರ ಪರವಾಗಿ ಒಂದು ಗ್ರಾಂ ರೇಡಿಯಮನ್ನು ಆಕೆಗೆ ಕೊಟ್ಟರು. ಪುನಃ 1929ರಲ್ಲಿ ಅಧ್ಯಕ್ಷ ಹೂವರ್‍ರವರು ಅಮೆರಿಕದಲ್ಲಿರುವ ವಿಜ್ಞಾನಸ್ನೇಹಿತರ ಪರವಾಗಿ ಈಕೆಗೆ (ವಾರ್ಸಾದಲ್ಲಿನ ಪ್ರಯೋಗಶಾಲೆಯ ಉಪಯೋಗಕ್ಕೆಂದು) 50,000 ಡಾಲರುಗಳನ್ನು ಕೊಟ್ಟರು.

ಭೌತವಿಜ್ಞಾನದಲ್ಲಿ ಎರಡು ಸುಪ್ರಸಿದ್ಧ ಗ್ರಂಥಗಳನ್ನು ಮೇರಿ ಬರೆದಿದ್ದಾರೆ. ಜೀವಮಾನವಿಡೀ ವಿಕಿರಣಪಟು ಧಾತುಗಳೊಡನೆ ಪ್ರಯೋಗ ನಡೆಸಿದುದರ ಪರಿಣಾಮವಾಗಿ ಮೇರಿಯ ದೇಹ ವಿಕಿರಣಪಟುತ್ವದಿಂದ ಗಾಸಿಗೊಳಗಾಗಿತ್ತು. ಇದರ ಫಲವಾಗಿ ತಲೆದೋರಿದ ಲ್ಯುಕೀಮಿಯ ಎಂಬ ಕಾಯಿಲೆಯಿಂದ ಈಕೆ 1934ರ ಜುಲೈ 4ರಂದು ನಿಧನರಾದರು.

Marie Curie and Pierre Curie

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ