ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಡಿದಾಳ್ ಮಂಜಪ್ಪ


 ಕಡಿದಾಳ್ ಮಂಜಪ್ಪ


ಕಡಿದಾಳ್ ಮಂಜಪ್ಪ  ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು, ಸ್ವಾತಂತ್ರ್ಯ ಹೊರಾಟಗಾರರು, ವಕೀಲರು, ರಾಜಕೀಯ ಧುರೀಣರು ಹಾಗೂ ಕಾದಂಬರಿಕಾರರು. 

ಕಡಿದಾಳ್ ಮಂಜಪ್ಪ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರಾಗೊಳಿಗೆ ಗ್ರಾಮದಲ್ಲಿ 1910ರ ಜುಲೈ 10ರಂದು  ದುಗ್ಗಪ್ಪಗೌಡ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ಜನಿಸಿದರು.

ಮಂಜಪ್ಪನವರು ಬಾಲ್ಯದಲ್ಲಿ ಅನುಭವಿಸಿದ ದನಕುರಿಗಳನ್ನು ಕಾಯುವುದು, ಗೊಬ್ಬರಗೋಡುಗಳನ್ನು ಹೊರುವುದು, ಗದ್ದೆ ಉಳುವುದು ಇವೇ ಮುಂತಾದ ಬಾಲ್ಯದ ಕೃಷಿಕ ಜೀವನದ ಅನುಭವಗಳು ಮತ್ತು ನಿಸರ್ಗ ರಮಣೀಯ ಮಲೆನಾಡಿನ ಪರಿಸರ ಇವರ ಬಾಳಿನ ಮೇಲೆ ವಿಶೇಷ ಪರಿಣಾಮವನ್ನುಂಟು ಮಾಡಿದುವು.

ಮುಂಜಪ್ಪನವರ ವಿದ್ಯಾಭ್ಯಾಸ ಐಗಳ ಮಠದಲ್ಲಿ ಹರಡಿದ ಮರಳುರಾಶಿಯ ಮೇಲೆ ಅಕ್ಷರ ತಿದ್ದುವುದರಿಂದ ಆರಂಭವಾಯಿತು. ತೀರ್ಥಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ಇವರು ಶಿವಮೊಗ್ಗದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಇಂಟರ್ ಮಿಡಿಯೇಟ್ ವಿದ್ಯಾಭ್ಯಾಸ ಪೂರೈಸಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿ  1932ರಲ್ಲಿ ಬಿ.ಎ. ಪದವಿ ಪಡೆದರು. 1934ರಲ್ಲಿ ಪುಣೆಯ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದು ಉತ್ತೀರ್ಣರಾದರು.

ಮಂಜಪ್ಪನವರು ಶಿವಮೊಗ್ಗಕ್ಕೆ ಬಂದು 1935ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಅದೇ ವರ್ಷ ಅಖಿಲ ಭಾರತ ಕಾಂಗ್ರೆಸ್ಸಿನ ಸದಸ್ಯರಾದರು. ಇವರು ಪ್ರೌಢಶಾಲೆಯಲ್ಲಿದ್ದಾಗ ಶಿವಮೊಗ್ಗಕ್ಕೆ ಬಂದ ಗಾಂಧೀಜಿಯವರ ದರ್ಶನದಿಂದಲೂ ಹಾಗೂ ಅವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳಿಂದಲೂ ಪ್ರಭಾವಿತರಾಗಿ ರಾಜಕೀಯರಂಗಕ್ಕೆ ದುಮುಕಿದರು. 1937ರಿಂದ ಸುಮಾರು ಮೂರು ವರ್ಷ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 9 ತಿಂಗಳು ಸೆರೆಮನೆಯಲ್ಲಿದ್ದರು. ಮೈಸೂರಿನ ಜವಾಬ್ದಾರಿ ಸರ್ಕಾರ ಸ್ಥಾಪನೆಯ ಚಳವಳಿಯ ಸಂಬಂಧದಲ್ಲಿಯೂ ಕೆಲವು ತಿಂಗಳು ಸೆರೆಮನೆವಾಸ ಅನುಭವಿಸಿದರು.

ಕಡಿದಾಳ್ ಮಂಜಪ್ಪನವರು 1941-45ರ ಅವಧಿಯಲ್ಲಿ  ಮೈಸೂರು ಪ್ರಜಾಪ್ರತಿನಿಧಿ ಸಭೆಯ ಕಾಂಗ್ರೆಸ್ ಸದಸ್ಯರಾಗಿಯೂ, 1942-52ರ ಅವಧಿಯಲ್ಲಿ ಮೈಸೂರು ನ್ಯಾಯವಿಧಾಯಕ ಸಭೆ ಮತ್ತು ರಾಜ್ಯಾಂಗ ಸಭೆಗಳ ಕಾಂಗ್ರೆಸ್ ಸದಸ್ಯರಾಗಿಯೂ, 1952-67ರ ಅವಧಿಯಲ್ಲಿ ಮೈಸೂರು ವಿಧಾನಸಭೆಯ ಕಾಂಗ್ರೆಸ್ ಸದಸ್ಯರಾಗಿಯೂ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಮಂತ್ರಿಯಾಗಿಯೂ ಕೆಲವು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿಯೂ ಇದ್ದರು.

ಕಡಿದಾಳ್ ಮಂಜಪ್ಪನವರು 1962ರಲ್ಲಿ ಬೆಂಗಳೂರಿನಲ್ಲಿ ನೆಲಸಿ ವಕೀಲಿ ಆರಂಭಿಸಿದರು. ಮಂಜಪ್ಪನವರು ತಮ್ಮ ಖಾಸಗಿ ಹಾಗೂ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠಾವಂತಿಕೆ ಮೆರೆದವರು. 

ಕಡಿದಾಳ್ ಮಂಜಪ್ಪನವರು ಕಾದಂಬರಿಕಾರರಾಗಿಯೂ ಹೆಸರು ಗಳಿಸಿದರು. ಇವರು ಪಂಜರವಳ್ಳಿಯ ಪಂಜು (1963) ಎಂಬ ಕಾದಂಬರಿಯಲ್ಲಿ ಮಲೆನಾಡಿನ ನಿಸರ್ಗ ಸೌಂದರ್ಯವನ್ನೂ ಅಲ್ಲಿಯ ಜನಜೀವನವನ್ನೂ ಯಥಾವತ್ತಾಗಿ ಚಿತ್ರಿಸಿದ್ದಾರೆ. ಮೂರು ತಲೆಮಾರಿನ ಕಥೆ ತಿಳಿಸುವ ಈ ಕಾದಂಬರಿಯಲ್ಲಿ ರಾಜಕಾರಣದಲ್ಲಿ ಗಾಂಧೀ ತತ್ವಗಳ ಅನುಷ್ಟಾನ ಅಗತ್ಯವೆಂದು ಹೇಳಿ ಕಾಂಗ್ರೆಸ್ಸಿನ ಧ್ಯೇಯ - ಧೋರಣೆ - ಸಾಧನೆಗಳನ್ನು ತಿಳಿಸಲಾಗಿದೆ. ಈ ಪುಸ್ತಕ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದವಾಗಿದೆ. ನಾಳೆಯ ನೆಳಲು (1966) ಇವರ ಇನ್ನೊಂದು ಕಾದಂಬರಿ. ಸಾರ್ವಜನಿಕ ಜೀವನದ ಶುದ್ಧೀಕರಣ ಈ ಕಾದಂಬರಿಯ ಮುಖ್ಯ ಉದ್ದೇಶ. ಕ್ರಾಂತಿಕೂಟ (1974) ಇವರ ಮತ್ತೊಂದು ಕಾದಂಬರಿ. ನನಸಾಗದ ಕನಸು ಎಂಬುದು ಇವರ ಆತ್ಮಚರಿತ್ರೆ. ಕಾಯಕವೇ ಕೈಲಾಸ ಎಂಬ ತತ್ವಕ್ಕನುಗುಣವಾಗಿ ಇವರು ತಾವು ಸಕ್ರಿಯರಾಗಿರುವವರೆಗೂ ವಕೀಲವೃತ್ತಿ ನಡೆಸಿದರು. ಮಲೆನಾಡ ಗಾಂಧೀ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ಇವರದು ಆದರ್ಶ ತುಂಬಿದ ಬದುಕು. ಸರ್. ಎಂ. ವಿಶ್ವೇಶ್ವರಯ್ಯನವರೂ ಇವರನ್ನು ತುಂಬಾ ಮೆಚ್ಚಿಕೊಂಡಿದ್ದರಂತೆ. ಇವರ ಪತ್ನಿ ಮಲ್ಲಿಕಾ ಅವರೂ ಸಾಹಿತಿಗಳಾಗಿ ಪ್ರಸಿದ್ಧರಾಗಿದ್ದಾರೆ.

ಕಡಿದಾಳ್ ಮಂಜಪ್ಪನವರು 1992ರ ಮಾರ್ಚ್ 8ರಂದು ಈ ಲೋಕವನ್ನಗಲಿದರು.

On the birth anniversary of politician and writer Kadidal Manjappa 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ