ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಂದ್ರ ಶಾಸ್ತ್ರಿ



ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿ


ಇಂದು ಸಂಗೀತ ವಿದ್ವಾಂಸರಾದ ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿಗಳ ಜನ್ಮದಿನ.

ಡಾ ಶ್ರಿಕಾಂತಮ್ ನಾಗೇಂದ್ರ ಶಾಸ್ತ್ರಿಗಳು 800 ವರ್ಷ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಚಿಂತಲಪಲ್ಲಿ ಸಂಗೀತ ಪರಂಪರೆಗೆ ಸೇರಿದವರು. ಚಿಂತಲಪಲ್ಲಿ ಪರಂಪರೆಯನ್ನು ಪೋಷಿಸಿದ ರಾಜಮನೆತನಗಳು ಅನೇಕ. ಗಂಗರು, ವಿಜಯನಗರ, ಬಹಮನಿ, ಮೈಸೂರು ರಾಜಮನೆತನಗಳು ಈ ಸಂಗೀತ ವಾಹಿನಿಯನ್ನು ಪೋಷಿಸಿ ಬೆಳೆಸಿವೆ. ಇಂತಹ ಪರಂಪರೆಯ ಕುಡಿ ನಾಗೇಂದ್ರ ಶಾಸ್ತ್ರಿಗಳು. ಇವರ ಮುತ್ತಾತನವರು ಆಸ್ಥಾನ ವಿದ್ವಾನರೂ, ಕರ್ನಾಟಕ ಸಂಗೀತ ಭೀಷ್ಮ ಎಂದು ಡಿ ವಿ ಜಿ ಯವರೇ ಕರೆದ ಚಿಂತಲಪಲ್ಲಿ ವೆಂಕಟರಾಯರು. ಇವರ ತಾತ ಸಂಗೀತ ಕಲಾರತ್ನ ಆಸ್ಥಾನ ವಿದ್ವಾನ್ ರಾಮಚಂದ್ರ ರಾಯರು. ವೆಂಕಟರಾಯರು ಮೈಸೂರು ಸದಾಶಿವರಾವ್ ಮತ್ತು ಪಲ್ಲವಿ ಶೆಷಯ್ಯನವರ ಶಿಷ್ಯರು. ತನ್ಮೂಲಕ ನೇರ ತ್ಯಾಗರಾಜ ಪರಂಪರೆಗೆ ಸೇರಿದವರು.

ನಾಗೇಂದ್ರ ಶಾಸ್ತ್ರಿಗಳು ಸಂಗೀತ ಕಲಿಕೆಯನ್ನು ತಮ್ಮ ತಾತನವರಾದ ರಾಮಚಂದ್ರರಾಯರಲ್ಲಿ ಮೊದಲು ಮಾಡಿ, ಅವರ ಕಾಲಾನಂತರ, ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್ಯರ ಶಿಷ್ಯರಾದ ಅಂಬಿ ಭಾಗವತರ್ ಅವರ ಬಳಿ ಕಲಿಕೆಯನ್ನು ಮುಂದುವರೆಸಿದರು. ಚಿಂತಲಪಲ್ಲಿ ಸೂರ್ಯನಾರಾಯಣ ರಾವ್ ಅವರ ಬಳಿಯೂ ಅಭ್ಯಾಸ ಮಾಡಿದರು. ಸಂಗೀತ ಶಾಸ್ತ್ರದ ಮಹಾಮಹೋಪಾಧ್ಯಾಯ ಡಾ. ರಾ.ಸತ್ಯನಾರಾಯಣ ಅವರ ಬಳಿ ಅಧ್ಯಯನ ನಡೆಸಿ, ಅವರಲ್ಲಿಯೆ ಶ್ರೀ ವಿದ್ಯಾ ಔಪಾಸನೆಯ ದೀಕ್ಷೆಯನ್ನೂ ಪಡೆದರು. ತಾಳ ಪ್ರಸ್ತಾರ ವಿಚಾರವಾಗಿ ಶ್ರೀ ಆಕ್ಕೆಳ ಮಲ್ಲಿಕಾರ್ಜುನ ಶರ್ಮರ ಬಳಿ ಅವರ ಅಧ್ಯಯನ ಸಾಗಿತು.

ಸಂಗೀತ ಲಕ್ಷ್ಯ ಮತ್ತು ಲಕ್ಷಣದಲ್ಲಿ ಸಮ ಪ್ರಮಾಣದ ವಿದ್ವತ್ತುಳ್ಳ ನಾಗೇಂದ್ರ ಶಾಸ್ತ್ರಿಗಳದು ಲಕ್ಷ್ಯ ಮತ್ತು ಲಕ್ಷಣದ ಸೇತು ಎಂಬುದು ವಿದ್ವಜ್ಜನರ ಮಾತು. ವಂಶವಾಹಿಯಾಗಿ ಬಂದ ಸಂಗೀತದ ಜೊತೆ ಜೊತೆಗೆ, ಕನ್ನಡದಲ್ಲಿ ಎಂ ಎ ಮಾಡಿ ಚಿನ್ನದ ಪದಕ ಪಡೆದ ಸಾಧನೆ ಇವರದ್ದು. ಮುಂದೆ "ಮಧ್ಯ ಕಾಲದ ಕನ್ನಡ ಕಾವ್ಯದಲ್ಲಿ ಸಂಗೀತದ ಪರಿಭಾಷೆ" ಎಂಬ ಮಹಾಪ್ರಬಂಧವನ್ನು ಮಂಡಿಸಿ, ಕನ್ನಡ, ಸಂಗೀತ ಮತ್ತು ಕೋಶ ಶಾಸ್ತ್ರಗಳ ಬಹುಮಖಿ ಸಂಗಮದ ಮಹತ್ಸಾಧನೆಗಾಗಿ ಡಾಕ್ಟರೇಟ್ ಪಡೆದವರು. ಕೆಳದಿಯ ತಾಳ ಪ್ರಸ್ತಾರ ಶಾಸನ - ಒಂದು ಶಾಸ್ತ್ರೀಯ ಅಧ್ಯಯನ ಇವರ ಮತ್ತೊಂದು ಮಹತ್ವದ ಸಂಶೋದನಾ ಕೃತಿ.

ವಿದ್ವಾನ್ ನಾಗೇಂದ್ರ ಶಾಸ್ತ್ರಿಗಳು ದೇಶದ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಕಚೇರಿಗಳು ಮತ್ತು ಸೋದಾಹರಣ ಉಪನ್ಯಾಸಗಳನ್ನು ನಡೆಸಿಕೊಟ್ಟು ವಿದ್ವದ್ ಜನರು ಮತ್ತು ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮತ್ತು ಸಂಗೀತ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚಿಂತಲಪಲ್ಲಿ ಪರಂಪರೆಯ ಟ್ರಸ್ಟ್ ಮತ್ತು ಶಿವ ಶ್ರೀಕಾಂತ ಸಂಗೀತ ಸಭೆಗಳ ಮೂಲಕ ಸಮರ್ಥ ಅಯೋಜಕರಾಗಿ ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಪ್ರತಿಷ್ಠಿತ ಮದ್ರಾಸಿನ ಆಡ್ಯಾರ್ ಕಲಾಕ್ಷೇತ್ರದ ಅಕಾಡೆಮಿ ಕಾರ್ಯಕಾರಿಣಿಯಲ್ಲಿದ್ದಾರೆ.  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೂ ಸಂಗೀತಶಾಸ್ತ್ರ ಪ್ರಕಟಣಾ ಕಾರ್ಯದಲ್ಲಿ ಅವರು ಭಾಗಿಯಾಗಿದ್ದಾರೆ. ಇವರಿಗೆ ಮಹಾಮಹೋಪಾಧ್ಯಾಯ ಡಾ. ರಾ.ಸತ್ಯನಾರಾಯಣ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ದಶವಿಧ ರಾಗ ನವತಿ ಕುಸುಮ ಮಂಜರಿ ಎಂಬ ಅತ್ಯಂತ ಕ್ಲಿಷ್ಟವಾದ ಪಂಚಮುಖಿ ತಾಳವಧಾನ ನಡೆಸಿದ ಕೀರ್ತಿ ಶಾಸ್ತ್ರಿಗಳದ್ದು.  ಆದಿ ಭಟ್ಲನಾರಾಯಣ ದಾಸರ ಪಂಚ ಮುಖಿ ಮತ್ತು ಷಣ್ಮುಖಿಯ ಸರ್ವ ಜಾತ್ಯಾತ್ಮಕ ಸರ್ವತಾಲಾತ್ಮಕ ರಾಗಮಾಲಿಕೆಯನ್ನು ಅವಧಾನದಲ್ಲಿ ಅಳವಡಿಸಿ ತಮ್ಮ ಶಿಷ್ಯರ ಮೂಲಕ ಪ್ರಪ್ರಥಮವಾಗಿ ಪ್ರದರ್ಶನ ಕೂಡಾ ಮಾಡಿಸಿದ್ದಾರೆ.

ಸ್ವಯಂ ಸಾಧನೆಯ ಜೊತೆಗೆ, ಅನೇಕ ಶಿಷ್ಯಮಂದಿಗೆ ಗುರುವಾಗಿ ಮತ್ತು ಪ್ರೇರಣೆಯಾಗಿ, ಸಂಗೀತವಾಹಿನಿಯ ಪ್ರವಹಿನಿಯಲ್ಲಿ ನಿರತ ವಿರಾಜಿಸುತ್ತಿರುವ ಡಾ. ನಾಗೇಂದ್ರ ಶಾಸ್ತ್ರಿಗಳ ಬದುಕು ಮತ್ತು ಸಂಗೀತ ಲೋಕ ನಿರಂತರಬೆಳಗುತ್ತಿರಲಿ ಎಂಬುದು ಅವರ ಜನ್ಮದಿನ ಸಂದರ್ಭದಲ್ಲಿನ ಆಪ್ತ ಆಶಯ.

On the birth day of musician Dr. Shreekantham Nagendrashastry Sir 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ