ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹುಲಿವಾನ ಗಂಗಾಧರಯ್ಯ

 

ಹುಲಿವಾನ ಗಂಗಾಧರಯ್ಯ 

ಹುಲಿವಾನ ಗಂಗಾಧರಯ್ಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದರಾಗಿ ಹೆಸರಾಗಿದ್ದವರು. ಕೃಷಿಕರಾದ ಅವರು ರೈತ ಸಂಘಟನೆಯಲ್ಲೂ ಪ್ರಮುಖ ಹೆಸರಾಗಿದ್ದವರು. 

ಹುಲಿವಾನ ಗಂಗಾಧರಯ್ಯ 1949ರ ಅಕ್ಟೋಬರ್ 15ರಂದು ಜನಿಸಿದರು.  ತಂದೆ ಗಂಗಪ್ಪ.  ತಾಯಿ ಕರಿಯಮ್ಮ. 

ಗಂಗಾಧರಯ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹುಲಿವಾನ ಗ್ರಾಮ. ಹುಲಿವಾನ ಗಂಗಾಧರಯ್ಯ ಅವರು ನಾಗಸಂದ್ರ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಆದ ನಂತರ ಪದವಿ ಓದಿದ್ದು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ. ಅಲ್ಲಿ ಉತ್ತಮ ರಂಗಭೂಮಿ ವಾತಾವರಣವಿತ್ತು. ಉಪನ್ಯಾಸಕರ ಪ್ರೋತ್ಸಾಹದಿಂದ ನಾಟಕಗಳಲ್ಲಿ ಸಕ್ರಿಯರಾಗಿದ್ದರು. ಮುಂದೆ ಪದವಿ ಮುಗಿಸಿದ ನಂತರ ಗಂಗಾಧರಯ್ಯ ಐಟಿಐ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೌಕರಿ ಹಿಡಿದರು. ಅಲ್ಲಿನ ಲಲಿತ ಕಲಾ ಸಂಘ ಅವರಲ್ಲಿನ ನಟನಾ ಕಲೆಗೆ ಮತ್ತಷ್ಟು ಹೊಳಪು ನೀಡಿತು. 

ಹುಲಿವಾನ ಗಂಗಾಧರಯ್ಯನವರು ಕನ್ನಡ ರಂಗಭೂಮಿಯ ಮಹತ್ವದ ಪ್ರತಿಭೆ. ಆಧುನಿಕ ಕನ್ನಡ ರಂಗಭೂಮಿಯ ಚಳುವಳಿಯಲ್ಲಿ ಅತಿ ಮುಖ್ಯರಲ್ಲೊಬ್ಬರಾಗಿದ್ದ ಆರ್. ನಾಗೇಶರು ತಮ್ಮ ಎಲ್ಲ ನಾಟಕ ಗಳಲ್ಲಿಯೂ ಹುಲಿವಾನ್ ಗಂಗಾಧರಯ್ಯನವರನ್ನು ಹಾಕಿಕೊಳ್ಳುತ್ತಿದ್ದರು.  ಅವರಿಗೆ ಅಷ್ಟು ನಂಬಿಕೆ ಅವರ ಅಭಿನಯದಲ್ಲಿ.

ಟಿ. ಎನ್. ಸೀತಾರಾಂ ಅವರ 'ಆಸ್ಫೋಟ' ನಾಟಕದಲ್ಲಿ ಮುಖ್ಯಪಾತ್ರಗಳಲ್ಲಿ ಒಂದಾದ

ಡ್ರೈವರ್ ಪಾತ್ರವನ್ನು  ಹುಲಿವಾನ ಗಂಗಾಧರಯ್ಯನವರು  ಮಾಡುತ್ತಿದ್ದ ರೀತಿ ಅವರಿಗೆ ಮಾತ್ರವಲ್ಲ ನಾಟಕಕ್ಕೂ ಜನಪ್ರಿಯತೆ ಹೆಚ್ಚಿಸಿತ್ತು. ಜಾರ್ಜ್ ಫರ್ನಾಂಡಿಸರು ಈ ನಾಟಕವನ್ನು ನೋಡಿದಾಗ ಎಲ್ಲರ ಅಭಿನಯಕ್ಕಿಂತ ಹುಲಿವಾನ್ ಗಂಗಾಧರಯ್ಯನವರ ಅಭಿನಯವನ್ನು ಮೆಚ್ಚಿಕೊಂಡಿದ್ದರಂತೆ.

ಹುಲಿವಾನ ಗಂಗಾಧರಯ್ಯನವರು ಸೂತ್ರಧಾರ, ರಂಗಸಂಪದ, ಬೆನಕ ರಂಗತಂಡಗಳ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ಮುಂದೆ ತಾವೇ 'ಗ್ಲೋಬ್ ಥಿಯೇಟರ್' ತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸಿದರು.

ಆಸ್ಫೋಟ, ಸೂರ್ಯಶಿಕಾರಿ, ಕಾಮಗಾರಿ, ಈಡಿಪಸ್, ಕದಡಿದ ನೀರು, ಚೋಮ, 

ನಾಟ್ಯರಾಣಿ ಶಾಂತಲಾ, ಹಳ್ಳಿ ಚಿತ್ರ, ಜಲಗಾರ, ಶೂದ್ರತಪಸ್ವಿ, ಜೋಕುಮಾರಸ್ವಾಮಿ, ಸಂಕ್ರಾಂತಿ ಮುಂತಾದ ಹತ್ತಾರು ನಾಟಕಗಳಲ್ಲಿನ ಸವಾಲಿನ ಪಾತ್ರಗಳ ನಿರ್ವಹಣೆಯಿಂದ ಅವರು ಉತ್ತಮ ಕಲಾವಿದ ಎಂದು ಕರೆಸಿಕೊಂಡರು. 1981ರ ನಂತರ ದೂರದರ್ಶನಕ್ಕೆ ನಾಟಕಗಳನ್ನು ಮಾಡತೊಡಗಿದರು. 

ಹುಲಿವಾನ ಗಂಗಾಧರಯ್ಯನವರಿಗಿದ್ದ ರಂಗಭೂಮಿಯ ಸಾಮರ್ಥ್ಯ ಅವರಿಗೆ ಸಿನಿಮಾ, ಕಿರುತೆರೆಗಳ ಬೇಡಿಕೆಗಳ ಬಾಗಿಲನ್ನೂ ತೆರೆಯಿತು. ಆರಂಭದ ದಿನಗಳಲ್ಲೇ ದೂರದರ್ಶನದಲ್ಲಿ ಮೂಡಿಬಂದ  'ಅರ್ಧಸತ್ಯ' ಸರಣಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. 

ಟಿ. ಎನ್. ಸೀತಾರಾಮ್ ಅವರ ಪ್ರಸಿದ್ಧ ಧಾರಾವಾಹಿ 'ಮುಕ್ತ ಮುಕ್ತ' ದಲ್ಲಿ  ಹುಲಿವಾನ ಗಂಗಾಧರಯ್ಯನವರು ನಿರ್ವಹಿಸಿದ ಮುಖ್ಯಮಂತ್ರಿ ರಾಜಾನಂದಸ್ವಾಮಿಯ ಪಾತ್ರ ಅಪಾರ ಮೆಚ್ಚುಗೆ ಗಳಿಸಿತ್ತು.  ಸಂಕ್ರಾಂತಿ, ಮಹಾಯಜ್ಞ, ಮಳೆಬಿಲ್ಲು, ಕೃಷ್ಣ ತುಳಸಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಅವರು ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದರು.

ಹುಲಿವಾನ ಗಂಗಾಧರಯ್ಯನವರು 'ಸೇಡಿನ ಹಕ್ಕಿ' (1985) ಚಿತ್ರದೊಂದಿಗೆ ಸಿನಿಮಾರಂಗ ಪ್ರವೇಶಿಸಿ  ಸುಮಾರು  120 ಚಲನಚಿತ್ರಗಳಲ್ಲಿ  ನಟಿಸಿದ್ದರು. ಉಲ್ಟಾ ಪಲ್ಟಾ, ಗ್ರಾಮ ದೇವತೆ, ಅಪ್ಪು, ಕುರಿಗಳು ಸಾರ್ ಕುರಿಗಳು, ಶಬ್ದವೇದಿ, ಜ್ವಾಲಾಮುಖಿ, ಅದೇ ಕಣ್ಣು, ಕುಲಪುತ್ರ, ನವತಾರೆ, ಚೈತ್ರದ ಚಿಗುರು, ಸ್ವಸ್ತಿಕ್, ಭೂಮಿ ತಾಯಿಯ ಚೊಚ್ಚಲ ಮಗ, ಎ,  ಕರ್ವ, ನೀರ್ ದೋಸೆ ಮುಂತಾದವು ಇವರು ಅಭಿನಯಿಸಿದ ಚಿತ್ರಗಳಲ್ಲಿ ಸೇರಿವೆ.

ಹುಲಿವಾನ ಗಂಗಾಧರಯ್ಯನವರು ಅಪ್ಪಟ ಕೃಷಿ ಜೀವಿ.  ಸಾವಯವ ಕೃಷಿ ಪದ್ಧತಿಯನ್ನು ಅನುಮೋದಿಸುತ್ತಿದ್ದ ಅವರು ಹುಲಿವಾನದ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿದ್ದರು. 1997ರಲ್ಲಿ ಐಟಿಐ ಕಂಪನಿಯ ತಮ್ಮ ನೌಕರಿಗೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ನಟನೆ ಮತ್ತು ಕೃಷಿಯಲ್ಲಿ ನಿರತರಾದರು. 

ಹುಲಿವಾನ ಗಂಗಾಧರಯ್ಯನವರು ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ಕೋಕನಟ್ ಪ್ರೊಡ್ಯೂಸರ್ಸ್ ಕಂಪನಿ ಸ್ಥಾಪಿಸಿ, ರೈತರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಪ್ರಯತ್ನ ನಡೆಸಿದ್ದರು. ತಮ್ಮ ಕ್ಷೇತ್ರದ ತೆಂಗು ಬೆಳೆಗಾರರ ಬಗ್ಗೆ ವಿಶೇಷ ಆಸ್ಥೆಯಿಂದ ಕೆಲಸ ಮಾಡುತ್ತಿದ್ದ ಅವರು ನೀರಾ ಮಾರುಕಟ್ಟೆಗೆ ಬರಬೇಕೆನ್ನುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.  ತೆಂಗಿನ ಮರಗಳಿಗೆ ತೋಟದ ಸಂಪನ್ಮೂಲಗಳಿಂದಲೇ ಗೊಬ್ಬರ ಉತ್ಪಾದಿಸುವ ಅವರ ಯೋಜನೆಗೆ ಪುರಸ್ಕಾರವೂ ದೊರೆತಿತ್ತು. ಕಾಸರಗೋಡಿನ ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ ಗಂಗಾಧರಯ್ಯನವರಿಗೆ "ಔಟ್ಸ್ಟ್ಯಾಂಡಿಂಗ್ ಅಂಡ್ ಇನ್ನೋವೇಟಿವ್ ಫಾರ್ಮರ್” ಎಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿತ್ತು. 

ಹುಲಿವಾನ ಗಂಗಾಧರಯ್ಯನವರಿಗೆ ಕರ್ನಾಟಕ ನಾಟಕ ಅಕಾಡಮಿ ಗೌರವ ಸಂದಿತ್ತು.

ವಯಸ್ಸಾದ ಮೇಲೆ ದಣಿದ ಜೀವಕ್ಕೆ ಬದುಕಿನಿಂದ ಮುಕ್ತಿಯತ್ತ ಕೈಚಾಚಲು ಕಾಹಿಲೆಗಳೆಂಬುದು ಕಾರಣಗಳು. ಆ ಕಾಹಿಲೆಗಳಿಂದ ಅದಷ್ಟು ಬೇಗ ಬಿಡುಗಡೆಗೊಂಡಷ್ಟೂ ನೋವು ಕಡಿಮೆ.‍ 2020ರ ಜುಲೈ 18ರಂದು ತಮ್ಮ 70ನೇ ವಯಸ್ಸಿನಲ್ಲಿ ಇನ್ನೂ ಕ್ರಿಯಾಶೀಲ ಬದುಕಿನಲ್ಲಿದ್ದಾಗಲೇ ಮುಕ್ತಿಗಳಿಸಿದವರು ಹುಲಿವಾನ ಗಂಗಾಧರಯ್ಯನವರು.  

ಅವರು ನಮಗೆ ಹಲವು ನೆನಪುಗಳು ತರುವ ಕೆಲಸ ಮಾಡಿಹೋಗಿದ್ದಾರೆ.

On Remembrance Day of actor and activist Hulivan Gangadharaiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ