ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ರಮಣಿ


 ಎನ್. ರಮಣಿ 


ಕೊಳಲು ವಾದನದಲ್ಲಿ ವಿಶ್ವಪ್ರಸಿದ್ಧರಾದವರು ತಿರುವಾರೂರು ನಟೇಶನ್ ರಮಣಿ.   ಅವರ ಗುರು ಟಿ. ಆರ್. ಮಹಾಲಿಂಗಂ ಅವರಂತೆಯೇ ರಮಣಿ ಅವರ ವೇಣುವಾದನವೂ ರಮಣೀಯತೆಗೆ ಹೆಸರುವಾಸಿಯಾದುದು.  ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. 

ರಮಣಿ ಅವರು 1934ರ ಅಕ್ಟೋಬರ್ 15ರಂದು ತಮಿಳುನಾಡಿನ ತಿರುವಾರೂರಿನಲ್ಲಿ ಜನಿಸಿದರು.  ರಮಣಿಯವರಿಗೆ ಸಂಗೀತ ಪಿತ್ರಾರ್ಜಿತವಾಗಿ ಬಂದ ಬಳುವಳಿ.   ತಾತ ಅಳಿಯೂರ್ ನಾರಾಯಣ ಸ್ವಾಮಿ ಅಯ್ಯರ್ ಅವರಲ್ಲಿ ರಮಣಿಯವರ ಪ್ರಾರಂಭಿಕ ಶಿಕ್ಷಣ ನೆರವೇರಿತು.  ತಂದೆ ನಟೇಶ್ ಅಯ್ಯರ್ ಮೃದಂಗ ವಿದ್ವಾಂಸರು.  ತಾಯಿ ಶಾರಾದಾಂಬಾಳ್ ವೀಣೆ ಮತ್ತು ವಯೊಲಿನ್ ವಿದುಷಿ.  ಐದು ವರ್ಷದ ಬಾಲಕ ರಮಣಿಗೆ ನಾಗರಕೋಯಿಲ್ ಅನಂತರಾಮ ಅಯ್ಯರ್ ಉಡುಗೊರೆಯಾಗಿ ನೀಡಿದ ಕೊಳಲು ಮುಂದಿನ ಅವರ ನಾದಯಾತ್ರೆಗೆ ದೀವಿಗೆಯಾಯಿತು. ಒಂಬತ್ತನೇ ವಯಸ್ಸಿನಲ್ಲಿ ಮಾಲಿ ಎಂದೇ ಪ್ರಸಿದ್ಧರಾದ ಟಿ. ಆರ್. ಮಹಾಲಿಂಗಂ ಅವರ ವೇಣುವಾದನವನ್ನು ಆಲಿಸಿದ ರಮಣಿಯವರಿಗೆ ಯಾವುದೋ ಹೊಸಲೋಕವನ್ನು ಪ್ರವೇಶಿಸಿದ ಅನುಭವವಾದಂತೆನಿಸಿತು.  ಇಂಥ ಶ್ರೇಷ್ಠ ಗುರುವನ್ನು ಆಶ್ರಯಿಸಿದ ರಮಣಿಯವರು ಮುಂದೆ 1945ರಲ್ಲಿ ಗುರು ಮಾಲಿಯವರೊಂದಿಗೆ ಸಹವಾದನವನ್ನು ಮದರಾಸಿನ ‘ರಸಿಕ ರಂಜನಿ’ ಸಭೆಯಲ್ಲಿ ಟಿ. ಎನ್. ಕೃಷ್ಣನ್ ಅವರ ಪಿಟೀಲು, ಮುರುಗ ಭೂಪತಿ ಅವರ ಮೃದಂಗ ಪಕ್ಕವಾದ್ಯದಲ್ಲಿ ನುಡಿಸಿದರು.  

ಶಿಷ್ಯನ ಮೇಲ್ಮೆಯನ್ನು ಮನ್ನಿಸಿ, ಗೌರವಿಸಿದ ಟಿ. ಆರ್. ಮಹಾಲಿಂಗಂ ಅವರು 1974ರಲ್ಲಿ ರಮಣಿಯವರೊಂದಿಗೆ ಎರಡು ಮೃದಂಗಗಳನ್ನು ಬಳಸಿ ನೀಡಿದ ಕಛೇರಿಗಳು, ಮದರಾಸು, ಮುಂಬೈ, ಹೈದರಾಬಾದ್ ಮತ್ತು ನಾಗಪುರದ ರಸಿಕ ವೃಂದಕ್ಕೆ ಅವಿಸ್ಮರಣೀಯ ರಸದೌತಣವಾಯಿತು.  1962ರಲ್ಲಿ ಎಸ್. ಬಾಲಚಂದರ್ ಅವರೊಂದಿಗೆ ಪ್ರಪ್ರಥಮವಾಗಿ ವಿದೇಶಗಳ ಸರಣಿ ಕಛೇರಿಗೆ ತೆರಳಿದ ರಮಣಿ, ಮುಂದೆ ಜಗತ್ಪ್ರಸಿದ್ಧರಾದರು.  2002ರಲ್ಲಿ ಅಮೆರಿಕದಲ್ಲಿ 25 ವಿದೇಶೀ ಶಿಷ್ಯರನ್ನು ಒಳಗೊಂಡ ಕೊಳಲು ಸಂಪದವನ್ನು ಪ್ರಸ್ತುತಪಡಿಸಿದ ಖ್ಯಾತಿ ರಮಣಿ ಅವರದು.  1983ರಲ್ಲಿ ‘ರಮಣೀಸ್ ಅಕಾಡೆಮಿ ಆಫ್ ಫ್ಲ್ಯೂಟ್ ಸಂಸ್ಥೆ’ಯನ್ನು ಅವರ  ರಸಿಕ ವೃಂದ ಹಾಗೂ ಶಿಷ್ಯರ ಬಳಗ ಸ್ಥಾಪಿಸಿತು.  ಅದು ಕಳೆದ ನಾಲ್ಕು ದಶಕಗಳಿಂದಲೂ ಸಕ್ರಿಯವಾಗಿದೆ.  

ಧ್ವನಿವರ್ಧಕವಿಲ್ಲದ ಕಾಲದಲ್ಲಿ ಹೆಚ್ಚಿನ ಶ್ರುತಿಯಲ್ಲೇ ಗಾಯನ ವಾದನದ ವಿನಿಕೆಯಾಗುತ್ತಿತ್ತು.  ಧ್ವನಿವರ್ಧಕಗಳ ಆವಿಷ್ಕಾರದಿಂದ ತಗ್ಗು ಶ್ರುತಿಯ ವಿನಿಕೆ ಸರ್ವವ್ಯಾಪಿಯಾಯಿತು.  ಈ ಸೂಕ್ಷ್ಮಜ್ಞತೆಗೆ ಸ್ಪಂದಿಸಿ ರಮಣಿಯವರು 5 (ಜಿ) ಶ್ರುತಿಯ ಕೊಳಲನ್ನು ಎರಡೂವರೆ ಅಥವಾ 3 (ಶಾರ್ಪ್ ಅಥವಾ ಇ) ಶ್ರುತಿಗೆ ಇಳಿಸಿ, ಮಾಧುರ್ಯದ ಸವಿಯನ್ನು ದ್ವಿಗುಣಗೊಳಿಸಿದರು.  ಈ ಆವಿಷ್ಕಾರದ ಖ್ಯಾತಿ ರಮಣಿಯವರದ್ದೇ.

1945ರಲ್ಲಿ ತಿರುವನಂತಪುರಂ ಆಕಾಶವಾಣಿಯಲ್ಲಿ ಪ್ರಪ್ರಥಮವಾಗಿ ರಮಣಿಯವರ ವೇಣುವಾದನ ಭಿತ್ತರಗೊಂಡ ನಂತರದಲ್ಲಿ ರಮಣಿಯವರ ವಿನಿಕೆ ಪ್ರಸಾರ ಮಾಧ್ಯಮಗಳ ಅವಿಭಾಜ್ಯ ಅಂಗವಾಯಿತು.  ಅಂತೆಯೇ ಆಕಾಶವಾಣಿ ‘ರಾಷ್ಟ್ರಮಟ್ಟದ ಕಲಾವಿದ’ ಎಂಬ ಬಿರುದನ್ನು ಅವರಿಗೆ ನೀಡಿ ಗೌರವಿಸಿತು.

1956ರಲ್ಲಿ ರಮಣಿ ಅವರು ಕಾಮಾಕ್ಷಿಯವರನ್ನು ಮದುವೆಯಾದರು.  ಅದೇ ವರ್ಷ ಅವರಿಗೆ ಮದರಾಸಿನ ಅಕಾಡೆಮಿಯಲ್ಲಿ ಪ್ರಥಮ ಅವಕಾಶ ಲಭಿಸಿತು.  1966ರಲ್ಲಿ ಲಾಲ್ಗುಡಿ ಜಯರಾಮನ್ ಮತ್ತು ಆರ್. ವೆಂಕಟರಾಮನ್ ಅವರೊಂದಿಗೆ ‘ಶ್ರೀಕೃಷ್ಣಗಾನ’ ಸಭೆಯಲ್ಲಿ ನೀಡಿದ, ವೀಣಾ, ವೇಣು ಮತ್ತು ತಂತುವಾದ್ಯದ ಮೇಳೈಕೆ ತಮ್ಮ ಜೀವನದಲ್ಲಿ ಒಂದು ಅವಿಸ್ಮರಣೀಯ ಘಟ್ಟ ಎನ್ನುತ್ತಿದ್ದರು ರಮಣಿ.

1970ರಲ್ಲಿ ಮದರಾಸಿನ ಬಾಲಸುಬ್ರಹ್ಮಣ್ಯ ಸಭೆಯಲ್ಲಿ ಒಂದು ವಿಶಿಷ್ಟ ವಿನೂತನ ಕಛೇರಿ.  ರಮಣಿ, ಹರಿಪ್ರಸಾದ್ ಚೌರಾಸಿಯಾ ಅವರ ಜುಗಲ್ಬಂದಿ ಕಾರ್ಯಕ್ರಮ.  ಉತ್ತರ, ದಕ್ಷಿಣದ ಸಂಗಮ.  ಇಬ್ಬರು ದಿಗ್ಗಜರು.  ಶೈಲಿ ವಿಭಿನ್ನ, ಆದರೆ ರಾಗ ಒಂದೇ.  ಕಾರ್ಯಕ್ರಮ ಹಾಲು ಜೇನಿನಂತೆ ಬೆರೆತು ಯಶಸ್ವಿಯಾಯಿತು.  ಈ ವೈಭವಯುತ ಕಾರ್ಯಕ್ರಮ ವೇಣುವಾದನ ವಿನಿಕೆಯಲ್ಲಿ ಒಂದು ವಿನೂತನ ಆಯಾಮವನ್ನು ನಿರ್ಮಿಸಿತು.  ನಂತರದ ವರ್ಷಗಳಲ್ಲಿ ರಮಣಿಯವರು ರಾಮ್ ನಾರಾಯಣ್ (ಸಾರಂಗಿ), ವಿ. ಜಿ. ಜೋಗ್ (ವಯೋಲಿನ್), ವಿಜಯ ರಾಘವ ರಾವ್ (ಕೊಳಲು), ಎನ್. ರಾಜಮ್ (ವಯೋಲಿನ್) ಜೊತೆ ಜುಗಲ್ ಬಂದಿ ಪ್ರಸ್ತುತಪಡಿಸಿದರು.  ಎಪ್ಪತ್ತಕ್ಕೂ ಮೀರಿದ ಈ ಜುಗಲ್ಬಂದಿಗಳಿಂದ ರಮಣಿಯವರು ಉತ್ತರಾದಿ ಶೈಲಿಯ ತಗ್ಗು ಶ್ರುತಿಯ ಕೊಳಲನ್ನು ಷಡ್ಜ ಬದಲಿಸಿ, ರಾಗಾಲಾಪನೆಯ ವಿನಿಕೆಯಲ್ಲಿ ಅತಿಮಂದ್ರ, ಅತಿ ತಾರ ಸ್ಥಾಯಿಯ ಸಾಧ್ಯತೆಗಳನ್ನು ಯಶಸ್ವಿಯಾಗಿ ಬಳಕೆಗೆ ತಂದರು.  ಕಛೇರಿಯ ಅಂತ್ಯದಲ್ಲಿ ತಗ್ಗು ಶೃತಿಯ ಕೊಳಲಿನಲ್ಲಿ ರಮಣಿಯವರು ನುಡಿಸುವ ಭಜನ್, ದೇವರನಾಮಗಳು ರಸಿಕರಲ್ಲಿ ಸಮ್ಮೋಹಿನಿ ಪ್ರಭಾವ ಬೀರಿದವು.  

1997ರಲ್ಲಿ ಮದರಾಸಿನ ಮ್ಯೂಸಿಕ್ ಅಕಾಡೆಮಿಯಿಂದ ‘ಸಂಗೀತ ಕಲಾನಿಧಿ’, 1973ರಲ್ಲಿ ತಮಿಳುನಾಡು ಸರ್ಕಾರದ ಉನ್ನತ ನಾಗರಿಕ ಗೌರವ ಕಲೈಮಾಮಣಿ, 1996ರ ಸಂಗೀತ ರತ್ನ ಮೈಸೂರು ಚೌಡಯ್ಯ ಸ್ಮಾರಕ ಪ್ರಶಸ್ತಿ, 1987ರಲ್ಲಿ ಪದ್ಮಶ್ರೀ ಮುಂತಾದವು ರಮಣಿ ಅವರಿಗೆ ಸಂದ ಅನೇಕ ಪ್ರಶಸ್ತಿಗಳಲ್ಲಿ ಸೇರಿವೆ.  ರಮಣಿಯವರು ನುಡಿಸದ ವೇದಿಕೆಗಳಿಲ್ಲ, ನುಡಿಸದ ಪ್ರಮುಖ ನಗರಗಳಿಲ್ಲ.

ರಮಣಿ ಅವರ 200ಕ್ಕೂ ಹೆಚ್ಚು ಸಿ.ಡಿ, ಎಲ್. ಪಿ. ಧ್ವನಿಮುದ್ರಿಕೆ, ಕ್ಯಾಸೆಟ್ಗಳು ಲಭ್ಯವಿವೆ,   ಸಾವಿರಕ್ಕೂ ಹೆಚ್ಚು ಶಿಷ್ಯರನ್ನು ಹೊಂದಿರುವ ಮಹಾನ್ ಆಚಾರ್ಯ ಎನ್. ರಮಣಿಯವರು.  ಇವರ ಶಿಷ್ಯರಲ್ಲಿ ಅನೇಕರು ಪ್ರಖ್ಯಾತ ವೇಣುವಾದಕರೆನಿಸಿದ್ದಾರೆ.  ರಮಣಿಯವರ ಪುತ್ರ ಆರ್. ತ್ಯಾಗರಾಜನ್, ಮೊಮ್ಮಗ ಅತುಲ್ ಕುಮಾರ್ ಅವರುಗಳೊಂದಿಗೆ ರಮಣಿ ಅವರು ‘ಪಾರಂಪರ್ಯ’ ಮಾಲಿಕೆಯಡಿಯಲ್ಲಿ ಅನೇಕ  ಕಾರ್ಯಕ್ರಮಗಳನ್ನು ನೀಡಿದ್ದರು.

ಎನ್. ರಮಣಿ ಪಲ್ಲವಿ ಮತ್ತು ತಿಲ್ಲಾನ ರಚನೆಯಲ್ಲಿ ಸಿದ್ಧಹಸ್ತರು.  ಇವರು ರಚಿಸಿರುವ ನಳಿನಕಾಂತಿ, ಬಿಂದುಮಾಲಿನಿ, ಮಧ್ಯಮಾವತಿ, ಹಿಂದೋಳ, ಸುನಾದ ವಿನೋದಿನಿ, ಕಲ್ಯಾಣವಸಂತ ಮತ್ತು ರಸಾಳಿಗ ರಚನೆಗಳು ಇವರ ವಾಗ್ಗೇಯ ಪ್ರೌಢಿಮೆಗೆ ಹಿಡಿದ ಕೈಗನ್ನಡಿ ಎನಿಸಿವೆ.  ಅವರು ಸಂಪ್ರದಾಯದ ಚೌಕಟ್ಟನ್ನು ಮೀರದೆ, ಗುರುಪರಂಪರೆಯ ಖ್ಯಾತಿ ಬೆಳಗಿದವರು.  ಅತ್ಯಂತ ಸರಳ, ಮುಗ್ಧ, ತನ್ನ ಹಿರಿಮೆಯನ್ನು ಮೆರೆಯದ, ತನಗದರ ಅರಿವಿಲ್ಲದಂತೆ ನಡೆದುಕೊಳ್ಳುತ್ತಿದ್ದ ವ್ಯಕ್ತಿತ್ವ.  ಗೌರವವೆಲ್ಲವೂ ಕಲೆಗೆ ಸಂದದ್ದು, ಹೆತ್ತವರ ಆಶೀರ್ವಾದ, ಗುರುವರ್ಯನ ಕೃಪೆ, ಸರಸ್ವತಿ ದೇವಿಯ ಅನುಗ್ರಹ ಎನ್ನುತ್ತಿದ್ದ ವಿನಯಿ.  ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನು ಪಡೆದಿದ್ದ ರಮಣಿಯವರದು ತುಂಬು ಜೀವನವಾಗಿತ್ತು.  

ಸರಸ್ವತೀ ಮಾತೆ ಈ ಮಹಾನ್ ಸಂಗೀತ ಪುತ್ರನನ್ನು 2015ರ  ಅಕ್ಟೊಬರ್ 9ರಂದು ತನ್ನಲ್ಲಿಗೆ ಆಹ್ವಾನಿಸುವುದರ ಮೂಲಕ, ಈ ಲೋಕದ ಜನತೆಯಿಂದ  ಇವರ ಸಂಗೀತವನ್ನು ನೇರವಾಗಿ ಆಲಿಸುವ ಸೌಭಾಗ್ಯವನ್ನು ಹಿಂದೆಗೆದುಕೊಂಡಳು.  ಈ ಮಹಾನ್ ಚೇತನಕ್ಕೆ  ನಮ್ಮ ಸಾಷ್ಟಾಂಗ ನಮನ. 


On the birth anniversary of one of the greatest musician and flutist N. Ramani Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ