ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾನು ಅಥೈಯ


 ಭಾನು ಅಥೈಯ


ಭಾನು ಅಥೈಯ ಮೊಟ್ಟ ಮೊದಲ ಆಸ್ಕರ್ ಗಳಿಸಿದ ಭಾರತೀಯರು. ಅವರೊಬ್ಬ  ಶ್ರೇಷ್ಠ ಕಾಸ್ಟ್ಯೂಮ್ ಡಿಸೈನರ್ ಅಲ್ಲದೆ ಶ್ರೇಷ್ಠ ಕಲಾವಿದೆಯಾಗಿಯೂ ಹೆಸರಾದವರು. 

ಭಾನು ಅವರು 1929ರ ಏಪ್ರಿಲ್ 28ರಂದು ಕೊಲ್ಹಾಪುರದಲ್ಲಿ ಜನಿಸಿದರು.  ಅವರ ಅಂದಿನ ಹೆಸರು ಭಾನು ಅಣ್ಣಾಸಾಹೇಬ್ ರಾಜೋಪಾಧ್ಯೆ.  ಸತ್ಯೇಂದ್ರ ಅಥೈಯ ಅವರನ್ನು ವರಿಸಿದಾಗ ಭಾನು ಆಥೈಯ ಆದರು.

ಭಾನು ಅಥೈಯ ಅವರ ತಂದೆ ಅಣ್ಣಾ ಸಾಹೇಬ್ ಸ್ವಯಂ ಪರಿಶ್ರಮದಿಂದ ಕಲಾವಿದರೂ, ಛಾಯಾಗ್ರಾಹಕರೂ ಆಗಿದ್ದರು.  ತಾಯಿ ಶಾಂತಾಬಾಯಿ.  ಭಾನು ಅವರಿಗೆ ಹನ್ನೊಂದು ವರ್ಷ ವಯಸ್ಸಾಗಿದ್ದಾಗ ತಂದೆ ನಿಧನರಾದರು.

ಮುಂಬೈನ ಜೆ ಜೆ ಕಲಾ ಶಾಲೆಯಲ್ಲಿ ಶಿಕ್ಷಣ ಪಡೆದ ಭಾನು ಅಥೈಯ, 1951ರಲ್ಲಿ ತಮ್ಮ 'ಲೇಡಿ ಇನ್ ರಿಪೋಸ್' ಚಿತ್ರಕ್ಕೆ ಉಷಾ ದೇಶಮುಖ್ ಸ್ವರ್ಣಪದಕ ಪಡೆದರು. 

ಕಲಾ ಲೋಕದ ಪ್ರಸಿದ್ಧರಾದ ಎಂ.ಎಫ್. ಹುಸೇನ್, ಎಫ್. ಎನ್. ಸೌಜ, ಎಸ್. ಜಿ. ವಾಸುದೇವ್ ಮುಂತಾದ ಸಮಕಾಲೀನ ಪ್ರಸಿದ್ಧರ ಸಾಲಿನಲ್ಲಿ ಭಾನು ಅಥೈಯ ಅವರ ಕಲೆ ಹೆಸರಾಗಿತ್ತು. ಅಂದಿನ ಬಾಂಬೆ  ಪ್ರೋಗ್ರೆಸಿವ್ ಆರ್ಟಿಸ್ಸ್ಟ್ ಗ್ರೂಪ್ ಬಳಗದಲ್ಲಿ ಅವರು ಏಕೈಕ ಮಹಿಳೆಯಾಗಿ ಹೆಸರಾಗಿದ್ದರು. 

ಭಾನು ಅಥೈಯ ಅವರು ಬಾಲಿವುಡ್ ಲೋಕದ ಪ್ರಸಿದ್ಧರಾದ ಗುರುದತ್, ರಾಜ್ ಕಫೂರ್, ಬಿ. ಆರ್. ಚೋಪ್ರಾ ಸೇರಿದಂತೆ ಅನೇಕ ಪ್ರತಿಭಾವಂತರ ಪ್ರಸಿದ್ಧರ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿದ್ದರು. ಗುರುದತ್ ಅವರ 1956ರ 'ಸಿ.ಐ.ಡಿ.' ಚಿತ್ರದ ಮೂಲಕ ಹಿಂದಿ ಚಿತ್ರರಂಗದಲ್ಲಿ ವಸ್ತ್ರವಿನ್ಯಾಸ ಕಲೆಗೆ ಕಾಲಿಟ್ಟರು.   1983ರಲ್ಲಿ ರಿಚರ್ಡ್ ಅಟೆನ್‍ಬರೋ ಅವರ  'ಗಾಂಧೀ' ಚಿತ್ರದ ವಸ್ತ್ರವಿನ್ಯಾಸಕ್ಕೆ ಭಾನು ಅಥೈಯ ಅವರಿಗೆ ಆಸ್ಕರ್ ಪ್ರಶಸ್ತಿ ಸಂದಿತು.

ಭಾನು ಅಥೈಯ ತಮ್ಮ ಐದು ದಶಕಗಳ ವೃತ್ತಿ ಜೀವನದಲ್ಲಿ ನೂರಾರು ಚಲನಚಿತ್ರಗಳಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದರು. ಗುಲ್ಜಾರ್ ಅವರ 'ಲೆಕಿನ್' (1990) ಮತ್ತು ಅಶುತೋಷ್ ಗೋವಾರಿಕರ್ (2001) ನಿರ್ದೇಶನದ 'ಲಗಾನ್' ಚಿತ್ರಗಳಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ಅವರಿಗೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿಗಳು ಸಂದಿದ್ದವು. 

2010 ವರ್ಷದಲ್ಲಿ ಭಾನು ಅಥೈಯ ಅವರ 'ದ ಆರ್ಟ್ ಆಫ್ ಕಾಸ್ಟ್ಟೂಮ್ ಡಿಸೈನ್' ಪ್ರಕಟಗೊಂಡಿತು. ಭಾನು ಅಥೈಯಾ ಅವರು 2012ರಲ್ಲಿ, ತಮ್ಮ ಆಸ್ಕರ್ ಪ್ರಶಸ್ತಿಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಗೆ ಸುರಕ್ಷಿತವಾಗಿಡಲು ನೀಡಿದರು.

ಭಾನು ಅಥೈಯ 2020ರ ಅಕ್ಟೋಬರ್ 15ರಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು.

On the birth anniversary of first Indian to win Oscar award,  Bhanu Athaiya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ