ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಜ್ಞಾನಾನಂದ


 ಜಿ. ಜ್ಞಾನಾನಂದ


ಡಾ. ಜಿ. ಜ್ಞಾನಾನಂದ ವಿಶ್ವಕರ್ಮಸಾಹಿತ್ಯ, ಸಂಸ್ಕೃತಿ, ಕಲೆ, ತತ್ತ್ವಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.

ಜ್ಞಾನಾನಂದರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ 1940ರ ಜುಲೈ 5ರಂದು ಜನಿಸಿದರು. ತಂದೆ ಎಂ.ಆರ್.ಜಿ. ಶಂಕರ್‌ ಶಿಲ್ಪಿಗಳ ಪರಂಪರೆಯ ಮನೆತನದಲ್ಲಿ ಹುಟ್ಟಿ ಮೈಸೂರಿನ ಶಿಲ್ಪ ಸಿದ್ಧಾಂತಿ ಸಿದ್ಧಲಿಂಗ ಸ್ವಾಮಿಗಳಲ್ಲಿ ಶಿಲ್ಪಶಾಸ್ತ್ರವನ್ನು ಅಧ್ಯಯನ ಮಾಡಿದವರು. ತಾಯಿ ಈಶ್ವರಮ್ಮ. 

ಸಂಪೂರ್ಣ ಮರೆಯಾಗುತ್ತಿರುವ ವಿಶ್ವಕರ್ಮ ಧರ್ಮ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಅದರ ಸಂಪಾದನೆ, ಪ್ರಕಟಣೆ, ಪ್ರಸಾರಕ್ಕಾಗಿ ಅಪಾರವಾದ ಕೆಲಸ ಮಾಡುತ್ತಿರುವ ಜ್ಞಾನಾನಂದರ ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್‌ಸಿ. ಪದವಿ ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.  ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ. ಗಳಿಸಿದರು. ಚೆನ್ನೈನ ದಕ್ಷಿಣ ಭಾರತ ಹಿಂದಿಸಭಾದಿಂದ ರಾಷ್ಟ್ರಭಾಷಾ ಪ್ರವೀಣ್‌ ಗಳಿಸಿದರು.  ಇವುಗಳ ಜೊತೆಗೆ ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಸರ್ಟಿಫಿಕೇಟ್‌ (ಸ್ಟ್ಯಾಟಿಸ್ಟಿಕಲ್‌ ಅಪ್ಲೈಡ್‌ ಟು ಇಂಡಸ್ಟ್ರಿ), ಸೂಪರ್‌ವೈಸರಿ ಡೆವಲಪ್‌ಮೆಂಟ್‌ ಡಿಪ್ಲೊಮ ಮತ್ತು ಡಿಪ್ಲೊಮ ಇನ್‌ ಕ್ವಾಲಿಟಿ ಕಂಟ್ರೋಲ್‌ ಮುಂತಾದ ಕೆಲ ವೃತ್ತಿಪರ ಅಧ್ಯಯನಗಳನ್ನೂ ಕೈಗೊಂಡರು.

ಡಾ. ಜ್ಞಾನಾನಂದ ಅವರು ಗಣತಿ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗಕ್ಕೆ ಆರಂಭಿಸಿ, ಕೋಲಾರದ ಆರ್.ಟಿ.ಓ. ಕಚೇರಿಯಲ್ಲಿಯೂ ಕೆಲಕಾಲ ಕಾರ್ಯನಿರ್ವಹಿಸಿದರು. ನಂತರ ಬಿ.ಇ. ಎಂ.ಎಲ್‌. ಕಾರ್ಖಾನೆ ಸೇರಿ ಅಲ್ಲಿಯೋಜನಾ ಇಲಾಖೆಯಲ್ಲಿ ಮ್ಯಾನೇಜರ್ ಹುದ್ದೆಯವರೆಗೆ ಸೇವೆ ಸಲ್ಲಿಸಿ 2000 ವರ್ಷದಲ್ಲಿ ನಿವೃತ್ತರಾದರು.

ಜ್ಞಾನಾನಂದ ಅವರು ಹೈಸ್ಕೂಲಿನಲ್ಲಿದ್ದಾಗ ಸಾಹಿತ್ಯಾಭಿರುಚಿ ಬೆಳೆದು ಬರೆದ ಮೊದಲ ಕತೆಯು ಕಥಾವಳಿ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಕಾಲೇಜು ದಿನಗಳಲ್ಲಿ ಬರೆದ ಪತ್ತೇದಾರಿ ಕಾದಂಬರಿಯು ಕಥಾವಳಿ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿತು. ಬರೆದ ನೂರಕ್ಕೂ ಹೆಚ್ಚು ಸಣ್ಣ ಕತೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟವಾಗಿದ್ದು ‘ಪ್ರೇಮಗಂಗೆ’ ಎಂಬ ಸಂಕಲನದಲ್ಲಿ 30 ಕಥೆಗಳು ಸೇರಿದೆ. ಮಕ್ಕಳಿಗಾಗಿ ಬರೆದ ‘ಆಕಾಶಯಾತ್ರೆ’, ‘ಸೂರ್ಯದೇವನ ಸಂಸಾರ’
ಕೃತಿಗಳು ಕೇಂದ್ರ ಸರಕಾರದ ಪುಸ್ತಕ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದವು.  ಇದಲ್ಲದೆ ರಾಕೆಟ್‌ ಮತ್ತು ಆಕಾಶನೌಕೆ, ಚಂದ್ರ ಮುಂತಾದ ವೈಜ್ಞಾನಿಕ ಕೃತಿಗಳಲ್ಲದೆ ವೇಮನ, ನಾಗಾರ್ಜುನ, ಆರ್ಯಭಟ ಮುಂತಾದ ವ್ಯಕ್ತಿಚಿತ್ರ ಕೃತಿಗಳನ್ನೂ ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ ಭಾರತಿ ಸಂಪದಕ್ಕಾಗಿ ಬರೆದಿದ್ದಾರೆ. ಇದಲ್ಲದೆ ರಾಜೂ ರಾದ್ಧಾಂತ, ತ್ವಷ್ಟ್ರಬ್ರಹ್ಮ, ಕ್ಯಾಲೆಂಡರ್ ಕಥೆ ಮುಂತಾದವುಗಳೂ ಪ್ರಕಟಗೊಂಡಿವೆ. 

ಜ್ಞಾನಾನಂದರ ಕಾದಂಬರಿಗಳಲ್ಲಿ ನಯನ, ಅನ್ನಪೂರ್ಣ ಮೊದಲಾದವು ಸಾಮಾಜಿಕ ಕಾದಂಬರಿಗಳು.  ಸಂಶೋಧನೆಯ ರಹಸ್ಯ, ಒಂಬತ್ತು ಅಲ್ಲ ಹತ್ತು, ಕೊಂದವನ ಕೊಲೆ, ಕೀರ್ತಿಕಾಮಿನಿ, ಮಾತನಾಡಿದರೆ ಮರಣ ಮುಂತಾದವು ಪತ್ತೇದಾರಿ ಕಾದಂಬರಿಗಳು. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತೆಲುಗು ಮತ್ತು ಪಂಜಾಬಿ ಭಾಷೆಗಳಲ್ಲೂ ಪರಿಣತಿ ಪಡೆದಿದ್ದು ಇಂಗ್ಲಿಷ್‌ನಿಂದ ಥಿಂಕಿಂಗ್‌ ವಿತ್‌ ಯಜುರ್ವೇದ ಕೃತಿಯನ್ನೂ ‘ಯಜುರ್ವೇದ: ಒಂದು ಸಹಚಿಂತನೆ’ ಎಂದು; ಹಿಂದಿಯಿಂದ ‘ಮತ್ತೊಂದು ಭಾರತ’ ಮತ್ತು ದಾದಾರ್ ಬ್ರಿಡ್ಜ್‌ನ ಮಕ್ಕಳು; ಪಂಜಾಬಿಯಿಂದ ಯಾತ್ರಿ, ಮಂದಾರ, ನೆನಪಿನ ನೆರಳು ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ. ತೆಲುಗಿನಿಂದ ವೀರೇಶ ಲಿಂಗಂ ಆತ್ಮಚರಿತ್ರೆ, ಹೊಸನೀರು, ವಾಘಿರಾ, ತೆನಾಲಿ ರಾಮಲಿಂಗ ಕವಿ ಮುಂತಾದವುಗಳನ್ನೂ ಕನ್ನಡಕ್ಕೆ ತಂದಿರುವುದಲ್ಲದೆ ಹದಿನೇಳು ಭಾರತೀಯ ಭಾಷೆಗಳ ಪ್ರಾತಿನಿಧಿಕ ಕಥಾಸಂಕಲನ ‘ಹೊಸಚಿಗುರು’ (ಸಿಂಧಿ, ಡೋಗ್ರಿ, ಕಾಶ್ಮೀರಿ, ಅಸ್ಸಾಮಿ, ಒರಿಯಾ, ಮೈಥಿಲಿ, ಸಂಸ್ಕೃತ ಭಾಷೆಗಳನ್ನೊಳಗೊಂಡು) ಪ್ರಕಟವಾಗಿದೆ. 

ಲೌಕಿಕ ಸಾಹಿತ್ಯವಷ್ಟೇ ಅಲ್ಲದೆ ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಗ್ರಂಥಗಳನ್ನೂ ಜ್ಞಾನಾನಂದರು ಕನ್ನಡಕ್ಕೆ ನೀಡಿದ್ದಾರೆ. ಶ್ರೀ ವರಾಹ ನರಸಿಂಹಾಚಾರ್ಯರ ಸಂಸ್ಕೃತ ಗ್ರಂಥವನ್ನೂ ಕನ್ನಡ ತಾತ್ಪರ್ಯದೊಡನೆ ದೀರ್ಘವಿವರಣೆ ನೀಡಿ ರಚಿಸಿರುವ ‘ಶ್ರೀ ವಿಶ್ವಕರ್ಮಾನ್ವಯ ಪ್ರದೀಪಿಕಾ’, ಪಂಚಾಗ್ನಿ ಹೋತ್ರಿ ಕೋಸೂರಿ ಪಾಪಯ್ಯ ದೀಕ್ಷಿತರಿಗೂ ಮಚಲಿ ಪಟ್ಟಣಂ ಸಪ್ತರ್ಷೀಯರಿಗೂ ನಡೆದ ಚರ್ಚೆಯ ಕನ್ನಡ ಅನುವಾದ ಕೃತಿ ‘ಶ್ರೀ ವಿಶ್ವಕರ್ಮಾನ್ವಯ ಭೂಷಣಂ’, ವಿಶ್ವಕರ್ಮಸಂಹಿತೆ, ‘ವಿಶ್ವಕರ್ಮೋಪಾಖ್ಯಾನ’,  ಸಿಂಹಳದ ಆಲ್ಫ್ರೆಡ್‌ ಎಡ್ವರ್ಡ್ ರಾಬರ್ಟ್ ಅವರ ಇಂಗ್ಲಿಷ್‌ ಕೃತಿ ಅನುವಾದ ‘ವಿಶ್ವಕರ್ಮ ಅಂಡ್‌ ಹಿಸ್‌ ಡಿಸಿಡೆಂಟ್ಸ್‌’,  864 'ಶ್ರೀ ಕಾಶ್ಯಪ ಶಿಲ್ಪಶಾಸ್ತ್ರಂ' (ಉತ್ತರಾರ್ಧ), ಶ್ರೀ ಬ್ರಾಹ್ಮೀಯ ಚಿತ್ರಕರ್ಮಶಾಸ್ತ್ರಂ, ಶಿಲ್ಪಾದರ್ಶ (ಸಂಪುಟ ೧-೨), ರೂಪ ಲಕ್ಷಣ ಸಂಗ್ರಹ (ಸಂಪುಟ ೧), ಶಿಲ್ಪವಿದ್ಯಾ ರಹಸ್ಯೋಪನಿಷತ್ತು, ವಿಶ್ವಕರ್ಮಸೂಕ್ತ, ವಿಶ್ವಕರ್ಮಪೂಜೆಯ ತತ್ತ್ವ-ಮಹತ್ವ, ಪಾಂಚಾಲ ಬ್ರಾಹ್ಮಣರು ಮುಂತಾದ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಇವರು ಸಂಪಾದಿಸಿರುವ ಇತರ ಗ್ರಂಥಗಳಲ್ಲಿ ನಾ.ಭಾ, ಚಂದ್ರಶೇಖರಾಚಾರ್ಯರ ಅಭಿನಂದನ ಗ್ರಂಥ ಆಚಾರ್ಯಭಿನಂದನೆ (1980), ಕೋಲಾರ ಜಿಲ್ಲಾ ನಾಲ್ಕನೆಯ ಕನ್ನಡ ಸಮ್ಮೇಳನದ ನೆನಪಿನಸಂಚಿಕೆ ‘ಶಿಲ್ಪಸುಧಾ’, ಕೆ.ಜಿ.ಎಫ್‌.ನಲ್ಲಿ ನಡೆದ ಐದನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ವಸುಂಧರಾ-೧’, ಕನ್ನಡ ಮಿತ್ರರು (ಬಿಇಎಂಎಲ್‌ ನಗರ-ಕೆ.ಜಿ.ಎಫ್‌) ಸಂಸ್ಥೆಗಾಗಿ ವಸುಂಧರಾ-೨ ಮುಂತಾದವು ಸೇರಿವೆ. 

ಜ್ಞಾನಾನಂದರ ಪತ್ನಿ  ಶ್ರೀಮತಿ ಸರಿತಾ ಜ್ಞಾನಾನಂದರು ಬರಹಗಾರ್ತಿಯಲ್ಲದೆ ಸಂಗೀತ ವಿದುಷಿ, ನಾಟ್ಯ ವಿಶಾರದೆಯಾಗಿದ್ದು  ಇವರದ್ದು ಮಹಾನ್ ವಿದ್ವತ್ಪೂರ್ಣ ಸುಸಂಸ್ಕೃತ ದಾಂಪತ್ಯ. 

ಡಾ. ಜಿ. ಜ್ಞಾನಾನಂದ ಅವರು  ನಂದಿ ಗ್ರಾಮದಲ್ಲಿ ಬ್ರಹರ್ಷಿ ಶಿಲ್ಪ ಗುರುಕುಲದ ಮೇಲ್ವಿಚಾರಕರಾಗಿ, ಶಿಲ್ಪಶಾಸ್ತ್ರವನ್ನೂ ಬೋಧಿಸುತ್ತಿದ್ದಾರೆ.  ಇವರು ಕರ್ನಾಟಕ ಸರಕಾರದ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ 2003ರಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ  ‘ಸುಜ್ಞಾನ’.

On the birthday of great scholar Dr. G. Gnannanda 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ