ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಕೆ ವೆಂಕಟರಾಮ್


 ಎಚ್. ಕೆ  ವೆಂಕಟರಾಮ್ 


ವಿದ್ವಾನ್ ಎಚ್. ಕೆ  ವೆಂಕಟರಾಮ್ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವುದಲ್ಲದೆ,  ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಿದ್ವತ್ಪೂರ್ಣ  ಪಿಟೀಲು ವಾದನ ಕಲಾವಿದರಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವದವರೆಗಿನ ಮಹತ್ಸಾಧನೆಗಳಿಂದಲೂ ಪ್ರಸಿದ್ಧರಾಗಿದ್ದಾರೆ.

ಜುಲೈ 4, ಎಚ್. ಕೆ  ವೆಂಕಟರಾಮ್ ಅವರ ಜನ್ಮದಿನ.  ಸಂಗೀತದ ಕುಟುಂಬದಲ್ಲಿ ಜನಿಸಿದ ವೆಂಕಟರಾಮ್ ಅವರು ಸಂಗೀತ ತರಬೇತಿಯನ್ನು,  ತಮ್ಮ ಸುಪ್ರಸಿದ್ಧ ತಂದೆ ಮತ್ತು ಗುರು,  ಸಂಗೀತಾ  ಕಲಾರತ್ನ  ಪ್ರೊಫೆಸರ್ ಎಚ್.ವಿ. ಕೃಷ್ಣಮೂರ್ತಿ ಅವರಿಂದ ಪಡೆದರು.  ವೆಂಕಟರಾಮ್ ಎಂಟನೇ ವಯಸ್ಸಿನಲ್ಲಿ ಪಿಟೀಲು ಕಲಿಯಲು ಪ್ರಾರಂಭಿಸಿದರು.  11 ನೇ ವಯಸ್ಸಿನಲ್ಲಿ ತಮ್ಮ ಸಹೋದರ ಎಚ್.ಕೆ.  ರಾಘವೇಂದ್ರ ಅವರೊಂದಿಗೆ ಬೆಂಗಳೂರಿನಲ್ಲಿ ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಅವರು ತಮ್ಮ ತಂದೆ ಮತ್ತು ಸಹೋದರನೊಂದಿಗೆ ಸಂಯಕ್ತವಾಗಿ ಸಹ  ಪ್ರದರ್ಶನಗಳನ್ನು ನೀಡಿದ್ದಾರೆ.

ಎಚ್. ಕೆ  ವೆಂಕಟರಾಮ್ ಅವರು ಇಂಟೆಲ್ ಕಾರ್ಪೊರೇಷನ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಮೂಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದವರು. ಭಾರತದಲ್ಲಿ ವಿಶ್ವ ದರ್ಜೆಯ ಸಿಸ್ಟಮ್ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ತಂಡವನ್ನು ನಿರ್ಮಿಸಿದ ಹಿರಿಮೆ ಇವರದ್ದಾಗಿದೆ. 

ಎಚ್. ಕೆ  ವೆಂಕಟರಾಮ್ ಆಕಾಶವಾಣಿಯ 'ಎ' ಗ್ರೇಡ್ ಕಲಾವಿದರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ದೇಶ ಮತ್ತು ವಿದೇಶಗಳ ಪ್ರತಿಷ್ಠಿತ ಸಭಾಗಳಲ್ಲಿ ತಮ್ಮದೇ ಪ್ರಮುಖ ಕಚೇರಿಗಳು ಮತ್ತು ಪಕ್ಕವಾದ್ಯ ಸಹಯೋಗಗಳನ್ನು ನೀಡಿದ್ದಾರೆ.ಯುಎಸ್ಎ, ಕೆನಡಾ, ಸಿಂಗಾಪುರ್, ಮಲೇಷ್ಯಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವಾರು ದೇಶಗಳಲ್ಲಿಯೂ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಶ್ರೀಯುತ  ಸೆಮ್ಮಂಗುಡಿ  ಶ್ರೀನಿವಾಸ ಅಯ್ಯರ್, ಡಿಕೆ ಪಟ್ಟಮ್ಮಾಳ್, ಡಾ.ಎಂ.ಎಲ್ ವಸಂತಕುಮಾರಿ, ಕೆ.ವಿ.ನಾರಾಯಣಸ್ವಾಮಿ,  ಡಾ. ಎಂ ಬಾಲಮುರಳಿಕೃಷ್ಣ, ಡಾ. ಆರ್.ಕೆ ಶ್ರೀಕಂಠನ್, ನೆಂದನೂರಿ ಕೃಷ್ಣಮೂರ್ತಿ, ಡಾ.ಎನ್. ಎಸ್. ರವಿಕಿರಣ್, ಮ್ಯಾಂಡೋಲಿನ್ ಯು ಶ್ರೀನಿವಾಸ್, ಟಿ ಎಮ್  ಕೃಷ್ಣ, ಸಂಜಯ್ ಸುಬ್ರಹ್ಮಣ್ಯಂ  ಸೇರಿದಂತೆ ವಿವಿಧ ತಲೆಮಾರಿನ ಸಂಗೀತಕಾರರಿಗೆ ಸಹಯೋಗ ನೀಡಿದ್ದಾರೆ.  ಯು ಜಿ ರವಿಕಿರಣ್ (ಕೊಳಲು) ಮತ್ತು ಅಶ್ವಿನ್ ಆನಂದ್ (ವೀಣಾ) ಜೊತೆಗೆ ಜನಪ್ರಿಯ ಪಿಟೀಲು-ವೇಣು-ವೀಣಾ ಸಂಯೋಗದ  ಸಂಗೀತವನ್ನು ನೀಡುತ್ತಿದ್ದಾರೆ. ಪಂ.ವಿಶ್ವಮೋಹನ್ ಭಟ್, ಪಂ ರೋಣು ಮಜುಂದಾರ್, ಉಸ್ತಾದ್ ಶಾಹಿದ್ ಪರ್ವೇಜ್  ಮುಂತಾದ ಧೀಮಂತ ಕಲಾವಿದರೊಂದಿಗೆ ಜುಗಲ್‌ಬಂದಿ ಪ್ರದರ್ಶನಗಳನ್ನು ನೀಡಿದ್ದಾರೆ.

ಎಚ್. ಕೆ  ವೆಂಕಟರಾಮ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪರೂರ್ ಸುಂದರಂ ಅಯ್ಯರ್ ಪ್ರಶಸ್ತಿ, ಕರ್ನಾಟಕ ಗಾನಕಲಾ ಪರಿಷತ್ತಿನ 'ಗಾನಕಲಾ ಶ್ರೀ', ಕಾಂಚೀಪುರಂನ ಶ್ರೀ ಕಂಚಿ ಕಾಮೋಕೋಟಿ ಪೀಠದ ‘ಆಸ್ಥಾನ ವಿದ್ವಾನ್’ ಮುಂತಾದ ಅನೇಕ ಗೌರವಗಳು ಸಂದಿವೆ. 

ಎಚ್. ಕೆ  ವೆಂಕಟರಾಮ್ ಅವರು ಹಲವು ಪ್ಯಾನೆಲ್ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.  ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಸಾಕಷ್ಟು ಉಪನ್ಯಾಸ ಪ್ರದರ್ಶನಗಳನ್ನು ನಡೆಸಿದ್ದಾರೆ. 1953 ರಲ್ಲಿ ತಮ್ಮ ತಂದೆಯವರು ಸ್ಥಾಪಿಸಿದ ವಿಜಯ ಕಾಲೇಜ್ ಆಫ್ ಮ್ಯೂಸಿಕ್‌ನ ಪ್ರಾಚಾರ್ಯರಾಗಿದ್ದಾರೆ.  ಹಲವಾರು ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕುಟುಂಬವು 
 ವಿವಿಧ ಎನ್‌ಜಿಒಗಳು ಮತ್ತು ಅಗತ್ಯವಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸಕ್ರಿಯವಾಗಿ ಬೆಂಬಲ ನೀಡುತ್ತ ಬಂದಿದೆ. ಉನ್ನತ ತಂತ್ರಜ್ಞಾನದೊಂದಿಗೆ ಸಂಗೀತವನ್ನು ತಲುಪಿಸುವ ಅಪಾರ ಕೆಲಸ ಮಾಡುತಿದ್ದಾರೆ. ಗ್ರಂಥರಚನೆಯನ್ನೂ ಮಾಡಿದ್ದಾರೆ.

ಮಹತ್ಸಾಧಕ ವಿದ್ವಾನ್‍ ಎಚ್.ಕೆ. ವೆಂಕಟರಾಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

Happy birthday Great Technocrat and 
Great Violonist Vidwan Venkataram Hk
Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ