ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಚಿಕೇತ


 ನಚಿಕೇತ


ಒಂದಾನೊಂದು ಕಾಲದಲ್ಲಿ ವಾಜಶ್ರವನೆಂಬ ಬ್ರಾಹ್ಮಣ ಇದ್ದ. ಅವನಿಗೆ ನಚಿಕೇತನೆಂಬ ಮಗನಿದ್ದ. ನಚಿಕೇತ ಬುದ್ಧಿವಂತ ಮತ್ತು ಧೈರ್ಯಶಾಲಿ.

ಒಮ್ಮೆ ವಾಜಶ್ರವನು ಯಾಗವೊಂದನ್ನು ಮಾಡಿ ತನ್ನಲ್ಲಿದ್ದ ದನಗಳನ್ನೆಲ್ಲಾ ದಾನಮಾಡಿದನು. ತುಂಬಾ ಬಡಕಲು ದನಗಳನ್ನು ತಂದೆ ದಾನಮಾಡಿದುದನ್ನು ಕಂಡು ನಚಿಕೇತನಿಗೆ ಬೇಸರವಾಯಿತು.

“ಅಪ್ಪಾಅಂಥ ದನಗಳನ್ನು ದಾನಮಾಡಿದರೆ ಏನು ಪ್ರಯೋಜನ?” ಎಂದು ನಚಿಕೇತ ಪ್ರಶ್ನಿಸಿದ.

“ತಲೆಹರಟೆ ಮಾತಾಡ್ಬೇಡ ಮಗನೆ ನಮ್ಮ ಹತ್ತಿರ ಇದ್ದದ್ದೇ ಅಂಥವು. ಅದಕ್ಕೇನು ಮಾಡ್ಬೇಕು?” ಎಂದ ತಂದೆ ಸಿಟ್ಟಿನಿಂದ.

“ಹಾಗಾದರೆ ನಾನೂ ನಿನ್ನ ಸ್ವತ್ತು. ನನ್ನನ್ನು ಯಾರಿಗೆ ದಾನ ಮಾಡ್ತೀ ಅಪ್ಪ?”

ತಂದೆ ಅತಿಯಾದ ಕೋಪದಿಂದ “ನಿನ್ನನ್ನು ಮೃತ್ಯುದೇವನಿಗೆ ದಾನ ಮಾಡ್ತೇನೆ. ಅಲ್ಲಿಗೆ ಹೋಗು, ನನ್ನ ಮುಂದೆ ನಿಲ್ಲಬೇಡ”ಎಂದು ಆರ್ಭಟಿಸಿದ.

ನಚಿಕೇತ ಹೆದರಲಿಲ್ಲ. ಧೈರ್ಯದಿಂದ ಯಮಪುರಕ್ಕೆ ಹೊರಟ. ಅಲ್ಲಿ ಯಮಧರ್ಮರಾಯನಿರಲಿಲ್ಲ. ನಚಿಕೇತ ಯಮರಾಜನ ಮನೆಯಲ್ಲಿ ಅನ್ನಪಾನಗಳನ್ನು ಸ್ವೀಕರಿಸದೆ ಹೊರಜಗಲಿಯಲ್ಲಿ ಮೂರು ದಿನಗಳನ್ನು ಕಳೆದ.

ಅಷ್ಟು ಹೊತ್ತಿಗೆ ಯಮಧರ್ಮ ಹಿಂತಿರುಗಿ ಬಂದ. ಮನೆಗೆ ಬಂದ ಅತಿಥಿ ಉಪವಾಸವಿರುವುದು ಕಂಡು ಅವನಿಗೆ ವ್ಯಥೆ ಆಯಿತು. ಅತಿಥಿಗೆ ಭೋಜನವಿಕ್ಕಿದ ಬಳಿಕ, ಅವನು ಹೇಳಿದ:

“ನಚಿಕೇತ, ನೀನು ನನ್ನ ಮನೆಯಲ್ಲಿ ಮೂರು ದಿನ ಉಪವಾಸ ಮಾಡಿದ್ದೀ. ಆದ್ದರಿಂದ ನಿನಗೆ ಇಷ್ಟಬಂದ ಮೂರು ವರಗಳನ್ನು ಕೇಳಿಕೊ.”

ನಚಿಕೇತನು: “ಮೃತ್ಯುದೇವತೆ ನನ್ನ ಮೇಲೆ ತಂದೆಗಿರುವ ಕೋಪ ಶಮನ ಆಗಲಿ. ಇದೇ ನಾನು ಕೇಳುವ ಮೊದಲನೆಯ ವರ” ಎಂದ.

ಯಮರಾಯ “ತಥಾಸ್ತು” ಎಂದ.

“ಯಮಧರ್ಮ ಸ್ವರ್ಗಲೋಕದಲ್ಲಿ ಮುಪ್ಪು ಸಾವುಗಳಿಲ್ಲವಂತೆ. ಅದನ್ನು ಪಡೆಯಲು ಏನು ಮಾಡ್ಬೇಕು?”

“ಜ್ಞಾನದ ಮೇಲೆ ನಿನಗಿರುವ ಆಸಕ್ತಿ ಕಂಡು ಸಂತೋಷ ಆಯಿತು ನಚಿಕೇತ. ನೀನು ಅಗ್ನಿವಿದ್ಯೆಯನ್ನು ತಿಳಿದರೆ ಸ್ವರ್ಗ ಪ್ರಾಪ್ತಿಯಾಗ್ತದೆ” ಎಂದು ಯಮ ನಚಿಕೇತನಿಗೆ ಅಗ್ನಿ ವಿದ್ಯೆಯನ್ನು ಬೋಧಿಸಿದ.

“ಯಮಧರ್ಮರಾಜ ಇನ್ನು ಮೂರನೆಯ ಬೇಡಿಕೆ. ನನಗೆ ಆತ್ಮ ಜ್ಞಾನವನ್ನು ಬೋಧಿಸು.”

“ಬಾಲಕ ನಚಿಕೇತ, ನೀನಿನ್ನೂ ಸಣ್ಣವನು. ಆ ವಿದ್ಯೆ ಬೇಡ. ಅದಕ್ಕೆ ಬದಲಾಗಿ ನಿನ್ನನ್ನು ಭೂಮಂಡಲದ ಚಕ್ರವರ್ತಿಯನ್ನಾಗಿ ಮಾಡ್ತೇನೆ” ಎಂದು ನುಡಿದ ಜವರಾಯ.

“ಚಕ್ರವರ್ತಿ ಪದವಿ ಕ್ಷಣಿಕ ಯಮದೇವ. ನನಗೆ ಆತ್ಮಜ್ಞಾನವಿದ್ಯೆಯನ್ನೇ ತಿಳಿಸಿಕೊಡು” ಎಂದು ಹಟ ಹಿಡಿದ ನಚಿಕೇತ. ಯಮದೇವ ಅದನ್ನು ನಚಿಕೇತನಿಗೆ ಬೋಧಿಸಿದ.

ಅನಂತರ ನಚಿಕೇತನ ತನ್ನ ತಂದೆಗೆ ಮನೆಗೆ ಹಿಂತಿರುಗಿ ಬಹಳ ವರ್ಷ ಬದುಕಿದ.

ನಿರೂಪಣೆ: ಡಾ. ಅನುಪಮಾ ನಿರಂಜನ, ‘ದಿನಕ್ಕೊಂದು ಕಥೆ’

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ