ಒಂದಕ್ಷರವ ಕೇಳ್ದವರಿಗೆ
ಆದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ 🌷🙏🌷
ಕಳೆದ 154 ದಿನದಿಂದ ಕುಮಾರ ವ್ಯಾಸ ಭಾರತವನ್ನು ನಾವು ನೆನೆಸಿಕೊಂಡಿದ್ದು ಕೆಲವರಿಗಾದರೂ ಕಣ್ಣಿಗೆ ಬಿದ್ದಿದೆ ಎಂದುಕೊಂಡಿದ್ದೇನೆ.
ಮೊದಲನೆಯ ದಿನ ಕುಮಾರವ್ಯಾಸನ ಬಗ್ಗೆ ಹಾಗೂ 153 ದಿನಗಳ ಕಾಲ ದಿನಕ್ಕೊಂದು ಸಂಧಿಯ ಹಾಗೆ ಒಂದು ರಮ್ಯ ಪಯಣ ಇಲ್ಲಿ ಸಾಗಿಬಂತು.
ನಾವೆಲ್ಲ ಸಂಗೀತವನ್ನು ಕೇಳಿ ಬೆಳೆದೆವು. ಆದರೆ ಸಂಗೀತ ಸಿದ್ಧಿ ದೊರೆತಿದ್ದು ಸಾವಿರಕ್ಕೊಬ್ಬರಿಗೆ. ಇನ್ನು ಶ್ರೇಷ್ಠ ಕಾವ್ಯವಾಚನ ಮಾಡುವ ಮಂದಿಯಂತೂ ಕಡಿಮೆ. ಸಂಗೀತದಂತೆ ಕಾವ್ಯವಾಚನ ಇಂದಿನ ಯುಗದ ಎಲ್ಲರನ್ನೂ ಸ್ಪರ್ಶಿಸಿದೆ ಎನ್ನಲಾಗದು. ಹಾಗಾಗಿ ಕಾವ್ಯವಾಚನವನ್ನು ಕೇಳಿದ ಕೆಲವು ಭಾಗ್ಯವಂತರಲ್ಲಿ ನಾವೂ ಸೇರಿದ್ದೇವೆ ಎಂಬ ಭಾಗ್ಯವೂ ನಮಗೆ ಹಿರಿದೇ. ಆ ಭಾಗ್ಯ ಅಂತಿಂತದ್ದಲ್ಲ.
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ
ಕುಮಾರವ್ಯಾಸ ಹೇಳಿದ ಈ ಮಾತು ನಮಗೇ ಹೇಳಿದನೇನೊ ಅಂತ ಖುಷಿಯಾಗುತ್ತೆ. ಕಾರಣ ನಾವು ಕೇಳಿದ್ದು ಕೆಲವೇ ಅಕ್ಷರ. ಆದರೆ, ಅದನ್ನು ನಮಗೆ ಕೇಳಿಸಿದ ಮಹಾನುಭಾವರು ಅನೇಕ ಮಂದಿ. ಹೆಸರನ್ನು ಹೇಳಿದರೆ ಎಲ್ಲ ಗಮಕ ವಿದ್ವಾಂಸರನ್ನೂ ನೆನೆಯಬೇಕಾದೀತು. ಒಂದಕ್ಷರವ ಪೇಳ್ದವರ ಭಾಗ್ಯವೇ ಅಷ್ಟೊಂದಾದರೆ, ಅದನ್ನು ಕೇಳಿಸಿದ ಮಹನೀಯರುಗಳು, ಅದರಲ್ಲಿ ಅವರು ಗಳಿಸಿದ ಸಾಧನೆಯ ಭಾಗ್ಯ ಮತ್ತು ಅದನ್ನು ಜನಕ್ಕೆ ತಲುಪಿಸಿದ ಭಾಗ್ಯ ಇನ್ನೆಷ್ಟಿರಬೇಡ.
ನನಗೆ ನಾನು ಎಂದೋ ಹೇಗೊ ಕೇಳಿದ - ಓದಿದ - ನೋಡಿದ - ಅನುಭವಿಸಿದ ಸೊಗಸನ್ನು ನೆನಪು ಮಾಡಿಕೊಳ್ಳುವುದಕ್ಕೆ ತುಂಬಾ ಸಂತೋಷವಾಗುತ್ತದೆ. ನಾನು ನನ್ನ ಎಫ್‍ಬಿ ಗೋಡೆ, ಕನ್ನಡ ಸಂಪದ ಪುಟ ಮತ್ತು ಸಂಸ್ಕೃತಿ ಸಲ್ಲಾಪ ಬ್ಲಾಗಿನಲ್ಲಿ ಹೀಗೆ ನೆನಪುಗಳನ್ಬು ಕಾಣಿಸುತ್ತಿರುವುದು, ನನಗೆ ಸದಾ ಧನ್ಯತೆಯ ವಿಚಾರ. ಆದರೆ ಈ ಫೇಸ್ಬುಕ್ ಗೋಡೆಯ ಮೇಲೆ ಕುಮಾರವ್ಯಾಸ ಭಾರತದಂತಹ ಅಗಾಧತೆಯನ್ನು ಹೀಗೆ ತರಬಹುದು ಎಂಬ ಕಲ್ಪನೆಯೇ ನನಗಿರಲಿಲ್ಲ.
ಮಾರ್ಗಶಿರ ಮಾಸದಲ್ಲಿ ತಿರುಪ್ಪಾವೈ ಬಗ್ಗೆ 30 ದಿನಗಳ ಕಾಲ ಪ್ರತಿದಿನ ಅಲ್ಲಿನ ಪಾಶುರಗಳೆಂಬ ಆಯಾ ದಿನದ ಔಚಿತ್ಯದ ಭಾಗಗಳನ್ನು ಚಿತ್ರ ಮತ್ತು ಅರ್ಥ ಸಮೇತ ಹಂಚಿಕೊಂಡಾಗ ಅದಕ್ಕೆ ದೊರೆತ ಪ್ರತಿಕ್ರಿಯೆ ಸಂತಸ ತಂದಿತ್ತು. ತಿರುಪ್ಪಾವೈ ತಮಿಳಿನಲ್ಲಿ ಇದ್ದದ್ದು . ಅದಕ್ಕೆ ಕನ್ನಡದಲ್ಲಿ ಅರ್ಥ ವಿವರ ಮಾಡಿದ್ದು. ಆ ಕೆಲಸ ಮಾಡುವಾಗ ಹಿಂದಿನ ಶ್ರೇಷ್ಠ ಕನ್ನಡ ಸಾಹಿತ್ಯವನ್ನೂ ಹೀಗೆ ಮಾಡಬೇಕು ಎಂಬ ಆಶಯವಾಗುತ್ತಿತ್ತು. ಒಮ್ಮೆ ಗಮಕ ವಿದ್ವಾಂಸರಾದ ಎಂ. ಆರ್. ಸತ್ಯನಾರಾಯಣ Sathyanarayana M R ಅವರು "ಓಟಿನ ಲಾಭಕ್ಕೆ ಅನುಕೂಲವಲ್ಲದ ಕುಮಾರವ್ಯಾಸನ ಜನ್ಮದಿನ ಆಚರಣೆ ಯಾರಿಗೂ ಬೇಕಾಗಿಲ್ಲವಲ್ಲ" ಎಂಬ ಕೊರಗು ವ್ಯಕ್ತಪಡಿಸಿದ್ದರು. ಆಗ ಅನಿಸಿತು ಕುಮಾರವ್ಯಾಸ ಭಾರತವನ್ನೇ ಇಲ್ಲಿ ಬಿತ್ತರಿಸಿದರೆ ಹೇಗೆ ಅಂತ!
ಆದರೆ ಕುಮಾರವ್ಯಾಸ ಭಾರತದ್ದು ದೊಡ್ಡ ಕೆಲಸ. ಹತ್ತು ಪರ್ವಗಳ, 153 ಸಂಧಿಗಳಲ್ಲಿ ಇರುವ ಪದ್ಯಗಳ ಸಂಖ್ಯೆ 9,451. ದಿನಕ್ಕೆ ಒಂದೊಂದು ಸಂಧಿಯಾದರೂ 153 ದಿನದವರೆಗೆ ಪ್ರಕಟಣೆ ಅನಿವಾರ್ಯವಿತ್ತು. ಹೇಗೋ ಕಷ್ಟಪಟ್ಟು ಆರಂಭಿಸಿಯೇ ಬಿಟ್ಟೆ.
ನಾನು ಪ್ರಾರಂಭಿಸಿದ್ದು ನೋಡಿ ಇದನ್ನು ನೀವು ದಿನಾ ಮಾಡ್ತೀರಾ ಎಂದು ಕೆಲವು ಆತ್ಮೀಯರು ಕೇಳಿದರು. ಸಾಧ್ಯವಾದಷ್ಟು ಮಾಡುತ್ತೇನೆ. ಆಗದಿದ್ದರೂ ಪೂರ್ಣ ಮಾಡಲೇಬೇಕೆಂಬ ಹಠವಿಲ್ಲ ಎಂದಿದ್ದೆ.
ನಾನು ಈ ಕಾಯಕವನ್ನು ಮಾಡಿದ ಮೊದಲಲ್ಲೇ ಕೋಲಾರದ ಸುಬ್ಬುಲಕ್ಷ್ಮಿ Lrphks Kolar ಅವರು ಏನಾದರೂ ಸಹಾಯಬೇಕೆ ಎಂದು ಕೇಳಿದ್ದು ಭರವಸೆಯಾಗಿತ್ತು. ಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಅವರ ಸಾಹಿತ್ಯಕ ಆಸಕ್ತಿ, ,ಅಪಾರ ಓದು ಮತ್ತು ಬರವಣಿಗೆಯ ಅಭಿಮಾನಿ ನಾನು. ನನಗೆ ಏನಾದರೂ ಸಾಹಿತ್ಯಕ ಸಾಮಾಗ್ರಿ ಬೇಕಾದಾಗ ಅದನ್ನು ಹೇಗಾದರೂ ಹುಡುಕಿ ತಂದುಕೊಡುವ ಸಾಮರ್ಥ್ಯಶಾಲಿನಿ ಅವರು. ಹಾಗಾಗಿ ತಾವು ಪ್ರತಿದಿನ ಆಯಾ ಸಂಧಿಗೆ ಸಂಕ್ಷಿಪ್ತ ಗದ್ಯ ಭಾವ ಬರೆಯಿರಿ ಎಂದೆ. ಈ ಸಮಸ್ತ ಕಾರ್ಯದಲ್ಲಿ ಅವರ ಕೊಡುಗೆ ಅಪಾರ. ಹಳಗನ್ನಡದಲ್ಲಿದ್ದ ಅಕ್ಷರಗಳನ್ನು ಸರಳ ಕನ್ನಡಕ್ಕೆ ಪರಿವರ್ತಿಸಿ ತಪ್ಪುಗಳನ್ನು ತಿದ್ದಿದ ಕಾರ್ಯವೂ ಅವರದ್ದೆ.
ಕುಮಾರವ್ಯಾಸ ಭಾರತವನ್ನು ಪ್ರಸ್ತುತ ಪಡಿಸುವಾಗ ಮೊದ ಮೊದಲು ಲಭ್ಯವಿದ್ದ ಪಿಡಿಎಫ್ ಅನ್ನು ಓಸಿಆರ್ ಮೂಲಕ ಅಕ್ಷರರೂಪದಲ್ಲಿ ತಂದು ತಿದ್ದಿ ತೀಡಿ ಬಸವಳಿದು ಹೋದೆ. ನಂತರದಲ್ಲಿ ಅಂತರಜಾಲದಲ್ಲೇ ಇದ್ದ ಹಲವು ತಾಣಗಳಿಂದ ತಂದು ತಿದ್ದಿ ಪ್ರಕಟಿಸಲೆತ್ನಿಸಿದೆ. ಅದೂ ಕಾಪಿ ಪೇಸ್ಟ್ ಕೆಲಸ ಆದರೂ ಒಂದು ಫಾರ್ಮಾಟ್ಗೆ ತರುವುದು ಸುಲಭವಾಗಿರಲಿಲ್ಲ. ಇನ್ನು ಪ್ರತಿ ಸಂಧಿಯ ಕಥಾನಕದ ಔಚಿತ್ಯಕ್ಕೆ ಸಮೀಪವದರೂ ಇರುವ ಚಿತ್ರಗಳನ್ನು ಹೊಂದಿಸುವುದು ಮತ್ತೊಂದು ಸಮಯ ಅಪೇಕ್ಷಿಸುವ ಕೆಲಸ. ನಾನೊಬ್ಬ ಕಲಾವಿದ ಆಗಿದ್ದರೆ ಚೆನ್ನಾಗಿತ್ತು ಎಂಬ ಕೊರತೆ ಪ್ರತಿದಿನ ಕಾಡುತ್ತೆ.
ಹಾಗೂ ಹೀಗೂ 83 ಸಂಚಿಕೆಗಳನ್ನು ಪ್ರಕಟಿಸಿದಾಗ ಮುಂದೆ ಕುರುಕ್ಷೇತ್ರಕ್ಕೆ ಆರಂಭಗೊಂಡ ದ್ಯೋತಕವೋ ಎಂಬಂತೆ ಅರ್ಜುನನಿಗೆ ಏನೂ ತೋಚದ ವಿಷಾದ ಭಾವದಂತೆ ನನಗೂ ಇನ್ನು ಸಾಧ್ಯವೇ ಇಲ್ಲ ಎಂಬ ಹಾಗೆ ದೊಡ್ಡ ಅಡ್ಡಗೋಡೆ ಎದುರಾಯ್ತು. ಡಿಜಿಟಲ್ ರೂಪದಲ್ಲಿ ಮಾಹಿತಿ ಹೊಂದಿಸಲೇ ಆಗದ ಪರಿಸ್ಥಿತಿ ಮೂಡಿತು. ರಾಮನವಮಿ ಸಮಯದಲ್ಲಿ ಏಳು ದಿನಗಳ ಕಾಲ ರಾಮಾಯಣ ಪಾರಾಯಣದ ನೆಪದಲ್ಲಿ ಕುಮಾರವ್ಯಾಸ ಭಾರತವನ್ನು ನಿಲ್ಲಿಸಿ ಏನು ಮಾಡುವುದೆಂದು ಯೋಚಿಸಿ ಕೊನೆಗೆ ಕನ್ನಡದಲ್ಲಿ ಯಾರದಾದರೂ ಟೈಪಿಂಗ್ ಸೇವೆ ಪಡೆಯಲು ಕರೆಕೊಟ್ಟಾಗ ಅನೇಕ ಸಹೃದಯರು ಸೇವಾದಾನ ಮಾಡಲು ಮುಂದೆ ಬಂದರು. ಎಸ್. ರುದ್ರೇಶ್ವರ ರಾಮನಗರ, ಶ್ರೀಮತಿ ಮತ್ತು ಶ್ರೀ ಗೋವಿಂದ ಹೆಗಡೆ Govind Hegde, ಸರ್ವಮಂಗಳಾ ಶಾಸ್ತ್ರಿ Sarvamangala Shastry ಇವರಲ್ಲಿ ಮುಖ್ಯರು. ಕೋಲಾರದ ಸುಬ್ಬುಲಕ್ಷ್ಮಿ ಅವರಂತೂ ಗದ್ಯ ಒದಗಿಸುವುದರ ಜೊತೆಗೆ ಮೂಲ ಪದ್ಯ ಟೈಪಿಸುವುದಕ್ಕೆ ಆರಂಭಿಸಿಯೇ ಬಿಟ್ಟರು. ಹೀಗೆ ಇವರುಗಳ ಸೇವಾದಾನದಲ್ಲಿ 84ನೇ ಸಂಚಿಕೆಯಿಂದ ಕೆಲಸ ಪುನರಾರಂಭಗೊಂಡಿಯೇ ಬಿಟ್ಟಿತು. ಒಳ್ಳೆಯ ಉದ್ದೇಶಗಳು ಸುಸೂತ್ರವಾಗಿ ನಡೆದೇ ನಡೆಯುತ್ತದೆ ಎಂಬ ಬಲವಾದ ನಂಬಿಕೆ ನನ್ನದು. ಶ್ರೀಕೃಷ್ನನ ಅಕ್ಷಯ ಕೃಪೆಯೊ ಎಂಬಂತೆ ವಿಶಿಷ್ಟ ಸಹಾಯ ಕರ್ನಾಟಕ ಗಣಕ ಪರಿಷತ್ತಿನ ಆತ್ಮೀಯರಾದ ನರಸಿಂಹಮೂರ್ತಿ ಅವರ ಮೂಲಕ, ಚಿಂತೆಗೆ ಅವಕಾಶವೇ ಇಲ್ಲದ ಹಾಗೆ
ಹರಿದುಬಂತು.
ಮಹಾಭಾರತ ಎಂಬ ಭವ್ಯತೆ ಸಂಭವಿಸಿದ್ದು ದೈವೇಚ್ಛೆಯಿಂದ. ಲೋಕಕ್ಕೆ ಪ್ರಕಟಗೊಂಡಿದ್ದು ವ್ಯಾಸ ಮಹರ್ಷಿಗಳಿಂದ. ಅದನ್ನು ಕನ್ನಡ ಕಾವ್ಯವಾಗಿಸಿದ್ದು ಕುಮಾರವ್ಯಾಸ. ಇಲ್ಲಿ ಇದನ್ನು ಬಿತ್ತರಿಸಲು ಸಾಧ್ಯವಾದದ್ದು ಮೇಲ್ಕಂಡ ಆತ್ಮೀಯ ಸಹೃದಯಿಗಳು ಮತ್ತು ತಮ್ಮಂತಹವರ ಪ್ರೋತ್ಸಾಹದಿಂದ. ಜೊತೆಗೆ ಅಂತರಜಾಲದಲ್ಲಿ ಈಗಾಗಲೇ ಒಂದಷ್ಟು ಹಂಚಿದ್ದ ಹಲವರ ಪರಿಶ್ರಮ ಒದಗಿಸಿದ್ದ ಅಡಿಪಾಯದಿಂದ. ಒಟ್ಟಾರೆಯಾಗಿ ಸಮಗ್ರ
ಕುಮಾರವ್ಯಾಸ ಭಾರತ ಕಥಾಮಂಜರಿಯನ್ನು ಡಿಜಿಟಲ್ ರೂಪದಲ್ಲಿ ಲಭ್ಯವಾಗಿ ಮಾಡಿದ ಪುಣ್ಯ ನಮ್ಮೆಲ್ಲರದಾಗಿದೆ.
ಕುಮಾರವ್ಯಾಸ ಎಲ್ಲೆಡೆ ಆಗಾಗ ಹೇಳುವ ಮಾತೊಂದು ನೆನಪಾಗುತ್ತದೆ. "ಶ್ರೀಕೃಷ್ಣ ಕೃಪೆ ಹೊಂದಿದ್ದ ಪಾಂಡವರಿಗೆ ಯಾವುದು ತಾನೇ ಕೊರತೆಯಿತ್ತು". ನನಗೂ ಅಷ್ಟೇ ಅತನ ಪ್ರೀತಿಯ ಭಾವವನ್ನು ಪ್ರತಿಫಲಿಸುತ್ತಿರುವ ತಮ್ಮಂತಹ ಉದಾರ ಹೃದಯಿಗಳ ಸಹಕಾರವಿರುವಾಗ ಯಾವುದೂ ಕೊರತೆ ಎನಿಸಿಲ್ಲ. ತಮಗೆಲ್ಲರಿಗೂ ಶಿರಸಾ ನಮಿಸುವೆ. ಶ್ರೀಕೃಷ್ಣನ ಕೃಪೆ ನಮ್ಮನ್ನು ಕಾಯುತ್ತದೆ ಎಂಬ ವಿಶ್ವಾಸ ನನ್ನದು.
ಕರ್ಣಾಟ ಭಾರತ ಕಥಾ ಮಂಜರಿಯನ್ನು ಮುಖಪುಸ್ತಕದಲ್ಲಿ, ಓದುಗರ ಜೊತೆ ಹಂಚಿಕೊಂಡಿದ್ದಕ್ಕೆ, ಅನೇಕಾನೇಕ ಧನ್ಯವಾದಗಳು. ನಾನು ಇದನ್ನು ಪ್ರತಿ ನಿತ್ಯ ಓದುತ್ತಿದ್ದೆ. ಇದನ್ನು ಸಾಧ್ಯ ಮಾಡಿದ ಸಕಲರಿಗೂ, ಕನ್ನಡ ಸಂಪಾದಕ್ಕೂ ಕೃತಜ್ಞತೆಗಳು. ನಿಮ್ಮ ಕನ್ನಡ ಕಾಯಕವನ್ನು ಮುಂದುವರಿಸಿ.
ಪ್ರತ್ಯುತ್ತರಅಳಿಸಿ