ವಾಸುದೇವನ್ ನಾಯರ್
ಎಮ್. ಟಿ. ವಾಸುದೇವನ್ ನಾಯರ್
ಎಮ್. ಟಿ. ವಾಸುದೇವನ್ ನಾಯರ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸುಪ್ರಸಿದ್ಧ ಮಲಯಾಳಮ್ ಸಾಹಿತಿ, ಚಲನಚಿತ್ರ ನಿರ್ದೇಶಕ ಹಾಗೂ ಸಂಭಾಷಣಕಾರರು. ಎಮ್‍ಟಿ ಎಂಬ ಸಂಕ್ಷಿಪ್ತ ಹೆಸರಿನಿಂದ ಪರಿಚಿತರಾಗಿರುವ ಇವರ ಪೂರ್ಣ ಹೆಸರು ಮಡತ್ ತಕ್ಕೆಪ್ಪಟ್ಟು ವಾಸುದೇವನ್ ನಾಯರ್.
ವಾಸುದೇವನ್ ನಾಯರ್ 1933ರ ಜುಲೈ 15ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೂಡಲ್ಲೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ತಂದೆ ಟಿ.ನಾರಾಯಣನ್ ನಾಯರ್. ತಾಯಿ ಅಮ್ಮಾಳು ಅಮ್ಮ. ಮಡತ್ ತೆಕ್ಕೆಪ್ಪಟ್ಟು ಇವರ ಮನೆತನದ ಹೆಸರು. ಇವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದರು. ಹೈಸ್ಕೂಲ್ ಶಿಕ್ಷಣವನ್ನು ಕುಮರನೆಲ್ಲೂರಿನಲ್ಲಿ ಪಡೆದರು.
ವಾಸುದೇವನ್ ನಾಯರ್ 1953ರಲ್ಲಿ ರಸಾಯನವಿಜ್ಞಾನದಲ್ಲಿ ಪದವಿ ಪಡೆದ ಅನಂತರ ಅಧ್ಯಾಪಕ ವೃತ್ತಿ ಪ್ರಾರಂಭಿಸಿದರು. 1956ರಲ್ಲಿ ಈ ವೃತ್ತಿಗೆ ವಿದಾಯ ಹೇಳಿ ಕೇರಳದ ಪ್ರಸಿದ್ಧ ಪತ್ರಿಕೆ 'ಮಾತೃಭೂಮಿ' ಯಲ್ಲಿ ಉಪಸಂಪಾದಕರಾಗಿ ಸೇರಿದರು. ಅನಂತರ ಈ ವಾರಪತ್ರಿಕೆಯ ಸಂಪಾದಕರಾಗಿ ಬಡ್ತಿ ಪಡೆದರು(1968). 1981ರಿಂದ ಕೆಲವು ಕಾಲ ಪತ್ರಿಕೆಯಿಂದ ದೂರವಿದ್ದ ಇವರ ಪ್ರತಿಭೆಗೆ ಈ ಪತ್ರಿಕೆ ಮತ್ತೆ ಆಹ್ವಾನ ನೀಡಿತು. ಪತ್ರಿಕೆ ಹಾಗೂ ನಿಯತಕಾಲಿಕೆ ಎರಡಕ್ಕೂ ಇವರನ್ನು ಪ್ರಧಾನ ಸಂಪಾದಕರನ್ನಾಗಿ ನೇಮಿಸಲಾಯಿತು(1989). ಪತ್ರಿಕಾ ವೃತ್ತಿ ಇವರ ಬರೆವಣಿಗೆಯನ್ನು ಗಟ್ಟಿಗೊಳಿಸಲು ಸಹಾಯಕವಾಯಿತು.
ವಾಸುದೇವನ್ ನಾಯರ್ ವಿದ್ಯಾರ್ಥಿ ದೆಸೆಯಲ್ಲಿಯೇ ಸಣ್ಣಕಥೆಗಳನ್ನು ಬರೆಯಲು ಆರಂಭಿಸಿದ್ದರು. ಆಗ ಇವರು ಬರೆದ ಒಂದು ಕಥೆಗೆ ನ್ಯೂಯಾರ್ಕ್ ಹೆರಾಲ್ಡ್, ದ ಹಿಂದುಸ್ಥಾನ್ ಟೈಮ್ಸ್ ಮತ್ತು ಮಾತೃಭೂಮಿ ಪತ್ರಿಕೆಗಳು ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಣ್ಣಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆಯಿತು. ಇವರ ಮೊದಲ ಕಥಾಸಂಕಲನ ರಕ್ತಂಪುರಂಡ ಮಣ್‍ತರಿಕಳ್ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಇವರ ನೆಚ್ಚಿನ ಕ್ಷೇತ್ರ ಸಣ್ಣಕಥೆಯಾದರೂ ನಾಟಕ, ಕಾದಂಬರಿ ಕ್ಷೇತ್ರದಲ್ಲೂ ಉತ್ಕೃಷ್ಟ ಬರೆವಣಿಗೆ ಮಾಡಿದ್ದಾರೆ. ಇವರ ಬರೆವಣಿಗೆಗಳು ಶೈಲಿ, ತಂತ್ರ ಹಾಗೂ ನಿರೂಪಣೆಯ ವೈಶಿಷ್ಟ್ಯದಿಂದ ಓದುಗರ ಮನಸ್ಸನ್ನು ಸೆರೆಹಿಡಿದಿವೆ. ಇವರ ಕೃತಿಗಳು ಭಾವಗೀತೆಗಳಂತೆ ಜನಪ್ರಿಯವಾಗಿವೆ. ಮಧ್ಯಮ ವರ್ಗದ ಕೂಡುಕುಟುಂಬಗಳ ಬದುಕಿನ ಸಂಕೀರ್ಣ ಅನುಭವಗಳು ಇವರ ಬರವಣಿಗೆಯಲ್ಲಿ ಕೇಂದ್ರಸ್ಥಾನ ಪಡೆದಿವೆ.
ವಾಸುದೇವನ್ ನಾಯರ್ ಬರವಣಿಗೆ ಪ್ರಾರಂಭಿಸಿದ ಕಾಲದಿಂದಲೂ ಶ್ರೇಷ್ಠ ಕೃತಿಗಳನ್ನು ನೀಡುತ್ತ ಬಂದಿದ್ದಾರೆ. ಆರೂವರೆದಶಕಗಳಿಗೂ ಹೆಚ್ಚು ಕಾಲ ಕಥಾಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡುತ್ತ ಬಂದಿರುವ ಇವರು ಅನೇಕ ಬರಹಗಾರರನ್ನು ರೂಪಿಸಿದ ರೂವಾರಿ. ಇವರ ಸಮಕಾಲೀನ ಹಾಗೂ ಕಿರಿಯ ಬರಹಗಾರರು ಇವರ ಸಾಹಿತ್ಯದಿಂದ ಸ್ಫೂರ್ತಿ ಹಾಗೂ ಪ್ರಭಾವಗೊಂಡಿದ್ದಾರೆ.
ಇವರ ರಂಡಾಮೂಗಂ ಕೃತಿ ಮಹಾಭಾರತದ ಕಥಾವಸ್ತುವನ್ನು ಆಧರಿಸಿದೆ. ಈ ಕಾದಂಬರಿಯ ನಾಯಕ ಭೀಮ. ಈತನ ಧೈರ್ಯ, ಕೋಪ ಎಲ್ಲವೂ ಮಾನವೀಯತೆಯ ಸ್ಥಾಪನೆಗಾಗಿ ಬಳಕೆಯಾಗುತ್ತವೆ. ಇತರರ ದುಃಖಕ್ಕೆ ಮಿಡಿಯುವ ಹೃದಯವಂತ ನಾಯಕನಾಗಿ ಆತ ರೂಪ ತಳೆದಿದ್ದಾನೆ. ಆಧುನಿಕ ವಿಚಾರಧಾರೆಗಳ ಮೂಲಕ ಇಲ್ಲಿಯ ಪಾತ್ರಗಳನ್ನು ಮರುವ್ಯಾಖ್ಯಾನಿಸಲಾಗಿದೆ. ಭಿನ್ನದೃಷ್ಟಿಕೋನ, ನಿರೂಪಣೆ ಹಾಗೂ ಹೊಸ ತಂತ್ರದಿಂದಾಗಿ ಇದು ಓದಗರನ್ನು ಆಕರ್ಷಿಸುತ್ತದೆ. ಈ ಕೃತಿಯ ರಚನೆಯಲ್ಲಿ ಇವರು ಒಬ್ಬ ಸಂಶೋಧಕನಂತೆ ಕೆಲಸಮಾಡಿ ವಿಷಯ, ಮಾಹಿತಿಯನ್ನು ಪಡೆದ ವಿಚಾರ ತಿಳಿದುಬರುತ್ತದೆ.
ಇವರು ಮಲಯಾಳಮ್ ಚಲನಚಿತ್ರ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. 1963ರಲ್ಲಿ ಮುರಪ್ಪೆಣ್ಣು ಚಲನಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಪ್ರಾರಂಭವಾದ ಇವರ ಚಿತ್ರೋದ್ಯಮದಲ್ಲಿಯ ಆಸಕ್ತಿ ನಿರ್ದೇಶಕ ರಾಗುವಂತೆ ಮಾಡಿತು. ಇವರ ಸಂಭಾಷಣೆ ಮಲಯಾಳ ಚಿತ್ರೋದ್ಯಮದಲ್ಲಿ ಹೊಸ ಅಲೆಯನ್ನುಂಟುಮಾಡಿತು. ಕಲೆ ಮತ್ತು ವ್ಯಾಪಾರೀ ಅಂಶಗಳನ್ನು ಹಿತವಾಗಿ ಬೆರೆಸುವ ಮೂಲಕ ಸದಭಿರುಚಿಯ ಚಿತ್ರ ಮೂಡಿಬರಲು ಇವರು ಕಾರಣರಾದರು. ನಿರ್ಮಾಲ್ಯಂ ಇವರು ನಿರ್ದೇಶಿಸಿದ ಮೊದಲ ಚಿತ್ರ. ತಮ್ಮದೇ ಸಣ್ಣಕಥೆಯೊಂದನ್ನು ಆಧರಿಸಿ ತೆಗೆದ ಈ ಚಿತ್ರಕ್ಕೆ ಇವರೇ ಚಿತ್ರಕಥೆ, ಸಂಭಾಷಣೆ ಬರೆದರು. ಇದು ಕೇರಳದಲ್ಲಿ ಹೊಸಅಲೆಯ ಚಿತ್ರಗಳು ಮೂಡಿ ಬರಲು ನಾಂದಿ ಹಾಡಿತು. ಈ ಚಿತ್ರಕ್ಕೆ 1973ರಲ್ಲಿ ರಾಷ್ಟ್ರಪತಿಗಳ ಚಿನ್ನದ ಪದಕ ಲಭಿಸಿತು. ಇವರ ಸಹಯೋಗದ ಅನೇಕ ಚಿತ್ರಗಳು ಪ್ರಸಿದ್ಧಿಯಾಗಿ, ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸನ್ನು ಕಂಡವು. ಇವರು ಬರೆದ ಸಂಭಾಷಣೆಗಾಗಿ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.
ವಾಸುದೇವನ್ ನಾಯರ್ ಅವರು ಸಂಭಾಷಣೆ ಚಿತ್ರಗಳಲ್ಲಿ ಇರುಟ್ಟಿಂಡೆ ಆತ್ಮವು, ಓಪ್ಪೋಳ್, ಒರು ವಡಕ್ಕನ್ ವೀರಗಾಥಾ, ವೈಶಾಲಿ, ಪೆರುಂತಚ್ಚನ್, ಸದಯಂ, ಪರಿಣಯಂ, ಸುಕೃತಂ, ಅನುಬಂಧಂ, ಪಂಚಾಗ್ನಿ, ಕಡವು ಮುಂತಾದವು ಸೇರಿವೆ.
ವಾಸುದೇವನ್ ನಾಯರ್ ನಿರ್ದೇಶಿಸಿದ ಚಿತ್ರಗಳಲ್ಲಿ ಕಡವು, ಒರುಚೆರು ಪುಂಚೆರಿ, ಬಂಧನಮ್ ಸೇರಿವೆ. ಎಸ್.ಕೆ. ಪೊಟ್ಟೆಕ್ಕಾಟ್ ಅವರ ಸಣ್ಣಕಥೆಯಾಧಾರಿತ ಕಡವು ಚಿತ್ರ ಸಿಂಗಪುರ ಹಾಗೂ ಟೋಕಿಯೊದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಪ್ರಶಸ್ತಿಗಳಿಸಿದೆ.
ವಾಸುದೇವನ್ ನಾಯರ್ ಸಾಹಿತ್ಯ, ಚಲನಚಿತ್ರರಂಗಗಳ ಸೇವೆಗಾಗಿ ಅನೇಕ ಗೌರವ, ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ನಾಲುಕೆಟ್ಟು ಕಾದಂಬರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ (1959). ಇವರ ಸಣ್ಣಕಥೆ ಹಾಗೂ ನಾಟಕ ಸಾಹಿತ್ಯಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಇವರ ಕಾಲಂ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ (1970). ಇವರ ರಂಡಾಮಗಮ್ ಕಾದಂಬರಿ ವಯಲಾರ್ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದೆ. ಇವರಿಗೆ 1996ರಲ್ಲಿ ಜ್ಞಾನಪೀಠ ಪುರಸ್ಕಾರ ಸಂದಿತು. ಅದೇ ವರ್ಷ ಕಲ್ಲಿಕೋಟೆ ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಲಿಟ್. ಪದವಿ ನೀಡಿತು. ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಸಂದಿದೆ.
ವಾಸುದೇವನ್ ನಾಯರ್ ಕೇರಳ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
On the birthday of writer and director M. T. Vasudevan Nair
ಕಾಮೆಂಟ್‌ಗಳು