ಕೆ. ಕಾಮರಾಜ್
ಕೆ. ಕಾಮರಾಜ್
ರಾಷ್ಟ್ರದ ರಾಜಕೀಯ ದಿಗಂತದಲ್ಲಿ ಕಾಮರಾಜ್ ನಾಡರ್ ಪ್ರಮುಖ ಹೆಸರುಗಳಲ್ಲೊಂದು.
ಕೆ. ಕಾಮರಾಜ್ 1903ರ ಜುಲೈ 15ರಂದು ಜನಿಸಿದರು. ಅವರು ಹುಟ್ಟಿದ ಊರು ತಮಿಳುನಾಡಿನ ವಿರುದು ನಗರ್. ತಂದೆ ಕುಮಾರಸ್ವಾಮಿ ನಾಡರ್ ತಾಯಿ ಶಿವಕಾಮಿ ಅಮ್ಮಾಳ್. ಆರು ವರ್ಷಗಳ ಶಿಕ್ಷಣವನ್ನು ಮಾತ್ರ ಪಡೆದ ಕಾಮರಾಜ್ ವೈಯಕ್ತಿಕ ಸಮಗ್ರತೆ, ವಿಶ್ವಾಸಾರ್ಹತೆ ಮತ್ತು ನಿರ್ಮಲ ಜೀವನವನ್ನು ನಡೆಸಿದರು.
ಮಹಾತ್ಮಾಗಾಂಧಿಯವರ ಕಟ್ಟಾ ಅನುಯಾಯಿಯಾಗಿ, ಬ್ರಹ್ಮಚಾರಿಯಾಗಿ ಸರಳ, ನಿರ್ಭೀತ ಮತ್ತು ಸಮರ್ಪಣಾ ಮನೋಭೂಮಿಕೆಯ ವ್ಯಕ್ತಿತ್ವ ಹೊಂದಿದ್ದ ಕಾಮರಾಜ್ ತಮ್ಮ 20ನೇ ವಯಸ್ಸಿನಲ್ಲಿ ಕಾಂಗ್ರೆಸ್ ಮುಖಂಡ ಸತ್ಯಮೂರ್ತಿಯವರ ಅನುಯಾಯಿಯಾಗಿ ತಮಿಳುನಾಡಿನ ಉದ್ದಗಲಕ್ಕೂ ಪ್ರತಿಭಟನೆ, ಸಂಘಟನೆ ಮತ್ತು ಸಭೆಗಳಲ್ಲಿ ತೊಡಗಿದರು. ಅವರಿಗೆ ಎಂಟು ವರ್ಷಗಳ ಕಾಲ ಸುಮಾರು ಆರು ಬಾರಿ ಸೆರೆಮನೆ ವಾಸವಾಯಿತು. ಅನೇಕ ಸಂದರ್ಭಗಳಲ್ಲಿ ಜಾತಿ ರಾಜಕೀಯದ ಸೋಂಕು ತಮ್ಮ ಸುತ್ತಮುತ್ತ ಬಲವಾಗಿ ಬೀಸಿದರೂ ತಾತ್ಕಾಲಿಕವಾದ ಕೀರ್ತಿ ಕಾಮನೆ ಮತ್ತು ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಪಕ್ಷದ ರಾಷ್ಟ್ರವಾಹಿನಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಬಲಪಡಿಸಿಕೊಂಡರು.
ಅನೇಕ ವರ್ಷ ತಮಿಳು ನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದ ಕಾಮರಾಜ್ ಅವರು 1940ರಲ್ಲಿ ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ಜನಪ್ರಿಯತೆಯಿಂದ ಚಕ್ರವರ್ತಿ ರಾಜಗೋಪಾಲಾಚಾರಿ ಗುಂಪಿನ ವಿರುದ್ಧ ಜಯಗಳಿಸಿ ರಾಷ್ಟ್ರದ ಗಮನವನ್ನು ಸೆಳೆದರು. ಅವರು ಎರಡು ದಶಕಗಳ ಕಾಲ ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದುದು ದಾಖಲೆ.
ಮದ್ರಾಸ್ ರಾಜ್ಯದಲ್ಲಿ (ಈಗಿನ ತಮಿಳುನಾಡು ರಾಜ್ಯ) ಕಾಮರಾಜ್ ಮುಖ್ಯಮಂತ್ರಿಯಾಗುವ ಮೊದಲು ಅಂದರೆ 1946ರಿಂದ 1954ರವರೆಗೆ ಒಂದು ರೀತಿಯ ಅತಂತ್ರ ಮತ್ತು ತಳಮಳವಿದ್ದು ನಾಲ್ಕು ಮುಖ್ಯಮಂತ್ರಿಗಳನ್ನು ಕಂಡಿತು. ಆದರೆ ಕಾಮರಾಜ್ 1954 ರಿಂದ 1963ರ ತನಕ ಮುಖ್ಯಮಂತ್ರಿ ಯಾಗಿ ರಾಜಕೀಯ ಸುಭದ್ರತೆಯನ್ನು ನೀಡಿದರು.
ಕಾಮರಾಜ್‌ರವರು ಬಹುಶಃ ರಾಷ್ಟ್ರದ ಆಂಗ್ಲ ಭಾಷೆ ಬಾರದ ಪ್ರಥಮ ಮುಖ್ಯಮಂತ್ರಿ. ಅವರು ಮುಖ್ಯಮಂತ್ರಿ ಆದಾಗ ಎಷ್ಟರಮಟ್ಟಿಗೆ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರೋ ಎಂಬ ಪ್ರಶ್ನೆ ರಾಜ್ಯ ಮತ್ತು ರಾಷ್ಟ್ರದಲ್ಲಿತ್ತು. ಆದರೆ 9 ವರ್ಷಗಳ ನಂತರ 1963ರಲ್ಲಿ ‘ಕಾಮರಾಜ್ ಯೋಜನೆ’ಯನ್ನು ಅನುಷ್ಠಾನ ಮಾಡುವ ಸ್ವಯಂ ಪ್ರೇರಣೆಯಿಂದ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿದಾಗ ಮದ್ರಾಸ್ ರಾಜ್ಯ ಹಲವು ಮಹತ್ ಸಾಧನೆಗಳನ್ನು ಮಾಡಿತ್ತು. ಶೈಕ್ಷಣಿಕ ಮತ್ತು ಗ್ರಾಮೀಣ ವಿದ್ಯುದೀಕರಣ ವಿಸ್ತರಣೆಯಲ್ಲಿ ಪ್ರಥಮ ಸ್ಥಾನ ಪಡೆಯಿತು. ಕೃಷಿ, ನೀರಾವರಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯ ಮಹತ್ವದ ಸಾಧನೆ ಮಾಡಿತು. ಅವರು ಪ್ರತೀ ಜಿಲ್ಲೆ, ತಾಲ್ಲೂಕು, ವಲಯ-ಗ್ರಾಮಗಳಲ್ಲಿ ಒಂದಲ್ಲ ಹಲವು ಬಾರಿ ಪ್ರವಾಸ ಕೈಗೊಂಡರು. ಹಿಂದೆ ಪಕ್ಷದ ವತಿಯಿಂದ ಸಂಘಟಕರಾಗಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಡುತ್ತಿದ್ದರೆ, ಅನಂತರ ಮುಖ್ಯಮಂತ್ರಿಯಾಗಿ ಅದೇ ಕ್ರಮವನ್ನು ಮುಂದುವರಿಸಿದರು. ಅಧಿಕಾರದ ದಂತಗೋಪುರದಲ್ಲಿ ವಿಹರಿಸದೆ ಜನರೊಂದಿಗೆ ಬೆರೆತರು. ತಮಿಳುನಾಡಿನ ನೆಲ ಮತ್ತು ಜನರ ಯೋಗಕ್ಷೇಮ, ಕಷ್ಟ ಸುಖ ಅವರ ಹೃದಯದಲ್ಲಿ ಸದಾ ನೆಲೆಸಿತ್ತು. ಅವರೇ ಹೇಳುವಂತೆ: “ನಾನು ಸುಶಿಕ್ಷಿತನಲ್ಲವೆಂದು ಕೆಲವು ಜನ ಉದ್ಘರಿಸುತ್ತಾರೆ. ನಾನು ವಿಶ್ವವಿದ್ಯಾನಿಲಯಗಳಿಗೆ ಹೋಗಿದ್ದೇನೆಂದು ಹೇಳುತ್ತಿಲ್ಲ. ಆದರೆ ರಾಜ್ಯದ ಎಲ್ಲಾ ಭಾಗಗಳನ್ನು ಅರಿತಿದ್ದೇನೆ. ರಾಜ್ಯದ ಭೂಗೋಳ ನನಗೆ ಕರಗತವಾಗಿದೆ. ಎಲ್ಲಿ ನದಿಗಳು ಹರಿಯುತ್ತದೆ, ಎಲ್ಲಿ ಕೆರೆಕುಂಟೆಗಳಿವೆ, ಎಲ್ಲಿ ನಗರ ಮತ್ತು ಹಳ್ಳಿಯ ಜನರಿದ್ದಾರೆ ಎಂಬುದನ್ನು ನಾನು ಬಲ್ಲೆ. ಬರೀ ಪುಸ್ತಕದಲ್ಲಿ ಕಾಣುವ ನೇರ ಅಥವಾ ಓರೆಕೋರೆಯ ಗೆರೆಗಳು ಭೂಗೋಳವಲ್ಲ”.
ಕಾಮರಾಜ್ ಸಂಪುಟದಲ್ಲಿ ಸಚಿವರಾಗಿದ್ದು ಅನಂತರ ಭಾರತದ ರಾಷ್ಟ್ರಪತಿ ಸ್ಥಾನಕ್ಕೇರಿದ ಆರ್. ವೆಂಕಟರಾಮನ್ ಈ ರೀತಿ ಹೇಳುತ್ತಾರೆ: “ಯಾವುದೇ ಒಳಿತನ್ನು ಮಾಡಲು ಕಾನೂನು ನಿಯಮಗಳು ಅಡೆತಡೆಯಾಗದಂತೆ ಕಾಮರಾಜ್ ನೋಡಿಕೊಂಡರು. ಅನೇಕ ಬಾರಿ ಆಡಳಿತಶಾಹಿಯ ದೌರ್ಜನ್ಯದ ಬಗ್ಗೆ ಜನತೆ ಅವರಲ್ಲಿ ಮನವಿ ತೋಡಿಕೊಂಡಾಗ ಅವರ ಮನವಿಗಳು ನ್ಯಾಯಯುತವಾಗಿದ್ದಲ್ಲಿ ನಿಯಮಗಳನ್ನು ಬದಲಾಯಿಸಿ ನ್ಯಾಯವನ್ನು ನೀಡುತ್ತಿದ್ದರು”.
ಕಾಮರಾಜ್ ಅವರ ನಿರ್ಣಯಗಳು ಕ್ಷಿಪ್ರವಾಗಿರುತ್ತಿದ್ದವು. ವಿಳಂಬ ನೀತಿಯ ಬಗ್ಗೆ ಕಾಮರಾಜ್ ಅವರಿಗೆ ಸಂಪೂರ್ಣ ಅಸಹನೆಯಿತ್ತು. ಯಾವುದೇ ಕಾರ್ಖಾನೆ ಅಥವಾ ನೀರಾವರಿ ಅಣೆಕಟ್ಟು ಸಮಾರಂಭಕ್ಕೆ ಹೋದಾಗ ಅವರು ಉದ್ದನೆಯ ಭಾಷಣವನ್ನು ನೀಡುವ ಸಾಮಾನ್ಯ ರಾಜಕಾರಣಿಗಳ ಚಾಳಿ ಹೊಂದಿರಲಿಲ್ಲ. ಅದರ ಬದಲು ಸಂಬಂಧಪಟ್ಟ ಇಂಜಿನಿಯರ್ ಮತ್ತು ಅಧಿಕಾರಿಗಳ ಹತ್ತಿರ ನಿರ್ಮಾಣದ ಕಾಲ ನಿರ್ಣಯದ ಬಗ್ಗೆ ಮತ್ತು ನಿಷ್ಕರ್ಷೆಯ ದಿವಸದಿಂದ ಅತಿ ಬೇಗನೆ ಯೋಜನೆಯನ್ನು ಪೂರ್ತಿಗೊಳಿಸುವ ಬಗ್ಗೆ ಸಂವಾದದಲ್ಲಿ ನಿರತರಾಗುತ್ತಿದ್ದರು. ಅಧಿಕಾರಿಗಳಿಗೆ ನಿರ್ದಿಷ್ಟ ನಿರ್ದೇಶನ ಕೊಡುವುದರಲ್ಲಿ ಅವರನ್ನು ಮೀರಿದ ಮುಖ್ಯಮಂತ್ರಿಗಳಿರಲಿಲ್ಲ.
ಶಿಕ್ಷಣ ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕೆಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಗಳಲ್ಲಿ ಕಾಮರಾಜ್ ಮೊದಲಿಗರು. ಮದ್ರಾಸ್ ರಾಜ್ಯದಲ್ಲಿ ಸಾರ್ವತ್ರಿಕ ಮತ್ತು ಧರ್ಮಾರ್ಥ ಶಿಕ್ಷಣವನ್ನು ಕೊಡುವ ಯೋಜನೆಯನ್ನು ಜಾರಿಗೊಳಿಸುದುದು ಮಾತ್ರವಲ್ಲ, ಸುಮಾರು 30,000 ಪ್ರಾಥಮಿಕ ಶಾಲೆಗಳನ್ನು ತಮ್ಮ ಅವಧಿಯಲ್ಲಿ ತೆರೆದರು. ಅಲ್ಲದೆ 1957ರಲ್ಲಿ ರಾಜ್ಯವಿಡೀ ಒಂದು ಸಮೀಕ್ಷೆ ನಡೆಸಿ ಪ್ರತಿ 300 ಜನಸಂಖ್ಯೆಯಿರುವ ಪ್ರದೇಶಕ್ಕೆ ಒಂದೊಂದು ಪ್ರಾಥಮಿಕ ಶಾಲೆಯಿರುವಂತೆ ಆದೇಶ ನೀಡಿದರು. ಈ ಎಲ್ಲಾ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯದ ಅಂದಾಜು ವೆಚ್ಚದಲ್ಲಿ ಸಿಂಹಪಾಲನ್ನು ನೀಡಿದರು. ಮಧ್ಯಾಹ್ನದ ಊಟದ ವಿಶೇಷ ಯೋಜನೆ ರಾಷ್ಟ್ರದಲ್ಲೇ ಪ್ರಥಮ ಬಾರಿ ಜಾರಿಗೆ ತಂದರು. ವಿದ್ಯಾರ್ಥಿಗಳ ಮಧ್ಯೆಯಿರುವ ಉಡುಗೆ ತಾರತಮ್ಯ ಹೋಗ ಲಾಡಿಸುವ ದಿಶೆಯಲ್ಲಿ ಸಮವಸ್ತ್ರದ ಯೋಜನೆಯನ್ನು ಜಾರಿಗೊಳಿಸಿದರು. ರಾಜ್ಯದಲ್ಲಿ ಗ್ರಾಮೀಣ ವಿದ್ಯುದೀಕರಣದ ಕ್ಷಿಪ್ರ ಯೋಜನೆ ಜಾರಿಗೆ ತಂದು ಲಕ್ಷಾಂತರ ವಿದ್ಯುತ್ ಪಂಪುಗಳಿಗೆ ವಿದ್ಯುದೀಕರಣವನ್ನು ಜಾರಿಗೊಳಿಸಿದರು. ಅನೇಕ ಅಣೆಕಟ್ಟುಗಳ ನಿರ್ಮಾಣದ ಮಹಾಶಿಲ್ಪಿಗಳಾದರು. ನೂರಾರು ಇಂಡಸ್ಟ್ರಿಯಲ್ ಎಸ್ಟೇಟುಗಳನ್ನು ನಿರ್ಮಿಸಿದರು.
ಕಾಮರಾಜ್‌ರದಂದೇ ಹೇಳುವ ಒಂದು ಮನೆ, ಕಾರು ಮತ್ತು ಬ್ಯಾಂಕ್ ಅಕೌಂಟ್ ಇರಲಿಲ್ಲ. ಅವರು ಬ್ರಹ್ಮಚಾರಿಯಾಗಿದ್ದು ಜನಸೇವೆಗೆ ತಮ್ಮನ್ನು ಸಮರ್ಪಣೆ ಮಾಡಿದ್ದರು. ಅವರು ಒಂದು ರೀತಿಯಲ್ಲಿ ಭಾರತದ ರಾಜಕೀಯ ಕುಟುಂಬಿಯಾಗಿದ್ದರು.
‘ಕಾಮರಾಜ್ ಪ್ಲಾನ್’ನ ಕಾರಣದಿಂದ ಕಾಮರಾಜ್ ಅವರಂತೆ ಆರು ಮುಖ್ಯಮಂತ್ರಿಗಳು 1963 ವರ್ಷದ ಅಕ್ಟೋಬರ್ 2ರಂದು ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟರು. ಕಾಮರಾಜ್ ಭಾಷೆ ತಿಳಿಯದಿದ್ದರೂ ಜನರನ್ನು ಅರ್ಥೈಸಲು ಕಷ್ಟವಾಗದೆಂಬ ವಿಚಾರವನ್ನು ಜಗಜ್ಜಾಹೀರುಗೊಳಿಸಿದರು. ಅವರು ಒಂದು ಸಂದರ್ಭದಲ್ಲಿ ಹೇಳಿದಂತೆ: “ವಿಶ್ವಾಸವನ್ನು ಒಂದು ಭಾಷೆಯನ್ನಾಗಿ ಯಾಕೆ ತಿಳಿದುಕೊಳ್ಳಬಾರದು?”
ನೆಹರೂ ನಿಧನರಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನಿಯನ್ನಾಗಿ ಮತ್ತು ಶಾಸ್ತ್ರಿಯವರು ನಿಧನರಾದಾಗ ಇಂದಿರಾಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡುವಲ್ಲಿ ಕಾಮರಾಜ್ ಅವರ ಪಾತ್ರ ಪ್ರಧಾನವಾಗಿತ್ತು.
ಕಾಮರಾಜ್ 1952-54 ಅವಧಿಯಲ್ಲಿ ಮತ್ತು 1969-75 ಅವಧಿಯಲ್ಲಿ ಪಾರ್ಲಿಮೆಂಟ್ ಸದಸ್ಯರಾಗಿದ್ದರು. 1964-67 ಅವಧಿಯಲ್ಲಿ ಎರಡು ಬಾರಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.
ಕಾಮರಾಜ್ 1975 ವರ್ಷದ ಅಕ್ಟೋಬರ್ 2ರಂದು ನಿಧನರಾದರು. ಮರಣೋತ್ತರವಾಗಿ ಅವರಿಗೆ ಭಾರತರತ್ನ ಗೌರವವನ್ನು ಸಲ್ಲಿಸಲಾಯಿತು.
On the birth anniversary of great social worker and politician K. Kamraj
ಕಾಮೆಂಟ್‌ಗಳು