ಅರುಂಧತಿ ನಾಗ್
ಅರುಂಧತಿ ನಾಗ್
ಅರುಂಧತಿ ನಾಗ್ ಅಂದರೆ ತಕ್ಷಣ 'ರಂಗ ಶಂಕರ' ನೆನಪಾಗುತ್ತೆ. ರಂಗಭೂಮಿಗೆ ಹೊಸನೋಟ, ಹೊಸ ತಿರುವು ತಂದದ್ದು 'ರಂಗ ಶಂಕರ'. ಅದರ ಹಿಂದಿರುವ ಉತ್ಸಾಹಿ ಅರುಂಧತಿ ನಾಗ್. ತಮ್ಮ ಜೀವನಸಂಗಾತಿ ಮಹಾನ್ ಪ್ರತಿಭಾನ್ವಿತ ಕಲಾವಿದ ದಿವಂಗತ ಶಂಕರನಾಗ್ ಅವರ ಉತ್ಸಾಹವನ್ನು ನೆನಪಿಸುವ ಶಾಶ್ವತ ಕೆಲಸವೊಂದನ್ನು 'ರಂಗ ಶಂಕರ'ದ ಮೂಲಕ ಮಾಡಿ, ಕನ್ನಡ ರಂಗ ಉತ್ಸಾಹಿಗಳಿಗೂ ಅರುಂಧತಿ ನಾಗ್ ಒಂದು ಉತ್ತಮ ಶಾಶ್ವತ ನೆಲೆ ಕೊಟ್ಟಿದ್ದಾರೆ. ಅರುಂಧತಿ ನಾಗ್ ಅವರೇ ಹೇಳುವಂತೆ 'ರಂಗ ಶಂಕರ'ದಲ್ಲಿ ಅನೇಕ ಸಕ್ರಿಯ ಹೃದಯದ ಕೈಂಕರ್ಯ ಇದೆ. ಅರುಂಧತಿ ತಮ್ಮನ್ನು ಅರ್ಪಿಸಿಕೊಂಡು ಇದರ ಜೊತೆ ನಿಂತಿದ್ದಾರೆ. ಅವರು ಕಲಾವಿದೆಯಾಗಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮತ್ತು ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿದ್ದಾರೆ.
ಅರುಂಧತಿ ನಾಗ್ 1956ರ ಜುಲೈ 6ರಂದು ದೆಹಲಿಯಲ್ಲಿ ಜನಿಸಿದರು. ಬೆಳೆದಿದ್ದು ಮುಂಬೈಯಲ್ಲಿ. ಹತ್ತು ವಯಸ್ಸಿನವರಿದ್ದಾಗಲೇ ರಂಗಭೂಮಿಯಲ್ಲಿ ನಟಿಸಿತೊಡಗಿದ ಇವರು ಕಾಲೇಜಿನ ದಿನಗಳಲ್ಲಿಯೇ ಮರಾಠಿ, ಗುಜರಾತಿ ಮತ್ತು ಹಿಂದಿ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಶಂಕರನಾಗ್ ಪರಿಚಯ ಆದ್ದದ್ದೂ ರಂಗಭೂಮಿಯ ಮೂಲಕವೇ. ಅರುಂಧತಿ ನಾಗ್ ಅವರಿಗೆ ಧೈರ್ಯ ಸಾಹಸ ಪ್ರವೃತ್ತಿ ಇವೆಲ್ಲ ಅವರ ಅಮ್ಮನಿಂದ ಬಂದ ಗುಣ.
ಅರುಂಧತಿ ಅವರ ಅಮ್ಮ ಎಸ್‌ಎಲ್‌ಸಿ ಪಾಸಾದ ಮಾರ್ಕ್ಸ್ ಕಾರ್ಡ್, ಐದು ರೂಪಾಯಿ, ಎರಡು ಸೀರೆ, ಒಂದು ಲೋಟ ಹಿಡಿದು ಮನೆ ಬಿಟ್ಟು ಹೊರಡುವಾಗ ಆಕೆಯ ಮದುವೆ ನಿಶ್ಚಯವಾಗಿತ್ತು. ಆದರೆ, ಆಕೆಯ ಅಪ್ಪ ಶುರು ಮಾಡಿದ ಬೆಲ್ಲದ ಬ್ಯುಸಿನೆಸ್ ಪಾತಾಳ ಕಂಡಿತ್ತು. ರಾತ್ರೋರಾತ್ರಿ ಕಾರ್ಖಾನೆಗೆ ನುಗ್ಗಿದ ಯಾರೋ ಬೆಲ್ಲಕ್ಕೆ ನೀರು ಬೆರೆಸಿ ಹೋದರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಅಪ್ಪ ಪಾಪರ್ ಆಗಿದ್ದರು. ಮದುವೆಗೆ ವರದಕ್ಷಿಣೆ ತೆರಬೇಕಾಗಿತ್ತು. ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರಿದ್ದರು. ರೈಲ್ವೆಯಲ್ಲಿ ಎಂಜಿನಿಯರ್ ಆಗಿದ್ದ ಅಪ್ಪ ಕೂಡಿಟ್ಟದುಡ್ಡೆಲ್ಲವೂ ಹೀಗೆ ಹೋಗಿಬಿಟ್ಟಿತ್ತು ಅಮ್ಮ ಮದುವೆ ಬೇಡ ಎಂದಳು. ಅಜ್ಜಿಗೆ ಗುಮಾನಿ. ಇವಳು ಯಾರನ್ನೋ ಪ್ರೀತಿಸಿದ್ದಾಳೆ ಅಂತ. ಬಚ್ಚಲು ಮನೆಗೆ ಹೋಗಿ ಬರಲೂ ಕಾವಲು ಇಟ್ಟುಬಿಟ್ಟರು. ಆಗಲೇ ಅಮ್ಮ ಹೊರಟು ನಿಂತದ್ದು. ಅಪ್ಪನ ಬಳಿ ಹೋದಳು. ನಾನು ಕೆಲಸ ಹುಡುಕಿಕೊಂಡು ಹೊರಟಿದ್ದೇನೆ. ಯಾರಾದರೂ ನನ್ನನ್ನು ತಡೆದರೆ ಇನ್ನೆಂದೂ ವಾಪಸ್ ಬರುವುದಿಲ್ಲ, ತಡೆಯದಿದ್ದರೆ ಖಂಡಿತಾ ಬರುತ್ತೇನೆ ಎಂದವಳೇ ಹೊರಟೇ ಬಿಟ್ಟಳು. ಮುಂಬೈಗೆ ಹೋದವಳೇ ತನ್ನ ನೆಂಟರ ಮನೆ ಬಾಗಿಲು ತಟ್ಟಿದಳು. ಕಪ್‌ನಲ್ಲಿ ಚಹಾ ಬಂತು. ಅಮ್ಮ ಇದ್ದ ಕಥೆಯೆಲ್ಲಾ ಹೇಳಿ ಕೆಲಸ ಹುಡುಕಲು ಬಂದಿದ್ದೇನೆ ಎಂದರು. ಆಗ ಆ ಮನೆಯವರು ನಿಂಗೆ ಇಲ್ಲಿ ಉಳಿಯಲು ಜಾಗ ಇಲ್ಲ ಎಂದರು. ಅಮ್ಮ ಚಹಾ ಕಪ್ ತಳ್ಳಿದವರೇ ಚಹಾ ಕುಡಿಯೋದಿಕ್ಕೆ ಅಂತ ಇನ್ನೊಂದು ಸಲ ಬರುತ್ತೇನೆ ಎಂದು ಹೊರಟುಬಿಟ್ಟರು. ಆಕೆಯ ಹೆಸರು ಪ್ರೇಮಲತಾ ಸಾಠೆ. ಮುಂದೆ ಮದುವೆ ಆದಮೇಲೆ ರಾಧಾಮೂರ್ತಿ ರಾವ್ ಆದರು. ಇಂತಹ ಛಲದ ರಾಧಾಮೂರ್ತಿ ಅವರ ಮಗಳು ಅರುಂಧತಿ.
ಅರುಂಧತಿ ಶಂಕರನಾಗ್ ಒಟ್ಟಿಗೆ ಓಡಾಡಲು ಶುರು ಮಾಡಿದಾಗ ಅರುಂಧತಿಗೆ 17 ವರ್ಷ ಶಂಕರನಾಗ್ ಅವರಿಗೆ 19 ವರ್ಷ. ಆರು ವರ್ಷ ಓಡಾಡಿದ ನಂತರ ಒಂದು ದಿನ ಮಾತಾಡುತ್ತ ಕುಳಿತಿದ್ದಾಗ "ಎಷ್ಟೊಂದು ವರ್ಷದಿಂದ ನಿನ್ನ ಜೊತೆ ಓಡಾಡಿದ್ದೇನೆ. ನಾವಿಬ್ಬರೂ ಯಾಕೆ ಮದುವೆ ಮಾಡ್ಕೊಬಾರದು" ಅಂದರು ಶಂಕರ್.
ಇನ್ನೆರಡು ದಿನಕ್ಕೆ ಶಂಕರನಾಗ್ ಹುಟ್ಟಿದ ಹಬ್ಬ ಇತ್ತು. ಸರಿ ನಾಳಿದ್ದು ಮಾಡಿಕೊಳ್ಳೋಣ ಎಂದರು ಅರುಂಧತಿ. ಶಂಕರ್ ಬೆಕ್ಕಸ ಬೆರಗಾಗಿ "ಟೈಮ್ ಇಲ್ವಲ್ಲ" ಅಂದರು. ಹಾಗಾದ್ರೆ "ಜುಲೈನಲ್ಲಿ ನನ್ನ ಬರ್ತ್ಡೇ ಬರುತ್ತಲ್ಲಾ ಆಗ ಆಗೋಣ" ಅಂತ ಬದಲಿ ದಿನಾಂಕ ಹೇಳಿದರು ಅರುಂಧತಿ. ಶಂಕರ್ ಒಂದು ನಿಮಿಷ ಯೋಚನೆ ಮಾಡಿ, ಇವಳು ಮನಸ್ಸು ಬದಲಾಯಿಸಿಬಿಟ್ರೆ ಅಂತ "ಬೇಡ ನಾಳಿದ್ದೇ ಆಗಿಬಿಡೋಣ" ಅಂದರು. ಮದುವೆ ಆಗಿ ಹೋಯಿತು. ಶಂಕರ್‌ನಾಗ್ ಮದುವೆ ದಿನ ಪತ್ರಿಕೆಗೆ ಸಂದರ್ಶನ ಕೊಡ್ತಾ ಕೂತಿದ್ದರು. ಇಂಟರ್‌ವ್ಯೂ ಮಧ್ಯೆ, "ಒಂದು ಬ್ರೇಕ್ ತಗೋಳ್ಳೋಣ, ಇಲ್ಲೇ ಆರ್ಯ ಸಮಾಜದಲ್ಲಿ ನನ್ನ ಮದುವೆ ಇದೆ. ಹೋಗಿ ಬಂದುಬಿಡ್ತೀನಿ. ಆಮೇಲೆ ಕಂಟಿನ್ಯೂ ಮಾಡೋಣ" ಎಂದಾಗ ಸಂದರ್ಶನ ಮಾಡ್ತಿದ್ದವರು ಮೂರ್ಛೆ ಹೋಗೋದೊಂದು ಬಾಕಿ. ಹೀಗೆ ಶಂಕರನಾಗ್ ಮತ್ತು ಅರುಂಧತಿ ನಾಗ್ ಜೋಡಿ.
ಹೀಗೆ ಆರು ವರ್ಷಗಳ ಓಡಾಟ, ಒಡನಾಟ ಶಂಕರನಾಗ್ ಮತ್ತು ಅರುಂಧತಿ ನಾಗ್ ಅವರನ್ನು ಅದ್ಭುತ ಗೆಳೆಯರನ್ನಾಗಿ ಮಾಡಿತ್ತು. ಶಂಕರನಾಗ್ ಅವರಿಗೆ ಗಿರೀಶ್ ಕಾರ್ನಾಡರ ಸಿನೆಮಾಗೆ ಸಹಾಯಕ ನಿರ್ದೇಶಕ ಆಗಬೇಕು ಎನ್ನುವ ಆಸೆ ಇತ್ತು. ಹಾಗಾಗಿ ಅವರನ್ನು ಕೇಳಿದರೆ ಅವರು "ನನ್ನ ಸಿನೆಮಾಗೆ ಹೀರೊ ಆಗು" ಎಂದರು. ಶಂಕರನಾಗ್ ‘ಒಂದಾನೊಂದು ಕಾಲದಲ್ಲಿ’ ಸಿನೆಮಾಗೆ ಹೆಜ್ಜೆ ಇಟ್ಟದ್ದು ಹೀಗೆ.
ಶಂಕರನಾಗ್ - ಅರುಂಧತಿ ನಾಗ್ ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಹಾಗೂ ಚಲನಚಿತ್ರ ಈ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡತೊಡಗಿದರು. ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ವಿಶ್ವಪ್ರಸಿದ್ಧಿ ಪಡೆಯಿತು. ಕನ್ನಡವನ್ನು ಚೆನ್ನಾಗಿ ಕಲಿತ ಅರುಂಧತಿಯವರು ಅನೇಕ ನಾಟಕ ಹಾಗೂ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದರು. 'ನೋಡಿ ಸ್ವಾಮಿ ನಾವಿರೋದು' ನಾಟಕವಾಗಿ ಅಲ್ಲದೆ ಚಲನಚಿತ್ರವಾಗಿಯೂ ಯಶಸ್ವಿಯಾಯಿತು. 'ಆಕ್ಸಿಡೆಂಟ್', 'ಗೋಲಿಬಾರ್', 'ಪರಮೇಶಿ ಪ್ರೇಮ ಪ್ರಸಂಗ', 'ಜೋಗಿ', 'ಶಿವಶೈನ್ಯ', 'ಅಂದರ್ ಬಾಹರ್' ಮುಂತಾದವು ಅರುಂಧತಿ ಅಭಿನಯಿಸಿದ ಕನ್ನಡ ಚಿತ್ರಗಳಲ್ಲಿ ಸೇರಿವೆ. 'ದಿಲ್‍ಸೆ', 'ಏಕ್ ಅಲಗ್ ಮೌಸಮ್', 'ಚೌರಾಹೆನ್', 'ಸಪ್ನಾಯ್' ಮುಂತಾದವು ಹಿಂದೀ ಚಿತ್ರಗಳು; 'ಮಿನ್ಸಾರ ಕನವು', 'ಪೊಯ್ ಮುಗಂಗಳ್' ತಮಿಳು ಚಿತ್ರಗಳು, '22 ಜೂನ್ 1897' ಮರಾಠಿ ಚಿತ್ರ; 'ದಾ ತಡಿಯಾ', 'ಡ್ರಾಮಾ' ಮಲಯಾಳಂ ಚಿತ್ರಗಳು; 'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಇಂಗ್ಲಿಷ್ ಚಿತ್ರ. ಬಾಲ್ಕಿ ಅವರ ನಿರ್ದೇಶನದ 'ಪಾ’ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ವಿದ್ಯಾ ಬಾಲನ್, ಅಭಿಷೇಕ್ ಬಚ್ಚನ್ ಅವರೊಂದಿಗೆ ಅರುಂಧತಿ ನಾಗ್ ಅವರು ನಿರ್ವಹಿಸಿದ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ ಅಲ್ಲದೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವೂ ಸಂದಿತು. ಶಂಕರನಾಗ್ ನಿರ್ದೇಶನದ ‘ಒಂದು ಮುತ್ತಿನಕಥೆ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಅವರು ದುಡಿದಿದ್ದರು. 'ಎಸ್ಕೇಪ್ ಲೈವ್' ಎಂಬ ವೆಬ್ ಸರಣಿಯಲ್ಲಿಯೂ ನಟಿಸಿದ್ದಾರೆ.
ಬಹಳಷ್ಟು ಸಾಧಿಸಿದ ಶಂಕರನಾಗ್ ಅಪಘಾತದಲ್ಲಿ ನಿಧನರಾದಾಗ ಅವರೊಂದಿಗೆ ಪಯಣಿಸುತ್ತಿದ್ದ ಅರುಂಧತಿ ಪ್ರಾಣಾಪಾಯದಿಂದ ಪಾರಾದರು.
ಅರುಂಧತಿ ಅವರ ಕುಟುಂಬ ದಿಕ್ಕಾಪಾಲಾಗಿ ಹೋಯ್ತು. "ಬಹುಶಃ ಇಷ್ಟೇ ನಾನು ಪಡೆದುಕೊಂಡು ಬಂದದ್ದು ಅನ್ನಿಸುತ್ತೆ. ಆದರೆ ಅವನು ನನಗೆ ಮಾತ್ರ ಎಲ್ಲಾ ಆಗಿರಲಿಲ್ಲ ಅಂತ ಆಗ ಗೊತ್ತಾಯ್ತು. ಇವತ್ತಿಗೂ ಸಹ ಅವನ ನೆನಪನ್ನು ಎಷ್ಟುಹಸಿರಾಗಿ ಉಳಿಸಿಕೊಂಡಿದ್ದಾರೆ ಜನ, ಅವನಿಗೆ ಕೊಡುತ್ತಿದ್ದ ಪ್ರೀತಿ ಗೌರವಗಳನ್ನು ನನಗೂ ಕೊಟ್ಟಿದ್ದಾರೆ... ನಾನು ಇಷ್ಟು ಧೈರ್ಯವಾಗಿ ಇಲ್ಲಿ ಒಬ್ಬಳೇ ಬದುಕು ಸಾಗಿಸಿದ್ದೇನೆ ಎಂದರೆ, ಈ ರಾಜ್ಯದ ಜನರ ಅಪಾರ ಪ್ರೀತಿ ಕಾರಣ" ಎಂದು ಅರುಂಧತಿ ನಾಗ್ ಕೃತಜ್ಞತಾ ಭಾವ ತಳೆದಿದ್ದಾರೆ.
"ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ" ಎಂಬ ‘ಯಯಾತಿ’ ನಾಟಕದ ಸಾಲುಗಳು ಅರುಂಧತಿ ನಾಗ್ ಅವರನ್ನು ಬಹಳಷ್ಟು ಕಾಡಿದೆ. ಅರುಂಧತಿ ಅವರಿಗೆ ಇನ್ನಿಲ್ಲದಷ್ಟು ಕನಸುಗಳಿದ್ದವು. ತಮಗಾಗಿಯೂ, ಶಂಕರ್‌ಗಾಗಿಯೂ ಅದನ್ನು ಗಟ್ಟಿಮನಸ್ಸಿನಿಂದ ನನಸಾಗಿಸುತ್ತಾ ಬಂದರು. ‘ರಂಗ ಶಂಕರ’ ಅದರಲ್ಲೊಂದು.
"ನಾವು ಕಲಾವಿದರು. ಆದರೆ ನಮ್ಮ ಮನೆಯಲ್ಲೇ ನಾಟಕ ರಿಹರ್ಸಲ್ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಅನ್ನೋ ಕನಸು ಯಾವ ಕಲಾವಿದನಿಗೆ ಇರಲ್ಲ ಹೇಳಿ. ಸಿ.ಆರ್ ಸಿಂಹ ಅವರಂಥವರು ಈ ಕಲ್ಪನೆಯನ್ನು ಅನುಷ್ಠಾನಕ್ಕೂ ತಂದರು. ಅವರ ಮನೆಯಲ್ಲೇ ಒಂದು ಸಣ್ಣ ವೇದಿಕೆ ಮಾಡಿ ಅಲ್ಲಿ ನಾಟಕ ಮಾಡುತ್ತಿದ್ದರು. ಹಾಗಾಗಿ ರಂಗ ಶಂಕರ ಕೇವಲ ಶಂಕರ್ ಕನಸು ಮಾತ್ರ ಅಲ್ಲಾ, ಅದು ನಾಟಕಾಸಕ್ತರೆಲ್ಲರ ಕನಸೂ ಹೌದು. ಆದರೆ ಇದರ ನೇತೃತ್ವಕ್ಕೆ ಒಬ್ಬ ಮುಂದಾಳು ಬೇಕೇ ಬೇಕು. ಶಂಕರನನ್ನು ಕಳೆದುಕೊಂಡ ಮೇಲೆ ನನಗೆ ಸಂಸಾರ ಇಲ್ಲ. ನಾನು ಮಗಳನ್ನು ನೋಡಿಕೊಳ್ಳುವ ಜೊತೆಗೆ ಈ ಕನಸಿನ ಬೆನ್ನತ್ತಿದೆ. ಸಾಂಸಾರಿಕ ಹೊಣೆಗಾರಿಕೆ ಇಲ್ಲದ ಕಾರಣ ಈ ತಪಸ್ಸಿಗೆ ಸಂಸಾರಸ್ಥರಂಥಾ ಆತಂಕಗಳಿರಲಿಲ್ಲ. ಸಂಪೂರ್ಣ ಸಮರ್ಪಿಸಿಕೊಂಡೆ. ಇಂದು ಅದು ಬೆಳೆದ ರೀತಿಯನ್ನು ಕಂಡರೆ ಸಾರ್ಥಕ ಅನಿಸುತ್ತದೆ, ಇದು ನನಗೆ ಒದಗಿಬಂದ ಭಾಗ್ಯ ಅನಿಸುತ್ತೆ" ಎನ್ನುತ್ತಾರೆ ಅರುಂಧತಿ ನಾಗ್.
ಅರುಂಧತಿ ನಾಗ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ಸಹಾ ಸಂದಿದೆ.
ಅರುಂಧತಿ ನಾಗ್ ಅವರ ಉತ್ಸಾಹ ಮುಂದೆ ಸಾಗುತ್ತಿರಲಿ. ಅವರ ಬದುಕು ಸುಖ ಸೌಖ್ಯದಿಂದಿರಲಿ. ನೀವು ಮತ್ತು ಶಂಕರನಾಗ್ ನಮ್ಮ ಹೆಮ್ಮೆ 🌷🙏🌷
On the birth day of great theatre personality Arundathi Nag
ಕಾಮೆಂಟ್‌ಗಳು