ಆರ್. ಜಿ. ಭಂಡಾರ್ಕರ್
ಆರ್. ಜಿ. ಭಂಡಾರ್ಕರ್
ರಾಮಕೃಷ್ಣ ಗೋಪಾಲರಾವ್ ಭಂಡಾರ್‍ಕರ್ ಭಾರತದ ಒಬ್ಬ ಬಹು ದೊಡ್ಡ ವಿದ್ವಾಂಸರು ಹಾಗೂ ಸಂಶೋಧಕರು.
ಆರ. ಜಿ. ಭಂಡಾರ್ಕರ್ ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಾಲವಣ್ ಎಂಬಲ್ಲಿ 1837 ವರ್ಷದ ಜುಲೈ 6ರಂದು ಜನಿಸಿದರು. ತಂದೆ ಗೋಪಾಲರಾವ್ ಅವರು ಮಾಮಲೇದಾರರ ಕಚೇರಿಯಲ್ಲಿ ಗುಮಾಸ್ತರಾಗಿದ್ದರು.
ಭಂಡಾರ್‍ಕರ್ ಅವರು ರತ್ನಗಿರಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಮುಂಬಯಿ ನಗರದ ಎಲಿಫಿನ್‍ಸ್ಟನ್ ಪ್ರೌಢಶಾಲೆ ಸೇರಿದರು. 1854ರಲ್ಲಿ ಮೆಟ್ರಿಕ್ ಮತ್ತು 1858ರಲ್ಲಿ ಬಿ.ಎ. ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಗಣಿತ, ಇಂಗ್ಲಿಷ್, ಇತಿಹಾಸ ಮುಂತಾದ ವಿಷಯಗಳಲ್ಲಿ ಇವರಿಗೆ ವಿಶೇಷ ಆಸಕ್ತಿಯಿತ್ತು. 1859ರಲ್ಲಿ ದಾಕ್ಷಿಣಾತ್ಯ ಫೆಲೋಷಿಪ್ ದೊರಕಿತು. 1860ರಲ್ಲಿ ಪುಣೆ ನಗರಕ್ಕೆ ಬಂದರು. ಅಲ್ಲಿಯ ಕಾಲೇಜಿನಲ್ಲೂ (ಈಗಿನ ಡೆಕನ್ ಕಾಲೇಜ್) ಫೆಲೋಷಿಪ್ ಮುಂದುವರಿಯಿತು. 1863ರಲ್ಲಿ ಇವರು ಸಂಸ್ಕೃತ ಎಂ. ಎ. ಪದವಿ ಗಳಿಸಿದರು.
ರಾಮಕೃಷ್ಣ ಭಂಡಾರ್‍ಕರ್ 1865ರಲ್ಲಿ ಹೈದರಾಬಾದ್ (ಸಿಂಧ್) ನಗರದ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು. ಅನಂತರ ಸ್ವಲ್ಪ ಕಾಲದಲ್ಲಿ ಇವರಿಗೆ ರತ್ನಗಿರಿಗೆ ವರ್ಗವಾಯಿತು. 1868ರಲ್ಲಿ ಇವರು ಎಲ್‍ಫಿನ್‍ಸ್ಟನ್ ಕಾಲೇಜಿನಲ್ಲಿ ಸಂಸ್ಕೃತದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಮುಂದೆ 1882ರಲ್ಲಿ ಪುಣೆಯ ಡೆಕನ್ ಕಾಲೇಜಿನಲ್ಲಿ ಪ್ರೊಫೆಸರ್ ಕೀಲ್‍ಹಾರ್ನ್ ಅವರ ನಿವೃತ್ತಿಯ ಅನಂತರ ತೆರವಾದ ಸ್ಥಾನದಲ್ಲಿ ನೇಮಕವಾದರು. 1893ರಲ್ಲಿ ಆ ಸ್ಥಾನದಿಂದ ನಿವೃತ್ತರಾದ ಮೇಲೆ 1893-95 ಅವಧಿಯಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.
ಭಂಡಾರ್ಕರ್ ಅವರು ಸಂಸ್ಕೃತ, ಪ್ರಾಕೃತ ಮುಂತಾದ ಭಾಷೆಗಳಲ್ಲಿ ಹಾಗೂ ಬ್ರಾಹ್ಮೀ ಮತ್ತು ಖರೋಷ್ಠೀ ಲಿಪಿಗಳಲ್ಲಿ ಪರಿಣತಿ ಸಂಪಾದಿಸಿ ಅನೇಕ ಶಾಸನಗಳನ್ನು ಪ್ರಕಟಿಸಿದರು. 1879ರಲ್ಲಿ ಸರ್ಕಾರ ಇವರಿಗೆ ಸಂಸ್ಕೃತ ಪುರಾಲೇಖ ಸಂಶೋಧನಾ ವಿಭಾಗವನ್ನು ವಹಿಸಿಕೊಟ್ಟಿತು. ಆ ವಿಭಾಗದಿಂದ ಐದು ಸಂಪುಟಗಳು ಪ್ರಕಟವಾದವು. ಆ ಸಂಪುಟಗಳು ಇಂದಿಗೂ ಮಾರ್ಗದರ್ಶಕ ಕೃತಿಗಳಾಗಿವೆ. 1885ರಲ್ಲಿ ಜರ್ಮನಿಯ ಗಾಟಿಂಗೆನ್ ವಿಶ್ವವಿದ್ಯಾಲಯವು ಇವರಿಗೆ ಪಿಎಚ್.ಡಿ. ಪದವಿಯನ್ನು ನೀಡಿತು. ಇದಲ್ಲದೆ ಮುಂಬೈ ವಿಶ್ವವಿದ್ಯಾಲಯದಿಂದ ಇವರು ಎಲ್.ಎಲ್.ಡಿ. ಪದವಿಯನ್ನು ಗಳಿಸಿದರು. 1889ರಲ್ಲಿ ಸಿ.ಐ.ಇ. ಗೌರವವೂ 1911ರಲ್ಲಿ ಕೆ.ಸಿ.ಐ.ಇ. ಎಂಬ ಗೌರವವೂ ಬ್ರಿಟಿಷ್ ಸರ್ಕಾರದಿಂದ ಇವರಿಗೆ ಲಭಿಸಿದವು.
ಭಂಡಾರ್‍ಕರರ ಶಿಷ್ಯರೂ ಸ್ನೇಹಿತರೂ ಇವರ ಮೇಲಿನ ಆದರದಿಂದ ಒಂದು ಸನ್ಮಾನ ಗ್ರಂಥವನ್ನು ಪ್ರಕಟಿಸಿ ಭಂಡಾರ್‍ಕರ್ ಓರಿಯಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು 1917 ಜುಲೈ 6ರಂದು ಸ್ಥಾಪಿಸಿದರು. ಆ ಸಂಸ್ಥೆಗೆ ಭಂಡಾರ್ಕರ್ ತಮ್ಮ ಅಮೂಲ್ಯ ಗ್ರಂಥಭಂಡಾರವನ್ನು ಅರ್ಪಿಸಿದರು. ಇದು ಇಂದಿಗೂ ಒಂದು ಶ್ರೇಷ್ಠ ಸಂಶೋಧನಾ ಸಂಸ್ಥೆಯಾಗಿದೆ.
ಭಂಡಾರ್‍ಕರ್ ಅವರ ಎಲ್ಲ ಲೇಖನಗಳನ್ನೂ ಗ್ರಂಥಗಳನ್ನೂ ಸೇರಿಸಿ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಅವರ ಕೃತಿಗಳ ಪೈಕಿ ಅರ್ಲಿ ಹಿಸ್ಟರಿ ಆಫ್ ದಿ ಡೆಕನ್, ವೈಷ್ಣವಿಸಮ್, ಶೈವಿಸಮ್ ಅಂಡ್ ಅದರ್ ಮೈನರ್ ರಿಲಿಜಿಯಸ್ ಸೆಕ್ಟ್ಸ್, ಮಾಲತಿ ಮಾಧವ (ಸಂಪಾದಿತ), ಸಂಸ್ಕೃತ ಕಲಿಯುವವರಿಗಾಗಿ ಎರಡು ಸುಲಭ ಪಠ್ಯಗಳು-ಇವು ಮುಖ್ಯವಾದವು.
ಭಂಡಾರ್‍ಕರರು ಸಮಾಜಸುಧಾರಕರೂ ಆಗಿದ್ದರು. ಇವರು ಪ್ರಾರ್ಥನಾ ಸಮಾಜದ ಆಧಾರ ಸ್ತಂಭವೆನಿಸಿದ್ದರು. ಅದರ ಬೆಳವಣಿಗೆಗೆ ಅಗತ್ಯವಾದ ವ್ಯಾಖ್ಯಾನಗಳನ್ನೂ ಕೀರ್ತನೆಗಳನ್ನೂ ಮಾಡಿ, ಲೇಖನಗಳನ್ನು ರಚಿಸಿ ಸುಮಾರು 50 ವರ್ಷ ಸೇವೆ ಸಲ್ಲಿಸಿದರು. ಅಂದಿನ ಸಮಾಜದಲ್ಲಿ ರೂಢವಾಗಿದ್ದ ಕೆಟ್ಟ ಸಂಪ್ರದಾಯಗಳೆಲ್ಲವನ್ನೂ ವಿರೋಧಿಸಿದರು. ಸ್ತ್ರೀ ಶಿಕ್ಷಣ, ಜಾತಿಭೇದ ನಿರ್ಮೂಲನ, ವಿಧವಾವಿವಾಹ, ಅಂತ್ಯಜೋದ್ಧಾರಗಳಿಗಾಗಿ ಶ್ರಮಿಸಿದರು. ವಿಧವಾವಿವಾಹವನ್ನು ಸಮರ್ಥಿಸಿ ಇದಕ್ಕೆ ಶಾಸ್ತ್ರಾಧಾರಗಳನ್ನು ನೀಡಿದರಲ್ಲದೆ 1891ರಲ್ಲಿ ತಮ್ಮ ಮಗಳೊಬ್ಬಳು ವಿಧವೆಯಾದಾಗ ಯೋಗ್ಯ ವರನನ್ನು ಹುಡುಕಿ ಪುನರ್ವಿವಾಹ ಮಾಡಿದರು. ಅದಕ್ಕಾಗಿ ಇವರು ಸಮಾಜದಲ್ಲಿ ಕರ್ಮಠರಿಂದ ನಿಂದೆಗೆ ಗುರಿಯಾಗಬೇಕಾಯಿತು. ಅದನ್ನು ಇವರು ಧೈರ್ಯದಿಂದ ಎದುರಿಸಿದರು.
ಅತ್ಯಂತ ನಿಷ್ಠಾವಂತ ಜೀವನ ನಡೆಸಿದ ಆರ್. ಜಿ. ಭಂಡಾರ್ಕರ್ 1925ರ ಆಗಸ್ಟ್ 24ರಂದು ಈ ಲೋಕವನ್ನಗಲಿದರು.
On the birth anniversary of Scholar, orientalist and social reformer Sir R. G. Bhandarkar
ಕಾಮೆಂಟ್‌ಗಳು