ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾತಖಂಡೆ


 ವಿಷ್ಣು ನಾರಾಯಣ ಭಾತಖಂಡೆ


ವಿಷ್ಣು ನಾರಾಯಣ ಭಾತಖಂಡೆಯವರು ಹಿಂದೂಸ್ಥಾನಿ ಸಂಗೀತಕಲೆಗೆ ಶಾಸ್ತ್ರೀಯ ಆಧಾರವನ್ನು ಹುಡುಕಿಕೊಟ್ಟ ಮಹನೀಯರು. ಹಾಡುಗಾರರಾಗಿಯೂ ಅವರು ಅಪಾರ ಸಾಧನೆ ಮಾಡಿದ್ದರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.

ವಿಷ್ಣು ನಾರಾಯಣ ಭಾತಖಂಡೆ 1869ರ ಆಗಸ್ಟ್ 10ರಂದು ಶ್ರೀ ಕೃಷ್ಣಜನ್ಮಾಷ್ಟಮಿಯ ದಿನ ಮುಂಬೈನಲ್ಲಿ ಜನಿಸಿದರು.  ತಂದೆ ನಾರಾಯಣ ಭಾತಖಂಡೆ. ಅವರ ಐದು ಮಕ್ಕಳಲ್ಲಿ ಎರಡನೇ ಮಗನೇ ವಿಷ್ಣು. ಈ ಕುಟುಂಬ ನಾಗಾಂವ್ ಎಂಬ ಹಳ್ಳಿಯಿಂದ ವಾಸಸ್ಥಾನ ಬದಲಾಯಿಸಿ ಮುಂಬಯಿಯ ವಾಲ್ಕೇಶ್ವರ‍್ ಎಂಬಲ್ಲಿಗೆ ಬಂದು ನೆಲೆಸಿತ್ತು. ವಿಷ್ಣುವಿನ ತಂದೆಗೆ ಸಂಗೀತ ಕಲೆಯಲ್ಲಿ ಆಸಕ್ತಿ ಇತ್ತು. ಅವರು ’ಸ್ವರಮಂಡಲ’ ಎಂಬ ವಾದ್ಯವನ್ನು ನುಡಿಸುತ್ತಿದ್ದರು. ವಿಷ್ಣುವಿಗೆ ಬಾಲ್ಯದಿಂದ ಸಂಗೀತ ಕಲೆಯಲ್ಲಿ ಆಸಕ್ತಿ. ತಾಯಿ ತನ್ನ ಮಗನ ಕಂಠವನ್ನು ಕೇಳಿ ಆಶ್ಚರ್ಯಪಟ್ಟಳು; ಹಾಡುಗಳನ್ನು ಅವನಿಗೆ ಹೇಳಿಕೊಟ್ಟು ಆನಂದಪಟ್ಟಳು. ಬಾಲಕ ವಿಷ್ಣುವು ತನ್ನ ಪಾಠಶಾಲೆಯಲ್ಲಿಯೂ ಮಧುರವಾದ ಕಂಠದಿಂದ ಶಿಶುಗೀತೆಗಳನ್ನು ಹಾಡುತ್ತಿದ್ದ.  ಕ್ರಮೇಣ ಆತನು ಕೊಳಲನ್ನು ನುಡಿಸಲೂ ಆರಂಭಿಸಿದ.

ವಾಲ್ಕೇಶ್ವರ ಬಡಾವಣೆಯಲ್ಲಿ ರಾಮನವಮಿ, ದೀಪಾವಳಿ, ಕೃಷ್ಣ ಜನ್ಮಾಷ್ಟಮಿ ದಿನಗಳಲ್ಲಿ ಸಂಗೀತ, ನಾಟಕ, ನೃತ್ಯಗಳನ್ನು ಏರ್ಪಡಿಸುತ್ತಿದ್ದರು. ಈ ವಿಜೃಂಭಣೆಯ ಕಾರ್ಯಕ್ರಮಗಳಲ್ಲಿ ವಿಷ್ಣುವು ಮುಖ್ಯ ಪಾತ್ರ ವಹಿಸುತ್ತಿದ್ದ. ಅವನು ಸಂಗೀತ ನಾಟಕಗಳಲ್ಲಿ ಹಾಡಿಯೂ ಕೊಳಲನ್ನು ನುಡಿಸಿಯೂ ಸಹಕರಿಸುತ್ತಿದ್ದ. ವಿಷ್ಣುವು ಓದುವುದರಲ್ಲಿಯೂ ಬುದ್ಧಿಶಾಲಿಯಾಗಿದ್ದು ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದು, 1880ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕಾಲೇಜು ಸೇರಿದ.

ವಾಲ್ಕೇಶ್ವರದಲ್ಲಿ ಗೋಪಾಲಗಿರಿ ಎಂಬುವರು ಸಿತಾರ‍್ ನುಡಿಸುತ್ತಿದ್ದರು. ಅವರ ಸಿತಾರ‍್ ವಾದನ ಕೇಳಿ ವಿಷ್ಣು ತಾನೂ ಸಿತಾರ‍್ ನುಡಿಸಲು ಆಸೆಪಟ್ಟ. ಗೋಪಾಲ ಗಿರಿ ಅವರು ಸಿತಾರ‍್ ಸಾಧನೆಗೆ ವಲ್ಲಭದಾಸ್ ದಾಮುಲ್ ಜೀ ಎಂಬ ಕುರುಡು ಸಂಗೀತಗಾರರ ಪರಿಚಯವನ್ನು ಮಾಡಿಸಿಕೊಟ್ಟರು. ವಲ್ಲಭದಾಸರು ಕುರುಡರಾಗಿದ್ದರೂ, ಅವರಿಗೆ ಜೀವನೋಪಾಯಕ್ಕೆ ಯಾವ ತೊಂದರೆಯೂ ಇರಲಿಲ್ಲ. ಆದ್ದರಿಂದ ಅವರು ಸಿತಾರ‍್ ಮತ್ತು ಬೀನ್ ವಾದ್ಯಗಳನ್ನು ನುಡಿಸಿ ತಮ್ಮ ಸಮಯವನ್ನು ಕಳೆಯುತ್ತಿದ್ದರು. ವಿಷ್ಣುವು ಪ್ರತಿದಿನ ಸಾಯಂಕಾಲ ಅವರಲ್ಲಿಗೆ ಹೋಗಿ, ಅವರ ಸಂಗೀತವನ್ನು ಮನತುಂಬಾ, ಕಿವಿತುಂಬಾ ಕೇಳಿ ಬರುತ್ತಿದ್ದ. ಆ ಕಾಲದ ರೂಢಿಯಂತೆ ಗುರುವಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು, ಗುರುಸೇವೆ ಮಾಡಿ, ಸಂಗೀತದ ಲಾಭ ಪಡೆಯುತ್ತಿದ್ದ.

ತಾವು ಸ್ವತಃ ಪಾಠ ಮಾಡದೆ ಹೋದರೂ ಪ್ರತಿದಿನ ತಪ್ಪದೆ ಸಂಗೀತ ಕೇಳಿ ಹೋಗುತ್ತಿದ್ದ ವಿಷ್ಣುವಿನ ತಾಳ್ಮೆಯನ್ನು ವಲ್ಲಭದಾಸರು ಮೆಚ್ಚಿದರು. ಗುರುಗಳು ವಾದ್ಯಗಳನ್ನು ನುಡಿಸುವಾಗ, ವಿಷ್ಣು ನೆಟ್ಟ ದೃಷ್ಟಿಯಿಂದ, ಅವರ ಕೈ ಬೆರಳುಗಳು ತಂತಿಗಳ ಮೇಲೆ ಚಲಿಸುವುದನ್ನು ಏಕಾಗ್ರತೆಯಿಂದ ಗಮನಿಸಿ ಮನೆಗೆ ಬಂದು, ತಾನೇ ಕೊಂಡು ತಂದ ಸಿತಾರ‍್ ನಲ್ಲಿ ನುಡಿಸುವ ಪ್ರಯತ್ನ ಆರಂಭಿಸಿದ. ಗೋಪಾಲಗಿರಿಯವರು ಯುವಕನಿಗೆ ಬೇಕಾದ ಸಲಹೆ ನೀಡುತ್ತಿದ್ದರು.

ವಿಷ್ಣುವಿಗೆ ಸಂಗೀತದಲ್ಲಿದ್ದ ಶ್ರದ್ಧೆ ಮತ್ತು ಆಕಾಂಕ್ಷೆಯನ್ನು ತಿಳಿದು, ಒಂದು ದಿನ ವಲ್ಲಭದಾಸರು ಅವನಿಗೆ ಪಾಠ ಹೇಳಿಕೊಡುವೆನೆಂದು ತಾವಾಗಿ ಮುಂದೆ ಬಂದರು! ಆದರೆ ಆಗಲೇ ವಿಷ್ಣುವು ಸಿತಾರ‍್ ನುಡಿಸಲು ಬಲ್ಲನೆಂದು ತಿಳಿದು ಅವರಿಗೆ ಆಶ್ಚರ್ಯವಾಯಿತು. ಅವನ ಪ್ರತಿಭೆ ಕಂಡು ವಲ್ಲಭದಾಸರು ಹೆಚ್ಚಿನ ಪ್ರೋತ್ಸಾಹದಿಂದ ಪಾಠ ಹೇಳಿಕೊಟ್ಟರು. ಸ್ವಲ್ಪ ಸಮಯದಲ್ಲಿಯೇ ವಿಷ್ಣುವು ಸಿತಾರ‍್ ವಾದಕನಾದ. ಖಾಸಗಿ ಸಂಗೀತ ಕಛೇರಿಗಳಲ್ಲಿ ನುಡಿಸುತ್ತಿದ್ದ.  ಎಲ್ಲರೂ ಅವನ ಸಂಗೀತವನ್ನು ಕೊಂಡಾಡುತ್ತಿದ್ದರು. ವಿಷ್ಣುವು 1885ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ. 1887ರಲ್ಲಿ  ಎಲ್.ಎಲ್.ಬಿ. ಪದವಿ ಪಡೆದ.‍

ಸಂಗೀತದ ಅಭ್ಯಾಸ ಮುಂದುವರಿದಂತೆ ವಿಷ್ಣು ನಾರಾಯಣ ಭಾತಖಂಡೆ ಸಂಸ್ಕೃತ, ಮರಾಠಿ, ಗುಜರಾತಿ, ಹಿಂದಿ ಭಾಷೆಗಳಲ್ಲಿ ಬರೆದ ಸಂಗೀತ ಶಾಸ್ತ್ರದ ಹಳೇ ಪುಸ್ತಕಗಳನ್ನೆಲ್ಲ ತರಿಸಿದರು, ಅವುಗಳಲ್ಲಿನ ಮುಖ್ಯ ವಿಷಯಗಳನ್ನು ಬರೆದಿಟ್ಟುಕೊಳ್ಳಲು ಆರಂಭಿಸಿದರು.

1884ರಲ್ಲಿ ಮುಂಬಯಿಯ ಶ್ರೀಮಂತ ಪಾರ್ಸಿ ಜನರು ’ಗಾಯನ ಉತ್ತೇಜಕ ಮಂಡಲಿ’ ಎಂಬ ಸಂಸ್ಥೆ ಸ್ಥಾಪಿಸಿದರು. ವಿಷ್ಣು ಅದನ್ನು ಸೇರಿದರು. ಈ ಸಂಸ್ಥೆ ಮುಂಬಯಿಯ ಹಾಗೂ ಹೊರಗಿನ ಸಂಗೀತಗಾರರನ್ನು ಆಮಂತ್ರಿಸಿ, ಅವರ ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿತ್ತು. ಆ ಸಮಯದಲ್ಲಿಯೇ ಅನೇಕ ಸಂಗೀತಗಾರರು ಹೆಚ್ಚಾಗಿ ಮುಸ್ಲಿಮರು – ರಾಜರ ಹಾಗೂ ದರಬಾರುಗಳ ಪ್ರೋತ್ಸಾಹ ಕಳೆದುಕೊಂಡಿದ್ದರು. ಅವರೆಲ್ಲ ಮುಂಬಯಿಯಂತಹ ನಗರಗಳನ್ನು ಸೇರಿದರು. ಭಾರತದ ದೊಡ್ಡ ನಗರಗಳಲ್ಲಿ ಶ್ರೇಷ್ಠ ಸಂಗೀತಗಾರರೆಲ್ಲ ಬಂದು ಸೇರಿದರು; ಕಛೇರಿಗಳನ್ನು ನಡೆಸಿದರು. ಅವರ ಕಲೆ ಮುಂಬಯಿಯ ರಸಿಕರ ಮನಸ್ಸನ್ನು ಸೂರೆ ಮಾಡಿತು. ಇವು ವಿಷ್ಣುವಿಗೆ ಸ್ಪೂರ್ತಿ ಕೊಟ್ಟವು. ಅವರು ಸಂಗೀತ ಕಲೆಯ ಶಾಸ್ತ್ರೀಯ ಹಿನ್ನೆಲೆಯ ವಿಷಯವಾಗಿ ಯೋಚನೆ ಮಾಡಲು ಪ್ರಾರಂಭಿಸಿದರು.  ವಿಷ್ಣು ಪ್ರಖ್ಯಾತ ಕಲಾವಿದರಿಂದ ನೂರಾರು ಸಂಗೀತ ರಚನೆಗಳನ್ನು ಕಲಿತರು. ಜೊತೆಗೆ ಅವರು ಹಳೆಯ ಗ್ರಂಥಗಳನ್ನೂ ಅಧ್ಯಯನ ಮಾಡುತ್ತಿದ್ದರು. ಓದುತ್ತಾ, ಕೇಳುತ್ತಾ ಅವರು ಸಂಗೀತದ ವಿಷಯದಲ್ಲಿ ಒಂದು ನಿರ್ಣಯಕ್ಕೆ ಬಂದರು. ಅದೇನೆಂದರೆ, ಸಂಗೀತಗಾರರು ಪ್ರದರ್ಶಿಸುತ್ತಿರುವ ಸಂಗೀತಕ್ಕೂ, ಶಾಸ್ತ್ರದಲ್ಲಿ ಹೇಳಿರುವ ವಿಷಯಗಳಿಗೂ ಯಾವ ಸಂಬಂಧವೂ ಇಲ್ಲವೆಂದು! ಸಂಗೀತಗಾರರಿಗೆ ಪುಸ್ತಕಗಳಲ್ಲಿ ಬರೆದಿದ ಶಾಸ್ತ್ರ ವಿಭಾಗದ ವಿಷಯ ಏನೂ ಗೊತ್ತಿರಲಿಲ್ಲ! ಅಕ್ಷರ ಜ್ಞಾನವೇ ಇಲ್ಲದ ಸಂಗೀತಗಾರರಿಗೆ ಶಾಸ್ತ್ರಜ್ಞಾನ ಎಲ್ಲಿಂದ ಬರಬೇಕು? ಗುರುವಿನಿಂದ ಶಿಷ್ಯನಿಗೆ, ತಂದೆಯಿಂದ ಮಗನಿಗೆ – ಹೀಗೆ ಪರಂಪರಾನುಗತವಾಗಿ ಕಲಾವಿದರು ಸಾಧನೆ ಮಾಡುತ್ತಿದ್ದರು. ಅವರವರ  ಮನೆತನದ ವೈಶಿಷ್ಟ್ಯಕ್ಕೆ ಸರಿಯಾಗಿ ಸಾಂಪ್ರದಾಯಿಕವಾಗಿ ಹಾಡುವ ರೂಢಿ ಬಂದಿತ್ತು. ಪುಸ್ತಕಗಳ ಆಧಾರ ಇಲ್ಲದ ಕಾರಣ, ಈ ರೀತಿ ಹಾಡುವುದರಲ್ಲಿ ಮಾರ್ಪಾಟುಗಳು ಆಗುತ್ತಲೇ ಇದ್ದವು. ಹೀಗಾಗಿ, ಸಂಗೀತ ಕಲೆಗೆ ಯಾವ ವಿಧದ ತಳಹದಿಯೂ ಭದ್ರವಾಗಿಲ್ಲ ಎಂದು ಭಾತಖಂಡೆಯವರು ಚಿಂತಿಸಿದರು.
 
ಭಾತಖಂಡೆಯವರು ಸಂಗೀತದ ಎಲ್ಲ ರಾಗಗಳನ್ನೂ ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿದರು. ಅವನ್ನು ವ್ಯವಸ್ಥಿತ ರೀತಿಯಲ್ಲಿ ಬರೆಯುವ ವಿಚಾರವಾಗಿ ದೀರ್ಘ ಯೋಚನೆ ಮಾಡಿದರು. ಅವರ ಈ ಯೋಚನೆಗೆ ಮಂಡಲಿಯ ಸದಸ್ಯರೆಲ್ಲರೂ ಬೆಂಬಲ ಕೊಟ್ಟರು. ಅವರ ಮನಸ್ಸಿಗೆ ಹೊಳೆದುದನ್ನು ವಿವರಿಸಲು ಅವರ ಉಪನ್ಯಾಸಗಳನ್ನು ಏರ್ಪಡಿಸಿದರು. ದಿನ ಕಳೆದಂತೆ ಭಾತಖಂಡೆಯವರು ಕಲೆಯ ಸಂಶೋಧನಾ ಪಂಡಿತರಾದರು. ಸಂಗೀತ ಕಲೆಯ ನಿರೂಪಕರಾದರು. ಸಂಗೀತ ಕಲಾ ಜಗತ್ತಿನಲ್ಲಿ ಗಣ್ಯ ಸ್ಥಾನ ಪಡೆದರು.

ಭಾತಖಂಡೆಯವರು ಸಂಗೀತದಿಂದ ಹಣ ಸಂಪಾದಿಸಬೇಕಾಗಿರಲಿಲ್ಲ. ಭಾತಖಂಡೆಯವರು ಪ್ರಸಿದ್ಧ ವಕೀಲರಾಗಿದ್ದರು. ಕೆಲವು ವರ್ಷ ಅವರು ಮುಂಬಯಿಯಲ್ಲಿ ನ್ಯಾಯಶಾಸ್ತ್ರದ ಅಧ್ಯಾಪಕರಾಗಿದ್ದರು. ಸಂಗೀತ ಭಾತಖಂಡೆಯವರಿಗೆ ಹಣ ಗಳಿಸುವ ಸಾಧನವೂ ಆಗಿರಲಿಲ್ಲ. ಮನರಂಜನೆಯ ಸಾಧನವೂ ಆಗಿರಲಿಲ್ಲ. ಸಂಗೀತ ಅದ್ಭುತವಾದ, ಪವಿತ್ರವಾದ ಕಲೆ ಎಂಬ ಭಾವನೆಯಿಂದ ಅವರು ಅದನ್ನು ಅಧ್ಯಯನ ಮಾಡಿದರು.

ಭಾತಖಂಡೆಯವರು ಸಂಗೀತ ಶಾಸ್ತ್ರವನ್ನು ಒಂದು ನಿರ್ದಿಷ್ಟ ರೂಪಕ್ಕೆ ತರಲು ಆರಂಭಿಸಿದರು. ಅಂದು ರೂಢಿಯಲ್ಲಿದ್ದ ರಾಗಗಳ ನಿಯಮಗಳನ್ನು ಬರೆದರು. ಸಾಂಪ್ರದಾಯಿಕ ರಚನೆಗಳನ್ನು ಬರೆದರು. ಅವರು ಆಗಿಂದಾಗ್ಗೆ ಕೇಳುತ್ತಿದ್ದ ಸಂಗೀತವನ್ನು ಗುರುತಿಸಿಟ್ಟರು. ವಿದ್ವಾಂಸರು ಹಾಡುವ ಶೈಲಿಗಳನ್ನೆಲ್ಲ ತಿಳಿದರು. ಮಂಡಲಿಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಲೇ ಇತ್ತು. ತಾವು ಮಾಡಿದ ಟಿಪ್ಪಣಿಗಳನ್ನು ಮಂಡಲಿಯ ಸದಸ್ಯರಿಗೆ ಓದಿ ಹೇಳುತ್ತಿದ್ದರು. ಹೀಗೆಯೇ ಅವರು ಬರೆದ ’ಲಕ್ಷ್ಯ ಸಂಗೀತ’ ಮತ್ತು ’ಹಿಂದೂಸ್ತಾನೀ ಸಂಗೀತ ಪದ್ಧತಿ’ ಪುಸ್ತಕಗಳು ಬೆಳಕು ಕಂಡವು.

’ಗಾಯನ ಉತ್ತೇಜನ ಮಂಡಲಿ’ ಗೆ ನಜೀರ‍್ ಖಾನ್ ಎಂಬ ಸಾರಂಗಿ ವಾದ್ಯ ಪಂಡಿತರು ಸೇರಿದರು. ಅವರಿಗೆ ವಡಿವಾಲ್ ಶಿವರಾಂ ಎಂಬ ಶಿಷ್ಯರಿದ್ದರು. ಈ ಶಿಷ್ಯರು ಗುಜರಾತಿ ನಾಟಕ ಕಂಪೆನಿಯೊಂದರಲ್ಲಿ ಸಂಗೀತ ರಚನಾಕಾರರಾಗಿದ್ದರು. ಅವರ ಕೆಲಸಕ್ಕೆ ಭಾತಖಂಡೆಯವರ ಸಂಪರ್ಕ ಇದ್ದರೆ ಒಳ್ಳೆಯದು ಎಂದು ನಜೀರ‍್ ಖಾನರು ಭಾತಖಂಡೆಯವರ ಪರಿಚಯವನ್ನು ಅವರಿಗೆ ಮಾಡಿಕೊಟ್ಟರು. ವಡಿಲಾಲ್ ರವರು ಭಾತಖಂಡೆಯವರ ವಿದ್ವತ್ತಿಗೆ ಮಾರು ಹೋದರು. ಭಾತಖಂಡೆಯವರು ಕೈಗೊಂಡ ಕೆಲಸಕ್ಕೆ ಪೂರ್ಣ ಸಹಕಾರ ನೀಡಿದರು. ಅವರಿಂದ ಸಂಗೀತ ಸೇವೆಗೆ ಸ್ಪೂರ್ತಿ ಪಡೆದರು. ಅವರ ಆಜನ್ಮ ಆರಾಧಕರಾದರು.
ಭಾತಖಂಡೆಯವರಿಗೆ ಸಾಂಪ್ರದಾಯಿಕ ಕಲೆ ಎಲ್ಲೆಲ್ಲಿರುವುದೋ ಅಲ್ಲಲ್ಲಿಂದ ಎಲ್ಲವನ್ನೂ ಪಡೆದು ಶೇಖರಿಸಿ ಇಡಬೇಕೆಂಬ ಪ್ರಬಲವಾದ ಆಸೆ ಆಯಿತು. ಅದಕ್ಕಾಗಿ ಅವರು ಭಾರತದ ದೇಶದಲ್ಲಿ ಭೇಟಿ ಮಾಡದ ಸಂಗೀತ ವಿದ್ವಾಂಸರು ಇರಲಿಲ್ಲ. ಅವರು ಹೋಗಿ ನೋಡದ ಪುಸ್ತಕ ಭಂಡಾರ ಇರಲಿಲ್ಲ!

ಜಯಪುರದ ಮಹಮದ್ ಆಲಿ ಖಾನರ ಮಗ ಆಸಿಶ್ ಖಾನರು ಅವರ ಮನೆತನದ ಸಂಗೀತದ ಬಂಡವಾಳವೇ ಆಗಿದ್ದರಂತೆ. ಆಶಿಶ್ ಖಾನರು ಆಗ ಜೀವನಕ್ಕೆ ಸಂಪಾದನೆ ಇಲ್ಲದೆ ಒದ್ದಾಡುತ್ತಿದ್ದು ಉದ್ಯೋಗ ಹುಡುಕಿ ಮುಂಬಯಿಗೆ ಬಂದಿದ್ದರು. ಭಾತಖಂಡೆಯವರಿಗೆ ಅವರ ಭೇಟಿಯಾಯಿತು. ಆಶಿಶ್ ಖಾನರು ಹಾಡುವ ಅಪೂರ್ವ ರಾಗಗಳನ್ನು ಕೇಳಿದ ಮೇಲಂತೂ ಭಾತಖಂಡೆಯವರು ಹುಚ್ಚರಂತಾದರು. ಅವರಿಂದ ಪಾಠ ಹೇಳಿಸಿಕೊಂಡರು. ಈ ಪಾಠದಿಂದ ಆಶಿಶ್ ಖಾನರಿಗೆ ತಿಂಗಳ ವರಮಾನವೂ ಖಚಿತವಾಯಿತು. ಅವರಿಂದ ಕಲಿತುಕೊಂಡ ರಾಗಗಳನ್ನೆಲ್ಲ ಸಂಗೀತ ಲಿಪಿಯಲ್ಲಿ ಭಾತಖಂಡೆಯವರು ಬರೆದಿಟ್ಟು ಕೊಂಡರು. ಅವಕ್ಕೆ ತಕ್ಕ ರಾಗಗಳನ್ನೂ ತಾಳಗಳನ್ನೂ ಸೂಚಿಸಿದರು. ರಾಗಗಳನ್ನು ಮಿಂಚಿನಂತೆ ಬರೆದು ಶಾಶ್ವತಗೊಳಿಸುವುದನ್ನು ಕಂಡು ಆಶಿಶ್ ಖಾನರು ಬೆರಗಾದರು! ಕೇವಲ ಎರಡು ಮೂರು ತಿಂಗಳುಗಳಲ್ಲಿ ಭಾತಖಂಡೆಯವರು ಇನ್ನೂರ ಐವತ್ತು ರಾಗಗಳನ್ನು ಪುಸ್ತಕದಲ್ಲಿ ಬರೆದಿಟ್ಟುಕೊಂಡರು!

ಭಾತಖಂಡೆಯವರು ಆಶಿಶ್ ಖಾನರಿಂದ ಸಂಗೀತ ಕಲೆಯನ್ನು ಈ ರೀತಿ ಪಡೆದ ವಿಷಯವನ್ನು ತಿಳಿದು, ಮುಂಬಯಿಯ ಅನೇಕ ಸಂಗೀತಗಾರರು ಹೊಟ್ಟೆಕಿಚ್ಚಿನಿಂದ ಜಯಪುರದ ಮಹಮದ್ ಆಲಿಗೆ ದೂರು ಕೊಟ್ಟರು. ಆ ವೃದ್ಧರು ಒಡನೆ ಮುಂಬಯಿಗೆ ಬಂದು, ಮಗನನ್ನು ಆಕ್ಷೇಪಿಸಿದರು. ’ನೀನು ನಮ್ಮ ಸಂಗೀತ ಭಂಡಾರವನ್ನೆಲ್ಲ ಬರಿದು ಮಾಡಿದೆ. ಹಣದ ಆಸೆಗಾಗಿ ನಮ್ಮ ಮನೆತನದ ನಿಧಿಯನ್ನು ಕಳೆದುಕೊಂಡೆ. ಇಂತಹ ಸಂಪಾದನೆಗಿಂತ ನೀನು ಉಪವಾಸ ಬಿದ್ದಿದ್ದರೆ ಚೆನ್ನಾಗಿತ್ತು!’ ಎಂದರು ಈ ಕಠೋರ ಮಾತುಗಳನ್ನು ಕೇಳಿ ಭಾತಖಂಡೆಯವರು ಕಣ್ಣೀರಿಟ್ಟರು. ಮಹಮದ್ ಆಲಿಯವರ ಕಾಲಿಗೆ ಎರಗಿ, ’ಸ್ವಾಮೀ ಇದರಲ್ಲಿ ನಿಮ್ಮ ಮಗನ ತಪ್ಪು ಏನೂ ಇಲ್ಲ, ಎಲ್ಲವೂ ನನ್ನ ತಪ್ಪೇ! ದಯವಿಟ್ಟು ಕ್ಷಮಿಸಿ. ನಿಮ್ಮ ಸಂಗೀತವನ್ನು ನಾನು ಎಂದೆಂದಿಗೂ ದುರುಪಯೋಗ ಮಾಡುವುದಿಲ್ಲ. ನಿಮ್ಮ ಕೃತಜ್ಞ ಶಿಷ್ಯ ನಾನು’ ಎಂದರು.

ಭಾತಖಂಡೆಯವರು ತಾವು ಬರೆದ ಎಲ್ಲ ರಾಗಗಳ ಲಿಪಿಯನ್ನು ಗುರುಗಳಿಗೆ ತೋರಿಸಿದರು, ಅವುಗಳನ್ನು ಹಾಡಿಯೂ ತೋರಿಸಿದರು. ಅವರ ಮಹತ್ತಾದ ಕೆಲಸವನ್ನು ಕಂಡು ಮಹಮದ್ ಆಲಿಯವರು ಬಾಯಿ ತುಂಬಾ ಹೊಗಳಿದರಂತೆ! ಅವರ ಸಂಗೀತ ಭಂಡಾರಕ್ಕೆ ಇನ್ನೂ ಹೆಚ್ಚಿನ ರಾಗಗಳನ್ನೂ ರಚನೆಗಳನ್ನೂ ತಾವೇ ಇಷ್ಟಪಟ್ಟು ಸೇರಿಸಿದರಂತೆ! ಅವರಿಂದ ಭಾತಖಂಡೆಯವರು ಇನ್ನೂ ಮುನ್ನೂರು ರಾಗಗಳನ್ನು ಕಲಿತರು; ಬರೆದಿಟ್ಟುಕೊಂಡರು. ತಂದೆ – ಮಗ ಹಾಡುವ ಸಂಗೀತ ಎಲ್ಲವನ್ನೂ  ಗ್ರಾಮೋಫೋನ್ ರಿಕಾರ್ಡ್‌ಗಳನ್ನು ಮುದ್ರಿಸಿಟ್ಟುಕೊಂಡರು. ಆದರೆ ಸೂಕ್ತ ಶೇಕರಣಾ ವ್ಯವಸ್ಥೆ ಇಲ್ಲದೆ ಈ ರಿಕಾರ್ಡುಗಳನ್ನೆಲ್ಲ ಇಲಿ, ಜಿರಲೆ ತಿಂದುಬಿಟ್ಟವು. ಅದು ಸಂಗೀತಗಾರರಿಗೆ ಮತ್ತು ಸಂಗೀತ ಕಲೆಗೆ ದೊಡ್ಡ ನಷ್ಟ.  ವರ್ಷಗಳು ಉರುಳಿದಂತೆ ಭಾತಖಂಡೆಯವರು ಲಕ್ಷಣ ಗೀತೆಗಳನ್ನು ಪುಸ್ತಕ ರೂಪದಲ್ಲಿ ಬರೆದರು.   ಉದಯೋನ್ಮುಖ ಕಲಾವಿದರಿಗೆ ಈ  ಪುಸ್ತಕದಿಂದ ತುಂಬಾ ಉಪಕಾರ ಆಯಿತು. ವಿದ್ಯಾರ್ಥಿಗಳು ಪುಸ್ತಕ ಓದಿ ಸಂಗೀತ ಕಲಿತುಕೊಳ್ಳುವುದಕ್ಕೆ ಸಾಧ್ಯವಾಯಿತು. ಅಂತಹ ಪುಸ್ತಕಗಳನ್ನು ಬರೆದವರಲ್ಲಿ ಅವರೇ ಮೊದಲಿಗರು.

ಇದೇ ಸಮಯದಲ್ಲಿ ಭಾತಖಂಡೆಯವರಿಗೆ ದುಃಖ ಎರಗಿತು. ಅವರ ಚಿಕ್ಕ ಹೆಣ್ಣುಮಗುವೂ ಹೆಂಡತಿಯೂ ತೀರಿಕೊಂಡರು. ಅವರ ಒಂಟಿ ಜೀವನದಲ್ಲಿ ಮನಸ್ಸಿಗೆ ಶಾಂತಿ ಕೊಡುತ್ತಿದುದು ಸಂಗೀತ ಒಂದೇ. ದಿನವೆಲ್ಲ ಕೋರ್ಟು ಕಛೇರಿಯ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಬೇಸರ, ದುಃಖಗಳು ಕವಿದಾಗ ಸಂಗೀತಕ್ಕೆ ಮೊರೆ ಹೋಗುತ್ತಿದರು. ಅವರು ಸಂಗೀತದ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸ್ವರಗಳ ರಚನೆ, ಖಚಿತವಾದ ತಾಳಗಳನ್ನು ಬರೆದ ರಾಗ, ಇತ್ಯಾದಿ ಬರೆದು ಪ್ರಕಟಿಸಿದರು. ಈ ಪ್ರಕಟಣೆಗಳು ಇಡೀ ಭಾರತದ ಸಂಗೀತಗಾರರ ಗಮನ ಸೆಳೆದವು.  ಎಷ್ಟು ಕೆಲಸ ಮಾಡಿದರೂ ಅವರ ಮನಸ್ಸನ್ನು ಕೆಲವು ಪ್ರಶ್ನೆಗಳು ಕಾಡುತ್ತಲೇ ಇದ್ದವು. ಸಂಗೀತ ಪುಸ್ತಕಗಳಿಗೂ ರೂಢಿಯಲ್ಲಿರುವ ಕಲೆಗೂ ಯಾವ ಸಂಬಂಧವೂ ಇಲ್ಲದ ಮೇಲೆ ಪುಸ್ತಕಗಳನ್ನು ಏತಕ್ಕಾದರೂ ಓದಬೇಕು?’ ಎಂದು ಅವರಿಗೆ ಬೇಸರ. ಈ ಸ್ಥಿತಿಯನ್ನು ಸರಿಪಡಿಸಲು ಅವರು ಅಂದು ರೂಢಿಯಲ್ಲಿದ್ದ ಸಂಗೀತದ ಶಾಸ್ತ್ರ ವಿಭಾಗವನ್ನು ಬರೆಯಲು ಯೋಚಿಸಿದರು.

ಅವರ ಮನಸ್ಸನ್ನು ಕಾಡುತ್ತಿದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮೊದಲು ಅವರು ದಕ್ಷಿಣ ಭಾರತದ ಪ್ರವಾಸ ಕೈಗೊಂಡರು. ಮದರಾಸು, ತಂಜಾವೂರು, ಮೈಸೂರು, ಬೆಂಗಳೂರು ಎಲ್ಲ ಸುತ್ತಿದರು. ಆಮೇಲೆ ಮಧ್ಯಭಾರತದ ನಾಗಪುರ, ಹೈದರಾಬಾದು, ವಿಜಯನಗರದ ಸಂಗೀತಗಾರರನ್ನು ಕಂಡರು. ಕೊನೆಯದಾಗಿ ಉತ್ತರ ಭಾರತದ ಆಗ್ರಾ, ದೆಹಲಿ, ಜಯಪುರ, ಉದಯಪುರ ಎಲ್ಲ ಸುತ್ತಿ ಅಲ್ಲಿನ ಸಂಗೀತಗಾರರನ್ನೂ ಶಾಸ್ತ್ರಜ್ಞರನ್ನೂ ಕಂಡರು. ಆದರೂ ಅವರ ಪ್ರಶ್ನೆಗಳಿಗೆ ಉತ್ತರ ಸಿಕ್ಕಲೇ ಇಲ್ಲ.
ಭಾತಖಂಡೆಯವರು ತಮ್ಮ ಅಖಿಲ ಭಾರತದ ಪ್ರವಾಸದಲ್ಲಿ ಸಂಗ್ರಹಿಸಿದ ವಿಷಯಗಳನ್ನು ಪಠ್ಯಪುಸ್ತಕವಾಗಿ ಪ್ರಕಟಿಸಲು ಪ್ರಯತ್ನಿಸಿದರು. 1918ರಲ್ಲಿ ಅವರು ಹಳೇ ಸಂಪ್ರದಾಯದ ರಚನೆಗಳನ್ನು  ತಮ್ಮದೇ ಆದ ಹೊಸ ಲಿಪಿಯಿಂದ, ಹೊಸ ಸಂಕೇತಗಳಿಂದ ಬರೆದರು. ಅದಕ್ಕೆ ’ಗೀತಮಾಲಿಕೆ’ ಎಂದು ಹೆಸರಿಟ್ಟು ಒಂದು ಮಾಸಿಕ ಮಾಲೆಯಲ್ಲಿ ಪ್ರಕಟಿಸಿದರು. ಅದನ್ನು ಜನಪ್ರಿಯ ಮಾಡಲು ಮಾಲಿಕೆಗೆ ಕೇವಲ ನಾಲ್ಕಾಣೆ ಬೆಲೆ ಇಟ್ಟರು. ಇದರ ಜೊತೆಗೆ ’ಅಭಿನವ ರಾಗ ಮಂಜರಿ’ ಎಂಬ ಸಂಸ್ಕೃತ ಗ್ರಂಥವನ್ನೂ ಬರೆದರು. ಈ ಬರವಣಿಗೆಯಿಂದ ಭಾತಖಂಡೆಯವರು ಭಾರತದಲ್ಲೆಲ್ಲಾ ಪ್ರಖ್ಯಾತರಾದರು. ಅವರ ಬರವಣಿಗೆಯ ಕೀರ್ತಿ ಎಲ್ಲೆಡೆಯಲ್ಲೂ ಹಬ್ಬಿತು. ಬರೋಡ ಸಂಸ್ಥಾನದ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡರು, ಗ್ವಾಲಿಯರಿನ ಮಹಾರಾಜರಾದ ಮಾಧವರಾವ್ ಸಿಂಧಿಯಾ ಮತ್ತು ರಾಮ್ ಪುರದ ನವಾಬರಾದ ಹಮೀದ್ ಆಲಿ ಅವರು ಭಾತಖಂಡೆಯವರ ಕೆಲಸ ಕಾರ್ಯದಲ್ಲಿ ಅಪಾರ ಆಸಕ್ತಿ ತೋರಿಸಿದರು.

ಬರೋಡ ಸಂಸ್ಥಾನದಲ್ಲಿ ಒಂದು ಸಂಗೀತ ಶಾಲೆ ಇತ್ತು. ಅದನ್ನು ಅಭಿವೃದ್ಧಿ ಮಾಡಲು ಭಾತಖಂಡೆಯವರನ್ನು ಅಲ್ಲಿನ ಮಹಾರಾಜರು 1915ರಲ್ಲಿ ಆಹ್ವಾನಿಸಿದರು. ಸಂಗೀತ ಶಾಸ್ತ್ರಕ್ಕೂ, ಸಂಗೀತ ಹಾಡುವುದಕ್ಕೂ ಸಂಬಂಧ ಇರಬೇಕಾದರೆ ಭಾರತದ ಗಣ್ಯ ವಿದ್ವಾಂಸರು ಒಂದುಗೂಡಬೇಕು. ಇದಕ್ಕಾಗಿ ಒಂದು ಸಂಗೀತ ಸಮ್ಮೇಳನದ ಅಗತ್ಯ ಇದೆ ಎಂದು ಭಾತಖಂಡೆಯವರು ಮಹಾರಾಜರಿಗೆ ಸೂಚನೆ ಕೊಟ್ಟರು. ಅವರ ವಾದಸರಣಿ ಮಹಾರಾಜರಿಗೆ ಒಪ್ಪಿಗೆಯಾಯಿತು. 1916ರಲ್ಲಿ ಅಖಿಲ ಭಾರತ ಸಂಗೀತ ಸಮ್ಮೇಳನವನ್ನು ಏರ್ಪಡಿಸಿದರು. ಸಂಗೀತ ಕಲೆಯ ಚರಿತ್ರೆಯಲ್ಲಿ ಇದೇ ಮೊದಲ ಸಮ್ಮೇಳನ! ಇದರ ಯಶಸ್ಸು ಭಾತಖಂಡೆಯವರ ಪಾಲಿನದು.  ಈ ಸಮ್ಮೇಳನದಲ್ಲಿ ಅನೇಕ ವಿಧದ ಚರ್ಚೆ ಮತ್ತು ಸ್ಪರ್ಧೆಗಳು ನಡೆದವು. ಸಂಗೀತ ಕಲೆಯು ವಿವಿಧ ರೀತಿಯಲ್ಲಿ ಪ್ರಚಾರವಾಯಿತು. ಇಂತಹ ಸಮ್ಮೇಳನವನ್ನು ಪ್ರತಿ ವರ್ಷ ನಡೆಸಬೇಕೆಂದು ನಿರ್ಣಯಿಸಿದರು. ಇದಕ್ಕಾಗಿ ಒಂದು ಕಾರ್ಯಕಾರಿ ಸಮಿತಿಯ ರಚನೆಯಾಯಿತು. ಆ ಸಮಿತಿಗೆ ಭಾತಖಂಡೆಯವರನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ಈ ಸಮ್ಮೇಳನದ ಪ್ರತಿಫಲ ಎಂಬಂತೆ ಮುಂಬಯಿಯ ಪ್ರಾಥಮಿಕ ಶಾಲೆಗಳಲ್ಲಿ ಸಂಗೀತವನ್ನು ಹೇಳಿಕೊಡಬೇಕೆಂದು ಅಲ್ಲಿನ ನಗರ ಸಭೆಯವರು ನಿರ್ಣಯಿಸಿದರು.

ಬರೋಡದ ಸಂಗೀತ ಶಾಲೆ ಅಭಿವೃದ್ಧಿ ಪಡೆದು ವಿಶ್ವವಿದ್ಯಾನಿಲಯದ ಕಾಲೇಜಿಗೆ ಸೇರಿತು. ಗ್ವಾಲಿಯರ‍್ನಲ್ಲೂ ಒಂದು ಸಂಗೀತ ಶಾಲೆ ಸ್ಥಾಪಿಸಬೇಕೆಂದು ಅಲ್ಲಿನ ಮಹಾರಾಜ ಮಾಧವರಾವ್ ಸಿಂಧಿಯಾ ಆಶಿಸಿದರು. ಭಾತಖಂಡೆಯವರನ್ನು ಆಮಂತ್ರಿಸಿದರು. ಅವರು ಅಲ್ಲಿನ ಶಾಲೆಯ ಸ್ಥಾಪನೆಗೆ ಬೇಕಾದ ಮುಖ್ಯಾಂಶಗಳ ಪಟ್ಟಿಯನ್ನು ತಯಾರಿಸಿದರು. ಆದರೆ ಆ ಶಾಲೆಗೆ ಬೇಕಾದ ಉಪಾಧ್ಯಾಯರುಗಳು ಇರಲಿಲ್ಲ. ಆದ್ದರಿಂದ ಮಹಾರಾಜರು ಗ್ವಾಲಿಯರ‍್ ಸಂಸ್ಥಾನದ ಎಲ್ಲ ಸಂಗೀತಗಾರರನ್ನೂ ಕರೆಸಿದರು. ಆ ಪಂಗಡದಿಂದ ಭಾತಖಂಡೆಯವರು ಕೆಲವು ಸಂಗೀತಗಾರರನ್ನು ಆರಿಸಿದರು. ಹೀಗೆ ಆರಿಸಿದ ಸಂಗೀತಗಾರರಿಗೆ ಮುಂಬಯಿಯಲ್ಲಿ ವಿಶೇಷ ಶಿಕ್ಷಣ ಕೊಟ್ಟರು. 1918ರಲ್ಲಿ ಗ್ವಾಲಿಯರ‍್ ನಲ್ಲಿ ಮಾಧವ ಸಂಗೀತ ಮಹಾವಿದ್ಯಾಲಯ ಎಂಬ ಶಾಲೆ ಸ್ಥಾಪಿತವಾಯಿತು.

ತಾನಸೇನರ ಕಾಲದಿಂದ ವ್ಯವಹಾರದಲ್ಲಿ ಇಟ್ಟುಕೊಂಡ ಅವರ ಸಂಗೀತ ಪದ್ಧತಿಯ ಸಂಗೀತಗಾರರು ರಾಮ್ ಪುರದಲ್ಲಿ ಅನೇಕರಿದ್ದರು. ಅಲ್ಲಿನ ನವಾಬರು ಸ್ವತಃ ಸಂಗೀತಗಾರರಾಗಿದ್ದರು. ನವಾಬರು ಭಾತಖಂಡೆಯವರನ್ನು ಕರೆಸಿದರು.
ಭಾತಖಂಡೆಯವರು ರಾಮ್ ಪುರದ ನವಾಬರ ಶಿಷ್ಯರಾದರು.  ಭಾತಖಂಡೆಯವರ ಚಾತುರ್ಯ ಮತ್ತು ಸಾಧನೆಯಿಂದಾಗಿ ದೆಹಲಿಯಲ್ಲಿ ರಾಮ್ ಪುರದ ನವಾಬರ ಅಧ್ಯಕ್ಷತೆಯಲ್ಲಿ ಎರಡನೆಯ ಅಖಿಲ ಭಾರತ ಸಂಗೀತ ಸಮ್ಮೇಳನ ಜರುಗಿತು. ಭಾತಖಂಡೆಯವರು, ಕೆಲವು ರಾಗಗಳ ಲಕ್ಷಣಗಳನ್ನು ಚರ್ಚಿಸಲು ವಿದ್ವಾಂಸರೆನ್ನೆಲ್ಲ ಒಟ್ಟಿಗೆ ಸೇರಿಸಿದರು. ಈ ಚರ್ಚೆಯಿಂದ ಈ ರಾಗಗಳ ನಿಯಮಗಳನ್ನು   ಸ್ಪಷ್ಟವಾಗಿ ನಿರ್ದಿಷ್ಟವಾಗಿ ರೂಪಿಸಲು ಸಾಧ್ಯವಾಯಿತು. ದೆಹಲಿಯಲ್ಲಿ ಹಿಂದೂಸ್ತಾನೀ ಸಂಗೀತದ ಕೇಂದ್ರ ಅಕಾಡೆಮಿ ಸ್ಥಾಪಿಸಬೇಕೆಂದು ಈ ಸಮ್ಮೇಳನ ಬಯಸಿತು. 1919ರಲ್ಲಿ ಮೂರನೆಯ ಅಖಿಲ ಭಾರತದ ಸಮ್ಮೇಳನ ವಾರಣಾಸಿಯಲ್ಲಿ ಜರುಗಿತು. 1924ರ ಡಿಸೆಂಬರ‍್ ತಿಂಗಳಲ್ಲಿ ಲಕ್ನೋ ನಗರದಲ್ಲಿ ನಾಲ್ಕನೆಯ ಸಂಗೀತ ಸಮ್ಮೇಳನ ಜರುಗಿತು. 

ಮ್ಯಾರಿಸ್ ಸಂಗೀತ ಕಾಲೇಜು ಸ್ಥಾಪನೆಯಾಗಿ ಭಾತಖಂಡೆಯವರ ಜೀವನದ ಉದ್ದೇಶದ ಸಫಲವಾಯಿತು ಎನ್ನಬೇಕು. ಈ ಸಂಸ್ಥೆ ನಾಲ್ಕು ತಿಂಗಳಿಗೊಮ್ಮೆ ತನ್ನ ಪತ್ರಿಕೆಯ ಒಂದೊಂದು ಸಂಚಿಕೆಯನ್ನು ಪ್ರಕಟಿಸುತ್ತಿತ್ತು. ಅವುಗಳಲ್ಲಿ ಹಿಂದಿ ಭಾಷೆಯಲ್ಲೂ ಇಂಗ್ಲೀಷ್ ಭಾಷೆಯಲ್ಲೂ ಸಂಗೀತ ಕಲೆಯನ್ನು ಕುರಿತು ಲೇಖನಗಳಿರುತ್ತಿದ್ದವು. ಹದಿನೈದು, ಹದಿನಾರು, ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿನ ಸಂಗೀತ ಕಲೆಯ ಪ್ರಮುಖ ಶೈಲಿಗಳ ಹೋಲಿಕೆಯ ಅಧ್ಯಯನ ಎಂಬ ವಿಷಯವಾಗಿ ಭಾತಖಂಡೆಯವರು ಬರೆಯುತ್ತಿದ ಲೇಖನಗಳು ಆ ಸಂಚಿಕೆಗಳಲ್ಲಿ ಪ್ರಕಟಿತವಾಗುತ್ತಿದ್ದವು. 1940ರಲ್ಲಿ ಈ ಎಲ್ಲ ಲೇಖನಗಳೂ ಪುಸ್ತಕ ರೂಪವಾಗಿ ಪ್ರಕಟವಾದವು.

ಭಾತಖಂಡೆಯವರು ಸ್ಥಾಪಿಸಿದ ಸಂಗೀತ ಶಾಲೆಗಳಲ್ಲಿನ ಪಾಠ ಮಾಡಲು ಬೇರೆ ಬೇರೆ ತರಗತಿಯ ಪಠ್ಯಪುಸ್ತಕಗಳ ಅಗತ್ಯ ಕಂಡು ಬಂತು. ಭಾತಖಂಡೆಯವರು ಬೇರೆ ಬೇರೆ ಹಂತಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಪಠ್ಯಪುಸ್ತಕಗಳನ್ನು ರಚಿಸಿ ಪ್ರಕಟಿಸಿದರು. ಅವು ಕ್ರಮಿಕ ಪುಸ್ತಕಮಾಲೆ ಎಂದು ಹೆಸರು ಪಡೆದವು. ಸಂಗೀತ ಶಾಲೆಗಳಲ್ಲಿನ ಪಾಠಗಳು ಮುಂದುವರಿಯುತ್ತಿದ್ದಂತೆ ಈ ಪಠ್ಯಪುಸ್ತಕಗಳೂ ಮಾಲೆಯಲ್ಲಿ ಹೆಚ್ಚು ಹೆಚ್ಚಾಗಿ ಪ್ರಕಟವಾದವು.

1933ರಲ್ಲಿ ಭಾತಖಂಡೆಯವರು ಮ್ಯಾರಿಸ್ ಕಾಲೇಜಿಗೆ ತಮ್ಮ ಕೊನೆಯ ಭೇಟಿ ಕೊಟ್ಟರು. ಅಷ್ಟರಲ್ಲಿ ಆ ಕಾಲೇಜಿನಲ್ಲಿ ತರಬೇತಿ ಹೊಂದಿದ ದಕ್ಷ ಸಂಗೀತಗಾರರು ಭಾರತದ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಸಂಗೀತ ಪ್ರಸಾರ ಮಾಡುತ್ತಿದ್ದರು. ಕೆಲವರು ಕೇಂದ್ರ ಸರ್ಕಾರದ ಆಕಾಶವಾಣಿಯ ನಿಲಯಗಳಲ್ಲಿ ಕೆಲಸಕ್ಕೆ ಸೇರಿದರು. ಮ್ಯಾರಿಸ್ ಕಾಲೇಜು ಸಂಗೀತ ಕಲೆಯ ಉಗಮ ಸ್ಥಾನವೆಂದು ಹೆಸರುವಾಸಿಯಾಯಿತು.

ಕಲ್ಕತ್ತ, ಮುಂಬಯಿ, ನಾಗಪುರ, ಸೂರತ್, ಕಾನ್ಪುರ, ಅಲಹಾಬಾದ್, ಜಬ್ಬಲ್ಪುರ  ಮುಂತಾದ ನಗರಗಳಲ್ಲಿ ಭಾತಖಂಡೆಯವರ ಸಂಗೀತ ಕಾಲೇಜುಗಳಿವೆ.

1933ರಲ್ಲಿ ತನ್ನ ಸುಸ್ವಪ್ನದ ಸಫಲತೆ ಕಂಡು ಭಾತಖಂಡೆಯವರು ಮುಂಬಯಿಗೆ ಹಿಂತಿರುಗಿದರು. ಒಂದು ದಿನ ಪಾರ್ಶ್ವವಾಯು ತಗುಲಿ ಹಾಸಿಗೆ ಹಿಡಿದರು. ಮೂರು ವರ್ಷಗಳ ಕಾಲ ಅವರು ಈ ಸ್ಥಿತಿಯಲ್ಲಿಯೇ ಕಾಲ ಕಳೆದರು.
1936ರ ಸೆಪ್ಟೆಂಬರ‍್ 19ರಂದು ಶ್ರೀ ಗಣೇಶ ಚತುರ್ಥಿಯ ದಿನ ಪಂಡಿತ ವಿಷ್ಣು ನಾರಾಯಣ ಭಾತಖಂಡೆಯವರು ದೈವಾಧೀನರಾದರು. ಅವರ ಪುಣ್ಯತಿಥಿಯನ್ನು ಸಂಗೀತಗಾರರು ಭಾರತದಾದ್ಯಂತ ತುಂಬ ಭಕ್ತಿಯಿಂದ ಆಚರಿಸುತ್ತಾರೆ.

On the birth anniversary of Pandit Vishnu Narayan Bhatkhande who wrote the first modern treatise on Hindustani classical music

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ