ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗರಪಂಚಮಿ


 ನಾಗರಪಂಚಮಿ


ನಾಗರ ಪಂಚಮಿ ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ ಇದ್ದಂತೆ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. 

ನಾಗರ ಪಂಚಮಿ ಎರಡು ಆಚರಣೆಗಳಲ್ಲಿ ಒಂದು ನಾಗರಪೂಜೆ. ಇನ್ನೊಂದು ಸಹೋದರ ಸಹೋದರಿಯರ ಭಾವ ಸಂಬಂಧಗಳು. ಈ ನಿಟ್ಟಿನಲ್ಲಿ ಒಂದು ಜನಪ್ರಿಯ ಗೀತೆ ಕೂಡಾ ನೆನಪಿಗೆ ಬರುತ್ತದೆ:

ತನ್ನಿರೆ ಹಾಲ
ತನಿ ಏರೆಯೋಣ
ತಾಯ ಹಾಲ ಋಣ,
ತೀರಿಪ ಇಂದೆ
ಪುಣ್ಯ ದಿನ 

ತಣ್ಣಗಿರಲಿ ಬೆನ್ನು ಉದರ
ಅಣ್ಣ ತಮ್ಮದಿರಾ
ಕಾಯ ನೀಡಿದ
ತಾಯಿ ಕರುಳು
ನೋಯದಿರಲೆಂದು
ತವರಿನ ಕೀರ್ತಿ
ಗಳಿಸೆ ಬೆಳಗಲೆಂದೆಂದು

ಒಂದೆ ಬಸಿರು ಒಂದೆ ಉಸಿರು
ಹಂಚಿಕೊಂಡಂಥಾ 
ನನ್ನ ಅಣ್ಣನ ಬಾಳ ಬಳ್ಳಿ
ಬಾಡದಿರಲೆಂದು, ನಲಿವಿನ
ಹೂವು ಜೀವನ ಆಗಲೆಂದೆಂದು

ಈ ಹಾಡಿನ ಹಿಂದಿರುವ ಹೃದ್ಭಾವ ಮನಸೂರೆಗೊಳ್ಳುವಂತದ್ದು.

ಉತ್ತರ ಭಾರತದಲ್ಲಿ ರಕ್ಷಾ ಬಂಧನ ವೇದಿಕೆಯಾದರೆ, ದಕ್ಷಿಣ ಭಾರತದಲ್ಲಿ ನಾಗರ ಪಂಚಮಿ. ಅಲ್ಲದೆ, ಮಗಳು ಬಂದ ಸಂಭ್ರಮದಲ್ಲಿ ತವರು ಮನೆಯಲ್ಲಿ ಹಬ್ಬದ ರಂಗೇರುತ್ತದೆ.

ಭಾರತೀಯ ಪರಂಪರೆಯಲ್ಲಿ ನಾಗರ ಹಾವನ್ನು ದೈವಸ್ವರೂಪವೆಂದು ನಂಬಲಾಗುತ್ತಿದೆ. ಅಂತೆಯೇ ನಾಗರಹಾವು ಆದಿಶೇಷನ ಅವತಾರ ಎಂದು ಪುರಾಣ ತಿಳಿಸುತ್ತದೆ.   ಕೆಲವೊಂದು ನಂಬಿಕೆಗಳ ಪ್ರಕಾರ ಶ್ರೀಕೃಷ್ಣ ಪರಮಾತ್ಮ ಕಾಳಿಂಗ ಸರ್ಪದ ಅಹಂಕಾರವಡಗಿಸಿ ಕಾಳಿಂಗ ಮರ್ಧನ ಎನಿಸಿದ್ದು ಇದೇ ದಿನ.  ಆದರೆ ಹಾವಿನ ಹುತ್ತಕ್ಕೆ ಹಾಲೆರೆಯುವುದರಿಂದ ಹಾವು ಸಂತತಿ ನಾಶಗೊಳ್ಳುತ್ತದೆ ಎಂಬುದು ಹಾವು ತಜ್ಞರ ಅಭಿಪ್ರಾಯ.  ಅರಶಿಣ, ಕುಂಕುಮಗಳ ವಾಸನೆಯಿಂದ ಹಾವುಗಳು ಸಾವನ್ನಪ್ಪುತ್ತದೆ ಎಂಬುದು ಅವರ ಅಂಬೋಣ.  ಮನುಷ್ಯನಿಗೆ ಹಾವನ್ನು ಕುರಿತು ಭಯ ಇರುವುದರಿಂದ ಹೆಚ್ಚಿನ ಜನ ಕಲ್ಲನಾಗರ ಮೂರ್ತಿಗಳಿಗೇ, ಇಲ್ಲವೇ ಹಾವಿಲ್ಲದ ಹುತ್ತಗಳಿಗೇ ಹಾಲನು ಎರೆಯುವಂತಹವರಾಗಿರುವುದು ಈ ನಿಟ್ಟಿನಲ್ಲಿ ಸಂತಸದ ಸಂಗತಿ ಎನ್ನಬೇಕು.   

ಹಿಂದಿನ ದಿನಗಳಷ್ಟು ಸಂಭ್ರಮ ಇಲ್ಲವಾದರೂ ನಾಗರ ಪಂಚಮಿಯ ಸಡಗರದ  ಆಚರಣೆ ಇಂದೂ ಎಲ್ಲೆಡೆ  ಕಂಡುಬರುತ್ತಿದೆ.  ನಮ್ಮಲ್ಲಿನ ಹಬ್ಬಗಳ ಭಾವಗಳೆಲ್ಲಾ ಶ್ರೇಷ್ಠವೇ ಆಗಿವೆ.  ಆದರೂ ಆಚರಣೆಯ ಯಾಂತ್ರಿಕತೆ, ಹೀಗೆ ಮಾಡದಿದ್ದರೆ ಏನಾಗಿಬಿಡುತ್ತದೋ  ಎಂಬ ಭಯ, ದೈನಂದಿನದ  ಬಿರುಸು ವ್ಯಸ್ಥತೆಗಳು, ಹೀಗೆಯೇ ಮಾಡಬೇಕು ಎಂಬ ಹಳೆಯದೇ ಆದ ಚಿಂತನೆಗಳು, ಇಲ್ಲವೇ ಇದಕ್ಕೆಲ್ಲ ನಮಗೆ ಟೈಂ ಇಲ್ಲ ಎನ್ನುವ ಅಧುನಿಕ ವರಸೆ ಮುಂತಾದವುಗಳಿಂದ   ಹಬ್ಬಗಳ ಮೂಲಭಾವಗಳು ನಾಗಾಲೋಟದಿಂದ ನಿರ್ಗಮಿಸುತ್ತಿವೆಯೇನೋ ಎಂಬ ಭಾಸ ನೀಡುತ್ತಿವೆ.  

ಇದೇ ಸಮಯದಲ್ಲಿ ಒಂದು ವಚನ ಕೂಡಾ ನೆನಪಾಗುತ್ತದೆ.

ಕಲ್ಲನಾಗರ ಕಂಡರೆ ಹಾಲನೆರೆ ಎಂಬರು
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ!
ನಮ್ಮ ಕೂಡಲ ಸಂಗನ ಶರಣರಕಂಡು ಉದಾಸೀನವ ಮಾಡಿದಡೆ
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ.

ಇದು ಸಾರ್ವಕಾಲಿಕವಾಗಿ ಮಾನವರ ಮನೋಭಾವಕ್ಕೆ ಹಿಡಿದ ಕನ್ನಡಿಯಂತಿದೆ ಎಂಬುದು ನಿಜ.  ಆದರೆ ಇವೆಲ್ಲ ಪರಿಧಿಗಳಾಚೆಗೆ ನಮ್ಮ ಹಬ್ಬಗಳು ಮನಗಳಲ್ಲಿ ತುಂಬುವ ಭಾವನಾತ್ಮಕ ಬಲ ಅಪರಿಮಿತವಾದದ್ದು.  ನಮ್ಮ ಭಾರತೀಯ ಸಂಸ್ಕೃತಿ ಬಾಳಿಗೆ ಹೊಸ ಚೇತನ ನೀಡುವ ಇಂತಹ ನೂರಾರು ಹಬ್ಬಗಳಿಗೆ,  ಹೆಚ್ಚು ಹೆಚ್ಚು ಹೃದ್ಭಾವಗಳನ್ನು ತುಂಬಿ ನಮ್ಮ ಬಾಳನ್ನು ಬೆಳಗಿಸಿಕೊಳ್ಳುವ ಅವಶ್ಯಕತೆ ಇಂದು ಹೆಚ್ಚು ಹೆಚ್ಚು ಅಗತ್ಯವಿದೆ.     

ಎಲ್ಲರಿಗೂ ಬದುಕು ಸುಂದರವಾಗಿರಲಿ.  ಆ ದಿವ್ಯಶಕ್ತಿ ನಮ್ಮ ಮನಸ್ಸು ಬುದ್ಧಿ ಚೇತನಗಳನ್ನುಶ್ರೇಷ್ಠತೆಯ ಕಡೆಗೆ ನಿತ್ಯ ಪ್ರಚೋದಿಸುತ್ತಿರಲಿ.

Photo: At Ghati Subraanya in January 2017


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ