ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಣಿ ಪದ್ಮಿನಿ


 ರಾಣಿ ಪದ್ಮಿನಿ


ಚಿತ್ತೂರಿನ ಪದ್ಮಿನಿ ಮೇವಾಡದ ರಾಣಾ ರತ್ನಸಿಂಹನ ರಾಣಿ.
 
ಆಗ ಮೇವಾಡದ ರಾಜಧಾನಿಯಾಗಿದ್ದ ಚಿತ್ತೂರು ಅಭೇದ್ಯವಾದ ಕೋಟೆ ಕೊತ್ತಲುಗಳಿಂದ ಕೂಡಿ, ಅಪ್ರತಿಮ ವೀರರೆಂದು ಪ್ರಖ್ಯಾತರಾಗಿದ್ದ ಗುಹಿಲ್ಲಾ ರಜಪೂತ ಯೋಧರಿಂದ ರಕ್ಷಿತವಾಗಿ, ಅಜೇಯವೆನಿಸಿತ್ತು. ಮೇವಾಡ ರಾಜ್ಯವನ್ನು ಗೆಲ್ಲಬೇಕೆಂಬ ಆಸೆಯಿಂದ ಅಲಾ-ಉದ್-ದೀನ್ ಚಿತ್ತೂರಿಗೆ ದಂಡೆತ್ತಿ ಸಾಗಿದ. 

ಅಲಾ-ಉದ್-ದೀನನ ಆಸೆಗೆ ರಾಜ್ಯ ದಾಹವೊಂದೇ ಅಲ್ಲದೆ, ಇನ್ನೊಂದು ಕಾರಣವೂ ಇತ್ತೆಂದು ಐತಿಹ್ಯದಿಂದ ತಿಳಿದುಬಂದಿದೆ. ರಾಣಿ ಪದ್ಮಿನಿ ಅನುಪಮ ಸುಂದರಿಯಾಗಿದ್ದಳೆಂದೂ ಅವಳನ್ನು ಪಡೆಯಬೇಕೆಂದು ಅವನು ಚಿತ್ತೂರಿಗೆ ದಂಡೆತ್ತಿ ಬಂದನೆಂದೂ ಹೇಳಲಾಗಿದೆ. ಚಾರಿತ್ರಿಕ ವಿಷಯ, ಐತಿಹ್ಯ ಎರಡೂ ಬೆರೆತು ರಾಣಿ ಪದ್ಮಿನಿಯನ್ನು ಕುರಿತ ಒಂದು ದುರಂತ ಕಥೆ ಬೆಳೆದಿದೆ.

ಪದ್ಮಿನಿಯನ್ನು ತನಗೆ ಒಪ್ಪಿಸುವುದಾದರೆ ಚಿತ್ತೂರನ್ನು ಬಿಟ್ಟು ಹಿಂದಿರುಗುವುದಾಗಿ ಅಲಾ-ಉದ್-ದೀನ್ ರತ್ನಸಿಂಹನಿಗೆ ಹೇಳಿ ಕಳಿಸಿದ. ಅವನ ಇಷ್ಟ ನೆರವೇರಲಿಲ್ಲ, ಅವಳನ್ನು ಒಂದು ಸಲ ಕಣ್ತುಂಬ ನೋಡಿದರೆ ಸಾಕು, ಹಿಂದಿರುಗುತ್ತೇನೆ ಎಂದು ಅವನು ತಿಳಿಸಿದನೆನ್ನಲಾಗಿದೆ. ಕನ್ನಡಿಯಲ್ಲಿ ಅವಳ ಪ್ರತಿಬಿಂಬವನ್ನು ತೋರಿಸಲು ರಾಣಾ ರತ್ನಸಿಂಹ ಒಪ್ಪಿದ. ಅಲಾ-ಉದ್-ದೀನ್ ಚಿತ್ತೂರಿನ ಅರಮನೆಯಲ್ಲಿ ಅವಳ ಪ್ರತಿಬಿಂಬವನ್ನು ನೋಡಿದ. ಸುಲ್ತಾನನಿಗೆ ಅವಳನ್ನು ಪಡೆಯಬೇಕೆಂಬ ಆಸೆ ಬಲಿಯಿತು. 

ಸುಲ್ತಾನನನ್ನು ಬೀಳ್ಕೊಡಲು ಅವನ ಬಿಡಾರದವರೆಗೂ ರಾಣಾ ಹೋದ. ರಾಣಾನನ್ನು ಸುಲ್ತಾನ ಬಂಧಿಸಿ, ರಾಣಿ ಪದ್ಮಿನಿ ತನ್ನವಳಾಗಲೊಪ್ಪಿದರೆ ಮಾತ್ರ ರತ್ನಸಿಂಹನ ಬಿಡುಗಡೆಯಾಗುತ್ತದೆಂದೂ ಇಲ್ಲದಿದ್ದರೆ ಅವನನ್ನು ಕೊಲ್ಲುವುದಾಗಿಯೂ ಹೇಳಿದ. ಪದ್ಮಿನಿಯಾಗಲೀ ರಜಪೂತ ವೀರರಾಗಿಲಿ ಧೃತಿಗೆಡಲಿಲ್ಲ. ರಾಣಿ ತನ್ನ ಪರಿವಾರದೊಂದಿಗೆ ಬರುತ್ತಾಳೆಂಬ ವರ್ತಮಾನವನ್ನು ಕಳಿಸಲಾಯಿತು. ಸ್ವಲ್ಪ ಕಾಲದಲ್ಲೇ ಪಲ್ಲಕ್ಕಿಗಳಲ್ಲಿ ದಿಬ್ಬಣ ಹೊರಟಿತು.ಅವುಗಳಲ್ಲಿ ರಜಪೂತ ಯೋಧರು ಅಡಗಿದ್ದರು. ಸುಲ್ತಾನನ ಬಿಡಾರ ತಲುಪಿದ ಕೂಡಲೇ ಈ ಯೋಧರು ಹಠಾತ್ತನೆ ಸೈನಿಕರ ಮೇಲೆ ಬಿದ್ದರು : ಒಂದು ತಂಡ ರತ್ನಸಿಂಹನನ್ನು ಬಂಧನದಿಂದ ಬಿಡಿಸಿ ಅವನನ್ನು ದುರ್ಗಕ್ಕೆ ಕೊಂಡೊಯ್ದಿತು. ಅವನನ್ನು ಹಿಂಬಾಲಿಸಲು ಯತ್ನಿಸುತ್ತಿದ್ದವರನ್ನು ಮಿಕ್ಕವರು ತಡೆದು ವೀರಾವೇಶದಿಂದ ಹೋರಾಡಿದರು.

ಆಗ ಅಲಾ-ಉದ್-ದೀನ್ ಸೈನಿಕರಿಗೂ ರಜಪೂತರಿಗೂ ಕೋಟೆಯ ಹೊರಾಂಗಣದಲ್ಲಿ ಭಯಂಕರ ಕದನ ನಡೆಯಿತು. ರಜಪೂತರು ಧೈರ್ಯ ಸಾಹಸಗಳಿಂದ ದಾಳಿಕಾರರನ್ನು ಎದುರಿಸಿದರು. ಆದರೆ ಅಲಾ-ಉದ್-ದೀನನ ಭಾರಿ ಸೈನ್ಯವನ್ನು ಹೊಡೆದಟ್ಟಲು ಸಾಧ್ಯವಿಲ್ಲವೆಂಬುದು ಸ್ಪಷ್ಟವಾದಾಗ ರಜಪೂತರು ಜೋಹರ್ ಪದ್ಧತಿಯ ಪ್ರಕಾರ ಪ್ರಾಣ ತೊರೆಯಲು ನಿರ್ಧರಿಸಿದರು. ಗಂಡಸರು ವೀರಾವೇಶದಿಂದ ಶತ್ರುಸೈನ್ಯದೊಳಗೆ ನುಗ್ಗಿ ಹೋರಾಡಿ ಪ್ರಾಣ ಬಿಟ್ಟರು; ಸ್ತ್ರೀಯರೆಲ್ಲ ಚಿತೆಗೆ ಹಾರಿದರು. 

ನಿರ್ಜನವಾದ, ಪದ್ಮಿನಿಯಿಲ್ಲದ ಚಿತ್ತೂರು ಕೋಟೆ 1303ರ ಆಗಸ್ಟ್ 26ರಂದು ಅಲಾ-ಉದ್-ದೀನನ ಕೈವಶವಾಯಿತು. 

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

Chittoor Padmini 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ