ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಿ. ಬಾಲಕೃಷ್ಣ


 ವೀಣಾ ಡಿ. ಬಾಲಕೃಷ್ಣ


ವೈಣಿಕ ವಿದ್ವಾಂಸರಾದ  ಡಿ. ಬಾಲಕೃಷ್ಣ ಅವರು  ಮೈಸೂರು  ಶೈಲಿಯ  ವೀಣಾವಾದನದಲ್ಲಿ  ಪ್ರಸಿದ್ಧರಾಗಿದ್ದಾರೆ. ಅವರು  ನವುರಾದ  ಮೀಟುವಿಕೆ, ಸಂಪ್ರದಾಯಬದ್ಧ  ಸಂಗೀತ  ಶೈಲಿ ಮತ್ತು   ಸುಶ್ರಾವ್ಯತೆಗಳ ಸಂಗಮದಂತಹ  ಸಂಗೀತಾಭಿವ್ಯಕ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  

ಸುಪ್ರಸಿದ್ಧ  ವೈಣಿಕರಾದ  ವೀಣೆ  ದೊರೆಸ್ವಾಮಿ  ಅಯ್ಯಂಗಾರ್  ಅವರ ಸುಪುತ್ರರಾದ  ಡಿ.  ಬಾಲಕೃಷ್ಣ  ಅವರಿಗೆ  ಅವರ ತಂದೆಯೇ  ಗುರು.  ತಾಯಿ  ಶಾರದಮ್ಮ.  ಬಾಲಕೃಷ್ಣ  1955ರ  ಆಗಸ್ಟ್  26ರಂದು ಮೈಸೂರಿನಲ್ಲಿ  ಜನಿಸಿದರು.    

ಡಿ.  ಬಾಲಕೃಷ್ಣ  ಸಂಗೀತದಲ್ಲಿ ತಮ್ಮ  ತಂದೆಯವರ  ಶಾಸ್ತ್ರಬದ್ಧ ಶಿಸ್ತಿನ  ಶಿಕ್ಷಣದಲ್ಲಿ  ಉನ್ನತಿ  ಸಾಧಿಸಿದ್ದರ ಜೊತೆ ಜೊತೆಗೆ  ಓದಿನಲ್ಲಿ  ಕೂಡಾ  ಉತ್ತಮ  ಸಾಧನೆ  ಮಾಡಿ   ಎಂ.ಎಸ್‌.ಸಿ (ಸ್ಟಾಟಿಸ್ಟಿಕ್ಸ್) ಪದವಿ ಪಡೆದರು.  ಸಂಗೀತವನ್ನೇ  ವೃತ್ತಿಯಾಗಿ  ಸ್ವೀಕರಿಸಬೇಡ  ಎಂಬ ತಂದೆಯವರ  ಮಾತಿಗೆ  ಅನುಗುಣವಾಗಿ  ಭಾರತೀಯ ರಿಸರ್ವ್  ಬ್ಯಾಂಕಿನಲ್ಲಿ ಉದ್ಯೋಗ  ಮಾಡಿದರು.  

ಬಾಲಕೃಷ್ಣ  ಬಾಲ್ಯದಲ್ಲಿರುವಾಗಲೇ ತಂದೆ  ದೊರೆಸ್ವಾಮಿ  ಅಯ್ಯಂಗಾರ್ ಅವರು   ಬೆಂಗಳೂರಿನ ಆಕಾಶವಾಣಿಯಲ್ಲಿ  ಉದ್ಯೋಗಸ್ಥರಾದ  ಸಂದರ್ಭದಲ್ಲಿ  ಬೆಂಗಳೂರಿಗೆ  ಬಂದರು.  ಬಾಲ್ಯದಲ್ಲಿ ಮೃದಂಗ  ವಾದ್ಯದತ್ತ  ಆಕರ್ಷಿತರಾಗಿದ್ದ   ಅವರು  ವಿದ್ವಾನ್  ಅಯ್ಯಾಮಣಿ  ಅಯ್ಯರ್  ಅವರಿಂದ  ಮೃದಂಗ ವಾದನವನ್ನು  ಕಲಿತರು.  ಆದರೆ  ತಾತ  ವೆಂಕಟೇಶ ಅಯ್ಯಂಗಾರ್  ಅವರ  ಒತ್ತಾಸೆಯ  ಮೇರೆಗೆ   ವಂಶಪಾರಂಪರ್ಯವಾಗಿ ಬಂದ ವೀಣಾವಾದನದತ್ತ ಬಂದರು.   ಬಾಲ್ಯದಲ್ಲೇ  ತಿಟ್ಟೆ ಕೃಷ್ಣಯ್ಯಂಗಾರ್,  ಚೌಡಯ್ಯ,  ರಮಣಿ  ಮುಂತಾದ ಮಹಾನ್  ಕಲಾವಿದರ  ಸಂಗೀತಗಳಿಗೆ ಮಾರುಹೋಗಿದ್ದ  ಬಾಲಕೃಷ್ಣ ಅವರಿಗೆ  ಸಂಗೀತದ ಮೇಲೆ ಅಪಾರ  ಆಸಕ್ತಿ  ಮೂಡಿತು.   

ಡಿ. ಬಾಲಕೃಷ್ಣ   ತಮ್ಮ  ಇಪ್ಪತ್ತನೆಯ ವಯಸ್ಸಿನಲ್ಲಿ  ರಾಮನವಮಿ  ಕಾರ್ಯಕ್ರಮದಲ್ಲಿ  ತಮ್ಮ  ತಂದೆಯವರೊಂದಿಗೆ  ವೀಣೆ ವಾದನಕ್ಕೆ ಜೊತೆಯಾಗುವುದರೊಂದಿಗೆ  ಮೊಟ್ಟ  ಮೊದಲ    ಸಂಗೀತ  ಕಛೇರಿ ನೀಡಿದರು. ಬಾಲಕೃಷ್ಣರು    ಆಕಾಶವಾಣಿಯ  ಉನ್ನತ ದರ್ಜೆ  ಕಲಾವಿದರು.    ತಮ್ಮ  ತಂದೆಯವರೊಂದಿಗೆ  ಕರ್ನಾಟಕದಲ್ಲಷ್ಟೇ  ಅಲ್ಲದೆ  ದೇಶದ  ವಿವಿದೆಡೆಗಳಲ್ಲೂ, ವಿದೇಶಗಳಲ್ಲೂ ಸಂಗೀತ  ಕಛೇರಿ ನೀಡಿರುವ  ಅವರು ತಮ್ಮದೇ ಪ್ರತ್ಯೇಕ  ಸಂಗೀತ  ಕಛೇರಿಗಳನ್ನು  ಸಹಾ  ನೀಡಿ  ಹೆಸರುವಾಸಿಯಾಗಿದ್ದಾರೆ.  ಆಕಾಶವಾಣಿ  ಮತ್ತು  ದೂರದರ್ಶನಗಳಲ್ಲೂ  ಅವರ   ಕಛೇರಿಗಳು  ಸಂಗೀತ  ರಸಿಕರನ್ನು  ಸೆಳೆದಿವೆ.  ಪಿಟೀಲು  ವಿದ್ವಾನ್  ಎಂ. ಚಂದ್ರಶೇಖರ್,   ಸರೋದ್  ವಾದಕರಾದ  ಪಂಡಿತ್  ರಾಜೀವ್  ತಾರಾನಾಥ್ ಮುಂತಾದವರ ಜುಗಲ್ಬಂದಿಯಲ್ಲಿ  ಸಹಾ  ಬಾಲಕೃಷ್ಣರ  ವೀಣಾನಾದ  ಝೇಂಕರಿಸಿದೆ.  

1987ರ  ವರ್ಷದಲ್ಲಿ  ತಂದೆ  ವೀಣಾ  ದೊರೆಸ್ವಾಮಿ  ಅಯ್ಯಂಗಾರ್  ಅವರೊಂದಿಗೆ  ರಷ್ಯಾದಲ್ಲಿ  ಪಂಚವೀಣಾ  ಸಂಗೀತದಲ್ಲಿ  ಪಾಲ್ಗೊಂಡ  ಬಾಲಕೃಷ್ಣ,  1988ರಲ್ಲಿ  ಬ್ರಿಟನ್ನಿನಲ್ಲಿ, 1991ರಲ್ಲಿ  ಜರ್ಮನಿಯಲ್ಲಿನ  ‘ಭಾರತ ಉತ್ಸವ’  ಸಂದರ್ಭದಲ್ಲಿ ಹಾಗೂ,  2002  ಮತ್ತು 2006ರ  ವರ್ಷದಲ್ಲಿ  ಅಮೆರಿಕದ  ವಿವಿದೆಡೆಗಳಲ್ಲಿ, ಹೀಗೆ  ಅಂತರರಾಷ್ಟ್ರೀಯ  ಮಟ್ಟದಲ್ಲಿ  ಅನೇಕ  ಸಂಗೀತ  ಕಛೇರಿಗಳಲ್ಲಿ  ಭಾಗಿಯಾಗುತ್ತಾ  ಬಂದಿದ್ದಾರೆ.

ಕಂಚಿ ಕಾಮಕೋಟಿ  ಪೀಠದ  ಆಸ್ಥಾನ ವಿದ್ವಾನ್  ಗೌರವ,    ಚೆನ್ನೈ ಮ್ಯೂಸಿಕ್‌ ಅಕಾಡೆಮಿಯಿಂದ 1979, 1991, 1996, 2006, 2008ರ  ವರ್ಷಗಳಲ್ಲಿ   ಗೌರವ, 1997ರಲ್ಲಿ ಬೆಂಗಳೂರಿನ ಗಾನ ಕಲಾ ಪರಿಷತ್‌ನಿಂದ ಗಾನ ಕಲಾಶ್ರೀ ಗೌರವ, ತಾಳವಾದ್ಯ ಕಲಾಕೇಂದ್ರದಿಂದ ಪುಟ್ಟಾಚಾರ್ ಸ್ಮಾರಕ ಪ್ರಶಸ್ತಿ, 2002, 2003ರ ಗಾನಕಲಾ ಪರಿಷತ್ತಿನ ಸಂಗೀತ ಸಮ್ಮೇಳನ ಪ್ರಶಸ್ತಿ,  ಅತ್ಯುತ್ತಮ ಪಲ್ಲವಿ ಪ್ರಾತ್ಯಕ್ಷಿಕೆಗಾಗಿ  ಪ್ರಶಸ್ತಿ,  2014ರ ‘ಸಂಸ್ಕಾರ  ಭಾರತಿ'ಯ  ‘ಗುರು ಪೂರ್ಣಿಮಾ’  ಗೌರವ,  2014-15ರ  ಕರ್ನಾಟಕ  ಸಂಗೀತ ನಾಟಕ  ಅಕಾಡೆಮಿಯ  ‘ಕರ್ನಾಟಕ  ಕಲಾಶ್ರೀ’  ಗೌರವ ಮುಂತಾದ  ಅನೇಕ  ಗೌರವಗಳು  ವಿದ್ವಾನ್  ಡಿ.  ಬಾಲಕೃಷ್ಣ ಅವರನ್ನರಸಿ ಬಂದಿವೆ.  

ಬಾಲಕೃಷ್ಣ  ಅವರು  ತಾವು ಅನುಭಾವಿಸುತ್ತಾ  ಬಂದಿರುವ   ಸಂಗೀತ  ಪರಂಪರೆಯನ್ನು  ಮುಂದುವರೆಸುವ  ನಿಟ್ಟಿನಲ್ಲಿ  ಅನೇಕ  ಶಿಷ್ಯರನ್ನೂ  ತಯಾರುಮಾಡುತ್ತಾ  ಬಂದಿದ್ದಾರೆ.  ಸಂಗೀತ ಶ್ರೇಷ್ಠ ಪರಂಪರೆಯ  ಈ  ಕಲಾವಿದರಿಗೆ  ಹುಟ್ಟುಹಬ್ಬದ  ಹಾರ್ದಿಕ  ಶುಭ  ಹಾರೈಕೆಗಳನ್ನು  ಸಲ್ಲಿಸೋಣ. 

On the birthday of our great Veena Scholar Balakrishna D Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ