ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವರಾಹ ಜಯಂತಿ


ವರಾಹ ಜಯಂತಿ
- ನಿರ್ಮಲಾ ಶರ್ಮಾ 

ಇಂದು  ವರಾಹಸ್ವಾಮಿಯ ಜಯಂತಿ. 

ವರಾಹಾವತಾರದ ಹಿನ್ನೆಲೆಯನ್ನು ಸ್ವಲ್ಪ ನೋಡೋಣ. ಸಮಸ್ತ ಭೂಮಂಡಲವೂ ತನ್ನದಾಗಬೇಕೆಂಬ ದುರಾಸೆಯಿಂದ ಹಿರಣ್ಯಾಕ್ಷನೆಂಬ ಅಸುರ ಭೂಮಿಯನ್ನು ಚಾಪೆಯಂತೆ ಸುತ್ತಿಕೊಂಡು ಸಮುದ್ರದಾಳದಲ್ಲಿ ಅಡಗಿಸಿಟ್ಟ. ಭೂದೇವಿಯನ್ನು ಹುಡುಕುತ್ತಾ ವರಾಹಾವತಾರವನ್ನೆತ್ತಿದ ಶ್ರೀ ಮಹಾವಿಷ್ಣುವು ಅವಳನ್ನು ಅಪಹರಿಸಿದ ಅಸುರ ಹಿರಣ್ಯಾಕ್ಷನನ್ನು ಅಟ್ಟಾಡಿಸಿ ಕೊಂದು, ಭೂದೇವಿಯನ್ನು ತನ್ನ ಕೋರೆದಾಡೆಗಳಿಂದೆತ್ತಿ ಸಂರಕ್ಷಿಸಿದ.   ತುಸು ದಣಿವಾರಿಸಿಕೊಂಡ. ನಂತರ, ಪಾಚಿ ತುಂಬಿದ ಸಮುದ್ರದಲ್ಲಿ ಮುಳುಗಿದ್ದ ಪತ್ನಿ ಭೂದೇವಿಯನ್ನು ಪ್ರೀತಿಯಿಂದ ಮೇಲೆತ್ತಿ, ತನ್ನ ಎಡತೋಳಿನ ಮೇಲೆ ಕುಳ್ಳಿರಿಸಿಕೊಂಡನಂತೆ. ಅವಳ ಮೈಯ್ಯೆಲ್ಲಾ ಪಾಚಿಯಿಂದ ಕೊಳಕಾಗಿದ್ದರೂ, ಅದನ್ನು ಲೆಕ್ಕಿಸದೆ, ಪ್ರಿಯೆಯ ಮೈಯ್ಯನ್ನೆಲ್ಲಾ ಮುದ್ದಿಸಿ, ಸವರಿದನಂತೆ ಸ್ವಾಮಿ. ಅವಳಿಗೂ ಇದು ಆಗ ಆಪ್ಯಾಯಮಾನವಾಗಿತ್ತು. ಗಂಡ ತನ್ನನ್ನು ಆಲಿಂಗಿಸಿಕೊಂಡ ಬಗೆ ಅವಳಿಗೆ ಹಿತವಾಗಿತ್ತು. ಅದೊಂದು ದಿವ್ಯ ಶೃಂಗಾರ ಸಮಯ. ಅವಳ ಕಪೋಲಗಳನ್ನು ಸ್ವಾಮಿಯ ಕೋರೆದಾಡೆಗಳು ಮೃದುವಾಗಿ ಸ್ಪರ್ಶಿಸುತ್ತಿದ್ದವು. ಇಷ್ಟು ದಿನ ಕಷ್ಟ ಪಟ್ಟವಳಿಗೆ ಪತಿಯ ಸಾಂತ್ವನದ ಸ್ಪರ್ಶದಿಂದ ಸಹನೆಯ ಕಟ್ಟೆ ಒಡೆಯಿತು. ಅವಳ ಕಣ್ಣಲ್ಲಿ ನೀರು ಕಂಡು ಸ್ವಾಮಿಗೂ ಆತಂಕ. 

" ದೇವಿ! ನಿನ್ನನ್ನು ಪೀಡಿಸಿದ ದುರುಳನನ್ನು ಈಗ ತಾನೇ ಕೊಂದು ಮುಗಿಸಿದೆನಲ್ಲ! ಇನ್ನೇಕೆ ದುಃಖ ಪ್ರಿಯೇ?" ಎನ್ನುತ್ತಾನೆ. ಭೂದೇವಿ ತನ್ನ ದುಷ್ಟ ಮಕ್ಕಳನ್ನೂ ದೂರಲಾರಳು. ಹಾಗೆಯೇ, ‌ಸಾಧುಗಳಾದ ತನ್ನ ಇತರ ಮಕ್ಕಳಿಗೆ ತನ್ನದೇ ದುಷ್ಟ ಮಕ್ಕಳಿಂದ ತೊಂದರೆಯಾಗುವುದನ್ನೂ ಸಹಿಸಲಾರಳು. ತನ್ನ ಕಣ್ಣೆದುರಿಗೇ ಹಿರಣ್ಯಾಕ್ಷನನ್ನು ತನ್ನ ಪತಿ ಶ್ರೀಮನ್ನಾರಾಯಣ ಕೊಂದದ್ದನ್ನು  ಅವಳು ಇನ್ನೂ ಮರೆತಿಲ್ಲ. ದುಷ್ಟನಾದರೂ ಮಗನೇ ತಾನೇ? ಪತಿಯೇನೋ ಅದನ್ನು ದುಷ್ಟ ಶಿಕ್ಷಣವೆಂದುಬಿಟ್ಟ.  ಆದರೆ ತಾಯಿಯ ದುಃಖ? 

"ಈ ಮಗ ಏಕೆ ಇಷ್ಟು ದುಷ್ಟನಾದ? ಹೋಗಲಿ ತನ್ನ ಸ್ವಾಮಿಯಾದರೋ ಸರ್ವಶಕ್ತನಲ್ಲವೇ? ತನ್ನ ಮಕ್ಕಳ ದುಷ್ಟ ಬುದ್ಧಿಯನ್ನು ಪರಿವರ್ತಿಸಬಾರದೇ? ಇಂಥಾ ಕೆಟ್ಟ ಮಕ್ಕಳಿಗೆ ಸತ್ತ ನಂತರವೂ ಸದ್ಗತಿ ಇಲ್ಲವೇ?"  ಮುಂತಾಗಿ ಹಲುಬುತ್ತಿದ್ದಾಳೆ. ತನ್ನ ಸಾಧು ಮಕ್ಕಳ ಬಗ್ಗೆಯೂ ಅವಳಿಗೆ ಏನೋ ಆತಂಕ.  ಅವಳ ಮನಸ್ಸನ್ನರಿತಂತೆಯೇ, ವರಾಹ ಸ್ವಾಮಿ, " ದೇವಿ!  ನಿನ್ನ ಮಕ್ಕಳನ್ನು ನಾನೆಂದಿಗೂ ಕೈ ಬಿಡಲಾರೆ. ಬುದ್ಧಿ ಚೆನ್ನಾಗಿದ್ದಾಗ ಒಮ್ಮೆ ನನ್ನನ್ನು ಶರಣು ಹೊಂದಿದರೆ ಸಾಕು. ಮುಂದೆ ಅವನ ಕೊನೆಗಾಲದಲ್ಲಿ ಅವನು ಹೇಗಿದ್ದರೂ ನಾನೇ ಅವನನ್ನು ನೆನೆಯುತ್ತೇನೆ. ನನ್ನ ಲೋಕಕ್ಕೂ ಕರೆದೊಯ್ಯುತ್ತೇನೆ. " ಎನ್ನುತ್ತಾನೆ. ನಮಗೆಲ್ಲ ಧೈರ್ಯ ತುಂಬುವ ಮಾತುಗಳಲ್ಲವೇ ಇವು?
ಅಷ್ಟೇ ಅಲ್ಲ! ಕೊನೆಗಾಲದಲ್ಲಿ ಅವನು ನನ್ನನ್ನು ನೆನೆಯುವ ಸ್ಥಿತಿಯಲ್ಲಿಲ್ಲದೆ, ಕಲ್ಲಿನಂತೆಯೋ, ಮರದ ಕೊರಡಿನಂತೆಯೋ ಬಿದ್ದಿದ್ದರೂ ನಾನೇ ಅವನನ್ನು ನೆನೆಸಿಕೊಂಡು, ಅವನೆಲ್ಲಿದ್ದರೂ, ನನ್ನ ಲೋಕಕ್ಕೆ ಕರೆದೊಯ್ಯುತ್ತೇನೆ." ಎನ್ನುತ್ತಾನೆ. ಇಷ್ಟು ಭರವಸೆ ನಮಗೆ ಸಾಕಲ್ಲವೇ?


ಸ್ಥಿತೇ ಮನಸಿ ಸುಸ್ವಸ್ಥೇ ಶರೀರೇ ಸತಿ ಯೋ ನರಃ,
ಧಾತು ಸಾಮ್ಯೇ ಸ್ಥಿತೇ ಸ್ಮರ್ತಾ ವಿಶ್ವರೂಪಂ ಚ ಮಾಮಜಂ,
ತತಸ್ತಂ ಮ್ರಿಯಮಾಣಂ ತು ಕಾಷ್ಠ ಪಾಷಾಣ ಸಂನ್ನಿಭಂ,
lಅಹಂ ಸ್ಮರಾಮಿ ಮದ್ಭಕ್ತಂ ನಯಾಮಿ ಪರಮಾಂ ಗತಿಂ.

ಇದು ವರಾಹ ಚರಮ ಶ್ಲೋಕವೆಂದೇ ಪ್ರಸಿದ್ಧವಾದ ಭಗವಂತನ ವಾಕ್ಯ. 

" ನನ್ನ ಭಕ್ತನೊಬ್ಬನು ತನ್ನ ಶರೀರವು ಸುಸ್ಥಿತಿಯಲ್ಲಿದ್ದಾಗ ಹಾಗೂ ಮನಸ್ಸೂ ತನ್ನ ನಿಯಂತ್ರಣದಲ್ಲಿ ಇದ್ದಾಗ, ಒಮ್ಮೆಯಾದರೂ ನನ್ನ ವಿಶ್ವರೂಪವನ್ನು ಅಂದರೆ ಸಕಲ ಜೀವರಾಶಿಗಳೂ ನನ್ನಲ್ಲಿ ಇರುವ ನನ್ನ ಭವ್ಯ ರೂಪವನ್ನು ನೆನೆದು, ನನ್ನ ವ್ಯಾಪ್ತಿಯನ್ನೂ, ಶಕ್ತಿಯನ್ನೂ ಅರಿತು ನೆನೆದರೆ ಸಾಕು. ಅವನ ಅಂತ್ಯಕಾಲದಲ್ಲಿ ಅವನು ಕಲ್ಲಿನಂತೆಯೋ, ಮರದ ಕೊರಡಿನಂತೆಯೋ ಬಿದ್ದಿದ್ದರೂ ನಾನೇ ಅವನನ್ನು ನೆನೆದುಕೊಂಡು, ನಾನಿರುವ ಪರಮಪದಕ್ಕೆ ಕರೆದೊಯ್ಯುತ್ತೇನೆ. " ಎಂಥಾ ಅದ್ಭುತ ಘೋಷಣೆ! ಭರವಸೆ!

ಅಂತ್ಯಕಾಲೇ ಸ್ಮೃತಿರ್ಯಾತು ತವ ಕೈಂಕರ್ಯ ಕಾರಿತಾ,
ತಾಮೇನಾಂ ಭಗವನ್ನದ್ಯ ಕ್ರಿಯಮಾಣಾಂ ಕುರುಷ್ವ ಮೇ.

ಎಂದು ಭಗವದ್ರಾಮಾನುಜರು ಶರಣಾಗತಿ ಗದ್ಯದ ಕೊನೆಯಲ್ಲಿ ಪ್ರಾರ್ಥಿಸಿದರು. ನನ್ನ ಅಂತ್ಯಕಾಲದಲ್ಲಿ ನಿನ್ನ ಸ್ಮರಣೆ ಬರುವಂತೆ ನೀನೇ ನನಗೆ ಅನುಗ್ರಹ ಮಾಡು ಎಂದು ಅವರ ಪ್ರಾರ್ಥನೆ. 

ವರಾಹ ಚರಮಶ್ಲೋಕ ರಾಮಾನುಜರಿಗೆ ತಿಳಿಯದೇ? ಆದರೂ ಏಕೆ ತಮಗೆ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆಯನ್ನು ಕರುಣಿಸು  ಎಂದು ಬೇಡಿದರು? 

"ನೀನು ನನ್ನ ಭಕ್ತ. ನನ್ನನ್ನು ಆಶ್ರಯಿಸಿರುವೆ. ನೀನು ಕೊನೆಗಾಲದಲ್ಲಿ ಹೇಗಿದ್ದರೂ ನಾನೇ ನಿನ್ನನ್ನು ಕರೆದೊಯ್ಯುವೆ." ಎನ್ನುವುದು ಭಗವಂತನ ದೊಡ್ಡತನ. " ಆ ಸಮಯದಲ್ಲಿ ನಿನ್ನ ಸ್ಮರಣೆಯನ್ನು ನನಗೆ ಕೊಡು." ಎಂದು ಆನವರತವೂ ಬೇಡುವುದು ನಮ್ಮ ಕರ್ತವ್ಯ.

ತಿರುವಿಡಂದೈ ಎಂಬುದು ತಮಿಳುನಾಡಿನ ಮಹಾಬಲೀಪುರಂನ ‌ಸಮೀಪದಲ್ಲಿರುವ ಒಂದು ದಿವ್ಯ ಕ್ಷೇತ್ರ. ಆಳ್ವಾರುಗಳು, ಅದರಲ್ಲೂ ತಿರುಮಂಗೈ ಆಳ್ವಾರರು ವಿಶೇಷವಾಗಿ  ಈ ದಿವ್ಯ  ಕ್ಷೇತ್ರವನ್ನು ಕೊಂಡಾಡಿದ್ದಾರೆ. ( 2.7.1 -2.7.10)

ಇಲ್ಲಿ, ಶ್ರೀ ವರಾಹಸ್ವಾಮಿಯು ಭೂದೇವಿಯನ್ನು ತನ್ನ ಎಡ ತೋಳಿನಲ್ಲೆತ್ತಿಕೊಂಡು ನಿಂತಿದ್ದು ಅದ್ಭುತವಾಗಿ ದರ್ಶನ ನೀಡುತ್ತಿದ್ದಾನೆ. ಅಮ್ಮನವರಿಗೆ ಇಲ್ಲಿ ಅಖಿಲವಲ್ಲೀ ತಾಯಾರ್ ಎಂದು ಹೆಸರು. ತನಿ ಸಂನ್ನಿಧಿ ನಾಚ್ಚಿಯಾರಿಗೆ ಕೋಮಳವಲ್ಲೀ ತಾಯಾರ್ ಎಂದು ಹೆಸರು. ಸ್ವಾಮಿಗೆ ನಿತ್ಯಕಲ್ಯಾಣ ಪೆರುಮಾಳ್ ಎಂದೂ ಇನ್ನೊಂದು ಶ್ರೀನಾಮ. ಈ ದಿವ್ಯ ದಂಪತಿಗಳಿಗೆ ದಿನವೂ ಇಲ್ಲಿ ಕಲ್ಯಾಣೋತ್ಸವ ನಡೆಯುತ್ತದೆ.  

 ಹಿಂದೆ ಗಾಲವ ಎಂಬ ಋಷಿ ತನ್ನ 360 ಹೆಣ್ಣು ಮಕ್ಕಳನ್ನೂ ಶ್ರೀಮನ್ನಾರಾಯಣನೇ ವರಿಸಬೇಕೆಂದು ತಪಸ್ಸು ಮಾಡಿದರಂತೆ. ಅವರ ಕೋರಿಕೆಯನ್ನು ಮನ್ನಿಸಿ, ದಿನಕ್ಕೊಬ್ಬಳಂತೆ ಸ್ವಾಮಿಯು ವರಿಸಿದನಂತೆ. ಹೀಗೆ ವರ್ಷ ಪೂರ್ತಿ ಮದುವೆಯಾದ ಮೇಲೆ, ಆ ದಿನವನ್ನು ವಿವಾಹ ವರ್ಧಂತಿ ಎಂದು ಕೊಂಡಾಡಬೇಕಲ್ಲವೇ? ಆದ್ದರಿಂದಲೇ ಸ್ವಾಮಿಗೆ ಇಲ್ಲಿ ದಿನವೂ ಕಲ್ಯಾಣೋತ್ಸವ, ನಿತ್ಯಕಲ್ಯಾಣಪ್ಪೆರುಮಾಳ್ ಎಂದೂ ಶ್ರೀನಾಮ. 

ಬನ್ನಿ. ಈ ವರಾಹ ಚರಮ ಶ್ಲೋಕವನ್ನು ಅನುದಿನವೂ ಪಠಿಸಿ, ನಾವು ಭಗವಂತನಲ್ಲಿ ಶರಣಾಗತಿಯನ್ನು ಮಾಡೋಣ.
ಒಮ್ಮೆ ಅವನ ವಿಶ್ವರೂಪವನ್ನು ನೆನೆಸಿ, ಮನದಲ್ಲೇ ಶರಣು ಹೊಂದಿ ನಂತರ ಅನುದಿನವೂ ಆ ರೂಪವನ್ನು ಕಣ್ಣಲ್ಲಿ ತಂದುಕೊಳ್ಳೋಣ. ನಂತರ ನಾವು ಕೊನೆಗಾಲದಲ್ಲಿ  ಹೇಗಿದ್ದರೂ, ಅವನೇ ನಮ್ಮನ್ನು ನೆನೆಸಿಕೊಂಡು ತನ್ನ ಪರಂಧಾಮಕ್ಕೆ ಕರೆದೊಯ್ಯುವನೆಂಬ ವಿಶ್ವಾಸದಿಂದ ನಿಶ್ಚಿಂತರಾಗಿರೋಣ. 

ಆಧಾರ: ಆಚಾರ್ಯರ ಉಪದೇಶ.

ಕೃತಜ್ಞತೆಗಳು:Nirmala Sharma



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ